Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬದುಕ ಕಲಿಸಿದ ಇಬ್ಬರು ತಾಯಂದಿರು

ಡಾ.ಎನ್.ಜಗದೀಶ್ ಕೊಪ್ಪ

ಅದು ೧೯೭೨ರ ಕಾಲಘಟ್ಟ. ಎಸ್.ಎಸ್.ಎಲ್.ಸಿ. ಪಾಸಾದ ನಂತರ, ಕುಟುಂಬದ ಬಡತನದ ಕಾರಣ, ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಒಂದು ಹಸು ಮತ್ತು ಎರಡು ಕುರಿಗಳನ್ನು ಮೇಯಿಸುತ್ತಾ, ಕುವೆಂಪು, ಕಾರಂತ, ತ್ರಿವೇಣಿ ಕಾದಂಬರಿಗಳನ್ನು ಓದುತ್ತಾ, ತೋಟದಲ್ಲಿ ಕಾಲ ಕಳೆಯುತ್ತಿದ್ದೆ. ೧೯೭೫ರಲ್ಲಿ ಬೆಸಗರಹಳ್ಳಿಯಲ್ಲಿ ಸರ್ಕಾರಿ ಪಿ.ಯು. ಕಾಲೇಜು ಪ್ರಾರಂಭವಾದಾಗ, ಕೊಪ್ಪದಿಂದ ಎಂಟು ಕಿಲೋಮೀಟರ್ ದೂರದ ಕಾಲೇಜಿಗೆ ಸೇರ್ಪಡೆಯಾದೆ. ಶನಿವಾರ ಮತ್ತು ಭಾನುವಾರ ತೋಟದಲ್ಲಿ ಹೆಣೆದ ತೆಂಗಿನಗರಿಗಳನ್ನು ಸಂತೆಯಲ್ಲಿ ಮಾರಾಟ ಮಾಡಿ, ವಾರಕ್ಕೆ ಸಿಗುತ್ತಿದ್ದ ಎಂಟ್ಹತ್ತು ರೂಪಾಯಿಗಳಲ್ಲಿ ಶಿಕ್ಷಣ ಮುಂದುವರಿಸಿದೆ. ಜೊತೆಗೆ ಪ್ರತಿ ವರ್ಷ ಐನೂರು ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆಯುತ್ತಿದ್ದೆ.

ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾನು ಪಿ.ಯು.ಸಿ.ಯಲ್ಲಿ ಶೇಕಡಾ ೮೭ ಅಂಕ ತೆಗೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದೆ. ಬೆಂಗಳೂರಿನ ಸಂಬಂಧಿಕರ ನೆರವಿನಿಂದ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಾ, ವಿ.ವಿ.ಪುರಂ. ಸಂಜೆ ಕಾಲೇಜಿಗೆ ೧೯೭೮ರಲ್ಲಿ ಸೇರ್ಪಡೆಯಾದೆ. ನನಗೆ ಇಂಗ್ಲೀಷ್ ಎಂ.ಎ. ಓದಿ ಉಪನ್ಯಾಸಕನಾಗುವ ಕನಸಿತ್ತು. ಆದರೆ, ಇಂಗ್ಲೀಷ್ ಭಾಷೆ ನನ್ನ ಪಾಲಿಗೆ ಕ್ಲಿಷ್ಟಕರವಾಗಿತ್ತು.

ಈ ಸಂದರ್ಭದಲ್ಲಿ ನನಗೆ ಪಿ.ಯು.ಸಿ. ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿದ್ದ ಅನ್ನಪೂರ್ಣ ಮೇಡಂ ಬೆಂಗಳೂರು ಅಕ್ಕಿಪೇಟೆಯಲ್ಲಿದ್ದ ತಮ್ಮ ಮನೆಗೆ ಕರೆಸಿಕೊಂಡರು. ಊಟ ಹಾಕುತ್ತಾ, “ಜಗದೀಶ್, ನೀನು ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊ. ನಿನಗೆ ಉತ್ತಮ ಭವಿಷ್ಯ ಇದೆ ಎಂದು ನುಡಿದರು. ಬ್ರಾಹ್ಮಣ ಹೆಣ್ಣುಮಗಳಾದ ಅವರು ಬಡತನವನ್ನು ಮೀರಿದ ಕಥೆಯನ್ನು ನನಗೆ ವಿವರಿಸಿದ್ದರು. ವೃದ್ಧ ತಂದೆ ತಾಯಿಗಳನ್ನು ನೋಡಿಕೊಳ್ಳುವ ಉದ್ದೇಶದಿಂದ ಏಕೈಕ ಪುತ್ರಿಯಾಗಿದ್ದ ಅವರು ಅವಿವಾಹಿತರಾಗಿ ಉಳಿದಿದ್ದರು.

ಅವರ ಮಾರ್ಗದರ್ಶನದಂತೆ ಅರ್ಥಶಾಸ್ತ್ರವನ್ನು ಪದವಿಯಲ್ಲಿ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪದವಿ ಮುಗಿಸಿ, ನಂತರ ಮೈಸೂರು ವಿ.ವಿ.ಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಮೇಡಂ ಹೇಳಿದಂತೆ ಬದುಕಿನ ಎಲ್ಲಾ ಆಯಾಮಗಳು ಪರಿಚಯವಾದವು ಜೊತೆಗೆ, ಪತ್ರಿಕೋದ್ಯಮದಲ್ಲಿ ಶಾಶ್ವತವಾಗಿ ನೆಲೆ ನಿಂತೆ. ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಲು ಹೊರಟಾಗ, ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಜಾಗತೀಕರಣ ಮತ್ತು ಗ್ರಾಮಭಾರತ ಕುರಿತು ಅಧ್ಯಯನ ಮಾಡಲು ತಿಳಿಸಿದರು. ಈ ವಿಷಯ ಕುರಿತು ಮಾಹಿತಿಗಳನ್ನು ನೀಡಿ, ಮಾರ್ಗದರ್ಶಕರಾದರು.

ಹಂಪಿ ಕನ್ನಡ ವಿ.ವಿ.ಯಲ್ಲಿ ಜಾಗತೀಕರಣದ ವಿಷಯವಾಗಿ ಮಾರ್ಗದರ್ಶನ ನೀಡಲು ಯಾರೂ ಇಲ್ಲದ ಕಾರಣ ಸ್ವತಂತ್ರವಾಗಿ ಡಿ.ಲಿಟ್. ಅಧ್ಯಯನ ಮಾಡಿದೆ. ಪ್ರೊಫೆಸರ್ ಅವರು ಮಾರ್ಗದರ್ಶನದ ಜೊತೆಗೆ ಬೌದ್ಧಿಕ ಆಸ್ತಿಗಳ ಹಕ್ಕುಗಳ ಕುರಿತಂತೆ ಹೆಚ್ಚಿನ ಅಧ್ಯಯನಕ್ಕಾಗಿ ನನ್ನನ್ನು ಡೆಹರಾಡೂನ್ ನಗರದಲ್ಲಿದ್ದ ಡಾ.ವಂದನಾ ಶಿವ ಅವರ ಬಳಿ ಕಳಿಸಿಕೊಟ್ಟರು. ಮೂರು ವಾರ ಕಾಲ ವಂದನಾ ಶಿವ ಮೇಡಂ ಅವರ ಬಳಿ ಕಲಿತ ಪಾಠವು ನನ್ನ ಬದುಕಿನ ಆಲೋಚನಾ ಕ್ರಮವನ್ನು ಬದಲಾಯಿಸಿತು. (ವಂದನಾ ಶಿವ ಮೇಡಂ ಅವರು ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಹೋರಾಡಿ, ಭಾರತದ ಬಸುಮತಿ ಅಕ್ಕಿ ಮತ್ತು ಬೇವಿನ ಪಾರಂಪರಿಕ ಹಕ್ಕನ್ನು ಉಳಿಸಿದ್ದರು. ಅವರ ಬಹುತೇಕ ಕೃತಿಗಳು ಕೇಂಬ್ರಿಡ್ಜ್. ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿವೆ) ಭಾರತದ ಬೇಸಾಯದ ಬಗ್ಗೆ ವಿವರಿಸುತ್ತಾ, “ತಮ್ಮಾ, ಮಹಿಳೆಯರ ಕೈಯಿಂದ ಮತ್ತು ಮಡಿಲಿನಿಂದ ಬಿತ್ತನೆ ಬೀಜಗಳು ಜಾರಿ ಹೋದ ಕ್ಷಣದಿಂದ ಭಾರತದಲ್ಲಿ ಕೃಷಿರಂಗದ ಅವನತಿಯು ಪ್ರಾರಂಭವಾಯಿತು” ಎಂದ ಮಾತನ್ನು ನಾನೆಂದೂ ಮರೆಯಲಾರೆ.

ಗಣಿತ ಮತ್ತು ವಿಜ್ಞಾನ ಎರಡು ವಿಷಯಗಳನ್ನು ಹೊರತುಪಡಿಸಿ, ಇಂದು ಯಾವುದೇ ವಿಷಯ ಕುರಿತು ಅಧಿಕೃತವಾಗಿ ಮಾತನಾಡಲು ಮತ್ತು ಬರೆಯಲು ನನಗೆ ಶಕ್ತಿ ತುಂಬಿದ ಈ ಇಬ್ಬರು ತಾಯಂದಿರನ್ನು ನಾನು ತಿನ್ನುವ ಅನ್ನ ಮತ್ತು ಉಸಿರಾಡುವ ಗಾಳಿಯ ಜೊತೆ ಕೃತಜ್ಞತೆಯಿಂದ ಇಂದಿಗೂ ಸ್ಮರಿಸುತ್ತೇನೆ

Tags:
error: Content is protected !!