Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ ಆಡಳಿತ ವೈಫಲ್ಯಗಳ ಕುರಿತು ಸಾರ್ವಜನಿಕ ಚರ್ಚೆಗಳು ಕೆಲವೇ ದಿನಗಳಿಗೆ ಸೀಮಿತವಾಗುತ್ತವೆ. ಸಾಮಾಜಿಕ ಮಾಧ್ಯಮ ಗಳಲ್ಲಿ ಆರಂಭವಾಗುವ ಚರ್ಚೆಗಳು ಶೀಘ್ರದಲ್ಲೇ ಬೇರೆ ವಿಷಯಗಳತ್ತ ತಿರುಗಿಬಿಡುತ್ತವೆ. ಇದು ಸಹಜ ಮರೆವೆಯೇ, ಅಥವಾ ಉದ್ದೇಶಿತ ಮೌನವೇ ಎಂಬ ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ.

ಯುವಜನತೆಗೆ ಉದ್ಯೋಗ ಒದಗಿಸುವ ವಿಷಯದಲ್ಲಿ ಸರ್ಕಾರದ ಭರವಸೆಗಳು ಚುನಾವಣಾ ಭಾಷಣಗಳ ಮಟ್ಟದಲ್ಲೇ ಉಳಿದಿವೆ. ಶಿಕ್ಷಣ ಪೂರ್ಣಗೊಳಿಸಿದ ನಂತರ ಅರ್ಹತೆಯಿದ್ದರೂ ಯುವಕರು ಉದ್ಯೋಗವಿಲ್ಲದೆ ಅಲೆ ದಾಡುತ್ತಿರುವುದು ಕಟುವಾದ ವಾಸ್ತವ. ಕೇವಲ ಭರವಸೆಗಳಲ್ಲ, ಕಾನೂನಿನಲ್ಲೇ ಯುವ ಜನತೆಗೆ ಉದ್ಯೋಗ ಒದಗಿಸುವ ಸ್ಪಷ್ಟ ಯೋಜನೆ ಇರಬೇಕಲ್ಲವೇ?

ಯುವಕರಲ್ಲಿ ಕೌಶಲವಿಲ್ಲ ಎಂಬ ಸಮಸ್ಯೆಗೆ ಕಾರಣ ಕೌಶಲಾಭಿವೃದ್ಧಿಗೆ ಅಗತ್ಯವಿರುವ ಸ್ಪಷ್ಟ ನೀತಿ, ಹೂಡಿಕೆ ಮತ್ತು ಮಾರ್ಗದರ್ಶನದ ಕೊರತೆ. ಓದಿದವರು ನಿರುದ್ಯೋಗಿಗಳಾಗುತ್ತಿರುವಾಗ, ಓದನ್ನು ಬಿಟ್ಟು ಡಿಜಿಟಲ್ ಕಂಟೆಂಟ್ ಸೃಷ್ಟಿ ಅಥವಾ ವ್ಯಾಪಾರ ದಲ್ಲಿ ತೊಡಗಿದವರು ಯಶಸ್ಸು ಕಾಣುತ್ತಿರುವುದು ವ್ಯಕ್ತಿಗತ ಆಯ್ಕೆಯಲ್ಲ; ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ. ಕಂಟೆಂಟ್ ಸೃಷ್ಟಿಯೂ ಒಂದು ಕೌಶಲವೇ; ಆದರೆ ಅದಕ್ಕೂ ಸೂಕ್ತ ತರಬೇತಿ ಮತ್ತುನಿಯಂತ್ರಣ ಅಗತ್ಯ. ನನ್ನನ್ನು ಇನ್ನೂ ಕಾಡುವ ಪ್ರಶ್ನೆಗಳು ವೈಯಕ್ತಿಕವಾಗಿಯೂ ಸಮಾಜಮುಖಿಯಾಗಿಯೂ ಇವೆ. ಒಬ್ಬ ಮಹಿಳೆಯಾಗಿರುವ ಕಾರಣ ಇಂದಿಗೂ ಕತ್ತಲಾಗುವ ಮೊದಲು ಮನೆ ತಲುಪಬೇಕೆಂಬ ಅಲಿಖಿತ ನಿಯಮ ಏಕೆ? ಸುರಕ್ಷತೆ ಎನ್ನುವುದು ಮಹಿಳೆಯ ಹೊಣೆಗಾರಿಕೆಯೇ? ಅದು ರಾಜ್ಯದ ಜವಾಬ್ದಾರಿಯಲ್ಲವೇ?

ಅಲ್ಪಸಂಖ್ಯಾತಳಾಗಿರುವ ಕಾರಣ ಎಷ್ಟು ದಿನಗಳವರೆಗೆ ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತದೆ? ಯಾವ ತಪ್ಪಿಗೂ ನಾವು ‘ಪಾಕಿಸ್ತಾನದ ಬೆಂಬಲಿಗರು’ ಎಂಬ ಆರೋಪವನ್ನು ಹೊರುವ ಪರಿಸ್ಥಿತಿ ಯಾವ ಸಂವಿಧಾನಾತ್ಮಕ ಮೌಲ್ಯಕ್ಕೆ ಸೇರಿದೆ? ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನಾತ್ಮಕ ಹಾಗೂ ಕಾನೂನು ರಕ್ಷಣೆಗಳಿದ್ದಂತೆ, ಮುಸ್ಲಿಮರ ಸಾಮಾಜಿಕ, ಮಾನಸಿಕ ಮತ್ತು ನಾಗರಿಕ ಭದ್ರತೆಯನ್ನು ಖಚಿತಪಡಿಸುವ ಸ್ಪಷ್ಟ ಕಾನೂನುಗಳು ಏಕೆ ಕಾಣುತ್ತಿಲ್ಲ?

ಡಾ. ಶಾಫಿಯಾ ಫರ್ಹಿನ್, ಅನುವಾದಕಿ ಮತ್ತು ಹಿಂದಿ ಉಪನ್ಯಾಸಕಿ, ಮಂಡ್ಯ

 

 

Tags:
error: Content is protected !!