ಬಿ.ಎನ್.ಧನಂಜಯಗೌಡ
ಮೈಸೂರು: ‘ಬದ್ಕೋ ಛಲ, ನಿಯತ್ತು ಅನ್ನದು ಇದ್ರಾ, ಕಷ್ಟಗಳೇ ನಮ್ ಕಂಡ್ರ ಎದ್ರುಕತವ ಕಾ ಕೂಸಾ’ ಎಂದಿದ್ದು ಹೂವಾಡಗಿತ್ತಿ ಸುಮಾರು ೬೨ ವರ್ಷದ ಪುಟ್ಟಮಾದಮ್ಮ.
ಹೀಗೆ ಪಕ್ಕಾ ಚಾಮರಾಜನಗರ ನೆಲದ ಸೊಗಡಿನಲ್ಲಿ ಮಾತನಾಡುವ ಹೂವಿನಂತ ಮನಸ್ಸಿನ ಪುಟ್ಟಮಾದಮ್ಮ ಕೇವಲ ಹೂವಾಡಗಿತ್ತಿಯಲ್ಲ. ಗಟ್ಟಿಗಿತ್ತಿ ಎಂಬುದು ಅವರ ಕತೆ ಕೇಳಿದ್ರೆ ಗೊತ್ತಾಗುತ್ತೆ. ನಗರದ ಸರಸ್ವತಿಪುರಂನ ಜವರೇಗೌಡ ಪಾರ್ಕಿನಿಂದ ಮುಂದೆ ಹೋದ್ರೆ ೧೩ನೇ ಮುಖ್ಯರಸ್ತೆ, ೫ನೇ ಕ್ರಾಸ್‌ನಲ್ಲಿ ಇರುವ ಕತ್ತಿಮರದ ಕೆಳಗೆ ನಾನಾ ಬಗೆಯ ಹೂವುಗಳನ್ನು ಮಾರುತ್ತ ಕುಳಿತ ಈ ಹೂವಾಡಗಿತ್ತಿಯನ್ನು ಅನೇಕ ವರ್ಷಗಳಿಂದ ನೋಡಿದ್ದ ಈ ಮುಖವನ್ನು ಅದ್ಯಾಕೋ ಮಾತನಾಡಿಸಬೇಕು ಎಂದು ಹೋದೆ.
ಹಾಗೆ ಹೋದವನಿಗೆ ‘ಎಷ್ಟ್ ಬೇಕಾ ಹೂವು?’ ಎಂದು ರಾಗವಾಗಿ ಕೇಳಿದರು ಪುಟ್ಟಮಾದಮ್ಮ. ನಾನು ಕೂಡ ಅದೇ ದಾಟಿಯಲ್ಲಿ ‘ಹೂ ಬ್ಯಾಡ್ ಅಮ್ಮ, ನಿನ್ನ ಜೀವನ್ದು ಕತೆ ಹೇಳು, ಕೇಳ್ತೀನಿ’ ಎಂದು ಹೋಗಿ ಪಕ್ಕದಲ್ಲಿ ಕುಳಿತೆ. ‘ನನ್ನ ಕತ್ಯಾ ತಗಂಡು ಏನ್ ಮಾಡಿಯಾ, ಕೂಸಾ?’ ಎಂದು ಸಣ್ಣಗೆ ನಕ್ಕರು. ‘ನೀನು ಇದೇ ಜಾಗ್ದಾಗೆ ಹೂ ವ್ಯಾಪಾರ ಮಾಡೋದ್ನಾ, ತುಂಬಾ ವರ್ಷಗಳಿಂದ ನಾ ನೋಡಿದ್ದೀನಿ. ಎಷ್ಟು ವರ್ಷ ಆಯ್ತು ಇಲ್ಲಿ ಹೂಮಾರೋಕೆ ಹಿಡ್ದು’ ಎಂದು ಕೇಳಿದೆ. ಹೀಗೆನ್ನುತ್ತಿದ್ದಂತೆ ಪುಟ್ಟಮಾದಮ್ಮ ಸ್ವಾಭಿಮಾನದ ಜೀವನಗಾಥೆ ತೆರದುಕೊಂಡಿತು.
ಹೂವೇ ಬದುಕು, ಹೂವೇ ದೇವರು : ‘ನನ್ನ ಪಾಲಿಗೆ ಹೂವೇ ಬದುಕು, ಹೂವೇ ದೇವರು’ ಎನ್ನುವ ಪುಟ್ಟಮಾದಮ್ಮ ೧೩ನೇ ಮುಖ್ಯರಸ್ತೆ, ೫ನೇ ಕ್ರಾಸ್‌ನಲ್ಲಿ ಇರುವ ಕತ್ತಿಮರದ ಕೆಳಗೆ ೪೦ ವರ್ಷಗಳಿಂದ ಹೂವು ಮಾರಾಟ ಮಾಡುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ೫.೩೦ಕ್ಕೆ ತನ್ನ ಹೂವು ಮಾರುವ ಕೆಲಸ ಆರಂಭಿಸುವ ಪುಟ್ಟಮಾದಮ್ಮನ ಕೆಲಸ ಮುಗಿಯುವುದು ರಾತ್ರಿ ೮ಕ್ಕೆ. ಇನ್ನು ಹಬ್ಬ-ಹರಿದಿನ ಅಂದ್ರೆ ಮನೆಗೆ ಹೋಗದೆ ಹೂವ ಮಾರುವ ಜಾಗದಲ್ಲಿಯೇ ಮಲಗುತ್ತಾರೆ. ಮನೆಯಿಂದ ಊಟ ತಿಂಡಿ ಎಲ್ಲ ಇಲ್ಲಿಗೆ ಬರಲಿದೆ.
ಪುಟ್ಟಮಾದಮ್ಮ ನಂಜನಾಯಕ ಮೂಲತಃ ಚಾಮರಾಜನಗರದ ಜಿಲ್ಲೆಯ ಯಳಂದೂರಿನವರು. ಪುಟ್ಟಮಾದಮ್ಮನಿಗೆ ನಂಜನಾಯಕನೊಂದಿಗೆ ಮದುವೆಯಾದಾಗ ತೀರಾ ಚಿಕ್ಕ ವಯಸ್ಸು. ಮದುವೆ ಆದ ಬದುಕು ಸಾಗಿಸಲು ಮೈಸೂರಿಗೆ ಬಂದ ಈ ದಂಪತಿ ಜೀವನ ನಿರ್ವಹಣೆಗೆ ಆಯ್ಕೆ ಮಾಡಿಕೊಂಡಿದ್ದು, ಹೂವಿನ ವ್ಯಾಪಾರ. ಹೀಗಿರುವಾಗ ಮದುವೆಯಾದ ೧೦ ವರ್ಷಕ್ಕೆ ನಂಜನಾಯಕರು ನಿಧನರಾಗುತ್ತಾರೆ. ಚಿಕ್ಕ ವಯಸ್ಸಿಗೆ ಸಂಸಾರದ ಹೊರೆ ಪುಟ್ಟಮಾದಮ್ಮನ ಹೆಗಲಿಗೆ ಬೀಳುತ್ತದೆ. ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳ ಜವಾಬ್ದಾರಿ ಬೇರೆ. ಹೀಗಿರುವಾಗ ಸಂಬಂಧಿಕರು ಮೈಸೂರು ಬಿಟ್ಟು ಊರಿಗೆ ಬರುವಂತೆ ಹೇಳುತ್ತಾರೆ. ಯಾರ ಹಂಗಿನಲ್ಲಿಯೂ ಇರಲು ಇಷ್ಟಪಡದ ಪುಟ್ಟಮಾದಮ್ಮ, ಮೈಸೂರಿನಲ್ಲಿಯೇ ಉಳಿದು ಹೂವಿನ ವ್ಯಾಪಾರ ಮುಂದುವರೆಸುತ್ತಾರೆ. ಮಕ್ಕಳಿಗೆ ಒಂದು ಹಂತದವರೆಗೂ ಶಿಕ್ಷಣ ಕೊಡಿಸುತ್ತಾರೆ. ಇಬ್ಬರೂ ಹೆಣ್ಣು ಮಕ್ಕಳನ್ನು ಮದುವೆ ಮಾಡುತ್ತಾರೆ. ಬಳಿಕ ತನ್ನ ದುಡಿಮೆಯಿಂದ ಕೂಡಿಟ್ಟ ಹಣದಲ್ಲಿ ಜನತಾನಗರದಲ್ಲಿ ಸ್ವಂತ ನಿವೇಶನ ಮಾಡಿ, ಎರಡು ಅಂತಸ್ತಿನ ಮನೆಯನ್ನೂ ಮಾಡಿ, ಒಂದು ಮನೆಯನ್ನು ಬಾಡಿಗೆ ನೀಡಿದ್ದಾರೆ. ವ್ಯಾಪಾರ ಮೊದಲ ಹಾಗೆ ಇಲ್ಲದಿದ್ದರೂ, ಸಾಧಾರಾಣವಾಗಿದೆ. ಹಬ್ಬ-ಹರಿದಿನಗಳಲ್ಲಿ ಜೋರು ವ್ಯಾಪಾರವಾಗುತ್ತದೆ. ಸುತ್ತಲಿನ ಜನರ ಪ್ರೀತಿ ಸಂಪಾದಿಸಿದ್ದಾರೆ.
ಸುಖಿ ಜೀವನ: ‘ಮೊಮ್ಮಗಳನ್ನು ಮದ್ವೆ ಮಾಡ್ದೆ, ಮಗನ ಮಕ್ಕಳು ಇಲ್ಲೇ ಜೆಎಸ್‌ಎಸ್ ಅಲ್ಲಿ ಓದ್ತಾ ಅವರೇ. ಒಂದು ಮನೆ ಬಾಡಿಗೆ ಬರುತ್ತದೆ. ಮಗನು ಕೆಲಸಕ್ಕೆ ಹೋಗ್ತಾನೆ. ಆರಾಮಾಗಿದ್ದೀನಿ’ ಎನ್ನುವ ಪುಟ್ಟಮಾದಮ್ಮನನ್ನು ‘ಮತ್ಯಾಕೆ ಇನ್ನು ಈ ವ್ಯಾಪಾರ, ದುಡಿಮೆ?’ ಎಂದು ಕೇಳಿದರೆ. ‘ಶಕ್ತಿ ಇರೋವರೆಗೂ ಬದುಕೋಕೆ ದುಡಿತಾನೇ ಇರಬೇಕು. ವಯಸ್ಸಾಯ್ತು ಅಂತ ಮಕ್ಕಳಿಗೆ ಹೊರೆಯಾಗಬಾರದು’ ಎನ್ನುತಾರೆ. ‘ಬಹಳ ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡು ಹೊತ್ತ ಬದುಕಿನ ಹೊರೆ ಕಷ್ಟವಾಗಲಿಲ್ವಾ?’ ಎಂದು ಕೇಳಿದರೆ. ‘ಬದ್ಕೋ ಛಲ, ನಿಯತ್ತು ಅನ್ನದು ಇದ್ರಾ, ಕಷ್ಟಗಳೇ ನಮ್ ಕಂಡ್ರ ಎದ್ರುಕತವ ಕಾ ಕೂಸಾ’ ಎಂದು ತನ್ನದೇ ಸೊಗಡಿನಲ್ಲಿ ಬದುಕಿನ ಸಿದ್ಧಾಂತಗಳನ್ನು, ಮಾರ್ಗಗಳನ್ನು ತಿಳಿಸುವ ಪುಟ್ಟಮಾದಮ್ಮನ ಸ್ವಾಭಿಮಾನ, ಛಲ, ನಿಯತ್ತು ಎಲ್ಲರಿಗೂ ಮಾದರಿಯಾಗುವಂತದ್ದು.