ವಾಲ್ಪರೈಗೆ ಹೋದ ನಮಗೆ ಮೂರು ದಿನಗಳಾದರೂ ನಾವು ನಿರೀಕ್ಷಿಸಿದ್ದ ಆ ಪ್ರಾಣಿಗಳ ದರುಶನ ಆಗಲೇ ಇಲ್ಲ. ಅಲ್ಲಿಂದ ಬರಿಗೈಯಲ್ಲಿ ಹಿಂತಿರುಗುವಾಗ ನಾವು ಪುದುತೋಟಂ ಎಂಬ ಊರನ್ನು ಕಂಡೆವು. ‘ಜೀವಜಾಲ’ ಪುಸ್ತಕದಲ್ಲಿ ಕೃಪಾಕರ ಸೇನಾನಿ ಮತ್ತು ಡಾ.ಕೆ.ಪುಟ್ಟಸ್ವಾಮಿ ಅವರು ವಿವರಿಸಿದ್ದ ಸ್ಥಳವೇ ಅದೆಂದು ಗೊತ್ತಾದಾಗ ಕಣ್ಣುಗಳು ಚುರುಕಾದವು. ತಕ್ಷಣ ರಸ್ತೆ ಬದಿಯಲ್ಲಿ ನಿಂತಿದ್ದ ಗಡ್ಡಧಾರಿ ಕಪ್ಪು ಪ್ರಾಣಿಯನ್ನು ಕಂಡವನೇ ನಾನು ಕಾರನ್ನು ಗಕ್ಕನೆ ನಿಲ್ಲಿಸಿದೆ. ‘‘ಅರೆರೆ, ಇದೇ ಕಣೋ ನಾವು ಹುಡುಕುತ್ತಿದ್ದ ಬಡ್ಡೀಮಗಂದು’’ ಎಂದೇ ನನ್ನ ಪಕ್ಕವಿದ್ದ ಲೋಕೇಶ್ ಮೊಸಳೆ ಕೂಗಿಕೊಂಡರು. ಕಾರಿನ ಬ್ರೇಕು ಬಿದ್ದದ್ದೇ ತಡ ಮೊಸಳೆ ಮತ್ತು ಪುಷ್ಟರಾಜ್ ಇಬ್ಬರೂ ಕ್ಯಾಮೆರಾ ಎತ್ತಿಕೊಂಡವರೆ ಅವಸರಗೆಟ್ಟವರಂತೆ ಕಾರಿನಿಂದ ಎಗರಿ ಹಾರಿ ಹೊರಟರು.
ತೀರಾ ರಸ್ತೆಯಲ್ಲೇ ಇದ್ದ ಕಾರನ್ನು ಒಂದು ಬದಿಗೆ ಹಾಕಿ ನಿಲ್ಲಿಸಲು ನಾನು ಹವಣಿಸುತ್ತಿದ್ದೆ. ಅಷ್ಟರಲ್ಲಿ ಅಲ್ಲೇ ಬಸ್ಸಿಗೆ ಕಾಯುತ್ತಿದ್ದ ಕೆಲ ಜನರು ಇದು ಬಸ್ಸು ನಿಲ್ಲುವ ಜಾಗವೆಂದೂ ಮುಂದೆ ಎಲ್ಲಾದರೂ ಕಾರು ನಿಲ್ಲಿಸುವುದು ಸೂಕ್ತವೆಂದೂ ತಮಿಳಿನಲ್ಲಿ ನನಗೆ ತಾಕೀತು ಮಾಡಿದರು. ಅದು ತೀರಾ ಇಕ್ಕಟ್ಟಾದ ಮತ್ತು ತಿರುವಿದ್ದ ರಸ್ತೆ. ಯಾವ ಸೈಡಿಗೂ ಕಾರು ನಿಲ್ಲಿಸಲು ಅಲ್ಲಿ ತಾವಿರಲಿಲ್ಲ. ಕೊಂಚ ದೂರ ಹೋಗಿ ವಾಹನ ನಿಲ್ಲಿಸುವ ತಕ್ಕ ಸ್ಥಳ ಕಾಣುತ್ತಿತ್ತು. ನಾನು ಹೋಗಿ ಕಾರು ನಿಲ್ಲಿಸಿ ನನ್ನ ಕ್ಯಾಮೆರಾ ಎತ್ತಿಕೊಂಡು ಬರುವುದರೊಳಗೆ ಗೆಳೆಯರಿಬ್ಬರು ಆ ಪ್ರಾಣಿಯ ಚೆಂದದ ಫೋಟೋಗಳ ಕೆಚ್ಚಿಕೊಂಡಿದ್ದರು. ಅದಾಗಲೇ ಜಾಗ ಬದಲಿಸಿದ್ದ ನನ್ನ ಬಹು ದಿನದಾಸೆಯ ಸಿಂಹಬಾಲದ ಕೋತಿಗಳೂ ಹೆದರಿ ಮರವೇರಿ ಕೂತಿದ್ದವು. ಅಷ್ಟರಲ್ಲೇ ಎಲ್ಲೋ ಇದ್ದ ಫಾರೆಸ್ಟ್ ಡಿಪಾರ್ಟ್‌ಮೆಂಟಿನ ವಾಚರ್ ಒಬ್ಬ ಅವಸರವಾಗಿ ಓಡೋಡಿ ಬಂದವನೆ ‘‘ಈ ಪ್ರಾಣಿಗಳ ಪಟ ನೀವು ತೆಗೆೋಂ ಹಂಗಿಲ್ಲ. ಅದಿಲ್ಲಿ ನಿಷಿದ್ಧವೆಂದೂ, ಮೇಲಧಿಕಾರಿಗಳು ಬಂದರೆ ಕೇಸು ಜಡಿಯುವರೆಂದೂ, ನೀವು ತಕ್ಷಣ ಜಾಗ ಖಾಲಿಮಾಡುವುದು ಸೂಕ್ತವೆಂದೂ’’ ಹೆದರಿಸಿದ. ನನಗಿನ್ನೂ ಭೋಣಿ ವ್ಯಾಪಾರವೂ ಆಗಿರಲಿಲ್ಲ. ಹೀಗಾಗಿ ನಾನು ಅವನಲ್ಲಿ ಅರೆಬರೆ ತಮಿಳಿನಲ್ಲಿ ‘‘ಅಣ್ಣೆ ನಾವು ತುಂಬಾ ದೂರದ ಕರ್ನಾಟಕದಿಂದ ಕೇವಲ ಇದರ ಫೋಟೋ ತೆಗೆಯಲು ಬಂದಿದ್ದೇವೆ. ದಯಮಾಡಿ ಐದು ನಿಮಿಷ ಅವಕಾಶ ಕೊಡಿ. ನಾವು ಯಾವ ತೊಂದರೆಯನ್ನೂ ಈ ಪ್ರಾಣಿಗೆ ಮಾಡುವವರಲ್ಲ. ನಾನು ಮಕ್ಕಳಿಗೆ ಪಾಠ ಮಾಡುವ ಮೇಷ್ಟ್ರು. ನಮ್ಮ ಪಠ್ಯಪುಸ್ತಕದಲ್ಲಿ ಇದರ ಬಗ್ಗೆ ಪಠ್ಯವಿದೆ. ನಮ್ಮ ಹುಡುಗರಿಗೆ ತೋರಿಸಲು ಇದರ ಒಂದು ಪಟಬೇಕು’’ ಎಂದು ವಿನಂತಿಸಿಕೊಂಡೆ.
‘‘ಹ್ಞೂ ಕಂಡ್ರಿ. ಇಲ್ಲಿಗೆ ಬರೋರೆಲ್ಲಾ ಹೀಗೆ ಏನಾದ್ರೂ ಒಂದು ಕಾರಣ ಹೇಳ್ತಾರೆ. ನಮ್ಮ ಸಂಕಟ ಕೇಳೋರು ಮಾತ್ರ ಯಾರೂ ಇಲ್ಲ. ನಿಮ್ಮಂತಹ ಟೂರಿಸ್ಟುಗಳು ಇವಕ್ಕೆ ಬಿಸ್ಕತ್ತು, ಬಾಳೆಹಣ್ಣು, ಚಿಪ್ಸು, ಕೂಲ್ ಡಿಂಕ್ಸು, ಮಣ್ಣುಮಸಿ ಅಂತ ಏನೇನೋ ಕೊಟ್ಟು ದುರಭ್ಯಾಸ ಕಲಿಸಿ ಈ ಕಾಡುಪ್ರಾಣಿಗಳ ಬದುಕನ್ನೇ ಹಾಳು ಮಾಡಿದ್ದಾರೆ. ಹಿಂಗಾಗಿ ಅವು ಕಾಡಿಗೋಗಿ ಸಹಜವಾಗಿ ಬದುಕೋದನ್ನು ನಿಲ್ಲಿಸಿ ಇಲ್ಲೇ ರಸ್ತೆ ಮೇಲೆ ಭಿಕ್ಷುಕರ ತರಹ ಅಲೀತಾ ಇರ್ತಾವೆ. ಇವತ್ತು ನೋಡಿ ಇಲ್ಲೊಬ್ಬರ ಮನೆಗೆ ನುಗ್ಗಿ ದಾಂದಲೆ ಬೇರೆ ಎಬ್ಬಿಸಿವೆ. ಹಳ್ಳಿಜನ ಸಾಕಾಗಿ ಫಾರೆಸ್ಟ್ ಡಿಪಾರ್ಮೆಂಟಿನ ಮೇಲೆ ತಿರುಗಿ ಬಿದ್ದಿದ್ದಾರೆ. ಕಂಪ್ಲೇಂಟ್ ಮೇಲಿನ ತನಕ ಹೋಗಿದೆ. ಈ ಮಂಗಗಳಿಗಿಂತ ಇದನ್ನು ನೋಡೋಕೆ ಬರೋ ನಿಮ್ಮಂತಹ ಊರ ಕೋತಿಗಳ ಹಾವಳಿ ಇಲ್ಲಿ ಜಾಸ್ತಿ ಆಗಿದೆ. ನನಗೂ ದಿನಾ ಇದೇ ಹೇಳಿ ಹೇಳಿ ಸಾಕಾಗಿದೆ. ಈ ದರಿದ್ರ ಕೆಲಸಾನೆ ಬ್ಯಾಡವಾಗಿದೆ. ಸಂಬಳಾನೂ ಅಷ್ಟಕಷ್ಟೆ. ಏಯ್ ಸೌಮೆ, ಇಂಗ ಪಾರ್. ನಮ್ಮ ಸಾಹೇಬ ರೌಂಡಿಗೆ ಬರೋದ್ರೊಳಗೆ ನೀವು ಇಲ್ಲಿರಬಾರದು. ಆಮೇಲೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ನಾನು ಜವಾಬ್ದಾರಿ ಹೊತ್ಕೊಳಲ್ಲ’’ ಎಂದು ಕೊಂಚ ವ್ಯಗ್ರನಾಗಿ ಹೇಳಿದ.
