Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿವೆ ಪರಿಹಾರ

ಚೈತ್ರ ಸುಖೇಶ್

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಸಾಮಾನ್ಯವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಯದಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಶೀತಗಾಳಿ ನಮ್ಮ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

ಚಳಿಗಾಲದಲ್ಲಿ ಆರೋಗ್ಯದ ಕಡೆ ಕಾಳಜಿ ವಹಿಸುವುದು ಬಹಳ ಮುಖ್ಯ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ:

೧. ಒಣ ಚರ್ಮ ಸಮಸ್ಯೆ: ಚಳಿಗಾಲದಲ್ಲಿ ಚರ್ಮ ಒಣಗುವುದರಿಂದ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ತುರಿಕೆ, ಚರ್ಮದ ಸೋಂಕು, ಚರ್ಮ ಒಣಗುವುದು, ತುಟಿಗಳು, ಪಾದದ ಚರ್ಮ ಬಿರುಕು ಬಿಡುವುದು, ಇವುಗಳಿಂದ ರಕ್ತಸ್ರಾವವಾಗುವ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಪರಿಹಾರವೆಂದರೆ ಲೋಳಸರವನ್ನು ಹಚ್ಚಿಕೊಳ್ಳುವುದು. ಇಲ್ಲವೇ ತೆಂಗಿನಎಣ್ಣೆಗೆ ಜೇನುಮೇಣ ಹಾಕಿ ಕರಗಿಸಿ, ಅದನ್ನು ಮೊಯಿಶ್ಚರೈಸರ್ ರೂಪದಲ್ಲಿ ಹಚ್ಚಿಕೊಳ್ಳಬಹುದು.

೨. ಕೀಲುನೋವು ಮತ್ತು ಸೊಂಟ ನೋವು: ಚಳಿ ಗಾಲದಲ್ಲಿ ಸಾಮಾನ್ಯ ವಾಗಿ ಸಂಧಿವಾತ  ಕೀಲುವಾತ, ಮಂಡಿ ನೋವಿನಂತಹ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತವೆ. ಆದ್ದ ರಿಂದ ಇಂತಹ ಸಮಯದಲ್ಲಿ ನಾವು ಬೆಚ್ಚನೆಯ ಉಡುಪು ಧರಿಸುವುದು, ಲಘು ವ್ಯಾಯಾಮ ಮಾಡುವುದು ಒಳ್ಳೆಯದು. ಸಾಧ್ಯವಾದಷ್ಟು ದೇಹ ವನ್ನು ಬೆಚ್ಚಗಿರಿಸಿಕೊಳ್ಳಬೇಕು. ಇದಕ್ಕಾಗಿ ಬಿಸಿಯಾದ ಆಹಾರ ಸೇವನೆ ಅತ್ಯವಶ್ಯ. ಆಗಾಗ್ಗೆ ಮರಳು ಶಾಖ, ಉಪ್ಪಿನ ಶಾಖವನ್ನು ತೆಗೆದು ಕೊಳ್ಳುವುದಲ್ಲದೆ ಕರ್ಪೂರಾದಿ ತೈಲ ಬಳಕೆ ಮಾಡುವುದು ಉತ್ತಮ.

೩. ಅಸ್ತಮಾ ಮತ್ತು ಉಸಿರಾಟದ ತೊಂದರೆ: ಶೀತಗಾಳಿಯಿಂದಾಗಿ ನೆಗಡಿ, ಕೆಮ್ಮು, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮೂಗು ಕಟ್ಟುವುದು, ಕಿವಿಯ ನೋವು, ಗಂಟಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರವೆಂದರೆ ಉತ್ತಮವಾದ ಬಿಸಿ  ಹಾಗೂ ಮೃದುವಾದ ಆಹಾರ ಸೇವನೆ. ಆದಷ್ಟು ಬೆಚ್ಚಗಿನ ನೀರು ಬಳಕೆ ಮಾಡಬೇಕು. ಕರಿದ ತಿಂಡಿಗಳ ಸೇವನೆ ಮಾಡದಿರುವುದು ಉತ್ತಮ. ಚಳಿಗಾಲದಲ್ಲಿ ಗಂಟಲು ಕಟ್ಟುವುದರಿಂದ ಆಹಾರದಲ್ಲಿ ಶುಂಠಿ, ಲವಂಗ, ಚಕ್ಕೆ, ಕರಿಮೆಣಸನ್ನು ಬಳಸುವುದು ಉತ್ತಮ. ಇವು ಗಳೊಂದಿಗೆ ಅಶ್ವಗಂಧ, ಲಾವಂಚದಂತಹ ರೋಗ ನಿರೋಧಕತೆ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಬಳಸಬೇಕು.

೪. ಖಿನ್ನತೆ: ಚಳಿಗಾಲದಲ್ಲಿ ಸಾಮಾನ್ಯವಾಗಿ ಮಾನಸಿಕ ಖಿನ್ನತೆ, ಒತ್ತಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ ಎನ್ನುತ್ತಾರೆ. ಇದರಿಂದ ಒಂದು ರೀತಿಯ ಉದಾಸೀನತೆ, ಕೆಲಸ ಮಾಡಲು ನಿರಾಸಕ್ತಿ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಬಿಸಿಲಿಗೆ ಮೈಯೊಡ್ಡಬೇಕು. ಇದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಧ್ಯಾನ, ಯೋಗ ಮುಂತಾದ ಚಟುವಟಿಕೆಗಳ ಮೂಲಕ ಕ್ರಿಯಾಶೀಲರಾಗಿರಬೇಕು.

ಚಳಿಗಾಲದಲ್ಲಿ ಆಯುರ್ವೇದ ಪರಿಹಾರ: ಚಳಿಗಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯ. ಎಳ್ಳೆಣ್ಣೆ ಅಥವಾ ಕ್ಷೀರ ಬಲಾ ತೈಲವನ್ನು ಸ್ಪಲ್ಪ ಬೆಚ್ಚಗೆ ಮಾಡಿ ದೇಹಕ್ಕೆ ಅಭೃಂಗ ಮಾಡಿಕೊಳ್ಳಬೇಕು. ಪ್ರತಿದಿನ ಒಂದು ಲೋಟ ಬೆಚ್ಚಗಿನ ಹಾಲಿಗೆ ಚಿಟಿಕಿ ಅರಿಶಿನ ಹಾಕಿ ಕುಡಿಯುವುದು ಒಳ್ಳೆಯ ಅಭ್ಯಾಸ. ಇವುಗಳೊಂದಿಗೆ ಶುಂಠಿ, ತುಳಸಿ, ಕಾಳುಮೆಣಸಿನ ಕಷಾಯವನ್ನು ಕುಡಿ ಯುವುದು, ಆಯುರ್ವೇದ ಚಿಕಿತ್ಸೆಗಳಾದ ಶಿರೋಭೃಂಗ, ಶಿರೋಧಾರ, ತೈಲಾಭೃಂಗ, ಸ್ವೇದ ಮುಂತಾದ rejuvention ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಚಳಿಗಾಲದ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

Tags: