Mysore
28
broken clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಮೈಸೂರು ಮೈಸೂರಾಗಿಯೇ ಇರಲು ಏನು ಮಾಡಬೇಕು? ಏನು ಮಾಡಬಾರದು?

• ಚಿತ್ರ ಮತ್ತು ಬರಹ : ಸಿರಿ ಮೈಸೂರು

ಮೈಸೂರಿನಿಂದ ಹೊರಗಿರುವ ಮೈಸೂರಿಗರು ಈಗಲೂ ಮೈಸೂರಿನಲ್ಲಿರುವ ಮೈಸೂರಿಗರಿಗೆ ಈ ಪಶ್ನೆ ಕೇಳಿದರೆ ಸಿಗುವುದು ಬಹುಪಾಲು ಒಂದೇ ಉತ್ತರ. ‘ಸಿಕ್ಕಾಪಟ್ಟೆ ಟ್ರಾಫಿಕ್, ಮೈಸೂರು ಬದಲಾಗ್ತಿದೆ’. ಮೈಸೂರಿನಲ್ಲಿ ಹುಟ್ಟಿ, ಬೆಳೆದು ಎರಡೂ ಮುಕ್ಕಾಲು ದಶಕಗಳಿಂದ ಮೈಸೂರನ್ನು ಬಹಳ ಹತ್ತಿರದಿಂದ, ಆಸ್ಥೆಯಿಂದ ನೋಡುತ್ತಿರುವ ಯಾರನ್ನು ಕೇಳಿದರೂ ಸಿಗುವುದು ಇದೇ ಉತ್ತರ. ಹೌದು, ಮೈಸೂರು ಬದಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ಹೆಚ್ಚಾಗುತ್ತಿರುವ ವಲಸಿಗರ ಸಂಖ್ಯೆಯ ಬಗ್ಗೆ ಮಾತನಾಡಿದ್ದೆ. ಮೈಸೂರನ್ನು ಗೋಜಲು ಮಾಡುತ್ತಿರುವ ಇಂತಹದ್ದೇ ಮತ್ತೊಂದು ವಿಷಯದ ಬಗ್ಗೆ ನಾವೆಲ್ಲರೂ ಮಾತನಾಡಲೇಬೇಕಿದೆ. ಅದು ಪ್ರವಾಸೋದ್ಯಮ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ.

ಮೈಸೂರು ಮೂಲತಃ ಐತಿಹಾಸಿಕ, ಪಾರಂಪರಿಕ ನಗರಿ, ಹೆರಿಟೇಜ್ ಸಿಟಿ. ಇಲ್ಲಿರುವ ಅರಮನೆಗಳು, ಮೃಗಾಲಯ, ಅನತಿ ದೂರದಲ್ಲೇ ಇರುವ ನಂಜನಗೂಡು, ಶ್ರೀರಂಗಪಟ್ಟಣ, ನಾಗರಹೊಳೆ, ಬಂಡೀಪುರ ರೀತಿಯ ಪ್ರಸಿದ್ಧ ಪ್ರವಾಸಿ ತಾಣಗಳು. ಎಲ್ಲಕ್ಕಿಂತ ಮುಖ್ಯವಾಗಿ ನಗರದ ಜಂಜಾಟವಿಲ್ಲದ ರಸ್ತೆಗಳು ಹಾಗೂ ಇಲ್ಲಿನ ಜನರು ತೋರಿಸುವ ಆತ್ಮೀಯತೆ. ಈ ಎಲ್ಲಾ ಕಾರಣಗಳಿಂದ ಮೈಸೂರು ಮೊದಲಿನಿಂದಲೂ ಪ್ರವಾಸಿಗರ ಅಚ್ಚುಮೆಚ್ಚಿನ ನಗರಿ, ಪ್ರವಾಸೋದ್ಯಮ ಇಲ್ಲಿನ ಆರ್ಥಿಕತೆಯ ಮೂಲ ಆಧಾರಸ್ತಂಭ, ಪ್ರತಿದಿನ ಚಾಮುಂಡಿ ಬೆಟ್ಟ, ಅರಮನೆ, ಮೃಗಾಲಯ ಸೇರಿದಂತೆ ಇಲ್ಲಿನ ವಿವಿಧ ಪ್ರವಾಸಿ ಸ್ಥಳಗಳಿಗೆ ಬರುವ ಜನರಿಂದ ಮೈಸೂರು, ಮೈಸೂರಿನ ಆರ್ಥಿಕತೆ ಮುನ್ನಡೆಯುತ್ತಿದೆ. ರಸ್ತೆಬದಿ ವ್ಯಾಪಾರಿಗಳಿಂದ ಮೊದಲುಗೊಂಡು ಹೋಟೆಲ್ ಉದ್ಯಮದವರು, ಟ್ಯಾಕ್ಸಿ ಚಾಲಕರು, ಟ್ರಾವೆಲ್ಸ್‌ನವರು, ಪ್ರವಾಸಿ ಮಾರ್ಗದರ್ಶಕರು, ವಿವಿಧ ವಸ್ತುಗಳ ಮಾರಾಟಗಾರರು, ಕಲಾವಿದರು… ಹೀಗೆ ಸಾವಿರಾರು ಕುಟುಂಬಗಳು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿವೆ. ಇವಿಷ್ಟೂ ಪ್ರವಾಸೋದ್ಯಮದಿಂದ ನಗರಕ್ಕೆ ಆಗುತ್ತಿರುವ ಒಳ್ಳೆಯ ಸಂಗತಿಗಳಾದರೆ ಇದರಿಂದ ಆಗುತ್ತಿರುವ ದುಷರಿಣಾಮಗಳು ಇನ್ನೊಂದೆಡೆ.

ಮೈಸೂರು ಇರುವುದೇ ಮೂಲತಃ ಬಹಳ ಅನುಕೂಲಕರ ಜಾಗದಲ್ಲಿ ತಮಿಳುನಾಡು, ಕೇರಳ, ಉತ್ತರ ಕರ್ನಾಟಕ ಹಾಗೂ ಸುಮಾರಷ್ಟು ಜಾಗಗಳಿಂದ ಕಾರ್‌ನಲ್ಲೇ ಮೈಸೂರಿಗೆ ಬಂದುಬಿಡಬಹುದು. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವಂತೆ ನಮ್ಮ ಮಾಮೂಲು ರಸ್ತೆಗಳೆಲ್ಲಾ ಸಿಕ್ಕಾಪಟ್ಟೆ ಗಿಜಿಗುಡುತ್ತಿವೆ. ಪ್ರವಾಸಿಗರು ಹೆಚ್ಚಾಗಿರುವ ಜಾಗಗಳಲ್ಲಿ ಎಲ್ಲ ವಸ್ತುಗಳಿಗೂ ಎಗ್ಗಿಲ್ಲದೇ ಬೆಲೆ ಹೆಚ್ಚಾಗುತ್ತಿದೆ. ವಾರಾಂತ್ಯದ ದಿನಗಳು ಬಂತೆಂದರೆ ‘ಸಿಟಿ ಕಡೆ ಹೋಗೋದೆ ಬೇಡಪ್ಪಾ’ ಅನಿಸುತ್ತಿದೆ. ಟ್ರಾಫಿಕ್ ಹೆಚ್ಚಾಗುವ ಮುನ್ನ ಬೆಳ್ಳಂಬೆಳಿಗ್ಗೆ ಸಿಟಿ ಸುತ್ತಿ ಬರೋಣ ಎಂದರೆ ಅರಮನೆ ಸುತ್ತಲೂ ತುಂಬಿಕೊಂಡಿರುವ ಫೋಟೋಶೂಟ್ ಭೂತಗಳು. ಎಲ್ಲಾ ಕಡೆ ಅಶುಚಿತ್ವ, ಮೈಸೂರಿನವರು ಹೊರಗೆ ಹೆಜ್ಜೆ ಇಡಬೇಕಾದರೆ ರಜೆಗಳಿಲ್ಲದಿರುವ ದಿನಗಳನ್ನೇ ಕಾಯಬೇಕು. ಬೇರೆ ಸಮಯದಲ್ಲಿ ಹೋಗಬಾರದೆಂದೇನಿಲ್ಲ. ಹೋದರೆ ಮೈಸೂರಿನ ಜನರಿಗೆ ಮೈಸೂರು ಮೈಸೂರಿನಂತೆ ಅನಿಸುವುದಿಲ್ಲವಷ್ಟೇ. ಮೈಸೂರನ್ನು ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿರುವುದರ ಪರಿಣಾಮ ಇದು. ಇದನ್ನೆಲ್ಲಾ ನೋಡಿದರೆ ‘ಪ್ರವಾಸೋದ್ಯಮ’ ಎಂಬುದು ಎಂತಹ ಎರಡು ಅಂಚಿನ ಕತ್ತಿ ಎಂಬ ವಿಷಯ ಅರಿವಿಗೆ ಬರುತ್ತದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿಯುತ್ತಾ ಹೋದರೆ ಮೈಸೂರು ಏನಾದೀತು? ಈ ಪ್ರಶ್ನೆಗೆ ಈಗಲೇ ಸ್ಪಷ್ಟ ಉತ್ತರ ಸಿಗದಾದರೂ ಈ ಊರು ಮೊದಲಿನಷ್ಟು ಚೆಂದ ಎನಿಸುವುದು ಕಷ್ಟಸಾಧ್ಯವಾಗುತ್ತದೆ ಎಂಬುದು ಮಾತ್ರ ನಿರ್ವಿವಾದ. ಹಾಗಾದರೆ ಇದನ್ನು ತಡೆಯಲು ಏನು ಮಾಡಬೇಕು? ಇದು ಪ್ರವಾಸೋದ್ಯಮಿಗಳು, ಸರ್ಕಾರ ಹಾಗೂ ಪ್ರವಾಸಿಗರೆಲ್ಲರೂ ಕೈಜೋಡಿಸಿದರೆ ಮಾತ್ರ ಆಗುವ ಕೆಲಸ. ಉದಾಹರಣೆಗೆ, ಜಪಾನ್‌ನ ಕ್ಯೋಟೋ, ಇಟಲಿಯ ಫ್ಲೋರೆನ್, ಭಾರತದ ಉದಯ್‌ ಪುರ್, ಮೊರೊಕೊದ ಮ್ಯಾರಕಶ್, ಭೂತಾನ್‌ನ ಪಾರೋ ನಗರಗಳಿಗೆ ಪ್ರತಿವರ್ಷ ಕೋಟ್ಯಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಭೂತಾನ್ ನಲ್ಲಿ ದುಬಾರಿ ಶುಲ್ಕ ವಿಧಿಸುವ ಮೂಲಕ ಓವರ್‌ ಟೂರಿಸಂ ಅನ್ನು ನಿಯಂತ್ರಿಸಿದರೆ, ಫ್ಲೋರೆನ್ಸ್, ಕ್ಯೋಟೋ, ಉದಯ್ ಪುರ್‌ನಂತಹ ನಗರಗಳಲ್ಲಿ ಈಗಲೂ ಐತಿಹಾಸಿಕ ಪರಂಪರೆ, ದಿನಚರಿ, ಉದ್ಯೋಗಗಳನ್ನು ಕಾಪಾಡಿಕೊಂಡು ಬರುವ ಮೂಲಕ ಹಾಗೂ ಕಠಿಣ ನಿಯಮಗಳನ್ನು ಪಾಲಿಸುವ ಮೂಲಕ ಓವರ್‌ ಟೂರಿಸಂನ ಅಪಾಯಗಳನ್ನು ತಡೆಗಟ್ಟುವ ಕೆಲಸ ನಡೆಯುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಗೋವಾ, ಥೈಲ್ಯಾಂಡ್‌ನ ಫುಕೆಟ್‌, ಇಂಡೋನೇಷ್ಯಾದ ಬಾಲಿ, ಗ್ರೀಸ್‌ನ ಸ್ಯಾಂತೋರಿನಿ ಸೇರಿದಂತೆ ಇನ್ನೂ ಹಲವಾರು ಸ್ಥಳಗಳು ಪ್ರವಾಸೋದ್ಯಮದಿಂದ ಅದೆಷ್ಟು ದುಷ್ಪರಿಣಾಮಗಳನ್ನು ಅನುಭವಿಸಿವೆ ಎಂದರೆ, ಈ ಜಾಗಗಳಲ್ಲಿರುವ ಸ್ಥಳೀಯರಿಗೆ ತಾವು ಎಲ್ಲಿದ್ದೇವೆ ಎಂಬ ಅನುಮಾನ ಶುರುವಾಗಿವೆ. ಎಲ್ಲೆಲ್ಲೂ ಪ್ರವಾಸಿಗರಿಗಾಗಿ ಬೇಕಾದ ಏರ್‌ಬಿನ್‌ಬಿಗಳು, ರೆಸ್ಟೋರೆಂಟ್ ಹಾಗೂ ಕೆಫೆಗಳು, ಸೊವೆನಿಯರ್ ಅಂಗಡಿಗಳು, ಫೋಟೋ ಸ್ಟಾಟ್‌ಗಳೇ ತಲೆ ಎತ್ತಿದರೆ ಅಲ್ಲಿ ದಿನವೂ ಜೀವಿಸುವ ಜನರಿಗೆ ಆಗುವ ಅನನುಕೂಲತೆಗೆ ಯಾರು ಜವಾಬ್ದಾರರು?

ನಾನು ಹತ್ತು ವರ್ಷಗಳ ಹಿಂದೆ ವಾಣಿವಿಲಾಸ ಮೊಹಲ್ಲಾದಲ್ಲಿ ವಾಸಿಸುತ್ತಿದ್ದಾಗ ಪ್ರತಿದಿನ ನೋಡುತ್ತಿದ್ದ ಮನೆಗಳೆಲ್ಲಾ ಈಗ ಏರ್‌ಬಿನ್‌ಬಿಗಳು ಅಥವಾ ಕೆಫೆಗಳಾಗಿವೆ. ಅರಮನೆಯ ಸುತ್ತಮುತ್ತಲಿನ ಸ್ಥಳ ಈಗ ದಿನವಿಡೀ ಕೇವಲ ಫೋಟೋಶೂಟ್ ಸ್ಪಾಟ್. ಮೈಲಾರಿ ದೋಸೆ, ಗುರು ಸ್ವೀಟ್ಸ್‌ಗೆ ರೀಲ್ ಮಾಡಲು ಬರುವವರೇ ಹೆಚ್ಚು. ಕೆಆರ್‌ಎಸ್‌ ಹಿನ್ನೀರು, ಕಬಿನಿಗೆ ಬರುವವರೆಲ್ಲರೂ ಮದ್ಯಪಾನ ಮಾಡಲು ಜಾಗ ಹುಡುಕಿ ಬರುವವರು. ಕೆಲ ವರ್ಷಗಳ ಹಿಂದೆ ದಸರಾ ಸಮಯದಲ್ಲಿ ನೆಮ್ಮದಿಯಿಂದ ವಾಕಿಂಗ್ ಮಾಡುತ್ತಿದ್ದ ಆನೆಗಳನ್ನು ಈಗ ಜನರು ಸುತ್ತುವರಿದು ವಿಚಲಿತಗೊಳಿಸುತ್ತಿದ್ದಾರೆ. ಇದಕ್ಕೆ ಪರಿಹಾರವೇನು? ಜವಾಬ್ದಾರಿಯುತ ಪ್ರವಾಸೋದ್ಯಮ. ಇಲ್ಲಿಗೆ ಬರುವ ಜನರು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಅರಿತು ನಡೆಯಬೇಕು. ಇನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶುಚಿತ್ವ, ಸುರಕ್ಷತೆ ಹಾಗೂ ಮೈಸೂರಿನ ಅಸ್ತಿತ್ವ ಕಾಪಾಡಲು ಕಠಿಣ ನೀತಿಗಳನ್ನು ರೂಪಿಸಬೇಕು. ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ತಾಣಗಳನ್ನು ಮಾತ್ರ ಪ್ರಚಾರ ಮಾಡುವ ಬದಲು ಪ್ರವಾಸಿಗರು ಎಲ್ಲೆಡೆ ಚದುರಲು ಸಾಧ್ಯವಾಗುವಂತೆ ಬೇರೆ ಬೇರೆ ಸ್ಥಳಗಳ ಪ್ರಚಾರವನ್ನೂ ಮಾಡಬೇಕು (ಅಂತಹ ಸಾಕಷ್ಟು ಸ್ಥಳಗಳು ಮೈಸೂರಿನಲ್ಲಿ ಹಾಗೂ ಸುತ್ತಮುತ್ತ ಇವೆ). ಇನ್ನೇನು ಮಾಡಬಹುದು? ನಗರದ ಸಾಮಾನ್ಯ ಪ್ರಜೆಯಾಗಿ ನಾನು ಇಷ್ಟು ಮಾತ್ರ ಹೇಳಲು ಸಾಧ್ಯ! ಇದರ ಬಗ್ಗೆ ಹೆಚ್ಚು ಯೋಚಿಸುವುದು, ಕರಾರುವಾಕ್ಕಾದ ನಿರ್ಧಾರಗಳನ್ನು ಕೈಗೊಳ್ಳುವುದು, ನಗರದ ಹಿತಾಸಕ್ತಿಯಲ್ಲಿ ಕ್ರಮ ಕೈಗೊಳ್ಳುವುದು ನಮ್ಮನ್ನಾಳುವ ಸರ್ಕಾರದ, ಅವರಿಗೆ ಸಲಹೆ ನೀಡುವ ಪ್ರವಾಸೋದ್ಯಮಿಗಳ ಜವಾಬ್ದಾರಿ. ಇಲ್ಲವಾದರೆ ಈಗ ಮೈಸೂರಿಗೆ ವರವಾಗಿರುವ ಪ್ರವಾಸೋ ದ್ಯಮ ಇನ್ನೊಂದೆರಡು ವರ್ಷಗಳಲ್ಲಿ ಶಾಪವಾಗಿಬಿಟ್ಟಿತು ಜೋಕೆ! ಅತಿಯಾದರೆ ಅಮೃತವೂ ವಿಷವಂತೆ.

sirimysuru18@gmail.com

Tags:
error: Content is protected !!