ಅವನು ಹೇಳುತ್ತಿದ್ದ ಅಷ್ಟೂ ವಿಷಯಗಳು ಸತ್ಯವೇ ಆಗಿದ್ದರೂ, ಸದ್ಯ ಫೋಟೋ ತೆಗೆಯಲೇಬೇಕೆಂಬ ದುಷ್ಟ ಚಟಕ್ಕೆ ಬಿದ್ದಿದ್ದ ನಾನು ಅವನ ಮಾತನ್ನು ಒಂದು ಕ್ಷಣ ಕಡೆಗಣಿಸಿದೆ. ಒಂದಾದರೂ ಸಿಂಹಬಾಲದ ಕೋತಿಯ ಒಳ್ಳೆಯ ಪಟ ತೆಗೆಯಲು ಹವಣಿಕೆ ನನ್ನದಾಗಿತ್ತು. ನನಗಿಂತ ಮೊದಲೇ ಕಾರಿನಿಂದ ಧುಮುಕಿದ್ದ ಇಬ್ಬರೂ ಗೆಳೆಯರಿಗೆ ಸಿಕ್ಕ ಒಳ್ಳೆಯ ಚಿತ್ರಗಳನ್ನು ನೋಡಿದ ಮೇಲಂತೂ ನನ್ನೆದೆಯಲ್ಲಿ ಯಾರೋ ಖಾರದಪುಡಿ ಹಾಕಿ ಕಲಸಿದಂತಾಯಿತು.
ಫೊಟೋಗ್ರಫಿಯಲ್ಲಿ ಯಾವತ್ತೂ ಕಾರು ಡ್ರ್ತ್ಯೈವ್ ಮಾಡುವ ಛಾಯಾಚಿತ್ರಗಾರನ ಹಣೇಬರಹವೇ ಇಷ್ಟು. ಅತಿ ಮುಖ್ಯವಾದ ಎಷ್ಟೋ ಅದ್ಭುತ ಕ್ಷಣಗಳು ಕಣ್ಣ ಮುಂದೆೆುೀಂ ತಪ್ಪಿ ಹೋಗುತ್ತವೆ. ತುಂಬಾ ಸಲ ಅಚಾನಕ್ಕಾಗಿ ದಾರಿಯಲ್ಲಿ ಸಿಗುವ ಪ್ರಾಣಿಗಳು, ಪಕ್ಷಿಗಳು, ಕೆಲವೇ ಸೆಕೆಂಡುಗಳಷ್ಟೇ ಪೋಸುಕೊಟ್ಟು ಮರೆಯಾಗಿ ಬಿಡುತ್ತವೆ. ಕಾರು ನಿಲ್ಲಿಸಿ ಕ್ಯಾಮೆರಾ ಎತ್ತಿ ಇನ್ನೇನು ಗುರಿ ಇಡಬೇಕು ಎನ್ನುವಷ್ಟರಲ್ಲೇ ನಮ್ಮ ವಿಷಯ ಮಂಗಮಾಯವಾಗಿರುತ್ತವೆ. ಇದು ಯಾವತ್ತೂ ಹೀಗೇನೆ. ಬದುಕಲ್ಲಿ ಅಂದುಕೊಂಡಿದ್ದನ್ನೆಲ್ಲಾ ಚಿತ್ರವಾಗಿಸುವುದು ಸಾಧ್ಯವಿಲ್ಲದ ಮಾತು. ಹೀಗೆ ಅನೇಕ ಸಲ ವಿಫಲನಾಗುವ ಈ ನನ್ನ ಸೋಲು ಒಂದು ವಿಚಿತ್ರ ಚೈತನ್ಯದಂತೆ ನನ್ನ ಕಾಡುತ್ತದೆ. ಕಳಕೊಂಡದ್ದನ್ನು ಹುಡುಕುವ ಸುಖ, ಮತ್ತೆ ಅದನ್ನು ಪಡೆಯುವ ಹಂಬಲವೇ ಒಂದು ರೋಮಾಂಚನ.
ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಈ ಕೋತಿಗಳು ತಮ್ಮ ಪೂರ್ವದ ಜೀವನದಲ್ಲಿ ಎಂದೂ ನೆಲದಮೇಲೆ ಇಳಿದವೇ ಅಲ್ಲ. ದಟ್ಟ ಕಾಡಿನ ಮರಗಳ ಮೇಲೆ ಉಯ್ಯಾಲೆ ಆಡುತ್ತಾ ಹಾರಿ ಬೆಳೆದ ಇವೀಗ ಅನಿವಾರ್ಯವಾಗಿ ನೆಲಕ್ಕೆ ಇಳಿಯಬೇಕಾಗಿದೆ. ಕಾಡಿನ ನಡುವೆ ಹೆಚ್ಚಿದ ಕಂದಕಗಳು ಅನೇಕ ಕಾಡು ಪ್ರಾಣಿಗಳ ಸ್ವಭಾವವನ್ನೇ ಬದಲಿಸಿ ಹಾಕಿವೆ. ದಟ್ಟ ಕಾಡಿನ ಅನಂತತೆಯನ್ನು ಗದ್ದೆ ತೋಟಗಳು, ಟಾರು ರಸ್ತೆಗಳು, ಬೆಳೆದ ಹಳ್ಳಿಗಳು ಕತ್ತರಿಸಿ ಬಿಟ್ಟಿವೆ. ಹೀಗಾಗಿ ಸಾವಿರಾರು ವರ್ಷಗಳ ತಮ್ಮ ಪಥವನ್ನು ಕಾಡಿನ ಜೀವಜಾಲಗಳು ತ್ಯಾಗ ಮಾಡಬೇಕಾಗಿ ಬಂದಿದೆ. ನಾಗರಿಕತೆ ರೂಪಿಸಿದ ಟಾರು ರಸ್ತೆಯನ್ನು ಹಾಯುವ ಕ್ರಮವಾಗಲಿ, ವೇಗವಾಗಿ ಬರುವ ವಾಹನಗಳ ರಭಸವಾಗಲಿ ಅವಕ್ಕೆ ಅರ್ಥವಾಗುವುದಿಲ್ಲ. ಈ ಧಾವಂತದಲ್ಲಿ ಅವು ಸಾವಿಗೀಡಾಗುವುದು ಹೆಚ್ಚಾಗಿದೆ. ಅದಕ್ಕಾಗಿ ಅಲ್ಲಿನ ಸರ್ಕಾರ ಅವು ರಸ್ತೆ ದಾಟುವ ಜಾಗೆಯಲ್ಲಿ ತೂಗು ಸೇತುವೆಗಳನ್ನು ಹಗ್ಗದಿಂದ ನಿರ್ಮಿಸಿದೆ.
ಆ ವಾಚರ್ ಹೇಳಿದ ಹಾಗೆ ಜನ ಆಹಾರ ಕೊಟ್ಟು ಕಾಡು ಪ್ರಾಣಿಗಳ ಸಹಜ ಬದುಕನ್ನು ವಿನಾಶಕ್ಕೆ ತಳ್ಳಿದ್ದಾರೆ. ಕಾಡಿನಲ್ಲಿ ಕಾಲಕಾಲಕ್ಕೆ ಸಿಗುವ ಚಿಗುರು ಸೊಪ್ಪು, ಹೂವು, ಕಾಯಿ, ವಿವಿಧ ಹಣ್ಣುಗಳು, ಬೀಜಗಳನ್ನು ತಿನ್ನುವ ತಮ್ಮ ಸಂಪ್ರದಾಯವನ್ನು ಬಿಟ್ಟು ಇವು ಜನರು ಎಸೆಯುವ ಹಣ್ಣು, ಕಡ್ಲೆಬೀಜ, ಚಿಪ್ಸು, ಬೆಡ್ಡು, ಚಾಕ್ಲೇಟ್, ಕೆಲವೊಮ್ಮೆ ಬೀರಿನ ಬಾಟಲಿಯ ರುಚಿಯನ್ನೂ ನೋಡುವ ಹಂತಕ್ಕೆ ಬಂದಿವೆ.
ನಮ್ಮ ಶಿವಮೊಗ್ಗದ ಸಕ್ರೇಬೈಲಿನ ಕಾಡಿನಲ್ಲಿ ಹಾದು ಹೋದ ತೀರ್ಥಹಳ್ಳಿ ರಸ್ತೆಯಲ್ಲೂ ಕೆಂಪುಮೂತಿ ಕೋತಿಗಳು ಟಾರು ರಸ್ತೆಯ ಹಂಪ್ ಇರುವ ಜಾಗೆಯಲ್ಲೇ ಠಿಕಾಣಿ ಹೂಡಿರುತ್ತವೆ. ಜನ ಬಂದು ಅಲ್ಲಿ ಕಾರು ನಿಲ್ಲಿಸಿ ದಾನಶೂರರಂತೆ ತಿಂಡಿಕೊಟ್ಟು ಅವುಗಳ ಸ್ವಭಾವವನ್ನೇ ನಾಶ ಮಾಡಿದ್ದಾರೆ. ಅನೇಕ ಸಲ ಆಸೆಯಿಂದ ಕಾರುಗಳನ್ನು ಕಂಡೊಡನೆ ಹಾರಿ ಓಡಿ ಬರುವ ಅನೇಕ ಮಂಗಗಳು ಅಪಘಾತಕ್ಕೆ ತುತ್ತಾಗಿ ಸಾಯುತ್ತಿವೆ. ಅದರಲ್ಲೂ ಇನ್ನೂ ಬದುಕಿನ ರೀತಿ ನೀತಿೆುೀಂ ಕಲಿಯದ ಸಣ್ಣ ಮರಿಗಳು ಬೇಕಾಬಿಟ್ಟಿಯಾಗಿ ಜೀವ ಬಿಡುತ್ತಿವೆ. ಇನ್ನೆಂದೂ ಇವು ಕಾಡಿಗೆ ಆಹಾರ ಹುಡುಕಿಕೊಂಡು ಹೋಗದಷ್ಟು ನಾವೇ ಹದಗೆಡಿಸಿ ಇಟ್ಟಿದ್ದೇವೆ. ಇನ್ನು ಪ್ರವಾಸಿ ಸ್ಥಳಗಳಲ್ಲಿ ಕೋತಿಗಳ ವರ್ತನೆಯಂತೂ ರೌಡಿಸಂ ಮಟ್ಟಕ್ಕೆ ಬಂದು ಮುಟ್ಟಿದೆ. ಆ ಕಥೆಗಳನ್ನು ಹೇಳುತ್ತಾ ಹೋದರೆ ಒಂದು ದೊಡ್ಡ ಮಂಗಪುರಾಣವೇ ಆದೀತು!
ಇನ್ನು ಆಗುಂಬೆಯ ಘಾಟಿಯಲ್ಲೂ ಕೆಲದಿನಗಳ ಮಟ್ಟಿಗೆ ಕಾಣಸಿಗುವ ಈ ಸಿಂಹಬಾಲದ ಕೋತಿಗಳು ದಾರಿಹೋಕರ ಎದುರು ಕೈಚಾಚಿ ನಿಲ್ಲುವ ಅಭ್ಯಾಸ ಬೆಳೆಸಿಕೊಂಡಿವೆ. ಯಾವುದೇ ಕಾರು ತಿರುವಿನಲ್ಲಿ ಕೊಂಚ ನಿಧಾನವಾದರೂ ಸಾಕು ದೈನೇಸಿಯಾಗಿ ಎದ್ದು ನಿಲ್ಲುತ್ತವೆ. ತಮಿಳುನಾಡಿನ ಇಲ್ಲವೇ ಕೇರಳದ ಭಾಗದ ಸಿಂಹಬಾಲದ ಕೋತಿಗಳು ಇಲ್ಲೀತನಕ ವಲಸೆ ಬರುತ್ತವೆೋಂ? ಅಥವಾ ಇವು ಸ್ಥಳೀಯ ಪ್ರತಿಭೆಗಳೋ ಗೊತ್ತಿಲ್ಲ. ಕೆಲ ದಿನ ಇಲ್ಲಿನ ಟಾರು ರಸ್ತೆಯಲ್ಲಿ ಕಾದು ಮತ್ತೆ ತಿಂಗಳಾನುಗಟ್ಟಲೆ ನಾಪತ್ತೆಯಾಗುವ ಇವು ಎಲ್ಲಿಗೆ ಹೋಗುತ್ತವೆ? ನಡುವೆ ಆಹಾರಕ್ಕಾಗಿ ಯಾವ ರೀತಿ ಹೋರಾಟ ನಡೆಸುತ್ತವೆಯೋ ಗೊತ್ತಿಲ್ಲ. ಹೆಚ್ಚೆಚ್ಚು ಕಾಡಿನ ಆಹಾರವನ್ನೂ ನೆಚ್ಚಿಕೊಂಡು ಬೇಜಾರಾದಾಗ ಹೋಟೆಲ್ಲು ಊಟಕ್ಕೆ ಬರುವಂತೆ ಇವು ಕೋರಾಣಭಿಕ್ಷಕ್ಕೆ ಬರಬಹುದೇನೋ?
ಇದೇ ಬಗೆಯ ಅಪಾಯವೂ ಪುದುತೋಟಂ ಮತ್ತು ವಾಲ್ಪರೈಯಲ್ಲೂ ಆಗುತ್ತಿದೆ ಎಂಬುದು ನಮಗೆ ಬೇಗ ಮನದಟ್ಟಾಯಿತು. ನಮ್ಮ ಫೋಟೋಗಿಂತ ಅವುಗಳ ಬದುಕು ಮುಖ್ಯವೆಂದು ಸುಮ್ಮನೆ ಅವುಗಳ ಆಟ ನೋಡುತ್ತಾ ನಿಂತೆವು. ನಾವು ಪಕ್ಕಾ ಜಿಪುಣರೆಂದು, ಯಾವುದೇ ತಿಂಡಿ ಕೊಡದ ಬೇಜವಾಬ್ದಾರಿ ಜನರೆಂದು ಅರಿತ ಸಿಂಹಬಾಲದ ಕೋತಿಗಳು ರಸ್ತೆಯಿಂದ ಕೊಂಚ ದೂರ ಸರಿದು ಕಾಡಿಗಿಳಿದವು. ಆಗ ವಾಚರ್ ‘‘ಮುಂದೆ ಹಳ್ಳ ಹರಿಯುವ ಜಾಗವಿದೆ. ಅಲ್ಲಿನ ಮರಗಳ ಮೇಲೆ ಅವು ಈಗ ಹೋಗಿ ಕೂರುತ್ತವೆ. ಅಲ್ಲಿಗೆ ಹೋಗಿ ಪಟ ತೆಗೆದುಕೊಂಡು ಬೇಗ ಹೋಗಿ ಬಿಡಿ’’ ಎಂದು ನನ್ನ ಪೆಚ್ಚುಮುಖ ನೋಡಿ ಹೇಳಿದನು. ‘‘ಅಂತೂ ಛಾನ್ಸೊಂದು ಸಿಕ್ಕಿತಲ್ಲಾ’’ ಎಂದು ಖುಷಿಯಿಂದ ಅತ್ತ ಕಡೆ ಹೋದಾಗ ಅವುಗಳ ದರುಶನ ಭಾಗ್ಯ ಸಿಕ್ಕಿತು. ನಮ್ಮ ರೆಗ್ಯೂಲರ್ ಮಂಗಗಳ ತರಹ ಆಕ್ರಮಣಶೀಲವಲ್ಲದ ಸೌಮ್ಯ ಸ್ವಭಾವದ ಆ ಕೋತಿಗಳು ನಮ್ಮನ್ನು ಕರುಣೆಯ ಕಂಗಳಿಂದ ಗಮನಿಸಿದವು. ಅಳಿದುಹೋಗುತ್ತಿರುವ ಈ ಸಂತತಿಗಳನ್ನು ಉಳಿಸಿಕೊಳ್ಳುವ ದಾರಿ ಗೊತ್ತಿರುವುದು ಪ್ರಕೃತಿಮಾತೆ ಒಬ್ಬಳಿಗೇನೆ.
kaleemullakm@gmail.com