Mysore
23
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮುಪ್ಪು ಎಂಬ ಸುಂದರ ಘಟ್ಟ

ಲೇಖಕರು: ಕೀರ್ತನಾ ಎಂ.

ವಯಸ್ಸು ಎನ್ನುವುದು ಯಾರಿಗೂ ನಿಲ್ಲದು. ಕಾಲ ಚಕ್ರ ತಿರುಗಿದಂತೆ ಬದುಕು ಸಾಗುತ್ತ ಹೋಗುತ್ತದೆ. ಇಂದು ಬಾಲ್ಯದಲ್ಲಿ ಆಟ ಆಡುತ್ತಾ ಇರುವವರು ಯೌವನದ ಸವಿಯನ್ನು ಸವಿಯಲೇಬೇಕು. ಸಂಸಾರದ ಸಾಗರದಲ್ಲಿ ಈಜಲೇಬೇಕು. ಮುಪ್ಪುನ್ನು ಸ್ವಾಗತಿಸಲೇಬೇಕು. ಆದರೆ ಅದರ ಹಿಂದಿನ ಬದುಕಲ್ಲಿ ಬದುಕಿದ ರೀತಿ ಮುಪ್ಪಿನಲ್ಲಿ ಕೊರಗುವಂತೆ ಮಾಡಬಾರದು.

ಸಾವಿತ್ರಿ ಸಂಸ್ಕಾರವಂತ ಮನೆತನದ ಹುಡುಗಿ, ಮದುವೆಯಾಗಿ ಇಪ್ಪತ್ತು ವರ್ಷವಾಗಿದೆ. ಇಬ್ಬರು ಮುದ್ದಿನ ಮಕ್ಕಳು. ಇಚ್ಛೆಯನ್ನು ಅರಿತು ನಡೆಯುವ ಪತಿ. ಮಾವ ಅಗಲಿ ಎರಡು ವರ್ಷವಾದರೆ ಅತ್ತೆ ಸುಶೀಲಮ್ಮ ಹಾಸಿಗೆ ಹಿಡಿದು ಆರು ತಿಂಗಳು ಆಗುತ್ತ ಬಂತು.

‘ಸವಿ…’ ಒಂದು ಕೂಗು ಕೂಗಿದ ತಕ್ಷಣ ದನಿ ಕೇಳಿಯೇ ಯಾವ ಕಾರಣಕ್ಕೆ ಕರೆಯುತ್ತಿದ್ದಾರೆ ಎಂದು ಊಹಿಸಿದ ಸಾವಿತ್ರಿ ಮಾಡುವ ಕೆಲಸ ಬಿಟ್ಟು ಅತ್ತೆ ಇದ್ದ ರೂಮಿಗೆ ಓಡಿದಳು. ಅವರ ಮಿಸುಕಾಟ ಕಂಡು ಒಂದು ನಿಮಿಷ ಅತ್ತೆ ಆಗಿ ಹೋಯ್ತು ಅತ್ತೆ’ ಎನ್ನುತ್ತಾ ಅವರ ಡೈಪರ್ ಬದಲಾಯಿಸಿ ಹಾಸಿಗೆ ಶುಚಿಗೊಳಿಸಿದಳು.

ಸೊಸೆಯ ಸೇವೆ ಪ್ರತಿ ದಿನವೂ ಅವರ ಕಣ್ಣು ತುಂಬಿಸುತ್ತಿತ್ತು. ಒಂದು ಬಾರಿಯಾದರೂ ಅವಳ ಬಳಿ ಕ್ಷಮೆ ಕೇಳಬೇಕು ಎಂದುಕೊಂಡವರ ಗಂಟಲುಬ್ಬಿ ಮಾತು ನಾಳಿಗೆಯಲ್ಲೇ ಉಳಿದು ಹೋಗುತ್ತಿತ್ತು. ಶಾಲೆಯಿಂದ ಬಂದ ಮೊಮ್ಮಕ್ಕಳು ಕೈಕಾಲು ತೊಳೆದು ಬಂದು ಸ್ವಲ್ಪ ಸಮಯ ಅಜ್ಜಿಯ ಜೊತೆ ಕಳೆದು ನಂತರ ಓದಲು ಹೋದರು. ʼಎಷ್ಟು ಒಳ್ಳೆಯ ಸಂಸ್ಥಾರ ಮಕ್ಕಳದು’ ಮಾತಾಡಿಸಲು ಬಂದ ಮಗನಿಗೆ ತಾಯಿಯ ಮಾತು ಕೇಳಿತು.

‘ಎಲ್ಲ ಸವಿ ಪ್ರಭಾವ ಅಮ್ಮ. ಮಕ್ಕಳಿಗೆ ಕೇವಲ ಒಳ್ಳೆಯದನ್ನೇ ಹೇಳಿಕೊಡುತ್ತಾಳೆ. ನೀನು ಕಾಫಿ ಕುಡಿದಿಲ್ಲ ಅಲ್ವಾ ಅಮ್ಮ ಇರು ಬರುತ್ತೇನೆ ಒಟ್ಟಿಗೆ ಕುಡಿಯೋಣ’ ಎಂದು ತಾಯಿಯ ತಲೆ ಸವರಿ ಹೋದ ಅರುಣ್. ಹಾಸಿಗೆ ಹಿಡಿದ ದಿನದಿಂದ ತನ್ನ ಉದ್ಯೋಗವನ್ನು ತ್ಯಜಿಸಿ ಅತ್ತೆಯನ್ನು ನೋಡಿಕೊಳ್ಳುವುದರಲ್ಲೇ ಕಳೆದು ಹೋಗಿರುವ ಸೊಸೆಯ ಮೇಲೆ ಈಗ ಅವರಿಗೆ ಗೌರವ ಹೆಚ್ಚಿದೆ.

ಆರು ತಿಂಗಳ ಹಿಂದೆ ಸಾವಿತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ ಸ್ವಲ್ಪ ತಡವಾಗಿತ್ತು. ಆ ದಿನ ಬೆಳಿಗ್ಗೆ ತಾನೇ ಮನೆಗೆ ಬಂದಿದ್ದ ನೆಂಟರೆಲ್ಲ ಹೊರಟು ಹೋಗಿದ್ದರು. ಸಂಜೆ ಮನೆಗೆ ಬಂದ ಸಾವಿತ್ರಿಗೆ ಲಾಟು ಕೆಲಸ ಕಾಯುತ್ತಿತ್ತು. ದಣಿದು ಬಂದವಳನ್ನು ಹೊಸ್ತಿಲು ದಾಟುತ್ತಾ ಇದ್ದಂತೆ ತರಾಟೆಗೆ ತೆಗೆದುಕೊಂಡರು ಸುಶೀಲಮ್ಮ. ಅದಕ್ಕೆ ಹೆಚ್ಚು ಕಿವಿ ಕೊಡದೆ ಕಾಫಿ ಕುಡಿದು ಸ್ವಲ್ಪ ಸುಧಾರಿಸಿಕೊಂಡು ನಂತರ ಕೆಲಸಕ್ಕೆ ಕೈ ಹಚ್ಚೋಣ ಎಂದು ಕಾಫಿ ಕಾಯಿಸಿ ಲೋಟಕ್ಕೆ ಬಗ್ಗಿಸಿದಳು ಅಷ್ಟೇ, ಸಿಟ್ಟಲ್ಲಿ ಬಂದ ಸುಶೀಲಮ್ಮ ಅಷ್ಟು ಕಾಫಿಯನ್ನೂ ಬಚ್ಚಲಿಗೆ ಸುರಿದು ಬಾಯಿಗೆ ಬಂದಂತೆ ಬೈಯುತ್ತಲೇ ನೆಲಕ್ಕೆ ಉರುಳಿದರು.

ಆಸ್ಪತ್ರೆಗೆ ಸೇರಿಸಿದಾಗ ಪಾರ್ಶ್ವವಾಯು ಆಗಿತ್ತು. ಅಂದಿನಿಂದ ಅತ್ತೆಯ ಪೂರ್ತಿ ಜವಾಬ್ದಾರಿ ಸಾವಿತ್ರಿ ಮೇಲೆ ಬಿತ್ತು. ಒಂದು ದಿನವೂ ಬೇಸರಿಸಿಕೊಳ್ಳದೇ ಅಂದಿನಿಂದ ಅವರ ಸೇವೆ ಮಾಡುತ್ತಿದ್ದಾಳೆ ಸಾವಿತ್ರಿ, ಮದುವೆಯಾಗಿ ಬಂದ ದಿನದಿಂದ ಸೊಸೆಯ ಮೇಲೆ ಕೆಂಡ ಕಾರುತ್ತಿದ್ದ ವಯಸ್ಸಾದ ಸುಶೀಲಮ್ಮನಿಗೆ ನಿಜಕ್ಕೂ ಹಿರಿಯರಿಗೆ ಗೌರವ ಕೊಡುವುದು ಎಂದರೆ ಏನೆಂದು ಸಾವಿತ್ರಿ ಕಲಿಸಿದ್ದಳು. ಕೊನೆಗಾಲದಲ್ಲಿ ತನ್ನ ಅತ್ತೆಯನ್ನು ನಾನು ಸರಿಯಾಗಿ ನೋಡಿಕೊಳ್ಳದೆ ನರಳಿಸಿದ್ದು ನೆನಪಾಗಿ ಸುಶೀಲಮ್ಮನ ಕಣ್ಣು ತೇವಗೊಂಡಿತು.

ವಯಸ್ಸಾದವರು ಎಂದರೆ ಅವರಿಂದ ಏನೂ ಆಗದು ಎಂದು ಕಾಲ ಕಸದಂತೆ ನೋಡುವವರಿಗೆ ಸಾವಿತ್ರಿ ಪಾಠವಾಗಿದ್ದಳು. ನಾವು ಮುಂದೆ ಮುಪ್ಪಿನ ಹಾದಿ ತುಳಿಯಲೇಬೇಕು. ಈ ಯೌವನ ಶಾಶ್ವತವಲ್ಲ. ಮುಪ್ಪು ಕೂಡ ಒಂದು ಕಾಲಘಟ್ಟ ಅನುಭವಿಸಲೇಬೇಕು ಎಂದು ಅರಿತು ಪ್ರತಿ ಹಿರಿಯರನ್ನೂ ಗೌರವಿಸುವುದು ಬಹಳ ಮುಖ್ಯವಾಗುತ್ತದೆ. ಆ ಪಾಠವನ್ನು ಬಾಲ್ಯದಿಂದಲೇ ಕಲಿಯಬೇಕು ಕಲಿಸಬೇಕು.
keerthana.manju.guha6@gmail.com

Tags:
error: Content is protected !!