ಕುಸುಮಾ ಆಯರಹಳ್ಳಿ
ಅಯ್ಯ ನಿನ್ ನಾಸ್ನಾಗೌಳೆ. ಅದ್ಯಾಕ ಉಚ್ಮುದವಿ ಇಂಗ್ ಅಟ್ಟೀಲಿರಾ ನೀರ್ನೆಲ್ಲ ಆಚಗ್ ಸುರೀತಾ ಇದ್ದೈ? ಮಂಜುಳಕ್ಕ ಮಗಳು ಸೌಮ್ಯಳಿಗೆ ಒಂದೇ ಸಮ ಉಗೀತಿದ್ರು. ಆ ಸೌಮ್ಯಳೋ ತನ್ನ ಹೆಸರಿನ ಅರ್ಥವನ್ನು ಸಂಪೂರ್ಣ ಮರೆತವಳಾಗಿ ರೌದ್ರಾವತಾರವನೇ ತಾಳಿ ಬೇಗ ಬೇಗನೇ ನೀರು ಹೊತ್ತು ಹಾಕ್ತಿದ್ದಳು. “ನೀರ್ಗೇನ್ ಕಾಸ್ ಕೊಡಬೇಕಾ? ಬುಟ್ಟಾಕು ಮಂಜುಳಾ ಏನಾರೂ ಮಾಡ್ಕಬುಡು” ಅಂದ್ರು ಗೌರಮ್ಮ.
ಮಂಜುಳಕ್ಕನ ಚಿಂತೆ ಏನಪಾಂದ್ರೆ ಹಬ್ಬಹರಿಜಿನದ ಟೈಮಲ್ಲೋ, ಎಲ್ಲೋ ಮದುವೆಗೋ ಯಾತಕ್ಕೋ ಹೋಗಿ ನೀರು ತುಂಬಿಸಿಟ್ಟುಕೊಳ್ಳಲಾಗದ ಟೈಮಲ್ಲೋ ದಿನಾ ಬರೋ ನಲ್ಲಿ ನೀರು ಕೈ ಕೊಡೋದು ಒಂತರಾ ಪದ್ಧತಿಯಂತೆ ನಡ್ಕೊಂಡು ಬಂದಿರೋದು. ಈ ಸೌಮ್ಯ ಇರಾಬರಾ ನೀರೆಲ್ಲ ತಗದು ಆಚಗ್ ಸುರದೂ… ಆಮೇಲ್ ನೀರ್ ಬರದೇ ಓದ್ರೇನ್ಮಾಡದು ಅಂತ ಮಂಜುಳಕ್ಕನ್ ಚಿಂತೆ. ಅದ್ ಕೇಳಿ, ಈ ಅನುಭವ ಊರ ಎಲ್ರದೂ ಆಗಿದ್ದರಿಂದಲೋ ಏನೋ ಗೌರಕ್ಕ “ಒಸಿನ್ಯಾರಾ ಮಡಿಕೋ ಕೂಸು. ಎಲ್ಲನೂ ಸುರಿಬ್ಯಾಡ. ನಾಳಗ್ ನೀರ್ ಬುಡದೇ ಓದ್ರ ಬಾವಿಲ್ ತರಬೇಕಾಯ್ತದ” ಅಂದ್ರು.
“ಮೌ… ಗ್ರಾಣ ಗ್ರಾಣ ಅಂತ್ ಯೋಳ್ತಾ ಇಲ್ವ ಟಿವಿಲಿ! ಈ ನೀರ್ನೆಲ್ಲ ಮಡಿಕಬಾರ್ದು. ನೀವೂ ಅಷ್ಟೆ. ಅಡಗ ಪಡಗ ಮಾಡಬೇಡಿ. ಗ್ರಾಣ ಬುಟ್ ಮೇಲ ಮೈ ತೊಳ್ಕಂಡು, ದೇವರಗ್ ದೀಪ ಹಸ್ ಮಡಗ್ಬುಟ್ಟು ಆಮೇಲ್ ಹೊಟ್ಟಗ್ ತಿನ್ನಿ” ಅಂದ್ಲು.
“ಎಷ್ಟೊತ್ಗಂಟ ಅಂಗಿರಬೇಕು?” ಗೌರಕ್ಕ ಕೇಳದ್ರು. “ಗ್ರಾಣ ಬುಡಾಗಂಟ. ಅಂದ್ರ ಸಂದಗಂಟ” ಅಂದ್ಲು ಸೌಮ್ಯ. ಗೌರಕ್ಕ “ಅವ್ವವ್ವೈ. ಸಂದ್ಗಂಟ ಅಸ್ಕಂಡಿರಕಾದ್ದವ್ವ? ಐ ನಮ್ ಕಾಲ್ದಲ್ಲಿವೆಲ್ಲ ಇರ್ನಿಲ್ಲ. ನಾವೇನೂ ಕಾಣೋ. ಸುಮ್ಮನ ಉಣ್ಕ ತಿನ್ಕ ಇರ್ತಿದ್ದೋ. ಈ ಟಿಬಿ ಬಂದ್ಬುಟ್ಟು, ಹೂಸ್ದದ್ಕು ಕೆಮ್ದದ್ಕೂ ಸಾಸ್ತ್ರ ಯೋಳ್ತರಲ್ಲಾ? ಅವರೇಳಂಗ್ ಮಾಡಕಾದ್ದ ಯೋಳು ಮಂತ?” ಅಂದರು.
ಸೌಮ್ಯಳಿಗೆ ಕೋಪವೇ ಬಂದು “ಅಯ್ಯಾ ನಿಮ್ನ್ಯಾರ್ ಮಾಡಿ ಅಂದೌರು? ಅವೆಲ್ಲ ಮಾಡ್ದೆ ಮಾಡ್ದೆ ನೀವೆಲ್ಲ ಜೀವಮಾನವೆಲ್ಲಾ ಕಷ್ಟಪಟ್ಟದ್ದು. ಅವ್ರೇನ್ ನಿಮಗ್ ಕೆಟ್ಟದಾಗ್ಲಿ ಅಂತ ಯೋಳಿರಾ? ನಾಕ್ ಜನಕ್ ಒಳ್ಳೇದಾಗ್ಲಿ ಅಂತ ತಾನೇ ಯೋಳದು? ಕ್ಯೋಳದ್ರ ಕ್ಯೋಳಬೋದು. ಇಲ್ದೇ ಇದ್ರಿಲ್ಲ. ಅವರಗ್ ನಷ್ಟವಾ? ಒಳ್ಳೇದಾದ್ರ ಯಾರಗಾದ್ದು? ನಿಮಗ್ ತಾನೇ?” ಎಂದು ಲಾಜಿಕ್ಕು ಹೇಳಿದ್ಲು. ಅಷ್ಟರಲ್ಲಿ ಬಂದ ಸತ್ತುಟ್ಟ (ಇವರು ಇನ್ನೇನು ಸತ್ತೇ ಹೋಗುವಂತಾಗಿ ಪುನಾ ಯಾವ್ದೋ ಮಾಯದಲಿ ಬದುಕಿ ಬಂದುದರ ಜ್ಞಾಪಕಾರ್ಥವಾಗಿ ಈ ಹೆಸರು) “ಅಕೌ… ವಯಸಾಗದ ಸರ್ಯಾದ್ ಟೇಮಗ್ ಊಟ ಗೀಟ ಮಾಡಿ ನೀವು. ಇವಳ್ ಮಾತ್ ಕಟ್ಕಂಡ್ ಸಂದ್ಗಂಟ ಉಪಾಸ ಮಾಡಿ ಸತ್ಗಿತ್ತೋದರಿ” ಅಂದ.
ಸೌಮ್ಯಾನ ನೋಡಿ “ನೀ ಮಾಡು ಅವರೇಳದ್ನೆಲ್ಲ. ಒಳ್ಳಿ ಗಂಡು ಬಂದು ಮದ್ಯಾಗ್ಲಿ ನಿನಗ. ಆದ್ರ ಅವರೇಳದ್ದ ಯಾರೂ ಮಾಡಕಾಗಲ್ಲ ತಿಳ್ಕ” ಅಂದುಬಿಟ್ಟ. “ಯಾಕಪಾ ಮಾಡಕಾಗಲ್ಲ?” ಅಂದ್ಲು ಸೌಮ್ಯ.
“ಅಯ್ಯೋ ಬೆಳಿಗ್ಗೆಯಿಂದ ಇದು ಐದ್ನೇ ಹಟ್ಟಿ, ಎಲ್ರಟ್ಟಿಲೂ ಟಿವಿ ಹಾಕಂಡಾಕಂಡು ಇದ್ನೇ ಕ್ಯೋಳ್ತಾ ಕೂತರ. ಮರಪ್ಪ ಅವರಟ್ಟಿಗೋದಿ. ಅವಣ್ಣಂದು ಸಿಂಹರಾಶಿ ಅಂತ…” ಮುಂದಿನ ಅವನ ಮಾತ ತಡೆದು ಗೌರಕ್ಕ ಕ್ಯೋಳುದ್ರು…
“ನನಗಿಂತಾ ಮುಂಚೆ ಹುಟ್ಟಿರಂವಾ ಅಂವ. ಅವನಗ ಬರದ್ ಮಡಗಿದ್ರಾ ಇಂತ ರಾಸೀ ಅಂತ?” ಕ್ರಾಸ್ ವೇರಿಫಿಕೇಷನ್ನು ಮಾಡದ್ರು. ಸತ್ತುಟ್ಟ ಹೇಳ್ದ “ಅಕೌ ಅದಂಗಲ್ಲಾ? ಈಗ ಮರಪ್ಪ… ಮೊದಲನೆ ಅಕ್ಷರ ಮ ಅಂದ್ರ ಸಿಂಹ ರಾಶಿ. ಪಾರತಕ್ಕ ಪಾ ಬಂತು ಅಲ್ವ. ಅವರದು ಕನ್ಯಾ ರಾಶಿ… ಹೀಗೆ ಎಲ್ರ ಹೆಸರನೂ ಹೇಳೋವಾಗ ನಂದ್ಯಾವ್ದ ಅಂಗಾರೆ? ಅಂತ ಇನ್ನೇನು ಕೇಳಲು ಹೊರಟ ಗೌರಕ್ಕನಿಗೆ ನಿಮ್ದು ಕುಂಭ ರಾಶಿ ಅಂತ ಹೇಳಿದ. ಈ ಗ್ರಾಣದ್ ಪರಿಯಾರ ಒಂದೊಂದ್ ರಾಶೀಗೊಂತರ. ಅದೇ ಮರಪ್ಪನಟ್ಟಿಗೋಗಿದ್ದೆ ಅಂದ್ನಲ್ಲಾ, ಅವರ ರಾಶಿಗ ಗ್ರಾಣ ಆಗಿ ಒಂಬತ್ ಜಿನಗಂಟಾ ಕೆಂಪ್ ಬಟ್ಟೆಲೇ ಇರಬೇಕು ಅಂತ ಯೋಳ್ಬುಟ್ರು. ಅವಣ್ಣ ಪಾಪ ಯಾವಾಗ್ಲೂ ಬೆಳೀ ಶರಟು ಪಂಚ ಹಾಕಳೌರು. ತಗಾ ಸಿಟಿಗೋದ್ದೇ ಎರಡ್ ಕೆಂಪ್ ಶರಟು ಪಂಚ ತಕ್ಕಬಂದ್ರು. ಆಮೇಲ ಪಾರತಕ್ಕನ ರಾಶಿಗ ಗ್ರಾಣದಿಂದ ಕಣ್ಣಗ್ ತೊಂದರೆ ಆಗಬೋದು. ಮಂಡಿನೋವ್ ಬರಬೋದು. ನೀವು ದಿನಾ ಎಕ್ಕದ್ ಗಿಡಕ್ಕೋಗ್ ನೂರೊಂದು ಸುತ್ ಸುತ್ಬೇಕು ಅಂದ್ರು.
ಆಮೇಲ ಆ ಜಗದೀಶ ಅಂತ ಅವ್ನಲ್ಲ, ಅವನ ರಾಶಿಗ ಪಾರಿಜಾತದ್ ಹೂ ತಂದು ದಿನಾ ಅಟ್ಟಿ ಒಸಲ್ ಮೇಲ್ ಮಡಗ್ಬೇಕು ಅಂತ ಯೋಳ್ಬುಟ್ಟಿದರಂತ. ಆ ಗಂಡು ಬೆಳಿಗ್ಗೆಯಿಂದ ಪಾರಿಜಾತದ್ ಗಿಡ ಎಲ್ಲಿದ್ದದೂ ಅಂತ ಊರ್ನೆಲ್ಲ ಪರೀತಾ ಕುಂತದ. ಅಲ್ಲಾ ಈ ಟಿಬಿಯವ್ರು ಎಲ್ಲಾನೂ ನಮ್ ಜೋಬಲ್ಲೆ ಮಡಿಕಂಡಿರೋತರ ಜನ ಅನ್ನಂಗ್ ಪರಿಯಾರ ಯೋಳ್ತರಲ್ಲಾ? ಅದ್ನೆಲ್ಲ ಮಾಡಕಾದ್ದ? ದಿನ ಭವಿಷ್ಯ ಅಂತ ಯೋಳ್ತರ. ಈ ದಿನ ಈ ಪರಿಯಾರ ಮಾಡಿ ಅಂತರ. ಅವರ್ಯೋಳ ಪರಿಯಾರ ಮಾಡಕೇ ಅರ್ಧ ದಿನ ಬೇಕಲ್ಲ, ಉಳಿದರ್ಧ ದಿನ ಮಡಿಕಂಡೇನ್ ಮಾಡದು?
“ಅಯ್ಯೋ ಅದ್ ಬುಟ್ಟಾಕು ಸತ್ತುಟ್ಟಾ, ಈಗ ನಮ್ಮೂರ್ ಜನಕೆಲ್ಲ ಹುಟ್ಟದ್ ಗಳಗ ನೋಡಿ ಹೆಸರ್ ಮಡಿಗಿದ್ದರಾ? ಯಾವ್ದೋ ಒಂದ್ ಹೆಸರು. ಇಟ್ರು ಆ ಕಾಲ್ದಲ್ಲಿ. ಆ ಹೆಸರನ್ ಮೇಲ್ ಇವರೋಳದ್ನೆಲ್ಲ ನಂಬ್ಕಂಡು ಕುಂತ್ಕಳಕಾದ್ದ?” ಸೌಮ್ಯಳಿಗೆ ಇವರ ಮಾತು ಕೇಳಿ ಸಾಕಾಯ್ತು “ಅದ್ಕೆ ನಿಮಗೆಲ್ಲ ಬುದ್ದಿ ಇಲ್ಲ ಅನ್ನದು. ಈಗಾ ಅಮಾಸ ಹುಣ್ಮೆ ಬಂದ್ರ ಎತ್ತೆತ್ತಗೋ ಆಡ್ತರಲ್ಲ ಕೆಲವ್ರು. ಅದ್ಯಾಕ ಗೊತ್ತಾ ನಿಮಗ? ನಮ್ ಶರೀರದಲ್ಲಿ ಜಾಸ್ತಿ ನೀರಿನಂಶ ಇದೆ. ಹುಣ್ಮೆ ದಿನ ಸಮುದ್ರದಲ್ಲಿ ನೀರುಕ್ಕತ್ತಲ್ಲಾ… ಆಗ ನಮ್ ಬಾಡೀಲಿರಾ ನೀರುವೆ ಎಚ್ಚು ಕಮ್ಮಿಯಾಯ್ತದ. ಅದ್ಕೇ ಜನ ಒಂತರವಾಗಾಡದು. ಇದು ಸೈನ್ಸು. ಅಂಗೇ ಇವ್ರೆಲ್ಲ ಯೋಳದೂ ಸೈನ್ಸೇ. ಅಲ್ಲಿ ಗ್ರಾಣ ಆದಾಗ ಮನ್ಷರ್ ಮೇಲ ಒಂದೊಂದ್‌ತರಾ ಪರಿಣಾಮ ಆಯ್ತದ. ಅದಾ ಸರ್ಮಾಡ್ಕಳಿ, ಚೆಂದವಾಗ್ ಬದ್ಕಿ ಬಾಳಿ ಅಂತ ಯೋಳ್ಕೊಟ್ರ, ಅವರನ್ನೇ ಬೊಯ್ತಾ ಇದ್ದರಿ ನೀವೆಲ್ಲ. ನೀವೇನಾರ ಮಾಡ್ಕಳಿ. ನಾ ಅವರ್ಯೋಳದಂಗೇ ಮಾಡದು ಅಂದ್ಲು”. ಇಷ್ಟೊತ್ತೂ ಸುಮ್ಮನ್ ಕೂತ್ಕಂಡ್ ಕೇಳ್ತಿದ್ ಮಂಜುಳಕ್ಕ “ಈಗಾ ನೀರ್ ಸುರದ್ಯಲ್ಲಾ ಸೌಮ್ಯ. ಒಳಗಾ ದ್ವಾಸಗ್ ಆಡ್ಸಿ ಮಡಿಗಿನೆಲ್ಲಾ ಅದೇನ್ ಮಾಡದು? ಅದ್ನೂ ಸುರದ್ಬುಡದಾ? ಅಕ್ಕಿ ಏನ ಬುಡವ್ವ ಪ್ರೀಯಾಗ್ ಬತ್ತದ. ಬ್ಯಾರೆ ಸಾಮಾನ್ಗೆಲ್ಲ ಕಾಸ್ ಕೊಟ್ಟಿಲ್ವ?” ಕೇಳಿದ್ರು.
“ಎಲ್ಲಾನೂ ಆಚೆ ಹಾಕಬೇಕು ಕಣಮ್ಮ” ಅಂದ್ಲು ಸೌಮ್ಯ. ಗೌರಕ್ಕ ಇದ್ದವರು “ಐ ಕುಸೂ ಆ ಕೆಲ್ಸ ಮಾಡ್ಬ್ಯಾಡ. ಒಂದ್ ಬಿಲ್ಪತ್ರ ತಂದಾಕು. ಏನೂ ಆಗಲ್ಲ. ಇಲ್ಲಾಂದ್ರ ಸಂಪಣದ್ ಬೋಸಿ ತಂದು ಕರುನ್ ಬೆನ್ ಮೇಲ್ ಮಡಗ್ಬುಟ್ ತಕಂಡೋಗಿ ದ್ವಾಸ ಉಯ್ಕಂಡ್ ತಿನ್ನವ್ವ. ಏನೂ ಆಗಲ್ಲ ಕಣ” ಅಂದ್ರು. ಸತ್ತುಟ್ಟ ನಗಾಡಿ “ಅಕೌ. ಗ್ರಾಣದ್ ನೆಳ್ಳು ಬಿಲ್ಪತ್ರ ಮರದ್ ಮೇಲ್ ಬಿದ್ದಿರಲ್ವ? ಹಸಾ ಕರ, ಮರಾ ಗಿಡ ಈ ಭೂಮಿ ಮೇಲಿರಾ ಎಲ್ಲಾದರ್ ಮೇಲೂ ಬಿದ್ದಿರಲ್ವ? ಇವರೇಳಾ ಲೆಕ್ಕ ನೋಡದ್ರ ಎಲ್ಲಾನೂ ತಕ್ಕಓಗಿ ಸಮುದ್ರಕ್ ಮುಳಗಸ್ಕಂಡ್ ಬರಬೇಕು. ಆ ಸಮುದ್ರದ್ ನೀರ್ಗೂ ಬಿದ್ದಿರಲ್ವ ಗ್ರಾಣದ್ ನೆಳ್ಳು?” ಅಂತ ಕೇಳಿದ.
“ಅವ್ವೈ ಸೌಮ್ಯ ನೀರ್ನೆಲ್ಲ ಈಗ್ ಸುರೀತಾ ಇದ್ದಯಲ್ಲ ಆಚಗ. ನಿನ್ನೆ ರಾತ್ರಿ ಏನೂಟ ಮಾಡ್ದೆ ಯೋಳು? ಅಂದ್ರು. ಅವಳು ಏನೋ ಹೇಳಿದಳು. “ಗ್ರಾಣ ಸುರುವಾದ್ದು ನಿನ್ನ ಸಂದೇಲಿ. ಮುಗಿಯದು ಇವತ್ ರಾತ್ರಿ” ಅಂದ್ರು
ಸೌಮ್ಯ ಹೌದಾ? ಅಂದವಳು ಗ್ರಹಣದ ಟೈಮಿಂಗ್ ನೋಡಲು ಬೆರಳನ್ನು ಫೋನಿನ ಮೇಲೆ ಪಟಪಟನೆ ಆಡಿಸ್ತಾ ಗೂಗಲ್ ಮಾಡಿದಳು.ಗೊತ್ತಿಲ್ದೇ ಸಮಾ ಗ್ರಹಣ ಕಚ್ಚಿದ ಟೈಮಲ್ಲೇ ಸರ್ಯಾಗಿ ಊಟ ಬಾರ್ಸಿದ್ದಳು.
ಅವಳು ಕೈ ಹಿಸುಕಿಕೊಳ್ಳೋವಾಗ ಸತ್ತುಟ್ಟ “ಅವ್ವಾ ಸೌಮ್ಯ, ಈಗ ಗ್ರಾಣದ್ ಟೈಮ್ಲಿ ಉಚ್ಚೆ ಕಕ್ಕ ಮಾಡಬೋದೋ ಬ್ಯಾಡ್ವೋ?” ಕೇಳಿದ. ಅವಳು ಸಿಟ್ಟಿನಿಂದ “ಸತ್ತುಟ್ಟ ನಿನ್ನಾ ಈಗ ನಿಜವಾಗ್ಲೂ ಕೊಂದಾಕ್ಬುಡ್ತೀನಿ ಓಗಾಚೆ” ಅಂದೋಳು ದೋಸೆ ಕಾವಲಿ ಇಟ್ಟು ಎಣ್ಣೆ ಸವರಿದಳು. “ಗೌರಕ್ಕ, ಇಲ್ಲೆ ದ್ವಾಸ ತಿನ್ಕಂಡೋಗರಿ ಇರಿ” ಅಂದರು ಮಂಜುಳಕ್ಕ.
“ಅಯ್ಯೋ ಅದ್ ಬುಟ್ಟಾಕು. ಈಗ ನಮ್ಮೂರ್ ಜನಕೆಲ್ಲ ಹುಟ್ಟದ್ ಗಳಗ ನೋಡಿ ಹೆಸರ್ ಮಡಿಗಿದ್ದರಾ? ಯಾವ್ದೋ ಒಂದ್ ಹೆಸರು. ಇಟ್ರು ಆ ಕಾಲ್ದಲ್ಲಿ. ಆ ಹೆಸರನ್ ಮೇಲ್ ಇವರೋಳದ್ನೆಲ್ಲ ನಂಬ್ಕಂಡು ಕುಂತ್ಕಳಕಾದ್ದ?”





