• ರೂಪ ಮಾಚಿಗನಿ
ನಡು ವಯಸ್ಸು ಶುರುವಾಗುತ್ತಿದ್ದಂತೆ ಮಹಿಳೆಯರಲ್ಲಿ ಸಣ್ಣ ಸಣ್ಣ ಆತಂಕಗಳು ಶುರುವಾಗುತ್ತವೆ. ಮುಖ, ಕುತ್ತಿಗೆಯ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೆರಿಗೆಗಳು, ಬದಲಾಗುವ ದೇಹದ ಪ್ರಕೃತಿ ಮುಂತಾದವು ಮಹಿಳೆಯರಲ್ಲಿ ಕೊಂಚ ಆತಂಕಗಳು ಎದುರಾಗುವಂತೆ ಮಾಡುತ್ತವೆ.
ಈ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ವಿವಿಧ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಬಳಸಲು ಮುಂದಾಗುತ್ತಾರೆ. ಅವು ದೀರ್ಘ ಕಾಲದವರೆಗೆ ನಮ್ಮ ಚರ್ಮದ ರಕ್ಷಣೆ ಮಾಡಬಲ್ಲವೇ? ಅವುಗಳನ್ನು ಬಳಸಲು ಯೋಗ್ಯವೇ? ಎಂಬ ಗೊಂದಲ ಹೆಚ್ಚಾಗಿರಲಿದೆ.
ದೈನಂದಿನ ಕೆಲಸಗಳ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮ ಚರ್ಮ ಮತ್ತು ದೇಹದ ಆರೋಗ್ಯದ ಕಡೆ ಗಮನಹರಿಸುವುದು ಬಹಳ ಮುಖ್ಯ ಇದು ಖಂಡಿತವಾಗಿಯೂ ನಮ್ಮಲ್ಲಿ ಉತ್ತಮ ಬದಲಾವಣೆಗಳನ್ನು ತರಲಿದೆ.
ನಾವು ಮನೆಯಲ್ಲಿಯೇ ಕೆಲ ಜ್ಯೂಸ್‌ಗಳನ್ನು ತಯಾರಿಸಿಕೊಂಡು ಸೇವಿಸುವುದರಿಂದ ಆರೋಗ್ಯಕರ ಮತ್ತು ಹೊಳೆಯುವ ತ್ವಚೆ ನಮ್ಮದಾಗಲಿದೆ.
ಪ್ರತಿದಿನ ಬೆಳಗಿನ ಜಾವ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಎರಡು ಚಮಚ ಜೇನು ತುಪ್ಪ, ಅರ್ಧ ನಿಂಬೆರಸ ಬೆರೆಸಿ ಕುಡಿಯುವುದರಿಂದ ದೇಹದ ಆರೋಗ್ಯವೂ ಚೆನ್ನಾಗಿರುವುದರಲ್ಲದೆ ತ್ವಚೆಯ ಕಾಂತಿಯನ್ನೂ ಹೆಚ್ಚಿಸಲಿದೆ.
ಒಂದು ಸೌತೆಕಾಯಿ, ಇದರೊಂದಿಗೆ ಐದಾರು ಎಸಳು ಪುದಿನಾ ಎಲೆಗಳು, ಶುಂಠಿ 1 ಇಂಚು ಇವುಗಳನ್ನು ಚೆನ್ನಾಗಿ ರುಬ್ಬಿಕೊಂಡು, ಸೋಸಿ ಅದಕ್ಕೆ ಒಂದು ಚಮಚ ನೀರಿನಲ್ಲಿ ನೆನೆಸಿದ ಶಿಯಾ ಸೀಡ್ಗಳನ್ನು ಬೆರೆಸಿ ಕುಡಿಯುವುದು ಕೂಡ ಚರ್ಮಕ್ಕೆ ಉತ್ತಮ ಮದ್ದು.
ಒಂದು ಕಪ್‌ನ ನಾಲ್ಕನೇ ಒಂದು ಭಾಗದಷ್ಟು ಸೌತೆಕಾಯಿ, ನಾಲ್ಕನೇ ಒಂದು ಭಾಗದಷ್ಟು ಕ್ಯಾರೆಟ್ ಮತ್ತು ಬೀಟ್ಯೂಟ್, ಅರ್ಧ ಕಪ್ ಟೊಮ್ಯಾಟೋ, ಸ್ವಲ್ಪ ಶುಂಠಿ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಂಡು ನಂತರ ಅದನ್ನು ಸೋಸಿ ಅರ್ಧ ನಿಂಬೆ ರಸ ಹಿಂಡಿ ಪ್ರತಿದಿನ ಕುಡಿಯುವುರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ 40ರ ಹರೆಯದಲ್ಲಿಯೂ ಚರ್ಮದ ಕಾಂತಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ.
ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಟೀ ಸ್ಪೂನ್‌ನಷ್ಟು ಆಪಲ್ ಸಿಡಾರ್ ವಿನಿಗರ್, ಅರ್ಧ ನಿಂಬೆ ರಸ ಬೆರೆಸಿ ದಿನವೂ ಬೆಳಿಗ್ಗೆ ಕುಡಿಯಬೇಕು ಇದೂ ಕೂಡ ಚರ್ಮದ ರಕ್ಷಣೆಗೆ ಸಹಕಾರಿ. ಇನ್ನು 200 ಎಂಎಲ್ ಬೆಚ್ಚಗಿನ ಹಾಲಿಗೆ
ಕಾಲು ಚಮಚ ಆರ್ಗ್ಯಾನಿಕ್ ಅರಿಶಿನ ಪುಡಿ, ಸ್ವಲ್ಪ ಶುಂಠಿ, ಸ್ವಲ್ಪ ಮೆಣಸಿನ ಪುಡಿ ಎಲ್ಲವನ್ನೂ ಚೆನ್ನಾಗಿ ಬೆರೆಸಿ ಕುಡಿಯಬೇಕು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ಇನ್ನು ಹಣ್ಣುಗಳಲ್ಲಿಯೂ ನಮ್ಮ ಚರ್ಮದ ಕಾಂತಿಯನ್ನು ರಕ್ಷಿಸುವ ಅಂಶಗಳಿವೆ. ಅದರಲ್ಲಿ ಪ್ರಮುಖವಾಗಿ ಒಂದು ಕಪ್ ದಾಳಿಂಬೆ, ಒಂದು ಕಪ್ ಅರೇಂಜ್, ಒಂದು ಕಪ್ ಕ್ಯಾರೇಟ್, ಎಲ್ಲವನ್ನೂ ಚೆನ್ನಾಗಿ ರುಬ್ಬಿಕೊಂಡು ಸೋಸಿ ಆ ರಸಕ್ಕೆ ಒಂದು ಚಿಟಿಕೆ ಉಪ್ಪು, ಅರ್ಧ ನಿಂಬೆ ರಸ ಬೆರೆಸಿ ಕುಡಿಯಬೇಕು. ಇದು ಚರ್ಮದ ಕಾಂತಿ ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ.