ರಮ್ಯಾ, ಅರವಿಂದ್
ಚಳಿಗಾಲ ಬಂತೆಂದರೆ ಸಾಕು ಶೀತ, ಜ್ವರದ ಸಮಸ್ಯೆಗಳು ಬಹುತೇಕರನ್ನು ಬಾಧಿಸುತ್ತದೆ. ಚಳಿಗಾಲದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಬಳಸುವುದರಿಂದ ಚಳಿಗಾಲದಲ್ಲಿ ಬಾಧಿಸುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅಲ್ಲದೆ ಬೊಜ್ಜು ಕರಗಿಸಲು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಮುಖ್ಯವಾಗಿ ತಲೆಕೂದಲಿನ ಸಮಸ್ಯೆಗೆ ಹೇಳಿ ಮಾಡಿಸಿದ ಮದ್ದು.
ಬೆಟ್ಟದ ನೆಲ್ಲಿಕಾಯಿಯನ್ನು ಬಳಸಿ ವಿವಿಧ ರೀತಿಯ ರುಚಿಕರವಾದ ಅಡುಗೆಯನ್ನು ತಯಾರಿಸಿ ಸವಿಯಬಹುದು, ಅವು ಯಾವುವು ಎಂದು ನೋಡೋಣ
ಆಮ್ಲ ರೈಸ್:
ಶೀಘ್ರವಾಗಿ ತಯಾರಾಗುವ ಆಮ್ಲ ರೈಸ್ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ, ನಾಲ್ಕು ಬೆಟ್ಟದ ನೆಲ್ಲಿಕಾಯಿಗಳ ಜೊತೆ ಎರಡು ಕಪ್ ಬಿಸಿಯಾದ ಅನ್ನ ಇದ್ದರೆ ಸಾಕು ಅಮ್ಲ ಲೈನ್ ತಯಾರಿಸಬಹುದು. ಚೆನ್ನಾಗಿ ತೊಳೆದು ಬೀಜವನ್ನು ತೆಗೆದ ಬೆಟ್ಟದ ನೆಲ್ಲಿಕಾಯಿಗಳನ್ನು ಹೆಚ್ಚಿಕೊಂಡು ನೀರು ಬಳಸದೇ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎರಡು ಚಮಚ ಅಡುಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಎರಡು ಚಮಚ ಕಡಲೆಕಾಯಿ ಬೀಜ ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉರಿದುಕೊಳ್ಳಬೇಕು. ಅದಕ್ಕೆ 3-4 ಹಸಿ ಮೆಣಸಿನಕಾಯಿ, ಸ್ವಲ್ಪ ಕರಿಬೇವು, ಒಂದು ಚಿಟಿಕೆ ಅರಿಶಿನ ಹಾಕಿ, ರುಬ್ಬಿಕೊಂಡ ನೆಲ್ಲಿಕಾಯಿ ಬೆರೆಸಿ ಒಂದೆರಡು ನಿಮಿಷ
ಬಿಸಿಯಾಗಲು ಬಿಡಬೇಕು. ನಂತರ ಬಿಸಿಯಾದ ಅನ್ನ, ರುಚಿಗೆ ತಕ್ಕಟ್ಟು ಉಪ್ಪು ಹಾಕಿ ಎಲ್ಲವನ್ನು ಸೇರಿಸಿ ಹದವಾಗಿ ಕಲಸಿಕೊಂಡರೆ ಆಮ್ಲ ರೈಸ್ ಸವಿಯಲು ಸಿದ್ಧವಾಗುತ್ತದೆ.
ಬೆಟ್ಟದ ನೆಲ್ಲಿಕಾಯಿ ಜಾಮ್:
ಜಾಮ್ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಒಂದು ರುಚಿಕರ ಖಾದ್ಯ. 8-10 ಬೆಟ್ಟದ ನೆಲ್ಲಿಕಾಯಿಗಳು, ಒಂದರಿಂದ ಎರಡು ಕಪ್ ಬೆಲ್ಲ, ಒಂದು ಚಿಟಿಕೆ ಏಲಕ್ಕಿಪುಡಿ ಇದ್ದರೆ ಸಾಕು ಜಾಮ್ ತಯಾರಿಸಬಹುದು. ಇವುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು, ನಂತರ ಒಂದು ಬಾಣಲೆಯಲ್ಲಿ ಕಾಲು ಕಪ್ ನೀರನ್ನು ಹಾಕಿ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪು ಹಾಗೂ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ನೀರು ಹಾವಿಯಾಗುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ತಣ್ಣಗಾಗಲು ಬಿಡಬೇಕು. ಹೀಗೆ ತಯಾರಾದ ನೆಲ್ಲಿಕಾಯಿ ಜಾಮ್ ಚಪಾತಿ, ದೋಸೆಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.
