Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕುಕ್ಕರಹಳ್ಳಿ ಕೆರೆಯ ಸೆಕ್ಯೂರಿಟಿ ಶಿವಣ್ಣ

  • ಅಭಿಜಿತ್

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಶಿವಣ್ಣ ಅವರಿಗೆ ಈಗ 63 ವರ್ಷ. ಇವರು ಪಡುವಾರಹಳ್ಳಿಯಲ್ಲೇ ಹುಟ್ಟಿ, ಬೆಳೆದವರು. ಬೇಸಾಯ ಮಾಡುತ್ತಿದ್ದ ತಂದೆ ತಾಯಿ ತಮ್ಮ ಮಕ್ಕಳ ಓದಿನ ಬಗ್ಗೆ ಗಮನಹರಿಸಲೂ ಸಾಧ್ಯವಾಗದ ಕಾಲ. ಆದರೆ ಹೊಟ್ಟೆಯ ಹಿಟ್ಟಿಗೆ ಮೈಬಗ್ಗಿಸಿ ದುಡಿಯಬೇಕೆಂಬ ತತ್ವವನ್ನು ಅವರಿಂದಲೇ ಶಿವಣ್ಣ ಅವರು ಕಲಿತದ್ದು.

ಆಗ ದಿನಕ್ಕೆರಡು ಹೊತ್ತು ಊಟ ಸಿಕ್ಕರೆ ಪುಣ್ಯ. ಬೆಳಿಗ್ಗೆ ಎದ್ದು ಕುರಿ, ಕೋಳಿಗಳನ್ನು ಗೂಡಿಂದ ಹೊರಕ್ಕೆ ಬಿಡುವಲ್ಲಿಂದ ಆರಂಭವಾಗುತ್ತಿದ್ದ ಕೆಲಸ, ಸಂಜೆಹಸು-ಕರುಗಳನ್ನು ಮರಳಿ ಮನೆಗೆ ಸೇರಿಸುವ ತನಕ ಒಂದರ ಬೆನ್ನಿಗೊಂದರಂತೆ ನಿರಂತರವಾಗಿ ಇರುತ್ತಿತ್ತು. ‘ಇಸ್ಕೂಲಿಗ್ ಹೋಗಿಲ್ಲ, ಅಕ್ಷರ ಬರೆಯಕೆ ಬರಕಿಲ್ಲ. ಹಸಿವು ಇತ್ತಲಪ್ಪಾ, ಅದು ಇಸ್ಕೂಲಿನ್ ಪಾಠಕ್ಕಿಂತ ಹೆಚ್ಚು ಕಲ್ಲಿದೆ ಎಂದು ಆ ದಿನಗಳನ್ನು ನೆನೆಯುತ್ತಾರೆ.‌

ಬೆಳೆದ ಬೆಳೆಯನ್ನು ಆಗ ಕೂಡಿಡುವುದಕ್ಕೂ ಚೀಲಗಳಿರಲಿಲ್ಲ. ದೊಡ್ಡವರ ಮನೆಯಲ್ಲಿ ಚೀಲ ಕೇಳುವಂತಿರಲಿಲ್ಲ. ಕೇಳಿದರೂ ಕೊಡುತ್ತಿರಲಿಲ್ಲ ಬಿಡಿ. ಜೋಳವನ್ನು ಸ್ವಲ್ಪವೇ ಉಳಿಸಿ, ಅದನ್ನು ಗದ್ದೆಯ ಒಳಗೆ ಹೂತಿಟ್ಟು, ಅಗತ್ಯ ಬಿದ್ದಾಗ ಅದನ್ನು ಬಳಸಿಕೊಳ್ಳುತ್ತಿದ್ದರು. ಸುಮಾರು ಇಪ್ಪತೈದು ಕೆಜಿಯವರೆಗೂ ಧಾನ್ಯಗಳನ್ನು ಶೇಖ ರಿಸಿಟ್ಟು ಕೊಳ್ಳಬಹುದಾಗಿತ್ತು. ಇಷ್ಟಿದ್ದರೂ, ಕೂಡು ಕುಟುಂಬದ ಎಲ್ಲರ ಹೊಟ್ಟೆ ತುಂಬುತ್ತಲೇ ಇರಲಿಲ್ಲ! ಆಗೆಲ್ಲ ಕೆಂಪುಜೋಳವನ್ನು ಬೆಲ್ಲವೆಂದು ತಿಳಿದು, ಗಬಗಬನೆ ತಿನ್ನುತ್ತಿದ್ದರು. ಇವತ್ತಿಗೆ ಹಸಿವಿನ ಅನುಭವ ಆಗದಿರುವಷ್ಟು ತಿನ್ನುವ ಸುಖವಿದ್ದರೂ ಶಿವಣ್ಣ ಅವರು ಹೊಟ್ಟೆ ಹಸಿವಲ್ಲೇ ಕಳೆದ ದಿನಗಳನ್ನು ಮರೆತೇ ಇಲ್ಲ.

ಹರೆಯಕ್ಕೆ ಬರುತ್ತಿದ್ದಂತೆ ವ್ಯವಸಾಯವೊಂದನ್ನೇ ನಂಬಿ ಕೂತರೆ ಜೀವನ ಸಾಗುವುದಿಲ್ಲ ಎಂದು ತಿಳಿದದ್ದೇ ತಡ ಫ್ಯಾಕ್ಟರಿ ಕೆಲಸಕ್ಕೆ ಹೋದರು. ಚಹ, ಕಾಫಿ ಯಾವುದಕ್ಕೂ ದುಡ್ಡು ಖರ್ಚು ಮಾಡದೇ ಹಣ ಕೂಡಿಟ್ಟುಕೊಂಡರು. ಎರಡು ಫ್ಯಾಕ್ಟರಿ ಕೆಲಸ ಮಾಡಿದ ಮೇಲೆ, ಕಬ್ಬಿಣ ದಂಗಡಿಯಲ್ಲಿ ಕೆಲಸ ಮಾಡುವ ಸಂದರ್ಭ ಒದಗಿಬಂತು. ಬದುಕು ಸಾಗಿಸಲೇಬೇಕಾದ ಅನಿ ವಾರ್ಯತೆಗೆ ಕಟ್ಟುಬಿದ್ದು, ಇಪ್ಪತ್ತು ವರ್ಷಗಳವರೆಗೆ ಕೆಲಸ ಮಾಡಿದರು. ಹೇಳಿ ಕೇಳಿ ಕಬ್ಬಿಣದ ಕೆಲಸ, ಜೀವವನ್ನು ಇನ್ನಷ್ಟು ದಣಿಸಿ, ಸುಸ್ತು ಬಡಿಸಿತು. ಹಣವಂತರ ಮನೆಗೆ ಕಬ್ಬಿಣ ಹಾಕು ವಾಗ ಒಂದಷ್ಟು ದುಡ್ಡು ಕೊಡುತ್ತಿದ್ದರು. ಕೆಲಸದ ಕುರುಹಾಗಿ ಇವರ ದೇಹದಲ್ಲಿ ಈಗಲೂ ಗೀರುಗಳಿವೆ.

ಎತ್ತಿನಗಾಡಿಯನ್ನು ಓಡಿಸುತ್ತಿದ್ದ ಶಿವಣ್ಣ ಅವರು ಸೈಕಲ್ ಕಲಿಯುವುದಕ್ಕೆ ಹರಸಾಹಸವನ್ನೇ ಪಟ್ಟಿದ್ದರು. ಊರಿನ ಹಿರಿಯವಾರಿಗೆಯವರು ಸೈಕಲ್ ನಿಲ್ಲಿಸಿದ್ದರೆ, ಬೇಡಿ ಪಡೆದು, ಒಂದು ಪೆಡಲ್ ತುಳಿಯುತ್ತಾ ಕಲಿತರು. ಇದಕ್ಕಿಂತ ತಮ್ಮ ಎತ್ತಿನಗಾಡಿಯೇ ವಾಸಿ ಅನಿಸಿತು. ಕಬ್ಬಿಣದಂಗಡಿ ಕೆಲಸಕ್ಕೆ ಹೋಗುವಾಗಲೂ ಇವರ ಎತ್ತಿನಗಾಡಿಯನ್ನು ಆಚೀಚೆಯ ಜನರೆಲ್ಲ ಬಿಟ್ಟುಕಣ್ಣು ಬಿಟ್ಟಂತೆ ನೋಡುತ್ತಿದ್ದ ನೆನಪುಗಳನ್ನು ನೆನೆಯುವಾಗ ಶಿವಣ್ಣ ಅವರ ಮುಖದಲ್ಲಿ ಮಾಸದ ನಗುವಿತ್ತು.

ದೇವಸ್ಥಾನಕ್ಕೆ ಹೋದರೆ ಪ್ರಸಾದ ಸಿಗುತ್ತಿತ್ತೆಂದು ಹರಿದ ಅಂಗಿಯಲ್ಲೇ ಮೈಮುಚ್ಚಿಕೊಂಡು ಹೋಗುತ್ತಿದ್ದರಂತೆ. ಬಟ್ಟೆ ಹರಿದಿದೆ ಎಂಬುದಕ್ಕಿಂತ ಹಸಿವಿನ ತೀವ್ರತೆ ಇತ್ತು. ಈಗ ತಕ್ಕಮಟ್ಟಿಗೆ ಅನುಕೂಲವಿದೆ. ಮಕ್ಕಳು ಇದನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋದರೆ ಅಷ್ಟೇ ಸಾಕು ಎಂಬುದೇ ಇವರ ಮನದ ಪ್ರಾರ್ಥನೆ.

ಸೆಕ್ಯೂರಿಟಿ ಕೆಲಸದ ಬಗ್ಗೆ ಶಿವಣ್ಣ ಅವರಿಗೆ ತಡವಾಗಿ ತಿಳಿಯಿತು. ಪರಿಚಿತರೊಬ್ಬರಿಂದ ತಮಗೆ ಕೆಲಸ ಸಿಕ್ಕಿತೆಂಬ ತೃಪ್ತಿಯ ಜೊತೆಗೆ ಬದುಕು ಸುಗಮವಾಗಿದೆ ಎನ್ನುತ್ತಾರೆ. ಚಿಕ್ಕಂದಿ ನಲ್ಲಿ ಓಡಾಡಿ ಬೆಳೆದ ಕುಕ್ಕರಹಳ್ಳಿ ಕೆರೆಯೇ ಇವರ ಸದ್ಯದ ಕಾಯಕದ ತಾಣ.

ಬೆಳಿಗ್ಗೆ ಆರು ಗಂಟೆಗೆ ಗಂಗೋತ್ರಿಯ ಸೆನೆಟ್ ಭವನಕ್ಕೆ ಬರುತ್ತಾರೆ. ನಂತರ ಎಂಟು ಗಂಟೆಯ ಹೊತ್ತಿಗೆ ಕುಕ್ಕರಹಳ್ಳಿ ಕೆರೆಯ ಬಳಿ ಬರುತ್ತಾರೆ. ಗೇಟಿಗೆ ಬೀಗ ಹಾಕಿ ಅಲ್ಲೇ ಓಡಾಡುತ್ತಲಿರುತ್ತಾರೆ. ಪ್ರಕೃತಿಯ ಹಸಿರು, ಹಕ್ಕಿಗಳ ಚಿಲಿಪಿಲಿ ನಾದದಲ್ಲಿ ವಯಸ್ಸು ಹಿಂದಕ್ಕೆ ಸರಿಯುತ್ತವೆ ಎಂಬ ಸಂಭ್ರಮ ಇವರದು.

Tags: