Mysore
21
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಇಸಬೆಲ್ಲಾ ರಾಣಿಯ ಸ್ಪೇನಿನಲ್ಲಿ ಓಡಾಡಿ ಬಂದೆವು

ಸ್ಪೇನಿನಲ್ಲಿ ನನ್ನನ್ನು ಬಹಳಮಟ್ಟಿಗೆ ಕಲಕಿದ ವಿಷಯ ಎಂದರೆ ತೀರಾ ಎಳೆವಯಸ್ಸಿನ ಹುಡುಗ ಹುಡುಗಿಯರು ಮಕ್ಕಳನ್ನು ಹೊತ್ತು ಓಡಾಡುತ್ತಿದ್ದದ್ದು. ಕಾಲೇಜಿಗೆ ಹೋಗಬೇಕಾದ ಮಕ್ಕಳು ಹೀಗೆ ಮಕ್ಕಳಿಗೆ ತಂದೆ-ತಾಯಿ ಆಗಿ, ಹಾಲಿನ, ನ್ಯಾಪ್ಕಿನ್‌ ಹಿಡಿದು ಓಡಾಡುವುದನ್ನು ನೋಡಿದರೆ ಸಂಕಟವಾಗುತ್ತಿತ್ತು.

ಸಂಧ್ಯಾ ರಾಣಿ
ಮೊದಲ ಸಲ ನಾನು ಸ್ಪೇನ್ ಬಗ್ಗೆ ಓದಿದ್ದು ಒಂದು ಇಂಗ್ಲಿಷ್ ಕಾದಂಬರಿಯಲ್ಲಿ. ವರ್ಷಾನುಗಟ್ಟಲೇ ಮೌನವನ್ನೇ ಹಾಸಿಹೊದ್ದು, ಹೊರಗಿನ ಪ್ರಪಂಚದೊಡನೆ ಸಂಪರ್ಕವನ್ನೇ ಕಡಿದುಕೊಂಡು, ಕೋಟೆಯಂತಹ ಕಾನ್ವೆಂಟ್, ಮುಚ್ಚಿದ ಗೋಡೆಗಳ ನಡುವಲ್ಲಿ ಕ್ರಿಸ್ತನ ಆರಾಧನೆಯಲ್ಲೇ ತಮ್ಮ ಇಡೀ ಜೀವನ ಕಳೆಯುವ ಕ್ರೈಸ್ತ ಸನ್ಯಾಸಿಯರು. ಸ್ಪೇನಿನ ಅಂತರ್ಯುದ್ಧದ ನಡುವೆ ಚೆಗುವೆರಾನಂತಹ ಒಬ್ಬ ಜನನಾಯಕ, ಭಿನ್ನಭಿನ್ನ ಭೌಗೋಳಿಕ, ಸಾಂಸ್ಕ ತಿಕ, ಭಾಷಿಕ ಒಕ್ಕೂಟವಾದ ಅಲ್ಲಿನ ಜನಸಮೂಹ, ಅದನ್ನು ಕಡೆಗಣಿಸುವ ಒಬ್ಬ ಸರ್ವಾಧಿಕಾರಿ, ಅಲ್ಲಿನ ಬುಲ್-ಫೈಟ್. . . ಹೀಗೆ ಮನಮೋಹಕ ಕಾಲ್ಪನಿಕ ಲೋಕ ಅದು. ನಂತರ ನೋಡಿದ್ದು ‘ದಿಲ್ ಧಡಕ್ ನೆ ದೋ’ ಎನ್ನುವ ಸಿನಿಮಾ. ಅಲ್ಲಿ ಕಂಡದ್ದು ದೃಶ್ಯಸೊಗಸು. ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನೋಡಿದ್ದ ಸ್ಪ್ಯಾನಿಷ್ ಭಾಷೆಯ ಚಿತ್ರಗಳು ಸಹ ಆ ದೇಶದ ಬಗ್ಗೆ ಕುತೂಹಲ ಹುಟ್ಟಿಸಿದ್ದವು. ಇನ್ನು ‘ಮನಿ ಹೈಸ್ಟ್’ ಎನ್ನುವ ವೆಬ್-ಸರಣಿಯ ಬಗ್ಗೆಯಂತೂ ಹೇಳುವುದೇ ಬೇಡ. ಹಾಗಾಗಿ ಈ ಸಲ ಸ್ಪೇನಿಗೇ ಹೋಗುವುದು ಎಂದು ನಾನೂ ಮತ್ತು ಗೆಳತಿ ಪ್ರೀತಿ ನಾಗರಾಜ್ ಹೊರಟಿದ್ದೆವು.

ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿರುವ ಸ್ಪೇನ್, ಅದರ ಮೂಲಕವೇ ಜಗತ್ತಿಗೆ ಸೇತುವೆಯನ್ನು ನಿರ್ಮಿಸಿಕೊಂಡಿತು. ಕಾಲದಿಂದ ಕಾಲಕ್ಕೆ ರೋಮನ್, ಮುಸ್ಲಿಂ ದೊರೆಗಳ ಆಡಳಿತಕ್ಕೆ ಒಳಗಾದ ಇಲ್ಲಿ ಆ ಎಲ್ಲ ಪ್ರಭಾವಗಳೂ ಇಂದಿಗೂ ದಟ್ಟವಾಗಿವೆ. ರೋಮನ್ ಆಡಳಿತದಲ್ಲಿ ಈ ದೇಶಕ್ಕೆ ‘ಹಿಸ್ಪಾನಿಯಾ’ ಎನ್ನುವ ಹೆಸರಾಯಿತು. ಇಂದು ಅದು ತನ್ನನ್ನು ತಾನು ‘ಎಸ್ಪೋನಿಯಾ’ ಎಂದು ಕರೆದುಕೊಳ್ಳುತ್ತದೆ. ಸ್ಪ್ಯಾನಿಷ್ ಭಾಷೆಯ ಮೇಲೆ ಜರ್ಮನ್ ಮತ್ತು ಅರೇಬಿಕ್ ಎರಡರ ಪ್ರಭಾವವೂ ದಟ್ಟವಾಗಿದೆ. ನಮ್ಮಲ್ಲಿ ಉರ್ದು ಮತ್ತು ತೆಲುಗು ಹೇಗೋ ಹಾಗೆ. ಸ್ಪ್ಯಾನಿಷ್ ಭಾಷೆಗೂ ಸಂಗೀತದ ಲಾಲಿತ್ಯ ಇದೆ. ಜಗತ್ತಿನ ಮೊದಲ ಕಾದಂಬರಿ ಎಂದು ಹೇಳಲಾಗುವ ‘ಡಾನ್ ಕ್ವಿಕ್ಸೋಟ್’ ಹುಟ್ಟಿದ್ದು ಇಲ್ಲಿ. ಚಿತ್ರಕಾರ ಪಾಬ್ಲೋ ಪಿಕಾಸೋ, ಸಾಲ್ವಡಾರ್ ಡಾಲಿ, ಟೆನಿಸ್ ಮಾಂತ್ರಿಕ ರಫೇಲ್ ನಡಾಲ್ ಇಲ್ಲಿಯವರು. . .

ಮಾಡ್ರಿಡ್‌ನಿಂದ ಶುರುವಾದ ನಮ್ಮ ಪ್ರವಾಸ ಮುಗಿದದ್ದು ಬಾರ್ಸಿಲೋನಾದಲ್ಲಿ. ಅಲ್ಲಿ ನಾವು ನೋಡಿದ ಕೆಲವು ಊರುಗಳ ವಿಶೇಷಗಳನ್ನು ಇಲ್ಲಿ ಹೇಳುತ್ತೇನೆ: ಜಗತ್ತಿನ ಇತಿಹಾಸದಲ್ಲಿ ಸ್ಪೇನ್ ಮುಖ್ಯವಾಗುವುದು ತನ್ನ ವಸಾಹತುಶಾಹಿಯಿಂದಾಗಿ, ಅದು ಒಂದು ಕಾಲದಲ್ಲಿ ಇಡೀ ಜಗತ್ತಿನ ಭೌಗೋಳಿಕ ಇತಿಹಾಸವನ್ನು ಬದಲಿಸಿದ್ದಷ್ಟೇ ಅಲ್ಲ, ಅತ್ಯಂತ ಶಕ್ತಿಶಾಲಿ ದೇಶವಾಗಿಯೂ ಹೊರಹೊಮ್ಮಿತ್ತು ಎನ್ನುವುದಕ್ಕೆ. ಅದಕ್ಕೆ ಕಾರಣವಾಗಿದ್ದು ಕೊಲಂಬಸ್ ಆದರೂ, ಅದನ್ನು ಆಗುಮಾಡಿಸಿದ್ದು ಸ್ಪೇನಿನ ರಾಣಿ ಇಸಬೆಲ್ಲಾ. ಅತ್ಯಂತ ಬುದ್ಧಿವಂತೆ, ಧೈರ್ಯಶಾಲಿ ಹುಡುಗಿಗೆ ೬ ವರ್ಷಗಳಾಗಿರುವಾಗ ಫರ್ಡಿನಾಂಡ್ ಜೊತೆಗೆ ಮದುವೆ ಮಾಡಲಾಯಿತು. ಮದುವೆ ಆದ ನಂತರ ರಾಣಿ ತನ್ನ ರಾಜ್ಯವನ್ನು ಗಂಡನಿಗೊಪ್ಪಿಸಿ ಅಂತಃಪುರ ಸೇರಲಿಲ್ಲ. ಆಡಳಿತ ಸೂತ್ರವನ್ನು ತಾನೇ ಹಿಡಿದಳು. ಅದೇ ಸಮಯಕ್ಕೆ ಇಟಲಿ ಮೂಲದ ಕೊಲಂಬಸ್ ಭಾರತಕ್ಕೆ ಜಲಮಾರ್ಗ ಕಂಡುಹಿಡಿಯುವೆ ಧನಸಹಾಯ ಮಾಡಿ ಎಂದು ಕೇಳಲು ಬಂದ. ಫರ್ಡಿನಾಂಡ್ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಟಾಲೆಮಿ ನಕ್ಷೆಗಳನ್ನು ಅಭ್ಯಾಸ ಮಾಡಿದ್ದ ಇಸಬೆಲ್ಲಾಳಿಗೆ ಅದು ಸಾಧ್ಯ ಎನ್ನುವ ವಿಶ್ವಾಸವಿತ್ತು. ಹಾಗಾಗಿಯೇ ವಿರೋಧದ ನಡುವೆಯೂ ಕೊಲಂಬಸ್‌ಗೆ ಧನಸಹಾಯ ಮಾಡುತ್ತಾಳೆ. ಹಾಗೆ ಹೊರಟ ಕೊಲಂಬಸ್ ಇಳಿದದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ. ಮೊದಲಿಗೆ ನಿರಾಸೆ ಆಗಿದ್ದು ಹೌದಾದರೂ, ದಕ್ಷಿಣ ಅಮೆರಿಕದ ಬೆಳ್ಳಿ, ಬಂಗಾರ, ಸಿರಿ, ಸಂಪತ್ತು ಎಲ್ಲವೂ ಸ್ಪೇನಿಗೆ ಹರಿದುಬಂದವು. ಬಾರ್ಸಿಲೋನಾದಲ್ಲಿ ಎತ್ತರದಲ್ಲಿ ನಿರ್ಮಿಸಿರುವ ಕೊಲಂಬಸ್ ವಿಗ್ರಹ ಕೈಚಾಚಿ ಕಡಲನ್ನು ತೋರಿಸುತ್ತಿದೆ. ಅವನ ಸಮಾಧಿ ಸೆವಿಯ್ಯಾ ಎನ್ನುವ ಊರಿನ ಕೆಥಡ್ರಿಲ್‌ನಲ್ಲಿದೆ. ಇದು ಅತ್ಯಂತ ಶ್ರೀಮಂತ ಕೆಥಿಡ್ರಿಲ್. ಇಲ್ಲಿನ ಎಲ್ಲಾ ಬೆಳ್ಳಿ ಬಂದದ್ದು ಲ್ಯಾಟಿನ್ ಅಮೆರಿಕದಿಂದ ಎಂದು art history ಅಭ್ಯಾಸ ಮಾಡುತ್ತಿರುವ ನಮ್ಮ ಗೈಡ್ ಹೇಳಿದರು. ಈಗ ಇಲ್ಲಿ ಉಳಿದಿರುವುದು ಅರ್ಧದಷ್ಟು ಬೆಳ್ಳಿ ಮಾತ್ರ, ಉಳಿದರ್ಧವನ್ನು ನೆಪೋಲಿಯನ್ ಸ್ಪೇನಿನ ಮೇಲೆ ದಾಳಿ ಮಾಡಿದ ಸಮಯದಲ್ಲಿ ಬಳಸಿಕೊಳ್ಳಲಾಯಿತಂತೆ. ಮ್ಯಾಡ್ರಿಡ್‌ನ ಪೆಡ್ರೋ ಮ್ಯೂಸಿಯಂನಲ್ಲಿ ಇಸಬೆಲ್ಲಾಳ ಅಮೃತಶಿಲೆಯ ಸುಂದರ ವಿಗ್ರಹ ಇದೆ. ನೀನು ಕ್ರಾಂತಿಕಾರಿಯೋ ಅಥವಾ ಬಂಡುಕೋರನೋ ಎನ್ನುವುದು ಯಾರು ಇತಿಹಾಸ ಬರೆಯುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ ಎನ್ನುವ ಮಾತಿದೆ. ಕೊಲಂಬಸ್‌ನನ್ನು ಇಷ್ಟುದಿನ ನಾನು ನೋಡುತ್ತಿದ್ದದ್ದು ಅವನು ಪ್ರತಿನಿಧಿಸುತ್ತಿದ್ದ ಎಲ್ಲದರ ಪ್ರತಿರೂಪವಾಗಿ. ಸ್ಪೇನ್ ದೇಶದ ವಸಾಹತು ಆಗಿ ಲ್ಯಾಟಿನ್ ಅಮೆರಿಕ ಅನುಭವಿಸಿದ ಎಲ್ಲ ಶೋಷಣೆಯ ಆರಂಭದ ಬಿಂದುವಾಗಿ ಅವನು ಕಾಣುತ್ತಿದ್ದ. ಆದರೆ ಸ್ಪೇನಿಗೆ ಬಂದ ಮೇಲೆ, ಅದರಲ್ಲೂ ಸೆವಿಯ್ಯೆಗೆ ಬಂದ ಮೇಲೆ ಅಲ್ಲಿನ ಜನ ಅವನನ್ನು ಅದೆಂತಹ ಸಾಹಸಿಯಾಗಿ, ದೇಶದ ಇತಿಹಾಸದ ದಿಕ್ಕು ಬದಲಾಯಿಸಿದವನಾಗಿ ನೋಡುತ್ತಾರೆ ಎನ್ನುವುದು ತಿಳಿಯಿತು.

ಲ್ಯಾಟಿನ್ ಅಮೆರಿಕದಂತೆ ಸ್ಪೇನ್ ಸಹ ತನ್ನ ಲಯಬದ್ಧ ನೃತ್ಯ, ಮನಸೆಳೆಯುವ ಸಂಗೀತಕ್ಕೆ ಹೆಸರಾಗಿದೆ. ಅದಕ್ಕೆ ಸಾಕ್ಷಿ ಅಲ್ಲಿನ ಫ್ಲೆಮಿಂಕೋ ಶೋ, ಮೂಲತಃ ಅದು ಸ್ಥಳೀಯ ಜಿಪ್ಸಿಗಳ ನೃತ್ಯ. ಭಾಷೆ ಅರ್ಥವಾಗದಿದ್ದರೂ ಪ್ರದರ್ಶನದ ಜೋಶ್, ಭಾವುಕತೆ, ಸಂಗೀತ, ನೃತ್ಯ ಎಲ್ಲಕ್ಕೂ ಅನನ್ಯವಾದ ಜೀವಂತಿಕೆ ಇದೆ.

ತೊಲೆಡೋ ಏರು ತಗ್ಗುಗಳ ಈ ಕೋಟೆ ಊರು ಕ್ರಿಶ್ಚಿಯನ್, ಇಸ್ಲಾಮಿಕ್ ಮತ್ತು ಯಹೂದಿ ಸಂಸ್ಕತಿಗಳ ಸಂಗಮ ಸ್ಥಳ. ಆ ಹೆಜ್ಜೆ ಗುರುತುಗಳು ಇನ್ನೂ ಕಾಣಸಿಗುತ್ತವೆ. ಎಲ್ಲಕ್ಕಿಂತ ವಿಶೇಷ ಎಂದರೆ ಅಲ್ಲಿರುವ ನದಿ, ಸೇತುವೆ, ಚರ್ಚ್, ಚಿತ್ರ ಬರೆದಂತಹ ಮನೆಗಳು, ಸಣ್ಣಸಣ್ಣ ಓಣಿಗಳಲ್ಲಿನ ಮನೆಗಳು, ಆ ಓಣಿಗಳು ಸೇರುವ ಸ್ಥಳದಲ್ಲಿ ಮಾರುಕಟ್ಟೆಗಳು ಯಾವುದೋ ಕಾಲದ ನಾಗರಿಕತೆಗೆ ತಟ್ಟನೆ ಹೋದ ಅನುಭವವನ್ನು ಕೊಡುತ್ತದೆ. ಅಲ್ಲಿರುವ Jewish Quarters ರಕ್ಷಣೆಗೆ ಮುಸ್ಲಿಂ ದೊರೆಗಳು ಗೋಡೆ ಕಟ್ಟಿಸಿರುತ್ತಾರೆ! ಒಂದೊಮ್ಮೆ ಆ ಕಾಲವೂ ಇತ್ತು. . . Bull Fight ಅಥವಾ ಗೂಳಿ ಕಾಳಗ ಸ್ಪೇನ್‌ನ ಪ್ರಮುಖ ಕ್ರೀಡೆ. ನಮ್ಮಲ್ಲಿ ಜಲ್ಲಿಕಟ್ಟು ಇರುವ ಹಾಗೆ. ರೋಂದಾ ೩೫,೦೦೦ ಜನಸಂಖ್ಯೆಯ ಪುಟ್ಟ ಊರು. ಅಲ್ಲಿನ ಗೂಳಿಕಾಳಗದ ಅರೆನಾ ಅಥವಾ Bull Ring ಸಾಮರ್ಥ್ಯ ೬,೦೦೦ ಜನರದ್ದು! ಈ ಕಾಲಕ್ಕೆ ಒಂದು ಟಿಕೆಟ್ ಬೆಲೆ ೨೦೦ ಯೂರೋ! ಅದಕ್ಕೂ ಪೈಪೋಟಿ. ಕೆಂಪುಬಟ್ಟೆಯನ್ನು ಆಡಿಸುತ್ತಾ, ಆಡಿಸುತ್ತಾ, ಗೂಳಿಯನ್ನು ಉದ್ರೇಕಿಸಿ, ಓಡಿಸಿ, ಕೆರಳಿಸಿ, ದಣಿಸಿ ಕಡೆಗೆ ಕುತ್ತಿಗೆ ಬಳಿ ಚೂಪಾದ ಕತ್ತಿಯನ್ನು ಊರಿ ಕೊಲ್ಲುವವ ಮೆಟಡಾರ್. ಒಬ್ಬ ಮೆಟಡಾರ್ ಹೀಗೆ ೫,೬೦೦ ಗೂಳಿಗಳನ್ನು ಕೊಂದಿದ್ದಾನಂತೆ. ಮೆಟಡಾರ್‌ನ ವೇಷ ಭೂಷಣವಂತೂ ರಂಗುರಂಗು ವೈಭವೋಪೇತ! ತಮಾಷೆ ಎಂದರೆ ಮೆಟಡಾರ್ ಶೂ! ಅದು ಹೆಣ್ಣಿನ ಶೂನಂತೆ ನಯನಾಜೂಕಿನಿಂದ ಇರುತ್ತದೆ. ಅಂದಹಾಗೆ ಇತ್ತೀಚೆಗೆ ಹೆಣ್ಣುಮಕ್ಕಳೂ ಈ ಕ್ರೀಡೆಯಲ್ಲಿ ಭಾಗವಹಿಸುತ್ತಾರಂತೆ.