ನೆಲ್ಲಿಕಾಯಿ ರಸಂ:
ಎರಡೇ ಎರಡು ಬೆಟ್ಟದನೆಲ್ಲಿಕಾಯಿಗಳು ಇದ್ದರೆ ಸಾಕು, ರುಚಿಕರವಾದ ಸಾಂಬಾರ್ ಅಥವಾ ರಸಂ ತಯಾರಿಸಬಹುದು, ನೆಲ್ಲಿಕಾಯಿ, ಕಾಲು ಕಪ್ ನಷ್ಟು ಕಾಯಿತುರಿ, 2-3 ಹಸಿಮಣಸಿನಕಾಯಿ ಜೊತೆಗೆ ಎರಡು ಚಮಚ ತೊಗರಿ ಬೇಳೆ, ಒಂದು ಚಮಚ ಉದ್ದಿನಬೇಳೆ, ಒಂದು ಚಮಚ ಧನಿಯ, ಅರ್ಧ ಚಮಚ ಜೀರಿಗೆ, ಕಾಳು ಮೆಣಸು, ಒಂದು ಚಿಟಿಕಿ ಮೆಂತ್ಯ ಬೇಕಾಗುತ್ತದೆ. ಒಂದು ಬಾಣಲೆಯಲ್ಲಿ ಒಂದು ಚಮಚ ಕಡಲೆಕಾಯಿ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಹೊಂಬಣ್ಣ ಬರುವವರೆಗೂ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉರಿದುಕೊಳ್ಳಬೇಕು. ನಂತರ ನಾಲ್ಕರಿಂದ ಐದು ಹಸಿ ಮೆಣಸಿನಕಾಯಿ ಹಾಕಿ ಒಂದು ನಿಮಿಷ ಉರಿಯಬೇಕು. ಇದನ್ನು ಒಂದು ಮಿಕ್ಸಿ ಪಾತ್ರೆಗೆ ಹಾಕಿಕೊಂಡು ಒಂದು ಸ್ವಲ್ಪ ತೆಂಗಿನ ತುರಿ ಮತ್ತು ಬೀಜ ತೆಗೆದು ಹಚ್ಚಿದ ಎರಡು ಬೆಟ್ಟದ ನಲ್ಲಿಕಾಯಿ ಎಲ್ಲವನ್ನು ಹಾಕಿ ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು ರುಬ್ಬಿಕೊಂಡ ಪದಾರ್ಥವನ್ನು ಒಂದು ಪಾತ್ರೆಗೆ ವರ್ಗಾಯಿಸಿ ಅದಕ್ಕೆ ಎರಡು ಕಪ್ ನೀರನ್ನು ಸೇರಿಸಿ ಒಂದು ಚಿಟಿಕೆ ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಐದರಿಂದ ಎಂಟು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು, ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಒಂದು ಒಣ ಮೆಣಸಿನಕಾಯಿ, ಒಂದು ಚಿಟಿಕೆ ಇಂಗು ಎಲ್ಲವನ್ನು ಹಾಕಿ ಒಗ್ಗರಣೆ ತಯಾರಿಸಿ ಕುದಿಸಿದರೆ ನೆಲ್ಲಿಕಾಯಿ ಸಾಂಬರ್ ಸವಿಯಲು ಸಿದ್ಧ.
ಇದಿಷ್ಟೇ ಅಲ್ಲದೆ ನೆಲ್ಲಿಕಾಯಿಯಿಂದ ಚಟ್ನಿಪುಡಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು. ಇವೆಲ್ಲವೂ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ, ಇನ್ನೇಕೆ ತಡ ನೀವೂ ತಯಾರಿಸಿ ಸೇವಿಸಿ.