ಸುಕನ್ಯಾ ಕನಾರಳ್ಳಿ
ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ ವ್ಯವಸ್ಥೆಗೆ ನೆನಪಿಸಬೇಕಲ್ಲ, ಅದಕ್ಕೆ ಈ ಮಹಿಳಾ ದಿನ
ಸುಮಾರು ಐದು ವರ್ಷಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಪ್ರಧಾನ ಭಾಷಣ ಮಾಡಿದ ಆಗಿನ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡನ್ ಆಗ ತಾನೇ ಹುಟ್ಟಿದ್ದ ತನ್ನ ಮಗುವನ್ನೂ ಕೈಯಲ್ಲಿ ಹಿಡಿದೇ ಭಾಷಣ ಮಾಡಿದಳು.
ಅವಳು ಹೇಳಿದ ಒಂದು ಅಂಶವಂತೂ ಮಹತ್ವದ್ದು ಅಂತನ್ನಿ ಸಿತ್ತು: ಜಗತ್ತಿನಲ್ಲಿ ಅಧಿಕಾರ ತಾಯಂದಿರ ಕೈಯಲ್ಲಿದ್ದಿದ್ದರೆ ಇಷ್ಟೊಂದು ಯುದ್ಧ, ಹಿಂಸೆ, ಸಾವು ನೋವುಗಳು ಇರುತ್ತಿರಲಿಲ್ಲ. ಅಷ್ಟೇ ಅಲ್ಲ, ಎಂತಹ ಬಡತನದಲ್ಲೂ ಮನೆಯಲ್ಲಿ ಅನ್ನ ಕಾಣಿಸುವ ಜವಾಬ್ದಾರಿಯುಳ್ಳ ಹೆಂಗಸು ಸಂಪತ್ತನ್ನು ಅನವ ಶ್ಯಕವಾಗಿ ಸೂರೆಯಾಗಲು ಬಿಟ್ಟು ಈಗ ಜಗತ್ತನ್ನ ಆವರಿಸಿಕೊಳ್ಳುತ್ತಿರೋ ಆರ್ಥಿಕ ಹಿಂಜರಿತಕ್ಕೆ ಹಾದಿ ಮಾಡಿಕೊಡುತ್ತಿರಲಿಲ್ಲ.
ಮಹಿಳಾ ದಿನ ಯಾಕೆ ಬೇಕು? ಜಗತ್ತಿನ ಸುಮಾರು ಅರವತ್ತರಷ್ಟು ಕೆಲಸಗಳನ್ನ ನಿಭಾಯಿಸಿಯೂ ಕೇವಲ ಶೇಕಡಾ ಒಂದರಷ್ಟು ಸಂಪತ್ತನ್ನ ಹೊಂದಿರುವ ಹೆಣ್ಣನ್ನ ನೆನಪಿಸಿಕೊಳ್ಳೋದಕ್ಕೆ ಮಹಿಳಾ ದಿನ ಬೇಕು. ಈ ಹೆಂಗಸರ ಹೋರಾಟವೆಲ್ಲ ಅಮೆರಿಕಾದಲ್ಲಿ ಹುಟ್ಟಿ ಯುರೋಪಿಗೆ ಹಬ್ಬಿ ಕೊನೆಗೆ ೧೯೭೫ರಲ್ಲಿ ವಿಶ್ವಸಂಸ್ಥೆಯಲ್ಲಿ ಮಾನ್ಯತೆಯನ್ನು ಪಡೆದುಕೊಳ್ತು. ನಮ್ಮ ಸನಾತನ ಭಾರತೀಯ ಸಂಸ್ಕ ತಿಗೆ ಸಂಬಂಧಿಸಿದ್ದಲ್ಲ ಅಂತ ಹಾದಿ ತಪ್ಪಿಸುವವರಿಗೆ ಎರಡು ಚಾರಿತ್ರಿಕ ಘಟನೆಗಳನ್ನ ನೆನಪಿಸಬೇಕಾಗಿದೆ:
೧೯೧೮ರಲ್ಲಿ ಭಾರತದ ಅಹಮದಾಬಾದಿನಲ್ಲಿ ಮಹಿಳಾ ಗಿರಣಿ ಕಾರ್ಮಿಕರ ಪ್ರತಿಭಟನೆ ನಡೀತು. ಅತ್ಯಂತ ಕೆಳಮಟ್ಟದ ವೇತನ ಪಡೀತಿದ್ದ ಹೆಂಗಸರು ಅನಸೂಯ ಸಾರಾಭಾಯಿ ಅವರ ನಾಯಕತ್ವದಲ್ಲಿ ಪ್ರತಿಭಟನೆಯನ್ನ ನಡೆಸಿದ್ರು. ಅದಕ್ಕೆ ಮಹಾತ್ಮ ಗಾಂಧಿಜಿಯವರ ಬೆಂಬಲ ಸಹ ಇತ್ತು. ಇನ್ನೊಂದು, ೧೯೨೦ರಲ್ಲಿ ನಡೆದ ಮಧುರೈ ಗಿರಣಿ ಮಹಿಳೆಯರ ಮುಷ್ಕರ.
