Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಲಿಂಗಾಂಬುಧಿ ಕೆರೆಯ ಕುರಿತು ಏನೆಲ್ಲ ಬಲ್ಲಿರಿ?

ಫೋಟೋ ಬರಹ, ಸಿರಿ ಮೈಸೂರು

ಪ್ರಶಾಂತವಾದ ಕೆರೆ ನೀರು, ಹಕ್ಕಿಗಳ ಚಿಲಿಪಿಲಿ, ಸುಂದರವಾದ ಸೂರ್ಯೋದಯ, ಅಲ್ಲಲ್ಲಿ ನವಿಲುಗಳು ಹಾಗೂ ಸಿಕ್ಕಾಪಟ್ಟೆ ಹಸಿರು. ಮೈಸೂರಿನವರಿಗೆ ಇಷ್ಟೆಲ್ಲಾ ಕೇಳಿದಾಕ್ಷಣ ಮೊದಲು ನೆನಪಾಗುವುದು ಒಂದೋ ಕುಕ್ಕರಹಳ್ಳಿ ಕೆರೆ ಅಥವಾ ಕಾರಂಜಿ ಕೆರೆ. ಆದರೆ ಇನ್ನೂ ಸ್ವಲ್ಪ ಯೋಚಿಸಿದ ನಂತರ ತಲೆಗೆ ಬರುವ ಹೆಸರು ಲಿಂಗಾಂಬುಧಿ ಕೆರೆ. ಇದು ನಗರದ  ಗೋಜಲಿನಿಂದ ಸ್ವಲ್ಪ ದೂರ ಇರುವ ಕಾರಣ ಮೈಸೂರಿಗರಿಗೆ ಬಿಟ್ಟರೆ ಬೇರೆ ಯಾರಿಗೂ ಹೆಚ್ಚಾಗಿ ಈ ಜಾಗದ ಬಗ್ಗೆ ತಿಳಿದಿಲ್ಲ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಇದು ನಿರ್ವಿವಾದವಾಗಿ ಮೈಸೂರಿನ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದು. ೧೮೨೮ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆದೇಶದ ಮೇರೆಗೆ ನಿರ್ಮಾಣವಾದ ಕೆರೆ ಇದು. ಈ ಕೆರೆಯ ಪಕ್ಕದಲ್ಲೇ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದೆ. ದೇವಾಲಯ ನಿರ್ಮಾಣದ ಸಮಯದಲ್ಲೇ ಈ ಕೆರೆಯೂ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ. ಲಿಂಗಾಂಬುಧಿ ಎಂಬ ಹೆಸರು ಹೇಗೆ ಬಂತು ಎಂದು ಕೇಳಿದರೆ ಇದಕ್ಕೆ ಉತ್ತರ ಅಂದಿನ ಮಹಾರಾಣಿಯಾಗಿದ್ದ ಲಿಂಗಾಜಮ್ಮಣ್ಣಿಯವರು. ನಿರ್ಮಾಣ ಮಾಡಿದ ಕೆರೆಗೆ ಅವರ ಹೆಸರನ್ನೇ ಇಡಲಾಯಿತು. ಈ ಕೆರೆಯ ಒಳಗೆ ಹೋದರೆ ಇಂದಿಗೂ ಪುರಾತನ ವಿನ್ಯಾಸದ ಮಂಟಪಗಳನ್ನು ನೋಡಬಹುದು. ೧೯೮೦-೯೦ರ ದಶಕದಲ್ಲಿ ಈ ಕೆರೆ ನಗರದ ವ್ಯಾಪ್ತಿಯಿಂದ ಬಹಳವೇ ದೂರವಿತ್ತು. ಈ ಕೆರೆಯ ಬಳಿಯೇ ಲಿಂಗಾಂಬುಧಿ ಪಾಳ್ಯ ಎಂಬ ಹಳ್ಳಿಯೂ ಜನಿಸಿತು. ಇಲ್ಲಿನ ಜನರು ದೇವಸ್ಥಾನದ ಬಳಕೆಗೆ, ದಿನಬಳಕೆಗೆ, ಸುತ್ತಮುತ್ತಲಿನ ಜಮೀನಿನ ನೀರಾವರಿಗೆ, ಕೆಲವೊಮ್ಮೆ ಮೀನುಗಾರಿಕೆಗೆ ಈ ಕೆರೆಯನ್ನು ಬಳಸಿಕೊಳ್ಳುತ್ತಿದ್ದರು. ಆಗೆಲ್ಲಾ ಅಲ್ಲಿನ ಜನರಿಗೆ ಮಾತ್ರ ಈ ಕೆರೆ ಪರಿಚಿತ. ಆದರೆ ಈಗ ನಗರ ಬೆಳೆದಿರುವ ಕಾರಣ ಈ ಕೆರೆಯೂ ನಗರದ ಭಾಗವೇ.

ಸುಮಾರು ೨೬೦-೨೯೦ ಎಕರೆ ವಿಸ್ತೀರ್ಣ ಇರುವ ಈ ಕೆರೆ ೨೦೦೧ರಿಂದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಇಲ್ಲಿರುವ ಅಮೂಲ್ಯ ಸಸ್ಯ ಹಾಗೂ ಜೈವಿಕ ಸಂಪತ್ತನ್ನು ಗುರುತಿಸಿ ಅದನ್ನು ಸೂಕ್ತವಾಗಿ ನಿರ್ವ ಹಣೆ ಮಾಡಲು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈಗಲೂ ಚಳಿಗಾಲದಲ್ಲಿ ಇಲ್ಲಿ ನೂರಾರು ಜಾತಿಯ ವಿದೇಶಿ ಹಕ್ಕಿಗಳನ್ನು ನೋಡಬಹುದು. ಮಾತ್ರವಲ್ಲದೆ ಮಾಮೂಲಿ ದಿನಗಳಲ್ಲಿಯೂ ಅತ್ಯಂತ ಅಪರೂಪದ ಹಕ್ಕಿಗಳು ಕಾಣಸಿಗುವ ಸ್ಥಳ ಲಿಂಗಾಂಬುಧಿ ಕೆರೆ. ಸ್ಪಾಟ್ ಬಿಲ್ಡ್ ಪೆಲಿಕನ್ಸ್, ಸ್ಯಾಂಡ್‌ಪೈಪರ್ಸ್, ಈಗಲ್ಸ್, ಹಾರ್ನ್ ಬಿಲ್ಸ್, ಕೈಟ್ಸ್ ಸೇರಿದಂತೆ ಇನ್ನೂ ಹಲವಾರು ರೀತಿಯ ಹಕ್ಕಿಗಳನ್ನು ಇಲ್ಲಿ ನೋಡಬಹುದು. ಪಕ್ಷಿಸಂಕುಲದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವವರು, ಪಕ್ಷಿ ಛಾಯಾಗ್ರಾಹಕರು ಕ್ಯಾಮೆರಾ ಹಿಡಿದು ಇಲ್ಲಿಗೆ ಬಂದುಬಿಟ್ಟರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಅರಣ್ಯ ಇಲಾಖೆ ವಾಯು ವಿಹಾರ ಮಾಡುವವರಿಗೆ ಅನುಕೂಲ ಆಗಲೆಂದು ಕೆರೆ ಪಕ್ಕದ ಜಾಗದಲ್ಲಿ ವಾಕಿಂಗ್‌ಗೂ ಸ್ಥಳಾವಕಾಶ ಮಾಡಿದೆ. ನಡೆದುಹೋಗುವ ದಾರಿಯಲ್ಲಿ ಕಲ್ಲಿನ ಬೆಂಚ್‌ಗಳು, ವಿವಿಧ ಹಕ್ಕಿಗಳು ಹಾಗೂ ಸಸ್ಯಗಳ ಬಗೆಗಿನ ಮಾಹಿತಿ ಫಲಕಗಳು, ನವಗ್ರಹ ಉದ್ಯಾನದಂತಹ ಅಪರೂಪದ ಪರಿಕಲ್ಪನೆಯ ಉದ್ಯಾನಗಳು, ಕುಳಿತು ಸಮಯ ಕಳೆಯಲು ಹೆಂಚಿನ ಮಂಟಪ, ಓಪನ್ ಜಿಮ್ ಸೇರಿದಂತೆ ಎಲ್ಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಿಗಳಿಗೆ ಮುಕ್ತ ಅವಕಾಶ ಇರುತ್ತದೆ.

ಇಷ್ಟು ಮಾತ್ರವಲ್ಲದೆ ಇದೇ ಜಾಗದಲ್ಲಿ ಮೈಸೂರಿನ ಮೊದಲ ಬೊಟಾನಿಕಲ್ ಗಾರ್ಡನ್ ಸಹ ಇದ್ದು, ಕೆಲ ವರ್ಷಗಳ ಹಿಂದಷ್ಟೇ ಇದು ಉದ್ಘಾಟನೆಯಾಗಿದೆ. ಇದರ ಹೆಸರು ಲಿಂಗಾಂಬುಧಿ ಬೊಟಾನಿಕಲ್ ಗಾರ್ಡನ್. ಇಲ್ಲಿ ರೋಸ್ ಗಾರ್ಡನ್, ಔಷಧಿಯ ಸಸ್ಯಗಳ ಗಾರ್ಡನ್, ಪಾಮ್ ಗಾರ್ಡನ್ ಸೇರಿದಂತೆ ೩೦೦-೩೫೦ರಷ್ಟು ವಿವಿಧ ರೀತಿಯ ಸಸ್ಯಸಂಕುಲವನ್ನು ಬೆಳೆದು ಸಂರಕ್ಷಿಸಲಾಗಿದೆ. ಇವೆಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿರುವ ಹೂವು, ಹಣ್ಣಿನ ಗಿಡಗಳ ಕಾರಣ ಇಲ್ಲಿ ವಿವಿಧ ರೀತಿಯ ವರ್ಣರಂಜಿತ ಚಿಟ್ಟೆಗಳನ್ನೂ ನೋಡಬಹುದು.

ಇಲ್ಲೇ ಬಟರ್- ಗಾರ್ಡನ್ ಕೂಡ ಇದೆ. ಇಷ್ಟೆಲ್ಲಾ ಇರುವ ಈ ಲಿಂಗಾಂಬುಧಿ ಕೆರೆಗೆ ಹೊರಗಿನ ಪ್ರವಾಸಿಗರು ಬರುವುದು ಕಡಿಮೆ. ಆದರೆ ಸ್ಥಳೀಯರಿಗಂತೂ ಇದು ಅಚ್ಚುಮೆಚ್ಚಿನ ಜಾಗ. ಎರಡು ದಶಕಗಳ ನಂತರವೂ ಈ ಕೆರೆ ಇಷ್ಟು ಪ್ರಸ್ತುತವಾಗಿದೆ, ಇಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ, ನಗರದ ಮಧ್ಯೆ ಆಮ್ಲಜನಕದ ಬಾಂಧವನಂತೆ ವಿರಾಜಮಾನವಾಗಿದೆ ಎಂಬುದು ಮೈಸೂರಿನ ಇತಿಹಾಸದಲ್ಲಿ ಒಂದು ಮೈಲಿಗಲ್ಲೇ ಸರಿ. ಅರಣ್ಯ ಇಲಾಖೆಯಿಂದ ಈ ಕೆರೆ ಹಾಗೂ ಉದ್ಯಾನದಲ್ಲಿ ಇನ್ನೊಂದಷ್ಟು ಸುಸಜ್ಜಿತ ಸೌಂದರ್ಯೀಕರಣ ಕೆಲಸಗಳು ನಡೆದರೆ ಈ ಜಾಗ ಇನ್ನಷ್ಟು ಚೆನ್ನ!

” ಪ್ರಕೃತಿಪ್ರಿಯರಿಗೆ, ಪಕ್ಷಿವೀಕ್ಷಕರಿಗೆ, ವಾಕಿಂಗ್ ಮಾಡಲಿಚ್ಛಿಸುವವರಿಗೆ ಮೈಸೂರಿನ ಲಿಂಗಾಂಬುಧಿ ಕೆರೆ ಅಚ್ಚುಮೆಚ್ಚು. ಇದು ಮೈಸೂರಿನ ಅತಿದೊಡ್ಡ ಹಾಗೂ ಅತಿ ಪುರಾತನ ಕೆರೆಯೂ ಹೌದು.”

Tags:
error: Content is protected !!