ಬಿ.ಟಿ.ಮೋಹನ್ ಕುಮಾರ್
ಮಹಿಳೆಯರನ್ನು ಕಾಡುತ್ತಿರುವ ಅಪಾಯಕಾರಿ ‘ಗರ್ಭಕಂಠ ಕ್ಯಾನ್ಸರ್’ ಮಾರಕ ರೋಗಕ್ಕೆ ಮಂಡ್ಯದ ಡಾ. ಜ್ಯೋತಿ ಅವರು ಉಚಿತವಾಗಿ ಲಸಿಕೆ ನೀಡುವ ಮೂಲಕ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.
ಕ್ಯಾನ್ಸರ್ ರೋಗದಲ್ಲಿ ಬೇರೆ ಬೇರೆ ವಿಧಗಳಿವೆ. ಇದರಲ್ಲಿ ಗರ್ಭಕಂಠ ಕ್ಯಾನ್ಸರ್ ಮಹಿಳೆ ಯರನ್ನು ಬಹುವಾಗಿ ಕಾಡುತ್ತಿದೆ. ಭಾರತ ದಂತಹ ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಈ ರೋಗಕ್ಕೆ ಬಲಿಯಾಗುತ್ತಿರುವುದು ದುರಂತ. ಇಂತಹ ರೋಗಕ್ಕೆ ಸದ್ದಿಲ್ಲದೆ, ಬಡ ಮಕ್ಕಳಿಗೆ ಡಾ. ಜ್ಯೋತಿ ಉಚಿತವಾಗಿ ಲಸಿಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗರ್ಭಕಂಠ ಕ್ಯಾನ್ಸರ್‌ಗೆ ಎಚ್‌ಪಿವಿ ವೈರಸ್ ಸೋಂಕು ಕಾರಣ. ಈ ಸೋಂಕಿಗೆ ಪರಿಹಾರವಾಗಿ ಎಚ್‌ಪಿವಿ ಎಂಬ ಲಸಿಕೆ ಉತ್ತಮವಾಗಿ ಕೆಲಸ ಮಾಡುತ್ತದೆ. ಇದನ್ನು ಕೆಲ ಕಂಪೆನಿಗಳು ಉತ್ಪಾದನೆ ಮಾಡುತ್ತವೆಯಾದರೂ ಒಂದು ಲಸಿಕೆಗೆ ೧೬೦೦ ರಿಂದ ೨೫೦೦ರೂ.ಗಳಿಗೂ ಹೆಚ್ಚು ಹಣ ತೆರಬೇಕಾಗುತ್ತದೆ. ಕೋವಿಡ್‌ಗೂ ಮುನ್ನ ಈ ಲಸಿಕೆಗೆ ಸುಮಾರು ೩,೦೦೦ ರೂ. ಗೂ ಹೆಚ್ಚು ಹಣ ನೀಡಬೇಕಿತ್ತು. ಕೋವಿಡ್ ನಂತರದ ದಿನಗಳಲ್ಲಿ ದರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರುವುದು ಸಮಾ ಧಾನ ತರಿಸಿದೆಯಾದರೂ, ಬಡವರು, ಮಧ್ಯಮ ವರ್ಗದವರಿಗೂ ಇಷ್ಟು ಪ್ರಮಾಣದ ಹಣ ಕೊಡುವುದು ದುಸ್ತರವಾಗಿದೆ.
ಇದನ್ನು ಮನಗಂಡ ಮಂಡ್ಯದ ಅಶೋಕ ನಗರದಲ್ಲಿರುವ ಸುರಭಿ ಆಸ್ಪತ್ರೆಯ ವೈದ್ಯೆ ಡಾ. ಜ್ಯೋತಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೯ ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎರಡು ಲಸಿಕೆ ಗಳನ್ನು ನೀಡುತ್ತಿದ್ದಾರೆ. ಸುಮಾರು ೧೬೦೦ ರೂ. ವೆಚ್ಚವಾಗುವ ಲಸಿಕೆಯನ್ನು ಪ್ರತಿ ತಿಂಗಳ ಮೊದಲ ಗುರುವಾರ ೫೦ ಮಂದಿ ಮಕ್ಕಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದಾರೆ. ಈ ಲಸಿಕೆಯ ಎರಡು ಡೋಸ್ ಅನ್ನು ಉಚಿತವಾಗಿ ನೀಡುವ ಮೂಲಕ ಮಕ್ಕಳ ಪಾಲಿಗೆ ವರವಾಗಿದ್ದಾರೆ.
ಲಸಿಕೆ ಪಡೆಯಲು ಬರುವ ಸರ್ಕಾರಿ ಶಾಲೆಯ ಮಕ್ಕಳು ಮುಖ್ಯೋಪಾಧ್ಯಾಯರ ಸಹಿ ಇರುವ ಗುರುತಿನ ಚೀಟಿಯನ್ನು ತರುವುದು ಕಡ್ಡಾಯ. ಪ್ರತಿ ತಿಂಗಳು ೫೦ ಮಕ್ಕಳಿಗೆ ಮಾತ್ರ ಉಚಿತ ಲಸಿಕೆ ನೀಡಲಾಗುತ್ತದೆ. ಹೆಚ್ಚುವರಿ ಬಂದಲ್ಲಿ ಮುಂದಿನ ತಿಂಗಳಿಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ.
ಗರ್ಭಕಂಠ ಕ್ಯಾನ್ಸರ್ ರೋಗಕ್ಕೆ ಸರ್ಕಾರವೇ ಲಸಿಕೆ ಕೊಡಲು ಕಳೆದ ವರ್ಷದ ಬಜೆಟ್‌ನಲ್ಲೇ ಘೋಷಿಸಿತ್ತಾದರೂ ಈವರೆಗೂ ಆ ಯೋಜನೆ ಅನುಷ್ಠಾನವಾಗಿಲ್ಲ. ಇದರಿಂದಾಗಿ ಉಳ್ಳವರು ಹೆಚ್ಚಿನ ಹಣ ಕೊಟ್ಟು ಲಸಿಕೆಯನ್ನು ಪಡೆಯುತ್ತಾರೆ. ಬಡವರು, ಮಧ್ಯಮ ವರ್ಗದವರು ಲಸಿಕೆ ಪಡೆಯದೆ ಎಲ್ಲವನ್ನೂ ಸಹಿಸಿಕೊಂಡೇ ಬದುಕು ನಡೆಸುತ್ತಾರೆ. ಸರ್ಕಾರ ಇನ್ನಾದರೂ ಇಂತಹ ಆರೋಗ್ಯ ಸಂಬಂಧಿ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸುವುದು ಅಗತ್ಯ.
” ಕಳೆದ ಒಂದು ವರ್ಷದಿಂದಲೂ ಸರ್ಕಾರಿ ಶಾಲೆಯ ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್‌ಗೆ ಸಂಬಂಽಸಿದ ಎಚ್‌ಪಿವಿ ಲಸಿಕೆಯನ್ನು ಕೊಡುತ್ತಿದ್ದೇನೆ. ಇದರೊಂದಿಗೆ ಸಮಾಜಕ್ಕೆ ಕಿಂಚಿತ್ತಾದರೂ ಸೇವೆ ಮಾಡುವುದು ಉzಶವಾಗಿದೆ. ಸಂಘ-ಸಂಸ್ಥೆಗಳು ಕೈ ಜೋಡಿಸಿದರೆ ಮತ್ತಷ್ಟು ಹೆಚ್ಚಿನ ಮಕ್ಕಳಿಗೆ ಲಸಿಕೆ ಕೊಡಬಹುದು.”
– ಡಾ. ಜ್ಯೋತಿ, ಸ್ತ್ರೀರೋಗ ತಜ್ಞೆ, ಸುರಭಿ ಆಸ್ಪತ್ರೆ, ಮಂಡ್ಯ





