Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಧನ್ಯಾ ಎಂಬ ವಿಶೇಷ ಶಿಕ್ಷಕಿ

• ಕೀರ್ತಿ ಬೈಂದೂರು

ಇದೊಂದು ವಿಶೇಷಚೇತನರ ಶಾಲೆ, ದಾಖಲಾತಿಗೊಂಡಿರುವ ಕೆಲವರ ವಯಸ್ಸು ಕೇಳಿದರೆ ಐವತ್ತು ದಾಟಿದೆ. ಆದರೆ ಬುದ್ಧಿಮತ್ತೆ ಮಾತ್ರ ಏಳೆಂಟು ವರ್ಷದವರಂತಿದೆ. ಹೆತ್ತವರನು ಹೊರತುಪಡಿಸಿದರೆ ಸಮಾಜ ಇಂತಹವರನ್ನು ಹೊರೆಯಂತೆ ಪರಿಗಣಿಸಿ ರುವ ಕಾಲದಲ್ಲಿ, ಈ ವಿಶೇಷ ಚೇತನ ಮಕ್ಕಳೊಂದಿಗೆ ನಿತ್ಯವೂ ಹಾಡುತ್ತಾ, ಆಡುತ್ತಾ ಪಾಠ ಮಾಡುವ ಈ ಶಿಕ್ಷಕಿಯ ಹೆಸರು ಧನ್ಯಾ ಪೊನ್ನಮ್ಮ ಉತ್ತಪ್ಪ.

ಚಿಕ್ಕಂದಿನಿಂದ ತಾನು ಶಿಕ್ಷಕಿಯಾಗಬೇಕು ಎಂಬ ಕನಸು ಇವರದು. ಬಿ.ಎ. ಪದವಿ ಪಡೆದ ಮೇಲೆ ಇವರು ಕೊಡಗಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸಿದರು. ನಂತರ ಉತ್ತಪ್ಪ ಅವರನ್ನು ಮದುವೆಯಾಗಿ ಮೈಸೂರಿಗೆ ಬರುವಂತಾಯಿತು. ಬ್ಯೂಟಿಫುಲ್ ಗೇಟ್ಸ್ ಎನ್ನುವ ವಿಶೇಷ ಶಿಕ್ಷಣ ಶಾಲೆಯಲ್ಲಿ ಇವರು ಮತ್ತೆ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ವಿಶೇಷ ಚೇತನರ ಶಾಲೆಯಲ್ಲಿ ಪಾಠ ಮಾಡುವ ಯಾವ ಬಗೆಯ ತರಬೇತಿಯನ್ನೂ ಇವರು ಪಡೆದಿರಲಿಲ್ಲ. ಆದರೆ ಎರಡ ರಿಂದ ನಾಲ್ಕು ವರ್ಷ ವಯಸ್ಸಿನವರಿಗೆ ಪಾಠ ಬೋಧಿಸುವ ಕುರಿತ ‘ಮೊಂಟೆಸರಿ ತರಬೇತಿಯನ್ನು ಪೂರ್ಣಗೊಳಿ ಸಿದ್ದರು. ವಿಶೇಷ ಚೇತನ ಮಕ್ಕಳಿಗೆ ಪೂರಕವಾಗಬಲ್ಲ ತರಬೇತಿ ಪಡೆದಿದ್ದ ಕಾರಣ ಬ್ಯೂಟಿಫುಲ್ ಗೇಟ್ಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗುವ ಅವಕಾಶ ಒದಗಿತು.

ಸಮಾಜದಲ್ಲಿ ಹೀಗೂ ಬದುಕುತ್ತಿರುವವರಿದ್ದಾರೆ ಎಂದು ಗಮನಿಸಿರದ ಧನ್ಯಾ ಅವರ ಬದುಕಿನ ಮಹತ್ತರ ಅಧ್ಯಾಯದ ಪುಟಗಳು ಆರಂಭವಾಗಿದ್ದೇ ಇಲ್ಲಿಂದ. ವಿಶೇಷ ಚೇತನ ಮಕ್ಕಳಲ್ಲಿ ಇರುವ ಭಿನ್ನತೆ, ಕೊರತೆಗಳನ್ನು ಹತ್ತಿರದಿಂದ ಕಂಡರು. ಮಕ್ಕಳನ್ನು ಸ್ವಾವಲಂಬಿಯಾಗಿಸುವ ಹೊಣೆ ಹೊತ್ತರು. ಹತ್ತು ವರ್ಷಗಳವರೆಗೆ ಅದೇ ಸಂಸ್ಥೆ
ಯಲ್ಲಿ ಕಾರ್ಯನಿರ್ವಹಿಸುತ್ತಲೇ, ವಿಶೇಷ ಚೇತನ ಮಕ್ಕಳಿಗೆ ಸಂಬಂಧಿಸಿದ ತರಬೇತಿಯನ್ನೂ ಪಡೆದಿದ್ದಾಯಿತು.

ಇವರ ಪಾಠದ ಶೈಲಿ, ಮಕ್ಕಳೊಂದಿಗೆ ಬೆರೆವ ರೀತಿ ಯನ್ನು ಕಂಡ ಸ್ವತಃ ಸಂಸ್ಥೆಯವರೇ ಹೊಸದಾದ ಸಂಸ್ಥೆ ಸ್ಥಾಪಿಸುವ ಕನಸನ್ನು ಬಿತ್ತಿದರು. ಅದರೊಂದಿಗೆ ನಾವೂ ಕೈ ಜೋಡಿಸುತ್ತೇವೆ ಎಂದ ಮಾತು ವಿಶೇಷ ಚೇತನ ಮಕ್ಕಳೊಂದಿಗಿನ ಪಯಣದ ದಾರಿಬುತ್ತಿಯಾಯಿತು. 2015ರ ಹೊತ್ತಿಗೆ ಸ್ನೇಹಿತರಾದ ದಿಲೀಪ್ ರೇವಯ್ಯ ಅವರ ಜೊತೆಯಲ್ಲಿ ದೇವ್‌ಧನ್‌ ಸಂಸ್ಥೆಯನ್ನು ತೆರೆಯುವುದೆಂದು ತೀರ್ಮಾನಿಸಿದರು. ಇಂದು ಮೈಸೂರಿನ ದೇವ್‌ಧನ್‌ ಫೌಂಡೇಷನ್ ಸಂಸ್ಥೆಯ ಸಹಸಂಸ್ಥಾಪಕಿಯಾಗಿ ವಿಶೇಷ ಚೇತನ ಮಕ್ಕಳಿಗೆ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಬೋಧನೆ ಮಾಡುವ ಅಪರೂಪದ ಶಿಕ್ಷಕಿ ಇವರು.

ಬಯಸಿದಂತೆ ಇವರ ಬದುಕು ಸಾಗುತ್ತಿತ್ತು ನಿಜ. ಹಾಗೆಂದು ಬಂಧು ವರ್ಗದವರ ಹೀಗಳಿಕೆ ಮಾತುಗಳನ್ನು ಕೇಳಲಿಲ್ಲವೆಂದೇನಲ್ಲ. ಅದರಲ್ಲೇನೂ ಲಾಭ ಇಲ್ಲಮ್ಮಾ, ಬೇರೆ ಕೆಲ್ಸ ನೋಡೊ’ ಎಂದವರು, ‘ಅಂಥ ಮಕ್ಕಳ ಜೊತೆ ಕೆಲ್ಸ ಮಾಡ್ತಿದೀಯಾ’ ಎಂದೆಲ್ಲ ಕುಹಕವಾಡಿದ್ದೂ ಉಂಟು. ವಿಶೇಷ ಚೇತನ ಮಕ್ಕಳ ಶಕ್ತಿ ಸಾಮರ್ಥ್ಯಗಳನ್ನು ಅರಿಯದವರು ಮಾತ್ರ ಹೀಗೆನ್ನಲು ಸಾಧ್ಯವೆನ್ನುತ್ತಾ ನಿಷ್ಕಲ್ಮಶ ನಗು ಬೀರುತ್ತಾರೆ ಧನ್ಯಾ ಪೊನ್ನಮ್ಮ.

ಹದಿನೆಂಟು ವರ್ಷದ ಹುಡುಗಿಯೊಬ್ಬಳು ಡೌನ್ ಸಿಂಡೋಮ್ ಸಮಸ್ಯೆಯಿಂದ ಇವರ ಸಂಸ್ಥೆಗೆ ದಾಖಲಾ ದಳು. ಅವಳಿಗೆ ಶಿಕ್ಷಣ, ತರಬೇತಿಯನ್ನು ನೀಡಿದರು. ಅಚ್ಚರಿ ಎನಿಸಬಹುದು, ಆ ಹುಡುಗಿ ಇದೇ ಸಂಸ್ಥೆಯ ಇಂದು ಶಿಕ್ಷಕಿಯಾಗಿದ್ದಾಳೆ. ಅಷ್ಟೇ ಅಲ್ಲದೆ, ವಿಶೇಷ ಚೇತನರ ಒಲಿಂಪಿಕ್‌ನ ಆಯ್ಕೆಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಕ್ಷಣ ಬದುಕಿನ ಹೆಮ್ಮೆ ಎನ್ನುತ್ತಾರೆ. ಇವರ ಸಂಸ್ಥೆಯಲ್ಲಿರುವ ಇನ್ನೊಬ್ಬ ಹುಡುಗ ನಡೆಯಲು ಪರದಾಡುತ್ತಾನೆ. ಆದರೆ ಆರು ಭಾಷೆಗಳನ್ನು ಸಲೀಸಾಗಿ ಮಾತಾಡುವಷ್ಟು ಸಂವಹನ ಕೌಶಲ ಹೊಂದಿದ್ದಾನೆ ಎನ್ನುತ್ತಾ ತಾನೊಬ್ಬಳು ಶಿಕ್ಷಕಿಯಾಗಬೇಕು ಎಂದು ಕನಸು ಕಂಡಿದ್ದು ಸಾರ್ಥಕವೆನಿಸುತ್ತಿದೆ ಎನ್ನುತ್ತಾರೆ. 18 ವರ್ಷದ ಮೇಲಿನ ಮಕ್ಕಳಿಗೆ ಉದ್ಯೋಗಕ್ಕೆ ಸಂಬಂ ಧಿಸಿದ ತರಬೇತಿಯನ್ನು ನೀಡುತ್ತಾ, ನಾಲ್ಕೂವರೆ ವರ್ಷ ದಿಂದ ಅರವತ್ತು ವರ್ಷದವರೆಗಿನ ವಿಶೇಷ ಚೇತನರನ್ನು ಒಳಗೊಳ್ಳುವ ಇವರ ಪ್ರಯತ್ನ ನಿರಂತರವಾಗಿದೆ. ದಿಲೀಪ್ ರೇವಯ್ಯ ಅವರು ಮನಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಕ್ಕಳ ಮತ್ತು ಪೋಷಕರ ಮನಸ್ಥಿತಿಯನ್ನು ಅರಿಯುತ್ತಾ, ಪತಿ ಉತ್ತಪ್ಪ ಅವರು ಸಂಸ್ಥೆಯ ಟ್ರಸ್ಟಿಯಾಗಿ ಸಲಹೆಗಳನ್ನು ನೀಡುತ್ತಾ ಬೆಂಬಲವಾಗಿ ನಿಂತಿದ್ದಾರೆ.

ಮಕ್ಕಳಿಗೆ ವ್ಯವಹಾರ ಜ್ಞಾನ ತಿಳಿಯಬೇಕೆಂದು ನಂದಿನಿ ಪಾರ್ಲ‌್ರನ್ನು ಸಂಸ್ಥೆಯಲ್ಲಿ ತೆರೆದಿದ್ದಾರೆ. ಪಕ್ಕದ ಹೊಟೇಲಿನವರು ಐದು ಲೀಟರ್ ಹಾಲಿಗಾಗಿ ಬಂದರೆ, ಮಕ್ಕಳೇ ಲೆಕ್ಕ ಹಾಕಿ ನೀಡುತ್ತಾರೆ. ಗಣಿತ ಲೆಕ್ಕದ ಜೊತೆಗೆ ಸಮಯದ ಪಾಠವನ್ನೂ ಕೂಡ ಮಕ್ಕಳು ಕಲಿಯುತ್ತಿದ್ದಾರೆ. ಸದಸ್ಯರೆಲ್ಲ ಸೇರಿ ರೂಪಿಸಿದ ಈ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ ಎಂಬುದು ಇವರ ಅಭಿಪ್ರಾಯ. ಇವುಗಳೊಂದಿಗೆ ಧನ್ಯಾರವರು ವಿಶೇಷ ಒಲಿಂಪಿಕ್‌ನ ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

 

Tags: