Mysore
29
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಎಲ್ಲಿ ಜಾರಿತೋ… ಕೊಳ್ಳೆ ಹೋಯಿತೋ… ಇಲ್ಲದಾಯಿತೋ…

• ಸುರೇಶ ಕಂಜರ್ಪಣೆ

ನನ್ನ ಚಿಕ್ಕಪ್ಪ ಒಬ್ಬರಿದ್ದರು. ಅಂದಿನ ಸ್ವತಂತ್ರ ಪಕ್ಷದಲ್ಲಿ ಕಾರ್ಮಿಕ ಕೋಶ ಶುರು ಮಾಡಿದ್ದವರು, ಖಾಸಗಿ ಬಂಡವಾಳದ ಪ್ರತಿವಾದಕ, ಪಕ್ಷಕ್ಕೊಂದು ಕಾರ್ಮಿಕ ಕೋಶ 70ರ ದಶಕದಲ್ಲಿ ಶ್ರೀಲಂಕಾದ ಆಕ್ರಮ ವಲಸಿಗ ತಮಿಳರನ್ನು ಭಾರತ ಮರಳ ಕರೆಸಿಕೊಳ್ಳುವಾಗ ಆ ತಮಿಳರನ್ನು ಸುಳ್ಯ ತಾಲ್ಲೂಕಿನಲ್ಲಿ ನೆಲೆಗೊಳಿಸಲಾಯಿತು. ರಬ್ಬರ್ ಕೃಷಿಯಲ್ಲಿ ಪಾರಂಗತರಾದ ಜೀವಗಳನ್ನು ಅವರ ಕೌಶಲವನ್ನು ಅವಲಂಬಿಸಿ ಕರ್ನಾಟಕ ಸರ್ಕಾರವು ‘ಅರಣ್ಯ ಅಭಿವೃದ್ಧಿ ನಿಗಮ” ಎಂಬ ನಿಗಮವನ್ನು ಸ್ಥಾಪಿಸಿ, ಸಾವಿರಾರು ಎಕರೆ ಕಾಡು ಕಡಿದು ಅಲ್ಲಿ ರಬ್ಬರ್ ನೆಟ್ಟು ಅಲ್ಲಿ ದುಡಿಯಲು ಈ ತಮಿಳರನ್ನು ಹಚ್ಚಲಾಯಿತು. ನಾಯಿ ಗೂಡಿನಂಥ ಕ್ವಾರ್ಟಸ್‌, ಯಾವ ಸೌಲಭ್ಯವೂ ಇಲ್ಲ, ಸಂಬಳ ಎಷ್ಟಿತ್ತೋ ಗೊತ್ತಿಲ್ಲ. ಈ ಪರಕೀಯ ನಾಡಿನಲ್ಲಿ ಈ ಪರದೇಸಿ ಜೀವಗಳು ಮಧ್ಯಾಹ್ನದ ವೇಳೆಗೆ ರಬ್ಬರ್ ಕೆಲಸ ಮುಗಿಸಿ ಅಪರಾಹ್ನ ಊರಿನ ಅಡಕೆ ತೋಟದವರಲ್ಲಿಗೆ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಅವರನ್ನು ಸಂಘಟಿಸಿದ್ದು ಈ ಚಿಕ್ಕಪ್ಪ, ಮದ್ರಾಸಿನಲ್ಲಿ ಲಾ ಓದುತ್ತಿದ್ದವರು ಏನೋ ಕಾರಣಕ್ಕೆ ಅರ್ಧಕ್ಕೆ ನಿಲ್ಲಿಸಿ ಹಳ್ಳಿಗೆ ಹಿಂತಿರುಗಿದ್ದವರು.

ಆಳ ಕಾನೂನು ಜ್ಞಾನ ಇತ್ತು ಅವರಿಗೆ ಈ ಅಬ್ಬೇಪಾರಿ ಕಾರ್ಮಿಕರನ್ನು ಆವರು ಸಂಘಟಿಸಿದರು. ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಹಂತಹಂತವಾಗಿ ಕೊಡಿಸಿದರು. ಅವರ ಸ್ವತಂತ್ರ ಪಕ್ಷ 77ರಲ್ಲಿ ಜನತಾಪಕ್ಷದ ಜೊತೆ ವಿಲೀನವಾಯಿತು. ಅವರು ಜನತಾಪಕ್ಷದಲ್ಲಿ ಸಾರಿನ ಕರಿಬೇವಿನ ಸೊಪ್ಪಿನ ಹಾಗೆ ತೇಲಿಕೊಂಡಿದ್ದರು. ಆದರೆ ಅವರ ಕಾರ್ಮಿಕ ಸಂಘಟನೆ ಮಾತ್ರ ಹಾಗೇ ಮುಂದುವರಿಯಿತು.

ಆಮೇಲೆ ಬಾಜಪದ ಗಾಳಿ ಬೀಸುವಾಗ ಅವರೂ ಭಾಜಪಕ್ಕೆ ಸೇರಿದರು. ಭಾಜಪ ಈ ತಮಿಳು ಮೂಲದವನೊಬ್ಬನನ್ನು ತಾಲ್ಲೂಕು ಪಂಚಾಯಿತಿಗೆ ನಿಲ್ಲಿಸಿ ಅವನನ್ನು ಗೆಲ್ಲಿಸಲಾಗಿ, ಇಡೀ ತಮಿಳು ಪುನರ್ವಸಿತರು ಸೀದಾ ಭಾಜಪ ತೆಕ್ಕೆಗೆ ಹೋದರು. ಈ ಸಮಯಕ್ಕೆ ನಮ್ಮ ತಾಲ್ಲೂಕಿನಲ್ಲಿ ಸಿಪಿಎಂ ಬಲಿಷ್ಟವಾಗಿತ್ತು ಅಂದರೆ ಸುಳ್ಯದ ಮುನ್ಸಿಪಾಲಿಟಿಯಲ್ಲಿ ಒಂದೋ ಎರಡೋ ಸೀಟು ಗೆಲ್ಲುವಷ್ಟು, ನಮೂರಿನಲ್ಲಿ ಒಂದಷ್ಟು ಮಂದಿ ಸಿಪಿಎಂ ಮತದಾರರಿದ್ದರು. ಆಗಾಗ್ಗೆ ಸುಳ್ಯದಲ್ಲಿ ಈ ಕೆಂಬಾವುಟದ ಶಿಸ್ತಿನ ಮೆರವಣಿಗೆ ಕಂಡಾಗ ಕೇರಳದ ನೆನಪಾಗುತ್ತಿತ್ತು. ಸುಳ್ಯ ಸತತವಾಗಿ ವಿರೋಧ ಪಕ್ಷದ (ಅಂದರೆ ಆಗ ಸ್ವತಂತ್ರ ಪಕ್ಷದ) ಅಭ್ಯರ್ಥಿಯನ್ನು 90ರ ದಶಕದ ವೇಳೆಗೆ ಭಾಜಪ ಆ ಜಾಗವನ್ನ ಕಬಳಿಸಿತ್ತು.

ಲೋಕಸಭಾಚುನಾವಣೆಗೆ 90ರ ದಶಕದಲ್ಲಿ ಕಾಮೇಶ್‌ ರಾಮಚಂದ್ರರಾಯರು ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ನಮ್ಮೂರಿನಲ್ಲಿ ಅವರಿಗೆ 24 ಮತ ಬಂದಿತ್ತು, ಭಾಜಪಕ್ಕೆ ಸಾವಿರ ಚಿಲ್ಲರೆ. ನಮ್ಮ ಊರಿನ ಭಾಜಪ ನಾಯಕರು (ಅಂದರೆ ನಮ್ಮ ನೆಂಟರಿಷ್ಟರೇ), “ಇಕೋ ಸುರೇಶಾ, ಆ 24 ಜನ ಯಾರೂಂತ ಹೇಳೂದಾ? ಹುಕ್ರ ಮತ್ತು ಅವನ ಮನೆಯವರು, ಮುದರ, ಅವನ ಮನೆಯವರು, ಕಾಮ್ರೆಡ್ ಹರಿಯಪ್ಪ, ಕೃಷ್ಣ ಭಟ್ಟ, ನೀನು, ಶಿವರಾಮ…” ಅಂತ ನಮ್ಮ ನಾಮಸ್ಮರಣೆ ಮಾಡಿದ್ದರು.

ನನಗೆ ಪಿಚ್ಚನ್ನಸಿ ಅವಮಾನದ ಕೊಡೆ ಹಿಡಿದು ಅಳೆದ ದಿನಗಳಿದ್ದವು. ಬೆಳೆಯುತ್ತಾ ಬಂದಿದ್ದೂ ನೋಡಿಯಾಯಿತು. ನಾನು ಓದುವಾಗ ಅಂದರೆ 78ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಅವರ ವಿರುದ್ಧ ಪ್ರಚಾರಕ್ಕೆ ಮಲ್ಲೇಶ್‌ ಅವರ ನೇತೃತ್ವದಲ್ಲಿ ನಾವೊಂದಷ್ಟು ವಿದ್ಯಾರ್ಥಿಗಳು ಚಿಕ್ಕಮಗಳೂರಿಗೆ ಹೋಗಿ ಇಂದಿರಾ ವಿರುದ್ಧ, ಅವರ ಎದುರಾಳಿ ವೀರೇಂದ್ರ ಪಾಟೀಲರ ಪರ ಪ್ರಚಾರ ಮಾಡಿದ್ದೆವು, 77ರಲ್ಲಿ ಒಂದೂ ಮುಕ್ಕಾಲು ಲಕ್ಷ ಮತದ ಭರ್ಜರಿ ಗೆಲುವು ಕಂಡವರು ಆಶ್ರಯದಾತರೂ ಆಗಿಬಿಟ್ಟರು. ಡಿ.ಬಿ.ಚಂದ್ರೇಗೌಡ, ಆದರೆ ಸ್ವತಃ ಇಂದಿರಾ ನಿಂತಾಗ ಬದುಸಿರು ಬಿಟ್ಟು 75 ಸಾವಿರ ಮತಗಳಿಂದ ಗೆದ್ದರು.ಕಾಂಗ್ರೆಸ್ಸಿನ ಪತನ ನಮ್ಮ ರಾಜ್ಯದಲ್ಲಿ ಆರಂಭವಾಗಿದ್ದು ಆಗಲೇ.

80ರಲ್ಲಿ ಜನತಾಪಕ್ಷ ನೆಲಕಚ್ಚಿದ್ದ ಹೊಡೆತ ಒಂದಾದರೆ, ಸ್ವತಃ ವೀರೇಂದ್ರ ಪಾಟೀಲ್‌ ಅವರು ಇಂದಿರಾ ಕಾಂಗ್ರೆಸ್ ಸೇರಿದರು. ಆಗಿನ್ನೂ ವಿದ್ಯಾರ್ಥಿಗಳಾಗಿದ್ದ ನಮಗೆ ಅಳುವೇ ಬಂದಿತ್ತು, ಯಾಕೆ ಹೀಗಾಯಿತು? ಈ ನಾಯಕರ ತುಂಡ ಶ್ವಪಚ ಗುಣ ಏನು ಎಂದು ಅರ್ಥವಾಗದೇ ನಲುಗಿದ್ದೆವು.

ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್ ಅವರೂ ಕಾಂಗ್ರೆಸ್ ಸೇರಿ, ಅಲ್ಲಿಂದ ತಮ್ಮ ವ್ಯಕ್ತಿಗತ ಪ್ರೀತಿ, ಮುಸು ಅವಲಂಬಿಸಿ ಕಾಂಗ್ರೆಸ್-ದಳ- ಭಾಜಪ ಹೀಗೆ ಮನೆ ಬದಲಾಯಿಸುತ್ತಾ ಹೋಗಿದ್ದನ್ನೂ ಕಂಡಿದ್ದಾಯಿತು.

ಕರ್ನಾಟಕದಲ್ಲಿ ಕಾಂಗ್ರೆಸ್‌ ವಿರೋಧಿ ನಿಲುವನ್ನು ಗಟ್ಟಿಗೊಳಿಸಿದ ತಲೆಮಾರು ನಮ್ಮದು. ಅದಕ್ಕೆ ಪರ್ಯಾಯವಾಗಿ ಜನತಾ ಎಂಬ ದ್ವಿದಳ ಧಾನ್ಯ ಬಿತ್ತಿ, ಅದು ದ್ವಿದಳವಾಗಿ ಒಡೆಯುತ್ತಾ ಹೋಗಿ ಕೊನೆಗೆ ಆ ಕೂಳೆಯನ್ನೆಲ್ಲಾ ಬಿಜೆಪಿ ತಿಂದು ಬೆಳೆಯುತ್ತಾ ಬಂದಿದ್ದೂ ನೊಡಿದ್ದಾಯಿತು.

ಕರ್ನಾಟಕದಲ್ಲಿ ಕಾಂಗ್ರೆಸ್‌ ವಿರೋಧಿ ನಿಲುವನ್ನು ಗಟ್ಟಿಗೊಳಿಸಿದ ತಲೆಮಾರು ನಮ್ಮದು. ಅದಕ್ಕೆ ಪರ್ಯಾಯವಾಗಿ ಜನತಾ ಎಂಬ ದ್ವಿದಳ ಧಾನ್ಯ ಬಿತ್ತಿ. ಅದು ದ್ವಿದಳವಾಗಿ ಒಡೆಯುತ್ತಾ ಹೋಗಿ ಕೊನೆಗೆ ಆ ಕೂಳೆಯನ್ನೆಲ್ಲಾ ಬಿಜೆಪಿ ತಿಂದು ಬೆಳೆಯುತ್ತಾ ಬಂದಿದ್ದೂ ನೋಡಿಯಾಯಿತು.

ಈ ದ್ವಿದಳವನ್ನು ನಾವೆಲ್ಲಾ ಸಾವಯವ ಹಸುವಿನ ಗೊಬ್ಬರ ಹಾಕಿ ಬೆಳೆಸಿದರೆ, ಅದು ಹುಳ ತಿಂದು ಅದರ ಜಾಗದಲ್ಲಿ ಭಾಜಪ ಬಂದು, ಅದಕ್ಕೆ ಕೋಮುವಾದಿ ತೀಕ್ಷ್ಯ ಗೊಬ್ಬರ ಹಾಕಿದ್ದರ ಪರಿಣಾಮವಾಗಿ ನಮ್ಮ ನೆರೆಹೊರೆಯ ಡಿಸೋಜಾ, ಮಮ್ಮದೆಗಳೆಲ್ಲಾ ಪರಕೀಯರೂ, ಧೂರ್ತರೂ, ದೇಶದ್ರೋಹಿಗಳ ಆಶ್ರಯದಾತರೂ ಆಗಿಬಿಟ್ಟರು!

90ರ ದಶಕದ ಎಲ್ ಪಿಜಿ ಹವಾ ಬೀಸಿದ್ದೇ ಕಾರ್ಮಿಕರೆಲ್ಲಾ ಮಾಯವಾದರು. ಅವರೆಲ್ಲ ಎಲ್ಲಿ ಹೋದರು ಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ. ಆದರೆ ಅವರೆಲ್ಲಾ ಮಾಯವಾಗಿದ್ದ ಕುರುಹು ಸಿಕ್ಕಿದ್ದು ನಮ್ಮ ಎಡಪಕ್ಷಗಳ ಬೇರು ಕುಸಿದದ್ದರಲ್ಲಿ.

ಅತ್ತ ಬೆಂಗಾಲದಲ್ಲಿ ನಿರ್ನಾಮವಾದದ್ದು ಆಕಸ್ಮಿಕ ಅಲ್ಲ; ಎಂತಹದೋ ಭದ್ರ ಕಾರಣ ಇರಲಿಕ್ಕೇ ಬೇಕು ಎಂದು ನಾವೆಲ್ಲಾ ತರ್ಕಿಸಿದರೆ ನಮ್ಮ ಎಡಪಕ್ಷಗಳ ಗೆಳೆಯರು ಮಾತ್ರ ಅದೊಂದು ದುಷ್ಟ ಹುನ್ನಾರವೆಂಬಂತೆ ಪಿಸುಗುಟ್ಟಿದ್ದರು.

ಕರ್ನಾಟಕದ ಮಟ್ಟಿಗೆ ಈ ಭಾಜಪ, ಕೆರೆ ಬತ್ತಿದಾಗ ತಾವರೆ ಗೆಡ್ಡೆ ತಿನ್ನಿಸಿಯೇ ಅಮಲು ಹೆಚ್ಚಿಸಿ ಬೆಳೆಯಿತು.ಒಮ್ಮೆ ಎಡ ಪಕ್ಷದ ಗೆಳೆಯರು ಮಾರ್ಕ್ಸ್ ಲೆನಿನ್, ಸ್ಟಾಲಿನರ ಚಿತ್ರದ ಟಿ ಶರ್ಟ್ ಧರಿಸಿದಾಗ, ‘ಅಲ್ಲ ಮಾರಾಯಾ, ಭಾರತದ ಮಹಾಪುರುಷರು ಸಿಗಲಿಲ್ಲವಾ?’ ಎಂದು ಕೇಳಿ ಅವರಿಂದ ತಾರಾಮಾರ ಲೇವಡಿಗೊಳಗಾಗಿದ್ದೆ. ಆಮೇಲೆ ನಾನು ಕಮ್ಯುನಿಸ್ಟ್ ಪಕ್ಷ ಕಟ್ಟಿದ ಇಬ್ಬರು ಮುಸ್ಲಿಂ ನಾಯಕರ ಪಟ ಕಳಿಸಿದೆ. ಅವರ ಲ್ಲೊಬ್ಬರು ಭಾರತದಲ್ಲೂ, ಇನ್ನೊಬ್ಬರು ಪಾಕಿಸ್ತಾನದ ಜೈಲಿನಲ್ಲೂ ಸತ್ತರು. (ಎಡಗೆಳೆಯರಿಗೆ ಈ ಇಬ್ಬರ ಬಗ್ಗೆಯೂ ಗೊತ್ತಿರಲಿಲ್ಲ) ಭಗತ್ ಸಿಂಗ್ ಪ್ರಕಟಿಸುತ್ತಿದ್ದ ಕೀರ್ತಿ ಮಾಸಿಕದ ಮುಖ ಚಿತ್ರದಲ್ಲಿ ಕಾರ್ಮಿಕ, ರೈತನ ಚಿತ್ರದ ಹಿಂದೆ ಭಾರತ ಹಾಗೂ ರಾರಾಜಿಸುವ ಭಗವಾಧ್ವಜವಿತ್ತು, ಭಗತ್ ಸಿಂಗ್ ಕನಸೇನಿತ್ತು?

ಜಾಗತೀಕರಣ ಬೇರು ಬಿಟ್ಟಿದ್ದೇ ಕಾರ್ಮಿಕ ಸಂಘಟನೆಗಳೆಲ್ಲಾ ಬೇರು ಉಡುಗಿ ಸೋತವು, ಕಳೆದ 9 ವರ್ಷದ ಅಚ್ಚೇ ದಿನ ತರುವ ದುಸ್ತಪದ ಆಡಳಿತದಲ್ಲಿ ನಿರುದ್ಯೋಗ ಹೆಚ್ಚಿದೆ, ಕಾರ್ಮಿಕರಿಗೆ ಕೆಲಸದ ಅನಿಶ್ಚಿತತೆ ಇದೆ, ರೈತರ ಆದಾಯ ಕುಸಿದಿದೆ. ಗ್ರಾಮೀಣ ಬದುಕು ನಾಜೂಕಾಗಿದೆ ಎಂದೆಲ್ಲಾ ಪುರಾವೆಗಳು ದಂಡಿಯಾಗಿ ಬೀಳುತ್ತಿರುವಾಗ, ಈ ಬಾರಿಯ ಚುನಾವಣೆಯಲ್ಲಿ ಅದರ ಪರಿಣಾಮ ಕಂಡೀತು ಎಂಬ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ಸೇನೋ ಭರ್ಜರಿಯಾಗಿ ಗೆದ್ದಿತು. ಭಾಜಪ ಸೀಟು ಲೆಕ್ಕದಲ್ಲಿ ಮಕಾಡೆ ಮಲಗಿತು. ಆದರೆ ಅದರ ಮತ ಪ್ರಮಾಣ ಹಾಗೇ ಉಳಿದಿದೆ.

ಆದರೆ ಎಡ/ ರೈತ | ಪ್ರಗತಿಪರ ಸಂಘಟನೆಗಳ ಬಲ ಏನಾಯಿತು ಎಂದು ನೋಡಿದರೆ

ಎಡಪಕ್ಷಗಳು ಗಳಿಸಿದ ಒಟ್ಟಾರೆ ಮತ 34 ಸಾವಿರ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಗೆದ್ದ ಕಾರಣಗಳು ಬೇರೆ. ಉಳಿದ ಕಡೆ? ಎದ್ದೇಳು ಕರ್ನಾಟಕದಂಥ ವೇದಿಕೆ ನೂರು ಕ್ಷೇತ್ರಗಳಲ್ಲಿ ನಾವು ಭಾಜಪದ ವಿರುದ್ಧ ಮತ ಪ್ರಭಾವಿಸಿದ್ದೇವೆ ಎಂದು ಹೇಳಿದೆ. ಅದಕ್ಕೆ ಅಂಥಾ ಪುರಾವೆಯೇನೂ ಇಲ್ಲ. 2013ರಲ್ಲಿ ಭಾಜಪ ಇದಕ್ಕಿಂತಲೂ ಶೋಚನೀಯವಾಗಿ

ಈ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಡವರ ಶೋಷಿತರಿಗೆ ನೆರಳು ನೀಡುವ ಎಡ ರೈತ ತಳಿ ಬೇರು ಬಿಡದೇ ಇರುವುದಕ್ಕೆ ಕಾರಣಗಳೇನು? ಇದೊಂದು ನುಡಿಕಟ್ಟಿನ ಸಮಸ್ಯೆಯೇ? ಅಥವಾ ಅವರೊಂದಿಗೆ ಬೆರೆಯದೇ ಬೌದ್ಧಿಕ ವೇದಿಕೆಗಳಲ್ಲಷ್ಟೇ ಸಕ್ರಿಯವಾಗಿರುವ ಲೋಲುಪತೆ ಕಾರಣವೇ?

ನನ್ನೂರಿನ ಹಳೆಯ ಗೆಳೆಯ ಹರಿಯಪ್ಪ ಇತ್ತೀಚೆಗೆ ತೀರಿಕೊಂಡ. ಸಾಯುವವರೆಗೂ ಕಾಮೇಡ್ ಅವನು, ಬಡತನ, ಅನಾರೋಗ್ಯದಲ್ಲಿ ದೀನನಾಗಿ ಬದುಕಿದ. ಆದರೆ ತನ್ನ ಎಡ ಸಿದ್ಧಾಂತದ ನಂಬಿಕೆ ಬಿಡಲಿಲ್ಲ. ಅವನಿಗೊಂದು ಒರಿಕೆ ಅನ್ನುವ ತಲೆ ನೋವಿನ ಸಮಸ್ಯೆ ಇತ್ತು. ಡಿಪ್ರೆಶನ್ನಿನ ಕಾರಣಕ್ಕೆ ಅದು ಜೋರಾಗೋದು ಅಂತ ಡಾಕ್ಟ್ರು ಹೇಳಿದ್ದರು. ಅವನಲ್ಲಿ ಕೇಳಿದರೆ,

“ಇಕೊಳ್ಳಿ, ನನಿಗೆ ಒಳಬಾಧೆ ಒಂದೇ, ನಾನು ಎಂತದೂ ಮಾಡಿಲ್ಲ. ಪಾರ್ಟಿ ಒಂದು ಕಾಲದಲ್ಲಿ ಭಾರೀ ಆಸೆ ಬರುವ ಹಾಗಿತ್ತಣ್ಣಾ, ಆಮೇಲೆ, ನಾನೇ ತೆಕ್ಕೊಳ್ಳಿ, ಎಂತದೂ ಮಾಡ್ಲಿಕ್ಕಾಗಿಲ್ಲ. ನನಿಗಂತಾ ಬರ್ಮು ಇಲ್ಲ. ನಂಬಿದ್ದು ಇಟ್ಟುಕೊಂಡ. ಟೈಮು ಬಂದಾಗ ಗೆಲ್ಲಲಿ ಸೋಲಲಿ ಒಂದು ವೋಟು ಹಾಕಿದ, ಆದ್ರೆ ಈಗ ನೋಡಿ, ತೋಟ ಕಂಡಮ್ ಆದ ಹಾಗೆ. ‘ಕೃಷಿ ಕೆಡುಗುಂ ನಿರ್ಲಕ್ಷದಿಂ’ ಎಂತ ಗಾದೆ ಇಲ್ಲಾ. ಪಾರ್ಟಿಯೂ ಅಷ್ಟೇ ಅಣ್ಣಾ… ಈ ಜನಸಂಘದವರ ತೊಟ್ಟಿಗೆ ಹೀಗೆ ಮೀನು ಹತ್ತಿದ ಹಾಗೆ ಬೀಳೋದೂಂದ್ರೆ.. ಅದೊಂದು ಬೇಜಾರು ಉಂಟು…” ಎಂದು ಹೇಳಿದ್ದ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