Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಹೆಣ್ಣಿಗೆ ಬೇಕು ಹೆತ್ತವರ ಬೆಂಬಲ..

ಡಾ.ಯಮುನಾ ಬಿ.ರಾಜ್

ಪಿಯುಸಿ ರಿಸಲ್ಟ್ ಬಂತು.. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮೂರೂ ವಿಭಾಗಗಳಲ್ಲಿಯೂ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ , ಪಿಯುಸಿ, ಯಾವುದೇ ಪರೀಕ್ಷೆಗಳಲ್ಲೂ ಹೆಣ್ಣು ಮಕ್ಕಳು ಮುಂದಿದ್ದಾರೆ.

ಓದಿನಲ್ಲಿ ಹೆಣ್ಣು ಮಕ್ಕಳು ಮುಂದೆ. ಗಂಡು ಮಕ್ಕಳು ಯಾವಾಗಲೂ ಅವರ ಹಿಂದೆ ಎಂದು ಜನ ಹಾಸ್ಯ ಮಾಡುವುದು ಸಾಮಾನ್ಯ. ಆದರೆ ಓದಿನಲ್ಲಿ ಮುಂದಿರುವ ಹೆಣ್ಣು ಮಕ್ಕಳು ಮುಂದಿನ ಅವರ ಜೀವನದಲ್ಲಿ ಹಿಂದೆ ಸರಿಯುತ್ತಾರೆ. ಎಷ್ಟೋ ಹೆಣ್ಣು ಮಕ್ಕಳು ಪ್ರಥಮ ಸ್ಥಾನಗಳಿಸಿದರೂ ಅವರಿಗೆ ಮುಂದಿನ ಜೀವನರೂಪಿಸಿಕೊಳ್ಳಲು ಬಿಡದೇ ಮದುವೆ ಎಂಬ ಸಂಕೋಲೆಯಲ್ಲಿ ಬಂಧಿಸುತ್ತಾರೆ. ಮುಂದೆ ಗಂಡ, ಮಕ್ಕಳು ಎಂದು ತನ್ನ ಇಡೀ ಸಂಸಾರದ ಭಾರ ಹೊತ್ತ ಹೆಣ್ಣು ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ತ್ಯಾಗಮಯಿ ಆಗುತ್ತಾಳೆ. ಇದಕ್ಕೆ ತಾಜಾ ಉದಾಹರಣೆ ನನ್ನ ಸ್ನೇಹಿತೆ … ಒಟ್ಟಿಗೇ ಓದಿದ ನಮಗೆ ಪಿಯುಸಿಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತೆ. ನಂತರ ಪದವಿ ಓದುತ್ತಿರುವಾಗ ಆಕೆಗೆ ಮದುವೆ ಎಂದು ಸಂದೇಶ ರವಾನೆಯಾಗುತ್ತದೆ. ಆಕೆ ಹಳ್ಳಿಯವಳಾದ್ದರಿಂದ ಆಕೆಯ ಪೋಷಕರು ವಿವಾಹ ಮಾಡುತ್ತಾರೆ. ಈಗಲೂ ಕೂಡ ಹಳ್ಳಿಯ ಕಡೆ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಓದು ನಿಲ್ಲಿಸಿ ಮದುವೆಯಾಗಿರುವ ಸಂಗತಿಗಳು ನಮ್ಮ ಕಣ್ಣು ಮುಂದೆಯೇ ಇವೆ. ಅದೇ ರೀತಿಯಾಗಿ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದ ನನ್ನ ಸ್ನೇಹಿತೆ ಇತ್ತೀಚೆಗೆ ಸಿಕ್ಕಿದ್ದಳು. ಹಾಗೆಯೇ ಮಾತುಕತೆ ಮುಂದುವರಿಯುತ್ತಿದ್ದಂತೆ ಆಕೆಯ ಮಾತಿನಲ್ಲಿ ಬಹಳ ಅಸಹಾಯಕತೆಯೂ ನನಗೆ ಕಾಣುತ್ತಿತ್ತು. ಮನ ಬಿಚ್ಚಿ ಮಾತನಾಡದೇ ಈಗ ನಾನು ಬಹಳ ಚೆನ್ನಾಗಿದ್ದೇನೆ, ಕಣ್ಣಲ್ಲಿ ಕಣ್ಣಿಟ್ಟು ಕಾಪಾಡೋ ಗಂಡ, ಮುತ್ತಿನಂತ ಮಕ್ಕಳು ನನ್ನ ಜೊತೆಗಿರುವಾಗ ನನಗಿನ್ನು ಏನು ಬೇಕು ಎಂದು ಹೇಳುವಾಗ, ಇಷ್ಟೇ ಜೀವನ ಅಂತ ಅನ್ನಿಸಿಬಿಟ್ಟಿತ್ತು. ಆದರೆ ಅವಳು ಪದವಿಯ ಮೊದಲ ವರ್ಷದಲ್ಲಿ ನಾನಾ ಆಸೆಗಳನ್ನು ತನ್ನ ಬಳಿ ವ್ಯಕ್ತಪಡಿಸಿದ್ದಳು. ಹಕ್ಕಿಯಂತೆ ಹಾರಲು ಇಷ್ಟ.

ಪ್ರಕೃತಿಯ ಜೊತೆ ಬೆರೆಯಲು ಇಷ್ಟ ಎಂದು ಅಪರೂಪಕ್ಕೆ ಕಾಲೇಜು ಟ್ರಿಪ್, ಅದು ಇದು ಎಂದು ಹೊರಟಾಗ ಬಹಳ ಹುರುಪಿನಿಂದ ನಮ್ಮ ಜೊತೆ ಬೆರೆಯುತ್ತಿದ್ದಳು. ಮರೆತಿದ್ದೆ ಆಕೆ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಳು.. ನಾನು, ಅವಳು ಒಬ್ಬರಿಗೊಬ್ಬರು ಮಾತನಾಡುತ್ತಾ ಮುಂದೆ ಏನು ಮಾಡಬಹುದು ಎಂದು ಯೋಚಿಸುವಾಗ ಆಕೆ ನನಗೆ ಹೇಳಿದ್ದ ಮಾತು ಇನ್ನೂ ಮರೆತಿಲ್ಲ..

ನಮ್ಮದು ಹಳ್ಳಿ ಗಾಡಿನ ಪ್ರದೇಶ.. ಅಲ್ಲಿ ನಾನಾ ಸಮಸ್ಯೆಗಳು ಇವೆ.. ನಮ್ಮ ಊರಿನವರು ಒಂದು ರಸ್ತೆ ಮಾಡಿಸಲು ಮತ್ತು ಇನ್ನಿತರ ಸವಲತ್ತುಗಳನ್ನು ಪಡೆಯಲು ಅಧಿಕಾರಿಗಳ ಬಳಿ ದಿನ ನಿತ್ಯವೂ ಅಲೆಯುತ್ತಾರೆ. ಅದಕ್ಕಾಗಿಯೇ ಬಡವರ ಉದ್ಧಾರಕ್ಕಾಗಿಯಾದರೂ ನಾನು ಚೆನ್ನಾಗಿ ಓದಿ ಒಳ್ಳೆಯ ಅಧಿಕಾರಿಯಾಗಬೇಕು. ಐಎಎಸ್ ಮಾಡಬೇಕು ಎಂದು ಹಲವಾರು ಬಾರಿ ಹೇಳಿದ್ದಳು. ಆದರೆ ಈಗ ಅವಳ ಆಸೆಯೇ ಮೂಲೆಗುಂಪಾಗಿದೆ. ಸಂಸಾರ ಸಾಗಿಸುತ್ತಾ ಮಕ್ಕಳಿಗೆ ಹೋಮ್‌ವರ್ಕ್ ಮಾಡಿಸುತ್ತಾ, ಅವರ ಓದಿನ ಕಡೆ ಗಮನ ಹರಿಸುತ್ತಾ ತನ್ನ ಸಾಧನೆಯನ್ನು ಮೂಟೆಕಟ್ಟಿದ್ದಾಳೆ.

ಪಿಯುಸಿ ಅಥವಾ ಪದವಿ ಮುಗಿದ ಕೂಡಲೇ ಹೆಣ್ಣು ಪೋಷಕರಿಗೆ ಹೊರೆಯಾಗುತ್ತಾಳೆ. ಮದುವೆ ವಯಸ್ಸಿಗೆ ಬಂದೇ ಬಿಟ್ಟಳು ನಿಮ್ಮ ಮಗಳು ಎಂದು ನೆರೆ ಹೊರೆಯವರು ಹೇಳಿದ ಕೂಡಲೇ ಗಂಡು ನೋಡಲು ಶುರುಮಾಡುತ್ತಾರೆ.ಆಕೆಯ ಮುಂದಿನ ದಾರಿ ಏನು? ಆಕೆಯ ಭಾವನೇ ಏನು? ಎಂದು ನೋಡದೇ ಸಂಸಾರದ ನೊಗಕ್ಕೆ ಕಟ್ಟುತ್ತಾರೆ. ಪ್ರತೀ ವರ್ಷದಂತೆ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳು ಮುಂದೆ ಬಂದರೂ ನಂತರ ಅವರ ಸಾಧನೆಯ ಆಸೆ ಅರ್ಧಕ್ಕೆ ನಿಂತು ಹೋಗುತ್ತದೆ. ಹೀಗೆ ಮುಂದುವರಿದರೆ ಎಂದಿನಂತೆ ಹೆಣ್ಣು ಸಂಸಾರದ ಕಣ್ಣಾಗಬಲ್ಲಳೇ ಹೊರತು, ಅವಳ ಜೀವನದ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಎಲ್ಲ ಪೋಷಕರೂ ಕೂಡ ಈ ಬಗ್ಗೆ ಗಮನ ಹರಿಸಬೇಕು. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳನ್ನೂ ಕೂಡ ಓದಿಸಬೇಕು. ಮದುವೆ ನಂತರವೂ ಗಂಡ ಆದವನೂ ತನ್ನ ಹೆಂಡತಿಯನ್ನು ಓದಿಸಬೇಕು. ಆಕೆಯ ಸ್ವಾತಂತ್ರ್ಯಕ್ಕೆ ಯಾರೂ ಅಡ್ಡಿಯಾಗಬಾರದು, ಸುನಿತಾ ವಿಲಿಯಮ್ಸ್ ಅವರಂತೆ ಸಾಧನೆಯ ಶಿಖರವನ್ನೇರಿ ತನ್ನ ಹೆಸರನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಬೇಕು. ಸ್ವಾತಂತ್ರ್ಯ ಪೂರ್ವದಿಂದಲೂ ಸಾಧನೆಯ ಶಿಖರವನ್ನೇರಿ ಈಗಲೂ ಪಠ್ಯಪುಸ್ತಕಗಳಲ್ಲಿ ರಾರಾಜಿಸುತ್ತಿರುವ ಮಹಾನ್ ಸಾಧಕಿಯರು ನಮಗೆ ಸ್ಪೂರ್ತಿಯಾಗಲಿ ಹೆಣ್ಣು ಮಕ್ಕಳು -ಲಿತಾಂಶದಲ್ಲಿ ಮುಂದಿದ್ದಾರೆಂದು ಸಂಭ್ರಮಿಸದೇ ಅವರ ಆಸೆಯಂತೆ ದಡ ಸೇರಿಸುವುದೇ ಪೋಷಕರ ಕರ್ತವ್ಯವಾಗಬೇಕು.

(ಲೇಖಕರು: ಸಹಾಯಕ ಪ್ರಾಧ್ಯಾಪಕಿ ಸಂತ ಫಿಲೋಮಿನಾ ಕಾಲೇಜು, ಮೈಸೂರು)

Tags:
error: Content is protected !!