ಅಲ್ಲಿ ಮಿಜಾಸ್ ಎನ್ನುವ ಒಂದು ಬಿಳಿಬಿಳಿ ಮಂಜಿನಂತಹ ಊರು. ಎಲ್ಲ ಮನೆಗಳಿಗೂ ಬಿಳಿಯ ಬಣ್ಣ. ಹೇಸರಗತ್ತೆಗಳನ್ನು ಹೂಡಿರುವ ಎಳೆಯುವ ಬಂಡಿಯಲ್ಲಿ ಸವಾರಿ ಹೋಗಿದ್ದು ಮರೆಯದ ನೆನಪು. ಅದಕ್ಕೂ ಮರೆಯದ ನೆನಪೆಂದರೆ ಅಲ್ಲಿ ಸಿಗುತ್ತಿದ್ದ ಚರ್ಮದ ಬ್ಯಾಗ್‌ಗಳು! ನಾನು ಬ್ಯಾಗ್ ಒಳಗೆ ದುಡ್ಡು ಹಾಕಿದ್ದಕ್ಕಿಂತಲೂ ಬ್ಯಾಗ್‌ಗಳ ಮೇಲೆ ದುಡ್ಡು ಹಾಕಿದ್ದೇ ಹೆಚ್ಚು! ಇದ್ದ ಸ್ವಲ್ಪ ಸಮಯದಲ್ಲಿ ಓಡಿ ಹೋಗಿ ಬ್ಯಾಗ್ ಕೊಂಡಿದ್ದು, ಹಾಗೆಯೇ ಗೂಗಲ್ ಮ್ಯಾಪ್ ಹಾಕಿಕೊಂಡು ಮ್ಯಾಡ್ರಿಡ್ ಗಲ್ಲಿಯಲ್ಲಿ ಹುಡುಕಿ ಬಿಸಿಬಿಸಿ ಚಾಕೊಲೇಟ್ ಮತ್ತು ಚುರೋಟ್ ತಿಂದದ್ದು, ಒಮ್ಮೆ ಮಧ್ಯಾಹ್ನ ಕರೆದುಕೊಂಡು ಹೋಗಿದ್ದ ದಾಲ್-ರೋಟಿ ಹೊಟೆಲ್ಲಿಗೆ ಮತ್ತೆ ರಾತ್ರಿಯೂ ಕರೆದುಕೊಂಡು ಹೋದಾಗ ನಾವು ಆರು ಜನ ಹೆಂಗಸರು, ‘ಆಗಲ್ಲ ಇದು, ನೀವು ಇಲ್ಲಿ ಊಟ ಮಾಡಿ, ನಾವು ಬೇರೆ ರೆಸ್ಟುರಾಂಟಿಗೆ ಹೋಗುತ್ತೇವೆ’ ಎಂದು ಎದ್ದು ಗುಂಪಿನವರೆಲ್ಲಾ ಅಚ್ಚರಿಯಿಂದ ನೋಡುವಂತೆ ಮಾಡಿದ್ದು, ಗೈಡ್ ನಮ್ಮನ್ನು ಊರು ಸುತ್ತಿಸುತ್ತಿದ್ದಾಗ ಅಲ್ಲೇ ರಸ್ತೆಯಲ್ಲಿ ಗಿಟಾರ್ ಹಿಡಿದು ನಿಂತಿದ್ದ ಅಜ್ಜ ಸ್ವಲ್ಪದೂರ ಹಾಡುತ್ತಾ ಜೊತೆಗೆ ಬಂದದ್ದು ಸಿಹಿಯಾದ ನೆನಪು. ಸಿಟ್ಟು ಬರಿಸುತ್ತಿದ್ದ ನೆನಪೆಂದರೆ ೭೦ ದಾಟಿದ್ದ ವೃದ್ಧರೊಬ್ಬರು ಗಂಡಸರು ಗೈಡ್‌ಗಳಾಗಿ ಬಂದಾಗ ದಾರಿಯಲ್ಲಿರುತ್ತಿದ್ದ ಬೆಕ್ಕುಗಳ ಫೋಟೋ ತೆಗೆಯುತ್ತಿದ್ದು, ಹೆಣ್ಣುಮಕ್ಕಳು ಬಂದಾಗ ಒಂದಿಷ್ಟೂ ಎಗ್ಗಿಲ್ಲದೆ ‘ಯು ಆರ್ ಮೈ ಸಿನೋರಿಟಾ’ ಎಂದು ಅವರಿಗೆ ಕಸಿವಿಸಿ ಆಗುವಷ್ಟು ಹತ್ತಿರ ಹೋಗುತ್ತಿದ್ದದ್ದು. ಒಂದು ದಿನ ಅವರು ಹಾಗೆ ಮಾಡಿದ ಕೂಡಲೇ ನಾವು ಒಂದಿಬ್ಬರು ಅವರ ಪತ್ನಿಯ ಮುಖವನ್ನು ನೋಡಲು ಪ್ರಾರಂಭಿಸಿದೆವು. ಅಂದು ಸರಿಯಾಗಿ ರಿಪೇರಿ ಆಗಿರಬೇಕು, ಮರುದಿನದಿಂದ ಅವರು ನೆಟ್ಟಗಾಗಿದ್ದರು! ಎಲ್ಲಕ್ಕಿಂತ ನಗು ತರಿಸಿದ್ದು ಎಂದರೆ ಗುಜರಾತಿ ಬೆಹನ್ ಒಬ್ಬರು, ‘ಥೂ ಪ್ರತಿ ದಿನ ಬರೀ ಚರ್ಚುಗಳನ್ನೇ ತೋರಿಸುತ್ತಾರಪ್ಪ. ಹಿಂದೂಗಳು ಬಂದಿರುತ್ತೇವೆ ಅನ್ನುವುದು ಗೊತ್ತಾಗಬಾರದೆ? ’ ಅಂದಿದ್ದು. ನನ್ನ ಪ್ರಯತ್ನವನ್ನೂ ಮೀರಿ ಘೊಳ್ ಎಂದು ನಕ್ಕುಬಿಟ್ಟೆ. ಆಮೇಲಿಂದ ಅವರು ನನ್ನನ್ನು ಮಾತನಾಡಿಸುವುದೇ ಬಿಟ್ಟರು ಪಾಪ!

ಇನ್ನು ಅಲ್ಲಿ ಓಡಾಡುವಾಗ ನನ್ನನ್ನು ಬಹಳ ಮಟ್ಟಿಗೆ ಕಲಕಿದ ವಿಷಯ ಎಂದರೆ ತೀರಾ ಎಳೆವಯಸ್ಸಿನ ಹುಡುಗ ಹುಡುಗಿಯರು ಮಕ್ಕಳನ್ನು ಹೊತ್ತು ಓಡಾಡುತ್ತಿದ್ದದ್ದು. ಕಾಲೇಜಿಗೆ ಹೋಗಬೇಕಾದ ಮಕ್ಕಳು ಹೀಗೆ ಮಕ್ಕಳಿಗೆ ತಂದೆ-ತಾಯಿ ಆಗಿ, ಹಾಲಿನ ಬಾಟಲ್, ನ್ಯಾಪ್ಕಿನ್ ಹಿಡಿದು ಓಡಾಡುವುದನ್ನು ನೋಡಿದರೆ ಸಂಕಟವಾಗುತ್ತಿತ್ತು. .

Tags: