Mysore
25
clear sky

Social Media

ಭಾನುವಾರ, 22 ಮಾರ್ಚ್ 2026
Light
Dark

ಒಂದು ಹಸಿ ಅಸಹ್ಯ ಹಾಡಿನ ಕುರಿತು ಇಬ್ಬರು ಬರಹಗಾರ್ತಿಯರು

ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಅಪರಾಧದಲ್ಲಿ ಪಾಲುಗಾರರಾದಂತೆಯೇ

ಸಂಧ್ಯಾರಾಣಿ, ಲೇಖಕಿ ಮತ್ತು ಚಿತ್ರ ಸಾಹಿತಿ

‘ರ’ ಚಿತ್ರದ ಹಾಡಿನ ಬಗ್ಗೆ ವಿರೋಧ, ಛೀಮಾರಿ, ಸಿಟ್ಟು, ಅಸಹ್ಯ, ಪಾಪಪ್ರಜ್ಞೆ, ಕಾನೂನಿನ ಕೆಂಗಣ್ಣು ಎಲ್ಲವೂ ಬಂದು, ಈಗ ಅದನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ಹಾಡಿಗೆ ಸಂಬಂಧಪಟ್ಟಂತೆ ಆ ಹಾಡಿಗೆ ನರ್ತಿಸಿದ ನೋರಾ ಫತೇಹಿ ಮತ್ತು ಹಿಂದಿಯಲ್ಲಿ ಹಾಡಿನ ಸಾಹಿತ್ಯ ಬರೆದವರು/ಅನುವಾದಿಸಿದವರು ಎನ್ನಲಾದ ರಖೀಬ್ ಆಲಮ್ ಅವರು ಆ ಹಾಡಿನ ಪಾಲುದಾರಿಕೆಯಿಂದ ಕೈತೊಳೆದುಕೊಂಡಿದ್ದಾರೆ. ರಖೀಬ್ ಅವರು ನಾನು ಕೇವಲ ಕೆಲವು ಪದಗಳನ್ನು ಕನ್ನಡದಿಂದ ಅನುವಾದಿಸಿದೆ, ಮೀಟರ್‌ಗೆ ಕೂರಿಸಿದ್ದು ಸಹ ನಾನಲ್ಲ ಎಂದರೆ, ನೋರಾ, ಎರಡು ವರ್ಷಗಳ ಹಿಂದೆ ಈ ಹಾಡಿನ ಚಿತ್ರೀಕರಣ ನಡೆಯಿತು, ನಾನು ಇದು ಅಶ್ಲೀಲ ಎಂದು ಹೇಳಿದೆ ಸಹ ಆದರೆ ನಿರ್ದೇಶಕರು ಕೇಳಲಿಲ್ಲ ಎಂದಿದ್ದಾರೆ ಮತ್ತು ಇದು ಅಚ್ಚರಿಪಡುವ ವಿಷಯವೂ ಅಲ್ಲ. ಬಹಳಷ್ಟು ಮಂದಿಗೆ Consent ಎನ್ನುವ ಪದದ ಅಸ್ತಿತ್ವವೇ ಗೊತ್ತಿಲ್ಲದಾಗ ಐಟಂ ಹಾಡಿಗೇ ಎಂದು ಕರೆಸಿದ ನೋರಾಳನ್ನು ಕೇಳಿ ಮಸಾಲೆ ಅರೆಯುತ್ತಾರೆ ಎನ್ನಲಾಗದು. ಆದರೆ ಇಲ್ಲಿ ಒಂದು ಸೂಕ್ಷ್ಮ ವಿಷಯ ಇದೆ. ಎಲ್ಲೂ, ಯಾರೂ ಇದೇ ಹಾಡಿನಲ್ಲಿ, ಅಷ್ಟೇ ಅಶ್ಲೀಲವಾಗಿ, ತಮ್ಮ ವಯಸ್ಸು, ಅನುಭವ, ಹಿನ್ನೆಲೆ ಎಲ್ಲವನ್ನೂ ಮರೆತು ಕುಣಿದ ಸಂಜಯ್ ದತ್ ಅವರ ಮೇಲೆ ಆರೋಪ ಹೊರಿಸುತ್ತಲೇ ಇಲ್ಲ! ಬೇಷರತ್ತಾಗಿ ಅವರನ್ನು ಆ ಹೊಣೆಯಿಂದ ಮುಕ್ತಗೊಳಿಸಲಾಗಿದೆ!

ಹಾಡಿನಲ್ಲಿ ಶೃಂಗಾರ ಮತ್ತು ಅಶ್ಲೀಲಕ್ಕೆ ನಡುವೆ ತೆಳುವಾದದ್ದೇನಲ್ಲ, ಗಾಢವಾದ ಗೆರೆಯೇ ಇದೆ. ತಪ್ಪಿ ಆ ಕಡೆಗೆ ಹೋದೆ ಎಂದು ಹೇಳಲಾಗದಷ್ಟು ಈ ಹಾಡು ಹಸಿಯಾಗಿಯೂ, ಅಸಹ್ಯವಾಗಿಯೂ ಇದೆ. ಹಾಡಿನಲ್ಲಿ ತುಂಟತನ ಇದ್ದರೆ, ನಮಗೇ ಅರಿವಿಲ್ಲದಂತೆ ಅದು ನಮ್ಮ ಮುಖದಲ್ಲಿ ಒಂದು ನಗು ಮೂಡಿಸಿದರೆ ಅದು ಶೃಂಗಾರ. ಅದನ್ನು ನಮ್ಮ ಹಲವು ಚಿತ್ರಸಾಹಿತಿಗಳು ಮಾಡಿದ್ದಾರೆ. ಅಂತಹ ಅನೇಕ ಹಾಡುಗಳು ೬೦-೭೦ರ ದಶಕದಿಂದಲೂ ಬರುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಹೇಳುವುದಾದರೆ, ಯೋಗರಾಜ ಭಟ್ಟರು ಅಂತಹ ಹಲವು ಹಾಡುಗಳನ್ನು ಬರೆದಿದ್ದಾರೆ. ಆದರೆ ಅಲ್ಲೆಲ್ಲಾ ತುಂಟತನ ಮತ್ತು ಶೃಂಗಾರದ ಸೂಚನೆ ಇದೆ. ಹೀಗೆ ಹಸಿಹಸಿ ವರ್ಣನೆ ಇಲ್ಲ.

ಇದರ ನಡುವೆ ಇಂತಹ ನೇರಾರ್ಥದ ಹಾಡುಗಳು ಈ ಮೊದಲು ಬಂದಿರಲಿಲ್ಲವೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ? ಖಂಡಿತಾ ಬಂದಿವೆ. ಮತ್ತು ನೇರ ಕಾಮದ ಬಗ್ಗೆ ಮಾತನಾಡದಿದ್ದರೂ ಹೆಣ್ಣನ್ನು ಒಂದು ವಸ್ತುವಿಗಿಂತ ಕಡೆಯಾಗಿ ಅವಹೇಳನ ಮಾಡುವಂತಹ ಹಾಡುಗಳು ಸಹ ಬಂದಿವೆ. ಆದರೆ ಪೂರ್ವನಿದರ್ಶನ ಇದೆ ಎನ್ನುವ ಕಾರಣಕ್ಕೆ ಅದು ‘ಸರಿ’ ಆಗಿಬಿಡುತ್ತದೆಯೆ? ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಅಪರಾಧದಲ್ಲಿ ಪಾಲುಗಾರರಾದಂತೆಯೇ. ಹಾಗಾಗೇ ಇಂತಹ ಹಾಡುಗಳನ್ನು ವಿರೋಧಿಸಬೇಕಾಗುತ್ತದೆ. ಮತ್ತೆ ಹಾಗೆ ಪ್ರತಿರೋಧ ಬಂದಿದ್ದರಿಂದಲೇ ಹಾಡು ನಿಷೇಧಕ್ಕೊಳಪಟ್ಟಿತು ಎನ್ನುವುದನ್ನು ಸಹ ಮರೆಯದಿರೋಣ.

ಈ ಹಾಡಿನ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಯಾರಿಗೂ ‘ಇದು ತಪ್ಪು ಎನಿಸದಿರುವುದೇ ವಿಪರ್ಯಾಸ

ಚಿತ್ರಾ ವೆಂಕಟರಾಜು, ಲೇಖಕಿ ಮತ್ತು ರಂಗನಟಿ

ಸಿನೆಮಾ ಹಾಡುಗಳು ರೂಪುಗೊಳ್ಳಬೇಕಾದರೆ ನಿರ್ದೇಶಕರು ಕತೆಗೆ ಅನುಸಾರವಾಗಿ ಇಂಥ ಸನ್ನಿವೇಶದಲ್ಲಿ ಈ ರೀತಿಯ ಹಾಡು ಇರಬೇಕು ಎಂದು ನಿರ್ಧರಿಸುತ್ತಾರೆ. ಇತ್ತೀಚೆಗೆ ಕೆ.ಡಿ. ಸಿನೆಮಾದ ‘ಸೆರಗು ಸರ್ಸೇ’ ಹಾಡು ಅನೇಕ ವಿವಾದಗಳಿಗೆ ಗುರಿಯಾಗಿದೆ. ಹಾಗೆಂದು ಶೃಂಗಾರ, ಕಾಮ, ಲೈಂಗಿಕತೆಯ ಬಗ್ಗೆ ಹಾಡುಗಳು ಈ ಹಿಂದೆ ಬಂದಿಲ್ಲವೆಂದಲ್ಲ. ಆದರೆ ಹಾಡು ಕೇಳುವಾಗ ಕೇಳುಗನ ಕಲ್ಪನೆಯಲ್ಲಿ ಯಾವ ರೂಪಕಗಳು ಮೂಡುತ್ತವೆ ಎನ್ನುವುದು ಬಹಳ ಮುಖ್ಯ. ‘ಪಂಚತಂತ್ರ’ ಸಿನೆಮಾದಲ್ಲಿ ಯೋಗರಾಜ ಭಟ್ಟರು ಬರೆದಿರುವ ‘ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ… ನಾಚಿಕೆ ನನ್ನಾ ಜೊತೆ ಠೂ ಬಿಟ್ಟಿದೆ’ ಎಂದು ಶುರುವಾಗುವ ಹಾಡು ಕೊನೆಗೆ ‘ಪ್ರಣಯಕೊಂದು ಬೇರೆ ಮುಖವಿದೆ’ ಎಂದು ಹೇಳುತ್ತಾ ದೈಹಿಕತೆಯನ್ನು ಮೀರಿದ ಮಿಲನವನ್ನು ಹೇಳುತ್ತದೆ. ಈ ಹಾಡನ್ನೂ ಕೂಡ ಕುಟುಂಬದವರೊಂದಿಗೆ ಕೇಳಲು ಅಥವಾ ಟೂರ್ ಬಸ್‌ಗಳಲ್ಲಿ ಹಾಕಲು ಮುಜುಗರವಾಗುತ್ತದೆ. ಆದರೆ ಪ್ರಣಯ ಉತ್ಕಟತೆಯನ್ನು ಈ ಹಾಡು ಉದ್ದೀಪಿಸುತ್ತದೆ.

ಕಡ್ಡಿಪುಡಿ ಸಿನೆಮಾದ ‘ಸೌಂದರ್ಯ ಸಮರ, ಸೋತವನೆ ಅಮರ’ ಕನ್ನಡ ಸಿನೆಮಾ ಜಗತ್ತಿನಲ್ಲಿಯೇ ಅಪರೂಪದ ಹಾಡು. ‘ತಡಪತ್ ಹೂಂ ಮೈ ಜೈಸೆ ಜಲ್ ಬಿನ್ ಮೀನ್’ ಎಂದು ಶುರುವಾಗುವ ಈ ಹಾಡಿನ ಚಿತ್ರೀಕರಣ ಸಾಹಿತ್ಯದ ಭಾವನೆಯನ್ನು ಇನ್ನೂ ಎತ್ತರಿಸಿದೆ. ನಿರ್ದೇಶಕ ಸೂರಿಯವರು ದೃಶ್ಯ ಕಲಾವಿದರೂ ಆಗಿರುವುದರಿಂದ ಅವರು ದೃಶ್ಯೀಕರಣದಲ್ಲಿ ಬಳಸಿರುವ ಬಣ್ಣಗಳು ಇಡೀ ಹಾಡಿಗೆ ಅನನ್ಯವಾದ ಉತ್ಕಟತೆಯನ್ನು ನೀಡಿದೆ. ವೇಶ್ಯೆಯ ಪಾತ್ರದ ಮೇಲೆ (ಐಂದ್ರಿತಾ ರೈ) ಚಿತ್ರಿಸಿದ ಈ ಹಾಡಿನಲ್ಲಿ ‘ಕಳೆದುಕೊಳ್ಳಲು ಬೇರೇನೂ ಇಲ್ಲಾ ಇಲ್ಲಿ. ಇರುವುದನೆ ಕಳೆದೂ ತಿರುಗಿ ಪಡೆದುಕೊಳ್ಳಿ ಪಡೆದು ಕಳೆದುಕೊಳ್ಳಿ’ ಎನ್ನುವ ಸಾಹಿತ್ಯ ದೈಹಿಕತೆಯೊಂದಿಗೆ ವಿಷಾದವನ್ನೂ ಮೂಡಿಸುತ್ತದೆ. ‘ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿ ಜಯಂತ ಕಾಯ್ಕಿಣಿಯವರು ಬರೆದಿರುವ ‘ಮಧುವನ ಕರೆದರೆ ತನುಮನ ಸೆಳೆದರೆ ಶರಣಾಗು ನೀ ಆದರೆ’ ಮತ್ತು ಅವರದೇ ಪಂಚರಂಗಿಯ ಚಿತ್ರದ ಹಾಡು ‘ಉಡಿಸುವೆ ಬೆಳಕಿನ ಸೀರೆಯಾ ಚೂರು ನೀ ಸಹಕರಿಸು.

ನನ್ನ ಕಣ್ಣಿಗೀಗ ನೀ ಹೇಗೆ ಕಂಡರೂನು ಅದೇ ಚಂದ… ಹಾಗೆಂದೇ ಭಾವಿಸು’ ಎನ್ನುವ ಸಾಲು ಪ್ರಣಯದ ಅತ್ಯಾಪ್ತ ಕ್ಷಣಗಳನ್ನು ಪದಗಳಲ್ಲಿ ಹಿಡಿದಿಟ್ಟಿವೆ. ಇವೆಲ್ಲವೂ ಬೇರೆ ಬೇರೆ ಚಿತ್ರಣಗಳ ಮೂಲಕ ಪ್ರಣಯವನ್ನೇ ಹೇಳುತ್ತವೆ. ಲೈಂಗಿಕ ಬರಹಗಳೂ ಪ್ರಣಯದ ಕಾಮನೆಗಳನ್ನು ಉದ್ದೀಪಿಸುತ್ತವೆ. ಅದರ ಉದ್ದೇಶ ಅಷ್ಟಕ್ಕೆ ಮಾತ್ರ ಸೀಮಿತ. ಆದರೆ, ಈ ಕೆಡಿ ಚಿತ್ರದ ಹಾಡು ಕೇಳಿದಾಗ ಅಸಹ್ಯ ಹುಟ್ಟಿಸುವಂತಿದೆ. ಸಾಹಿತ್ಯದ ಎಲ್ಲ ವಿವರಗಳೂ ಕೇಳುಗನಲ್ಲಿ ಯಾವ ಚಿತ್ರಣವನ್ನು ನೀಡುತ್ತಿದೆ? ಇಲ್ಲಿ ಎದುರಾಗಿರುವ ಸಮಸ್ಯೆ ಇದು. ನೃತ್ಯ ಸಂಯೋಜಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರೀಕರಣ ಮಾಡಿದ್ದಾರೆ. ಅದನ್ನು ನಾಯಕ ನಟ ಮುಜುಗರವಿಲ್ಲದೆ ಸಮಾರಂಭವೊಂದರಲ್ಲಿ ನೃತ್ಯವನ್ನೂ ಮಾಡಿದ್ದಾರೆ. ತಾತ್ವಿಕತೆ, ಕಲಾತ್ಮಕತೆಯ ಇನಿತೂ ಸುಳಿವಿಲ್ಲದ ಲೈಂಗಿಕತೆಯ ವಿವರಗಳು ಅಸಹ್ಯವನ್ನಲ್ಲದೇ ಇನ್ನೇನನ್ನು ಉದ್ದೀಪಿಸಲು ಸಾಧ್ಯ? ಅಥವಾ ಏನು ಮಾಡಿದರೂ ಜನ ಕುಣಿಯುತ್ತಾರೆ ಎಂಬ ಹುಂಬತನವೋ! ಇದರ ತಯಾರಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಈ ಕೀಳುಅಭಿರುಚಿಯ ಸೃಷ್ಟಿಯಲ್ಲಿ ಪಾಲುದಾರರೇ.

ಈ ಹಾಡಿಗೆ ನೃತ್ಯ ಮಾಡಿರುವ ನೋರಾ ಫ಼ತೇ ‘ಕನ್ನಡದಲ್ಲಿ ಇದರ ಅರ್ಥ ಹೀಗಿದೆ ಎಂದು ತಿಳಿಸಿರಲಿಲ್ಲ. ನಾನು ಇದನ್ನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ. ಹಾಡಿರುವ ಗಾಯಕಿಗೆ ಇಂಥ ಆಫರ್ ನಿರಾಕರಿಸಿ ಬೇರೆಯ ಅವಕಾಶ ಕಳೆದುಕೊಳ್ಳದೇ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗದಲ್ಲಿ ಮುಂದುವರಿಯುವ ಅವಕಾಶ ಚಿತ್ರರಂಗದ ಮಹಿಳಾ ಕಲಾವಿದರಿಗೆದೆಯೇ? ಗೊತ್ತಿಲ್ಲ. ಶ್ರೇಯಾ ಘೋಷಾಲ್ ಅವರೂ ‘ಕೆಟ್ಟ ಸಾಹಿತ್ಯ ಇರುವ ಹಾಡುಗಳನ್ನು ನಾನು ಒಪ್ಪಿಕೊಳ್ಳುತ್ತಿಲ್ಲ’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

 

 

Tags:
error: Content is protected !!