ಕೆಲವು ಸತ್ಯಗಳನ್ನ ಮತ್ತೆ ಮತ್ತೆ ನಮ್ಮ ಪ್ರಜ್ಞೆಗೆ ತಂದುಕೊಳ್ಳೋದಕ್ಕೆ ನಮಗೆ ಮಹಿಳಾ ದಿನ ಬೇಕು. ಹೆಣ್ಣಿನ ಹಕ್ಕುಗಳು ಸಹ ಮಾನವ ಹಕ್ಕುಗಳೇ, ಅದು ವಿದ್ಯಾಭ್ಯಾಸದ ಹಕ್ಕು, ಉದ್ಯೋಗದ ಹಕ್ಕು, ಸಮಾನ ವೇತನದ ಹಕ್ಕು, ಆತ್ಮಗೌರವದಿಂದ ಬದುಕುವ ಹಕ್ಕು, ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಬದುಕನ್ನ ತಾನೇ ನಿರ್ಧರಿಸಿಕೊಳ್ಳೋ ಹಕ್ಕು, ಇವೆಲ್ಲ ಒಂದು ರಾಷ್ಟ್ರದ ಪ್ರಜೆಗಳ ಮೂಲಭೂತ ಹಕ್ಕುಗಳು. ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ ವ್ಯವಸ್ಥೆಗೆ ನೆನಪಿಸಬೇಕಲ್ಲ, ಅದಕ್ಕೆ ಈ ಮಹಿಳಾ ದಿನ.
ಕೌಟುಂಬಿಕ ಹಿಂಸೆ ಯುದ್ಧಹಿಂಸೆಗಿಂತ ಘೋರ ಅಂತ ಸಮಾಜಶಾಸ್ತ್ರಜ್ಞರು ಹೇಳ್ತಾನೆ ಇದಾರೆ. ಮನೆಯೊಳಗೆ ನಡೆಯುವ ಹಿಂಸೆ ರಾಜಕೀಯದ ಒಂದು ಭಾಗವೇ. Personal is political ಅಂತ ದಶಕಗಳಿಂದ ಹೋರಾಟ ಮಾಡ್ತಿದೀವಲ್ಲ, ಅದನ್ನ ಮತ್ತೆ ಮತ್ತೆ ವ್ಯವಸ್ಥೆಗೆ ನೆನಪು ಮಾಡಿಕೊಡೋದಕ್ಕೆ ನಮಗೆ ಬೇಕು ಈ ಮಹಿಳಾ ದಿನ!
ಕುಟುಂಬದ ಒಳಗಿನ ಕೊನೆಯೇ ಇಲ್ಲದ ದುಡಿತಕ್ಕೆ ವೇತನವೇ ಇಲ್ಲದ ಹಾಗೆ ವ್ಯವಸ್ಥೆ ಪಿತೂರಿ ಮಾಡಿದೆ ಅನ್ನೋ ಅಂಶವನ್ನ ಒತ್ತಿ ಹೇಳಿದವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್. ಒಂದು ಕಡೆ ವೇತನವೇ ಇಲ್ಲದ ಕೆಲಸ, ಇನ್ನೊಂದು ಕಡೆ ತಾರತಮ್ಯದ ಫಲವಾಗಿ ಕಡಿಮೆ ವೇತನ, ಮತ್ತು ಇನ್ನೊಂದು ಕಡೆ ಹೆಣ್ಣು ಬಳಸುವ ವಸ್ತು ಗಳಿಗೆ ಹೆಚ್ಚು ತೆರಿಗೆ ತೆರಬೇಕಾದ ಪಿಂಕ್ ಟ್ಯಾಕ್ಸ್ ಅನ್ನೋ ಪೀಡೆ. ಮತ್ತು ಸಾರ್ವಜನಿಕ ಬದುಕಿನಲ್ಲಿ ಹೆಣ್ಣು ಎಲ್ಲಿದಾಳೆ ಅಂತ ಕೇಳಿಕೊಳ್ಳೋದಕ್ಕೆ ನಮಗೆ ಮಹಿಳಾ ದಿನ ಬೇಕು.
ಇತಿಹಾಸದಲ್ಲಂತೂ ಹೆಣ್ಣು ಹೆಚ್ಚಿನಂಶ ಇರೋದೇ ಇಲ್ಲ. ನಮ್ಮ ಪಾರ್ಲಿಮೆಂಟಿನಲ್ಲಿ ಹೆಂಗಸರು ಎಷ್ಟು ಮಂದಿ ಇದಾರೆ ಅಂತ ಬೆರಳಲ್ಲಿ ಎಣಿಸಬಹುದು. ರಾಜಕೀಯದಲ್ಲಿ ಹೆಣ್ಣಿಗೆ ಶೇಕಡಾ ಮೂವತ್ಮೂರು ಮೀಸಲಾತಿ ಬರಬಹು ದೇನೋ ಬಿಡಿ! ಸಾಹಿತ್ಯದ ದಿಗ್ಗಜರೆಲ್ಲಾ ಹೆಚ್ಚಿನಂಶ ಗಂಡಸರೇ. ವಿಜ್ಞಾನವಂತೂ ಪುರುಷಸಿಂಹರ ಮೀಸಲು ವಲಯ. ವ್ಯವಹಾರದಲ್ಲಿ ಕೋಟ್ಯಧಿಪತಿಗಳೆಲ್ಲಾ ಗಂಡಸರೇ. ಆದರೆ, ಹುಚ್ಚಾಸ್ಪತ್ರೆಗಳಲ್ಲಿ ಮಾತ್ರ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಇವತ್ತಿಗೂ ನೀವು ಯಾವುದೇ ಮೆಂಟಲ್ ಕ್ಲಿನಿಕ್ ಅಥವಾ ಹುಚ್ಚಾಸ್ಪತ್ರೆಗೆ ಹೋಗಿ ನೋಡಿ, ಅಲ್ಲಿ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಮೈಮೇಲೆ ದೇವರು ಬರೋದು ಸಹ ಅದರ ಇನ್ನೊಂದು ರೂಪ. ಅದು ಹೆಂಗಸರಲ್ಲಿ ಹೆಚ್ಚು ಅಂತ ಅಧ್ಯಯನಗಳು ಹೇಳ್ತಾವೆ. ಇನ್ನು ಧರ್ಮ ಅನ್ನೋದು ಯಾವತ್ತೂ ಹೆಣ್ಣಿನ ಪರವಾಗಿಲ್ಲ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಬೌದ್ಧಧರ್ಮ ಸ್ವಲ್ಪ ಮಟ್ಟಿಗಾದರೂ ಹೆಣ್ಣಿಗೆ ಒಳಗೆ ಬರೋ ದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಹನ್ನೆರಡನೆಯ ಶತಮಾನ ದಲ್ಲಿ ಬಸವಣ್ಣನ ಅನುಭವ ಮಂಟಪ ಅದಕ್ಕೆ ಆಸ್ಪದ ಮಾಡಿಕೊಟ್ಟಿತ್ತು. ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಹೆಣ್ಣಿನ ಹಕ್ಕುಗಳ ಬಗ್ಗೆ ಮಾತಾಡೋವಾಗ ನಾವು ಮರೆಯ ಬಾರದ ಹೆಸರು ಬಾಬಾ ಸಾಹೇಬ್ ಅಂಬೇಡ್ಕರ್. ಸಂವಿ ಧಾನ ನಮ್ಮ ಪವಿತ್ರ ಗ್ರಂಥವಾಗಬೇಕು. ಬುದ್ಧ, ಬಸವಣ್ಣ, ಮತ್ತು ಬಾಬಾ ಸಾಹೇಬ್ ಪ್ರಾತಃಸ್ಮರಣೀಯರಾಗಬೇಕು.





