ಅಜಯ್ ಕುಮಾರ್ ಎಂ ಗುಂಬಳ್ಳಿ
ನೀಲಾಳಿಗೆ ಯಾವಾಗಲೂ ಪುರುಸೊತ್ತಿಲ್ಲ. ಹಾಸ್ಪಿಟಲ್‌ನಲ್ಲಿ ಸದಾ ಕೆಲಸವೋ ಕೆಲಸ. ಎಲ್ಲರಿಗೂ ಮೆಚ್ಚುಗೆ ಆಗಿರುವ ನರ್ಸ್ ಆಕೆ. ಡಾಕ್ಟರಂತು ಯಾವಾಗಲೂ ‘ನೀಲಾ ನೀಲಾ’ ಎಂದು ಅವಳ ಹೆಸರನ್ನೇ ಕರೆಯುತ್ತಿರುತ್ತಾರೆ. ತನ್ನ ಹೆಂಡತಿಯ ಹೆಸರನ್ನೇ ಅಷ್ಟು ಬಾರಿ ಆ ಡಾಕ್ಟರು ಕರೆಯುವುದಿಲ್ಲ! ಅದು ಡಾಕ್ಟರ್ ಹೆಂಡತಿ ಸೈಕಾಲಜಿಸ್ಟ್ ಡಾ.ಸೆಲ್ವಿಗೂ ಚೆನ್ನಾಗಿ ತಿಳಿದಿತ್ತು. ಮುರುಗನ್ ಹೆಂಡತಿ ಬಗೆಗೆ ಪ್ರೀತಿ, ಆಕರ್ಷಣೆಯನ್ನು ಕಳೆದುಕೊಂಡಿದ್ದ. ‘ಹಳೆಯದಾದಂತೆ ಯಾವುದರ ಮೇಲೂ ಅಷ್ಟಾಗಿ ಆಸಕ್ತಿ ಬರುವುದಿಲ್ಲ’ ಮುರುಗನ್ ಹೇಳುತ್ತಿದ್ದ. ಹಾಗಾಗಿ ನೀಲಾಳನ್ನು ಕಂಡರೆ ಅಷ್ಟು ಆಕರ್ಷಣೆ.
ನೀಲಾಳನ್ನು ಕಂಡರೆ ಆಕರ್ಷಿತರಾದವರು ಅವರೊಬ್ಬರೇ ಅಲ್ಲ. ಕಾಲೇಜು ಓದುವಾಗಿನ ಕ್ಲಾಸ್‌ಮೇಟ್ ಭುವನ್‌ಗೆ ಕೂಡ ನೀಲಾ ಆಕಸ್ಮಿಕವಾಗಿ ಸಿಕ್ಕು ಅವಳ ಪ್ರೀತಿಗೆ ಮಾರುಹೋಗಿದ್ದ. ಒಂದು ದಿನ ಕಂಪ್ಯೂಟರ್ ತರಗತಿ ಮುಗಿಸಿ ಮನೆಗೆ ವಾಪಸ್ಸಾ ಗುತ್ತಿದ್ದ ವೇಳೆಗೆ ತನ್ನ ತಾಯಿಯೊಡನೆ ಸಿಕ್ಕ ನೀಲಾ ಮಾತನಾಡಿಸಿದಾಗ ಖುಷಿ, ಸಂಭ್ರಮಪಟ್ಟ ಭುವನ್‌ಗೆ ಅವಳೇ ಫೋನ್ ನಂಬರ್ನೀ ಡಿದ್ದಳು. ಸಾಯಂಕಾಲಕ್ಕೆ ಕರೆ ಬಂತು… ಮಾತ ನಾಡಿದ. ಮತ್ತೆ ಒಂದೆರಡು ದಿನಗಳಲ್ಲಿ ‘ತಪ್ಪಾಗಿ ಡಯಲ್ ಆಗಿದೆ’ ಎಂಬ ನೆಪದಲ್ಲಿ ಮತ್ತೆ ಕರೆ. ಹೀಗೇ ಘಟನೆಗಳು ಬೆಳೆದು ಕಡೆಗೆ ಪ್ರೀತಿಯಾಯಿತು. ಆಮೇಲೆ ಇನ್ನೇನು ಆಗಬೇಕೋ ಅದೆಲ್ಲ ಆಯಿತು. ಅವರಿಬ್ಬರ ಭೇಟಿ ಹೆಚ್ಚು ಸಂಭವಿಸಿದ್ದು ಬಸ್ ನಿಲ್ದಾಣದಲ್ಲಿಯೇ. ಅಲ್ಲಿಯೇ ಪ್ರೀತಿ, ಕೋಪ, ಸರಸ, ವಿರಸ. ಜೊತೆಗೆ ಗಿಫ್ಟ್, ಅದು-ಇದು ಅಂತ ನಡೆಯುತ್ತಿತ್ತು. ಬಿಸಿಬಿಸಿ ಎಲ್ಲವೂ ವಿನಿಮಯ ಆಗುತ್ತಿತ್ತು. ಪ್ರೇಮಿಗಳಾಗಿ ಸಾರ್ವಜನಿಕವಾಗಿ ತಿರುಗಾಡಿದ ಗತ್ತು ಭುವನ್ -ನೀಲಾಳ ಸಂಬಂಧವನ್ನು ಗಟ್ಟಿಯಾಗಿ ಬೆಸೆದಿತ್ತು.
ಆದರೆ ನೀಲಾಳಿಗೆ ಅವನನ್ನು ಕಂಡರೆ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಹಾಗಾಗಿ ಬಾ ಎಂದು ಕರೆ ದಾಗಲೆಲ್ಲ ‘ಖಂಡಿತ ಬರುತ್ತೀನಿ’ ಎಂದು ಹೇಳುತ್ತಲೇ ಕಾಲ ನೂಕುತ್ತಿದ್ದಳು. ಅವನೋ ಅವಳ ಬಗ್ಗೆ ಇನ್ನಿಲ್ಲದ ಕನಸುಗಳನ್ನು ಕಟ್ಟಿಕೊಂಡು ಮದುವೆ, ಪ್ರಣಯ, ಮಕ್ಕಳು – ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತ ಸುಖಿಸುತ್ತಿದ್ದ. ಅವನಿಗೆ ಸಿಗುತ್ತಿದ್ದುದು ಯಾವಾಗಲೋ ಒಮ್ಮೆ ಭೇಟಿಯಾ ದಾಗಿನ ಜೊತೆಯ ಪ್ರಯಾಣ ಮತ್ತು ಅಷ್ಟಿಷ್ಟು ಸ್ಪರ್ಶ ಸುಖವಷ್ಟೇ. ಅದನ್ನು ಪಡೆಯುತ್ತ ಅದೇ ಸ್ವರ್ಗವೆಂದು ನಂಬಿದ್ದ ಭುವನ್.
ಆದರೆ ನೀಲಾ ಆಕರ್ಷಿತಳಾಗಿದ್ದು ಅನಿಲ್‌ಗೆ. ಅವನು ಪೊಲೀಸ್ ಆಗಿದ್ದ. ನೀಲಾ ಒಂದೆರಡು ಬಾರಿ ನೋಡಿದವಳು, ಅವನೇ ತನಗೆ ಸರಿಯಾದ ಜೋಡಿಯೆಂದು ನಿರ್ಧರಿಸಿದ್ದಳು. ನಗು, ನೋಟ ನಿರಂತರವಾಗಿತ್ತು. ಇಬ್ಬರಿಗೂ ಪ್ರೀತಿಯಾಗುವುದಕ್ಕೆ ತಡವಾಗಲಿಲ್ಲ. ಅನಿಲ್ ಸಹ ಹಿಂದೆ ಮುಂದೆ ಯೋಚಿಸದೆ ಒಲಿದ ಹೆಣ್ಣಿಗೆ ಸೋತಿದ್ದ.
ಬಸ್ ನಿಲ್ದಾಣದಲಿ ಒಂಟಿ ಕುರ್ಚಿಯಲ್ಲಿ ಒಬ್ಬಳೇ ಕುಳಿತಿದ್ದ ನೀಲಾಳನ್ನು ಕಂಡು ಭುವನ್‌ಗೆ ಅಚ್ಚರಿಯ ಜೊತೆಗೆ ಶಾಕ್ ಕೂಡ. ಅವಳು ಸದ್ಯದಲ್ಲೇ ಬರುವೆನೆಂಬ ಸೂಚನೆ ಕೊಟ್ಟಿದ್ದಳಾದರೂ ನಿರ್ದಿಷ್ಟವಾಗಿ ಹೇಳಿರಲಿಲ್ಲ. ಅವಳು ಖಂಡಿತ ಬರುತ್ತೀನಿ’ ಅನ್ನುವುದು ಮಾಮೂಲಾದ್ದರಿಂದ ಅವಳು ಬರುತ್ತಾಳೆಂದು ಅವನು ನಿರೀಕ್ಷಿಸಿರಲಿಲ್ಲ. ಅಚಾನಕ್ಕಾಗಿ ಬಂದ ಅವಳನ್ನು ಕಂಡು ಅವಳತ್ತ ಹೋಗುತ್ತಿರುವಾಗಲೇ ಅವನ್ಯಾರೋ ನೀಲಾಳಿಗಾಗಿ ದೊಡ್ಡ ಬೈಕನ್ನೇ ತಂದು ಅವಳ ಮುಂದೆ ನಿಲ್ಲಿಸಿದ್ದು ಕಾಣಿಸಿತು. ಅವನೋ ಎತ್ತರದ ಕಪ್ಪಿನ, ಗುಂಗುರು ಕೂದಲಿನ ಯುವಕ. ಕಣ್ಣಿಗೆ ಬಣ್ಣದ ಕನ್ನಡಕ ಹಾಕಿದ್ದ. ಒಂದು ಕೈಯಲ್ಲಿ ಚೈನ್, ವಾಚು ತೊಟ್ಟಿದ್ದ.ಅವನೇ ನೀಲಾಳ ಭಾವಿ ಗಂಡ ಪೊಲೀಸ್ ಅನಿಲ್. ಭುವನ್ ಜೇಬಲ್ಲಿ ಕಾಸಿಲ್ಲದ ಚೆಂದದ ಹುಡುಗ. ಇಷ್ಟೇ ಸಣ್ಣ ವ್ಯತ್ಯಾಸ ಇಬ್ಬರಲ್ಲಿ.
ಭುವನ್ ನೀಲಾ ಹತ್ತಿರಕ್ಕೆ ಹೋಗುವಷ್ಟರಲ್ಲಿ ಅವಳು ಎದ್ದು ಪೊಲೀಸನ ಬಳಿ ನಗೆ ಚೆಲ್ಲುತ್ತ ಮಾತನಾಡುತ್ತಿದ್ದಳು. ಅವಳ ಅಣ್ಣನೋ ತಮ್ಮನೋ ಇರಬೇಕೆಂದು ಸಮಾಧಾನ ಮಾಡಿಕೊಳ್ಳುತ್ತಾ ಭುವನ್ ‘ಹೇಯ್ ನೀಲಾ, ಬರೋದು ಯಾಕೆ ಹೇಳಲಿಲ್ಲ’ ಸ್ವಲ್ಪ ಕೋಪದಲ್ಲಿ ಕೇಳಿದ. ಇದ್ದಕ್ಕಿದ್ದಂತೆ ಅವನನ್ನು ಕಂಡು ತಬ್ಬಿಬ್ಬಾದ ನೀಲಾಗೆ ಶಾಕ್ ಆಯಿತಾದರೂ ಅದನ್ನು ತೋರ್ಪಡಿಸಿಕೊಳ್ಳದೆ ‘ಆಮೇಲೆ ಕಾಲ್ ಮಾಡ್ತೀನಿ’ ಎಂದಷ್ಟೇ ಹೇಳಿ ಬೈಕಿನ ಮೇಲೆ ಕುಳಿತಳು. ಅನಿಲ್ ‘ಯಾರವನು?’ ಎಂದಾಗ ‘ನನ್ನ ಕ್ಲಾಸ್ ಮೇಟ್, ಅವನು ಸ್ವಲ್ಪ ಹಾಗೇ’ ಎಂದು ನೀಲಾ ಕೃತಕ ನಗೆ ನಕ್ಕಳು. ಅವಳಿಗೆ ಕಿಂಚಿತ್ ಪಶ್ಚಾತ್ತಾಪವೂ ಇರಲಿಲ್ಲ. ಬೈಕ್ ಹೊಗೆ ಕಕ್ಕುತ್ತ ಛಂಗನೆ ಮುಂದಕ್ಕೆ ಜಿಗಿಯಿತು.
ನೀಲಾ, ಅನಿಲ್ ಭುಜವನ್ನು ಹಿಡಿದುಕೊಂಡದ್ದು ನೋಡುತ್ತಿದ್ದ ಭುವನ್‌ಗೆ ಹೃದಯ ಬಡಿತ ಕಡಿಮೆಯಾದಂತೆ ಅನ್ನಿಸಿತು. ಅವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅವನು ಅವನೇ ಆಗಿರಲಿಲ್ಲ. ಕುಸಿದು ಅಲ್ಲೆ ಕೂತುಕೊಂಡ. ಅನೇಕ ಪ್ರಶ್ನೆಗಳು ಭುಸುಗುಡುತ್ತ ಅವನೊಳಗೆ ಓಡಾಡುತ್ತಿದ್ದವು. ಆಪ್ತ ಗೆಳೆಯರಲ್ಲಿ ದುಃಖ ತೋಡಿಕೊಂಡು ಗದ್ಗದಿತನಾಗಿದ್ದ. ಅವಳ ಊರಿಗೆ ಹೋಗಿ ಗಲಾಟೆ ಮಾಡಿ ಕೇಳಬೇಕೆಂದಿದ್ದ. ಧೈರ್ಯ ಸಾಲದೆ ‘ವಾಪಸ್ ಹೋಗುವಾಗ ಬರುತ್ತಾಳಲ್ಲ, ಆಗ ಕೇಳುತ್ತೀನಿ’ ಎಂದುಕೊಂಡ. ಆ ನಂತರ ಅವಳಿಗೆ ಎಷ್ಟು ಸಲ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್. ಅವನಿಗೆ ತಲೆಕೆಟ್ಟಂತೆ ಹೊಸ ಅನುಭವ. ನರಕ ಸಂಕಟ ಆಯಿತು.
ಒಬ್ಬನೇ ಬಾರಿಗೆ ನುಗ್ಗಿ ಎಣ್ಣೆ ಹೊಡೆದ. ಇನ್ನೂ ಹೆಚ್ಚು ಬೇಕೆನಿಸಿ ಮತ್ತೆ ನೈಂಟಿ ಹಾಕಿ ಮನೆಗೆ ಹೋಗದೇ ಹಾಸ್ಟೆಲ್ಲಿಗೆ ಹೋದ. ಅವನ ಸದ್ಯದ ಪರಿಸ್ಥಿತಿಗೆ ಅವನ ಗೆಳೆಯರಲ್ಲಿ ನಗು, ಕನಿಕರ, ಅಸಹ್ಯ, ವಿವಿಧ ಭಾವಗಳು ವ್ಯಕ್ತವಾದವು. ಇವಾವುದರ ಪರಿವೆ ಭುವನ್‌ಗೆ ಇರಲಿಲ್ಲ. ಅವನಿಗೆ ಗಾಢ ನಿದ್ದೆ. ನೀಲಾ ಇದ್ಯಾವುದೂ ಗೊತ್ತಿಲ್ಲದವಳಂತೆ ಇನ್ನೊಬ್ಬನ ಜೊತೆಗೆ ಮಧ್ಯರಾತ್ರಿವರೆಗೂ ಹರಟುತ್ತಾ ಆರಾಮವಾಗಿದ್ದಳು.
ಹಾಸ್ಪಿಟಲ್‌ಗೆ ಔಷಧ ವಿತರಕನಾಗಿದ್ದ ಜಮೀಲ್ ಕೂಡ ನೀಲಾಳ ಒಂದು ಕಾಲದ ಗೆಳೆಯ. ಪರಿಚಯ ಸ್ನೇಹವಾಗಿ ತಿರುಗಿ ಪರಸ್ಪರ ಬೆಸುಗೆ ಏರ್ಪಟ್ಟಿತ್ತು. ಅವಳ ಪ್ರತಿಯೊಂದು ಬೇಕು ಬೇಡಗಳನ್ನೂ ಅವನು ಸರಿಯಾಗಿ ತಿಳಿದುಕೊಂಡು ಪೂರೈಸುತ್ತಿದ್ದ. ‘ಜಮೀಲ್ ಕುಡಿಯುವುದಿಲ್ಲ’ ಎಂಬುದು ನೀಲಾಳಿಗೆ ಅದ್ಭುತ ವಿಷಯವಾಗಿತ್ತು. ಅದೇ ಅವಳಿಗೆ ಅವನನ್ನು ಗಾಢವಾಗಿ ಪ್ರೀತಿಸುವಂತೆ ಮಾಡಿತ್ತು. ಇಬ್ಬರ ಸಂಬಂಧ ಆಳವಾಗಿ ಇದನ್ನು ಹಾಸ್ಪಿಟಲ್‌ನ ಸಿಸ್ಟರ್ ಇತರ ಸಿಬ್ಬಂದಿಗಳಿಗೆ ಡಂಗೂರ ಸಾರಿದ್ದಳು. ಈ ವಿಷಯ ಡಾಕ್ಟರ್ ಮುರುಗನ್‌ಗೆ ಕೂಡ ಮುಟ್ಟಿದ್ದು ನೀಲಾಳಿಗೆ ಮುಜುಗರ ಎನಿಸಿತ್ತು. ಮುರುಗನ್ ಒಂದು ವಾರ ನೀಲಾಳನ್ನು ಮಾತನಾಡಿಸಿರಲಿಲ್ಲ. ಇವಳು ಸಹ ಡಾಕ್ಟರನ್ನು ಕಂಡರೂ ಕಾಣದಂತೆ ಓಡಾಡುತ್ತಿದ್ದಳು.
‘ನೀಲಾ ಕೆಲಸ ಮಾಡುವುದು ನನ್ನ ಹೆಂಡತಿಗೆ ಸುತರಾಂ ಇಷ್ಟವಿಲ್ಲ’ ಎಂದು ಡಾಕ್ಟರ್ ಮುರುಗನ್ ಅವಳನ್ನು ಕೆಲಸದಿಂದ ತೆಗೆದಿದ್ದರು. ನೀಲಾ ಅಲ್ಲಿಂದ ಯಾವಾಗ ಜಾಗ ಖಾಲಿ ಮಾಡಿದಳು ಎಂಬುದು ಅಲ್ಲಿನ ಸಿಬ್ಬಂದಿಗಳಿಗೂ ತಿಳಿಯಲಿಲ್ಲ. ಕೊನೆಯದಾಗಿ ರಾತ್ರಿ ವೇಳೆ ಜಮೀಲ್ ಜೊತೆ ಹೋದಳೆಂಬುದು ಸಿಸಿಟಿವಿಯ ಫುಟೇಜ್‌ನಲ್ಲಿದೆ. ಅದನ್ನು ಡಾ.ಸೆಲ್ವಿ ನೋಡಿ ನೆಮ್ಮದಿಯ ಉಸಿರು ಬಿಟ್ಟಿದ್ದಳಂತೆ. ಅದನ್ನು ಸಿಸ್ಟರ್ ಶಿವಾನಿ ರುಜುವಾತು ಮಾಡಿದ್ದಳು. ಜಮೀಲ್ ಔಷಽ ವ್ಯಾಪಾರಿ ಕೆಲಸವನ್ನೆ ಬಿಟ್ಟುಬಿಟ್ಟಿದ್ದ.
ಸಂಜೆಗೆ ಎಣ್ಣೆ ಹೊಡೆಯುವುದು, ಅವಳ ಫೋಟೊ ನೋಡಿ ಅಳುವುದು, ಭುವನ್‌ಗೆ ಅಂಟಿಕೊಂಡಿದ್ದ ರೋಗವಾಗಿತ್ತು. ವಾಸಿಯಾಗುವ ದಾರಿಯನ್ನು ಸಹ ಅವನು ತುಳಿಯುವ ಮನಸ್ಸು ಮಾಡಿರಲಿಲ್ಲ. ಫಳಫಳ ಹೊಳೆಯುವ ಹೂಗಳತ್ತ ಅವನು ನೋಡಲೇ ಇಲ್ಲ. ಅತ್ತ ಜಮೀಲ್ ಸಹ ನೀಲಾಳ ಫೋನ್ ಸಂಪರ್ಕ ಸಿಗದೇ ತತ್ತರಿಸಿಹೋಗಿದ್ದನಂತೆ ಕೊನೆಯದಾಗಿ ಅವಳು ಅವನ ಧರ್ಮದ ಬಗ್ಗೆ ಮಾತನಾಡಿ ‘ತಾನು ಸ್ವತಂತ್ರವಾಗಿ ಹಾರಾಡಬೇಕು. ನಾನೊಂದು ಪುಟ್ಟ ಹಕ್ಕಿ. ನಿನ್ನ ಗೂಡಲ್ಲಿ ಘೋಷಾ ಧರಿಸಿ ಇರಲಾರೆ’ ಎಂದು ಕಣ್ಣೀರು ಹಾಕಿದ್ದಳಂತೆ. ಜಮೀಲ್ ಅದನ್ನೇ ನೆನೆಸಿಕೊಳ್ಳುತ್ತಿದ್ದ. ಕೊನೆಗೂ ಭುವನ್‌ಗೆ ಚಾಮರಾಜನಗರದ ನಿಲ್ದಾಣದಲ್ಲಿ ನೀಲಾ ಸಿಕ್ಕಳು. ಭುವನ್ ಒಮ್ಮೆಲೆ ಹೆಂಗಸರಂತೆ ಅತ್ತು ಕಾರಣ ಕೇಳಿದ. ಎಲ್ಲವೂ ಅಸ್ಪಷ್ಟತೆ. ಬಿಡಬೇಡವೆಂದು ಗೋಗರೆದ. ಅವಳು ತನ್ನದು ಕಲ್ಲು ಮನಸ್ಸೆಂದು ನೇರವಾಗೇ ಹೇಳಿದಳು. ‘ನನ್ನನ್ನು ಪ್ರೀತಿಸಿದ್ದು ಸುಳ್ಳೆ’ ಎಂದು ಕೇಳಿದ. ‘ಹೌದು ಸುಳ್ಳು’ ಎಂದಳು. ‘ನನಗೆ ಕೆಲಸ ಇಲ್ಲವೆಂದಾ’ ಅಂದ. ‘ಹೌದು, ನಿನಗೆ ಸಾಕುವ ಯೋಗ್ಯತೆ ಎಲ್ಲಿದೆ’ ಪ್ರಶ್ನಿಸಿದಳು. ‘ನಾನು ಸಾಯುತ್ತೇನೆ’ ಹೆದರಿಸಿದ. ‘ಸಾಯಿ ನನ್ನ ಹೆಸರು ತರಬೇಡ’ ಅಂದಳು. ‘ನಿಮ್ಮ ಮನೆಗೆ ಬರುತ್ತೇನೆ’ ಹೇಳಿದ. ‘ಇವನ್ಯಾರೋ ಗೊತ್ತಿಲ್ಲ ಅನ್ನುತ್ತೀನಿ’ ಅಂದಳು. ನೀಲಾಳ ಉತ್ತರದಿಂದ ಭುವನ್ ನಡುಗಿಹೋಗಿ ತತ್ತರಿಸಿದ. ತನ್ನನ್ನೇ ತಾನು ನಂಬದಾದ. ‘ಸತ್ತುಹೋದರೆ ಸರಿ’ ಅಂದುಕೊಂಡ. ಭುವನ್‌ಗೆ ಸಾವಿಲ್ಲದ ನೋವು ತಗಲು ಹಾಕಿಕೊಂಡಿತು.
ನೀಲಾಳಿಗೆ ಪ್ರಾಯಶ್ಚಿತ್ತದ ಅರ್ಥವೂ ಗೊತ್ತಿರಲಿಲ್ಲ. ಅವಳು ಮೂರು ನದಿಗಳನ್ನು ದಾಟಿ ಈಗ ಸಮುದ್ರ ಸೇರುವ ಹಂತ ತಲುಪಿದ್ದಳು. ಒಂದನೇ ನದಿ ಮಾತ್ರ ಬತ್ತಿಹೋಗಿತ್ತು. ಉಳಿದೆರಡು ದಿಕ್ಕನ್ನು ಬದಲಿಸಿಕೊಂಡು ಹೇಗೋ ತೆಳ್ಳಗೆ ಹರಿವನ್ನು ಉಳಿಸಿಕೊಂಡಿದ್ದವು.
ನೀಲಾಳಿಗೆ ಪ್ರಾಯಶ್ಚಿತ್ತದ ಅರ್ಥವೂ ಗೊತ್ತಿರಲಿಲ್ಲ. ಅವಳು ಮೂರು ನದಿಗಳನ್ನು ದಾಟಿ ಈಗ ಸಮುದ್ರ ಸೇರುವ ಹಂತ ತಲುಪಿದಳು.





