Light
Dark

ವಾರಾಂತ್ಯ ವಿಶೇಷ : ಮೈಸೂರಿನಲ್ಲಿ ಘಮ ಘಮಿಸಲಿದೆ ಹಲಸು

ಹಲಸು ಈಗ ಕೇವಲ ಹಣ್ಣಾಗಿ ಉಳಿದಿಲ್ಲ. ಅದರ ಮೌಲ್ಯವರ್ಧನೆ ಮಾಡಿ ನಾನಾ ಬಗೆಯ ತಿನಿಸು, ಅಡುಗೆಗಳನ್ನು ತಯಾರಿಸುವ ಪದ್ಧತಿ ಇದೆ. ಹಲವರಿಗೆ ಈ ಹಣ್ಣನ್ನು ಬಳಸಿ ಏನೇನು ಮಾಡಬಹುದು ಎನ್ನುವುದು ತಿಳಿದಿರುವುದಿಲ್ಲ. ಇದನ್ನೆಲ್ಲ ತಿಳಿಸಲು ಮೈಸೂರಿನಲ್ಲಿ ಹಲಸು ಮೇಳ ನಡೆಯುತ್ತಿದೆ. ಆ. ೬, ೭ರಂದು ಎರಡು ದಿನಗಳ ಕಾಲ ನಡೆಯುವ ಈ ಹಲಸು ಹಬ್ಬಕ್ಕೆ ಎಲ್ಲರಿಗೂ ಇದೆ ಮುಕ್ತ ಅವಕಾಶ.

‘ಹಸಿದು ಹಲಸು ತಿನ್ನು, ಉಂಡು ಬಾಳೆ ತಿನ್ನು’ ಎಂಬ ಗಾದೆ ಮಾತಿದೆ. ಹಿಂದೆ ಕೇವಲ ಗ್ರಾಮೀಣ ಭಾಗದವರ ಬಳಕೆಗೆ ಸೀಮಿತವಾಗಿದ್ದ ಹಲಸು ಈಗ ಸರ್ವ ವ್ಯಾಪಿ. ಬರಗಾಲದಲ್ಲೂ ಬೆಳೆಯುವ ಶಕ್ತಿ, ಔಷಧೀಯ ಗುಣಗಳ ಆಗರ, ಗೊಬ್ಬರ ಕೇಳದ ಮರ, ರೈತರ ಪಾಲಿನ ಆಪ್ತಮಿತ್ರ… ಹೀಗೆ ಹಲಸನ್ನು ಹಲವು ಬಗೆಯಾಗಿ ಹಾಡಿ ಹೊಗಳಬಹುದು.

ಮೇಲೆ ಒರಟಾಗಿ ಇದ್ದರೂ, ಒಳಗೆ ಅಂಟು ಕಿರಿಕಿರಿ ಉಂಟು ಮಾಡುತ್ತಿದ್ದರೂ, ಹಣ್ಣು ಕೊಯ್ದು, ತೊಳೆ ಬಿಡಿಸಿ ಬಾಯಿಗಿಟ್ಟರೆ ಎಲ್ಲ ಶ್ರಮವೂ ಮಾಯವಾಗಿ ಬಾಯಲ್ಲಿ ಸಿಹಿ ನಿಲ್ಲುತ್ತದೆ. ಕೆಲವ ಜಾತಿಯ ಹಣ್ಣುಗಳಂತೂ ಬೆಲ್ಲದ ಪಾಕ. ಇಂತಿಪ್ಪ ಹಲಸಿನ ನಿರಂತರ ಸೇವನೆಯಿಂದ ಮಧುಮೇಹಿಗಳು ಇನ್ಸುಲಿನ್ ಬಳಕೆ ತಗ್ಗಿಸಬಹುದು. ಕ್ಯಾನ್ಸರ್, ಮಲಬದ್ಧತೆಯಂತಹ ಕಾಯಿಲೆಗಳನ್ನು ದೂರವಿಡಬಹುದು.

ಯಾರು ಆಯೋಜಕರು

ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಆಶ್ರಯದಲ್ಲಿ ‘ಹಲಸಿನ ಹಬ್ಬ’ ಆಯೋಜಿಸಲಾಗಿದೆ.

ಮೇಳದ ವಿಶೇಷವೇನು?
ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯ ಮಳಿಗೆಗಳೂ ಇರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ಯೂ ಸಿಗಲಿದೆ. ಹಲಸಿನ ಕೃಷಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಿಗಲಿವೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.

ಗಿಡಗಳ ಮಾರಾಟ
ಮೇಳದಲ್ಲಿ ಮೂವತ್ತು ಜಾತಿಯ ಹಲಸಿನ ತಳಿಗಳ, ವಿಶೇಷವಾಗಿ ಕೆಂಪು ಹಲಸಿನ ತಳಿಯ ಗಿಡಗಳು ಕೊಳ್ಳಲು ಲಭ್ಯ ಇರಲಿವೆ. ರುದ್ರಾಕ್ಷಿ, ಬಕ್ಕೆ, ಸಿದ್ದು ಹಲಸು, ಬೈರಸಂದ್ರ, ಸರ್ವ ಋತು, ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ಶಂಕರ ಮೊದಲಾದ ತಳಿಗಳು ಮಾರಾಟಕ್ಕೆ ಲಭ್ಯವಿವೆ.

ಎರಡು ದಿನಗಳ ಮೇಳವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ವಿದ್ಯಾಶಂಕರ್ ಉದ್ಘಾಟನೆ ಮಾಡಲಿದ್ದಾರೆ. ನಟ ಮಂಡ್ಯ ರಮೇಶ್ ಕೆಂಪು ತಳಿಯ ‘ಸಿದ್ದು ಹಲಸು’ ಬಿಡುಗಡೆ ಮಾಡಲಿದ್ದಾರೆ. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷರಾದ ಉಲ್ಲಾಸ್ ಪಂಡಿತ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರುದ್ರೇಶ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಕರುಣಾಕರನ್ ಉಪಸ್ಥಿತರಿರಲಿದ್ದಾರೆ.


ವಿವಿಧ ಸ್ಪರ್ಧೆಗಳು

ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ‘ಹಲಸಿನ ಅಡುಗೆ ಸ್ಪರ್ಧೆ’ ಇದ್ದು, ಹಲಸಿನ ಹಣ್ಣು, ಕಾಯಿ, ಬೀಜ, ಎಲೆಯಿಂದ ಮಾಡುವ ಸಾಂಪ್ರದಾಯಿಕ ಅಥಾವ ಹೊಸ ಬಗೆಯ ಅಡುಗೆಗಳಿಗೆ ಆಹ್ವಾನವಿದೆ. ಮಧ್ಯಾಹ್ನ ೨ ಗಂಟೆಗೆ ‘ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ’ ಇದ್ದು, ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರಿಗೆ ಬಹುಮಾನ ಪಕ್ಕಾ.

ಪ್ರಮುಖ ಆಕರ್ಷಣೆ
ತುಮಕೂರಿನ ಚೇಳೂರಿನ ಕೆಂಪು ಮತ್ತು ಬಿಳಿ ಹಲಸು, ದೊಡ್ಡಬಳ್ಳಾಪುರದದ ತೂಬಗೆರೆ ಹಲಸು ಮೇಳದ ಆಕರ್ಷಣೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ೧೨ ರೈತ ಮತ್ತು ಮಹಿಳಾ ಗುಂಪುಗಳು ವಿವಿಧ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿದ್ದಾರೆ. ನುಗ್ಗೆ ಉಪ್ಪಿನ ಕಾಯಿ, ಬಗೆಬಗೆಯ ದಂಟು ಸೊಪ್ಪು, ಬಿದಿರು ಕಳಲೆ, ಗುಣಮಟ್ಟದ ಜವಾರಿ ಬೀಜ, ಸಿರಿಧಾನ್ಯ ಮತ್ತು ಕಾಳುಗಳು ಸಿಗಲಿವೆ.

ಎಲ್ಲಿ, ಯಾವಾಗ?

ಆ.೬,೭ರ ಶನಿವಾರ ಮತ್ತು ಭಾನುವಾರ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಲಸು ಮೇಳ ನಡೆಯಲಿದ್ದು, ನಂಜರಾಜ ಬಹದ್ದೂರ್ ಛತ್ರ, ಬೆಳಿಗ್ಗೆ ೧೦.೦೦ ರಿಂದ ರಾತ್ರಿ ೮ ರವರೆಗೆ ಮುಕ್ತ ಅವಕಾಶ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೮೮೬೭೨೫೨೯೭೯

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