ಸ್ವಾಮಿಪೊನ್ನಾಚಿ
ನಾನು ಕೆಲಸ ಮಾಡುತ್ತಿದ್ದ ಶಾಲೆಯ ಮುಂಭಾಗದ ಓಣಿ ದಾಟಿ ನಾಲ್ಕು ಕಿಲೋಮೀಟರ್ ನಡೆದರೆ ದಟ್ಟವಾದ ಮುಗ್ಗೂರಿನ ಕಾಡು ಸಿಗುತ್ತದೆ. ಇಪ್ಪತ್ತರಿಂದ ಮುವ್ವತ್ತು ಜನರ ಗುಂಪು ಹೆಗಲ ಮೇಲೆ ನಾಡಬಂದೂಕು ಇಟ್ಟುಕೊಂಡು ಘನ ಗಂಭೀರದ ಮೌನದಲ್ಲಿ ಇರುವೆ ಸಾಲಿನಂತೆ ಸಾಗುತ್ತಿದ್ದರು. ಅವರೆಲ್ಲರೂ ನನ್ನ ಶಾಲೆಯ ಮಕ್ಕಳ ಪೋಷಕರಲ್ಲಿ ಏನಿದು ಎಂದು ವಿಚಾರಿಸುವ ಎಂದರೆ ಅವರ ಭಯಂಕರ ಮೌನ ನನ್ನಲ್ಲೂ ಒಂದು ಅವ್ಯಕ್ತ ಭಯ ಉಂಟು ಮಾಡಿಬಿಟ್ಟಿತ್ತು. ಬಾಲ್ಯದಲ್ಲಿ ಈ ತರಹ ಬಂದೂಕು ಹಿಡಿದು ವೀರಪ್ಪನ್ ತಂಡದವರನ್ನು ಮತ್ತು ಮೆಷಿನ್ ಗನ್ ಹಿಡಿದ ಎಸ್‌ಟಿಎಫ್‌ನವರನ್ನು ಮಾತ್ರ ಹೀಗೆ ಗುಂಪಾಗಿ ಕಂಡಿದ್ದ ನನಗೆ, ಅದಾಗಿ ಬಹಳ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ದೃಶ್ಯ ಸೋಜಿಗವನ್ನುಂಟು ಮಾಡಿತು. ಈ ಕಾಲದಲ್ಲೂ ಇಷ್ಟು ಸುಲಭವಾಗಿ ಹಾಡು ಹಗಲಲ್ಲೇ ನಾಡಬಂದೂಕು ಹೆಗಲೇರಿಸಿಕೊಂಡು ಹೋಗುವವರ ಧೈರ್ಯವನ್ನು ಮೆಚ್ಚಬೇಕು. ಅರಣ್ಯ ಇಲಾಖೆಯವರು ಇವರನ್ನು ಏನು ಮಾಡುವುದಿಲ್ಲವೇ ಎಂದು ಆಶ್ಚರ್ಯವೂ ಆಯಿತು. ನನಗೆ ಕುತೂಹಲ ತಡೆಯಲಾಗಲಿಲ್ಲ. ಕೊನೆಯಲ್ಲಿ ಬರುತ್ತಿದ್ದ ಭದ್ರಣ್ಣನನ್ನು ಕೇಳಿದೆ. ಅಯ್ಯೋ ಸಾರ್ ಸೋಬಡಿಗೆ ಹೋಗ್ತಾ ಇದ್ದೀವಿ, ನೀವು ಬರ್ತೀರಾ ಅಂದರು. ಸೋಬಡಿ ಪದ ಅದೇ ಮೊದಲು ಕೇಳಿದ್ದು. ಏನು ಹಾಗಂದರೆ ಎಂದೆ. ಬೇಟೆ ಆಡೋಕೆ ಹೋಗ್ತಾಯಿದ್ದೀವಿ ಕಣ್ ಬನ್ನಿ, ಮಜಾ ಇರುತ್ತೆ ಎಂದು ಸಲುಗೆಯಿಂದಲೇ ಕರೆದಾಗ ಇಂಥ ಚಾನ್ಸ್ ಮಿಸ್ ಮಾಡಿಕೊಳ್ಳಬಾರದು ಅಂತ ಅವರ ಜೊತೆ ಹೊರಟುಬಿಟ್ಟೆ. ಬೇರೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅದೇ ಊರಿನ ರಮೇಶ ಅಂದು ರಜೆ ಹಾಕಿ ಹೊಲಕ್ಕೆ ಬಿತ್ತನೆ ಮಾಡಲು ಬಂದಿದ್ದ. ನಾನು ಸೋಬಡಿಯವರ ಜೊತೆ ಹೋಗುವುದನ್ನು ನೋಡಿ ನನಗೆ ಜೊತೆಯಾಗಲಿ ಎಂದು ಅವನೂ ಬಂದ.
ಸೋಬಡಿಯಲ್ಲಿ ಹದಿನೈದರಿಂದ ಇಪ್ಪತ್ತು ಅಥವಾ ಅದಕ್ಕಿಂತ ಹೆಚ್ಚು ಜನ ಬೇಟೆಗಾರರ ಗುಂಪು ಇರುತ್ತದೆ. ಅದರಲ್ಲಿ ನಿರ್ದಿಷ್ಟ ಕಾಡಿನ ಭಾಗವನ್ನು ಸುತ್ತುಗಟ್ಟಿ ಗಟ್ಟಿಯಾದ ದೊಣ್ಣೆಗಳನ್ನಿಡಿದು ಗದ್ದಲವೆಬ್ಬಿಸಿ ಪ್ರಾಣಿಗಳನ್ನು ಒಂದು ಕಡೆಗೆ ಓಡುವಂತೆ ಮಾಡುವ ದೈಹಿಕವಾಗಿ ಬಹಳ ಗಟ್ಟಿಮುಟ್ಟಾದ ಕೈಯಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆಲಿಸುವಿಕೆ ಉತ್ತಮ ವಾಗಿರುವ ಸೂಕ್ಷ್ಮಗ್ರಾಹಿಗಳಾದ ಮೂರ್ನಾಲ್ಕು ಮಂದಿ ಕೊಂಬಾಳುಗಳನ್ನು ಕೂಗಿದರೆ ಕೇಳಿಸುವ ಹಾಗೆ ಹತ್ತಿರದ ಆಯಕಟ್ಟಿನ ಜಾಗಗಳಲ್ಲಿ ನಿಲ್ಲಿಸುತ್ತಾರೆ. ಪ್ರಾಣಿಗಳನ್ನು ಗದರಿಸಿ ಒಂದೇ ದಿಕ್ಕಿಗೆ ಬರುವಂತೆ ಮಾಡುವ ಕೈಯಾಳುಗಳು ಪ್ರಾಣಿಯನ್ನು ಗಮನಿಸುತ್ತಾ ತನಗೆ ಗೊತ್ತುಮಾಡಿದ ಕೊಂಬಾಳುವಿಗೆ ಪ್ರಾಣಿ ಈ ಕಡೆ ಬರುತ್ತಿದೆ, ಮೇಡು ಹತ್ತಿತು, ಕಡಕಲು ನೆಗೆಯುತ್ತಿದೆ ಎಂದೆಲ್ಲ ಕಿರುಚುತ್ತಾ ಕೊಡುವ ಮಾಹಿತಿಗಳನ್ನು ಸರಿಯಾಗಿ ಗ್ರಹಿಸಿ ತನ್ನ ಪಕ್ಕದಲ್ಲಿರುವ ಬಂದೂಕುಧಾರಿಗೆ ಹೇಳುತ್ತಾ ಹೋಗುವುದು ಕೊಂಬಾಳುವಿನ ಕೆಲಸ. ಕೈಯಾಳು ಮತ್ತು ಕೊಂಬಾಳುಗಳು ಕೊಡುವ ಅಧಿಕೃತ ಸೂಚನೆಯನ್ನು ಅನುಸರಿಸಿ ಆಯಕಟ್ಟಿನ ಜಾಗದಲ್ಲಿ ಕೂತ ಬಂದೂಕುಧಾರಿ ಮಿಕ ಬಂದ ಕೂಡಲೇ ಗುರಿಯಿಟ್ಟು ಹೊಡೆಯುತ್ತಾನೆ.
ಇದನ್ನೂ ಓದಿ: ೩ ತಿಂಗಳಿಂದ ವಿತರಣೆಯಾಗದ ಪೌಷ್ಟಿಕ ಆಹಾರಗಳ ಕಿಟ್
ಮಿಕಕ್ಕೆ ಗುಂಡೇಟು ಬಿತ್ತೋ ಅಲ್ಲಿಗೆ ಬೇಟೆ ಮುಗೀತು. ಇಲ್ಲವಾ ಅದೇ ದಾರಿಯಲ್ಲಿ ಮತ್ತೊಬ್ಬ ಬಂದೂಕು ಧಾರಿ ಕುಳಿತಿರುತ್ತಾನೆ. ಅವನಿಗೂ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಮಿಕ ಮೂರನೆಯವನ ಬಂದೂಕಿನ ಗುಂಡಿಗೆ ಆಹುತಿ ಆಗಲೇಬೇಕು. ಹೀಗೆ ಎರಡು ಮೂರು ಗುಂಪುಗಳಲ್ಲಿ ಕೊಂದಮಿಕಗಳನ್ನು ಕಾಡಿನಲ್ಲಿ ಪಾಲು ಹಾಕಿಕೊಂಡು ತಮ್ಮ ಪಾಲಿಗೆ ಬಂದ ಮಾಂಸವನ್ನು ಲುಂಗಿಯಲ್ಲಿ ಕಟ್ಟಿಕೊಂಡು ಸಂಜೆ ಮನೆಗೆ ವಾಪಸ್ ಆಗುತ್ತಾರೆ. ನಾನು, ರಮೇಶ, ಭದ್ರಣ್ಣನ ಹಿಂದೆಯೇ ಕುತೂಹಲದಿಂದ ಮಾತನಾಡುತ್ತಾ ಹೋಗುವುದನ್ನು ಮುಂದೆ ಹೋಗುತ್ತಿದ್ದ ಶಂಭು ಮಾದಶೆಟ್ಟಿ ಗಮನಿಸಿ ಬೇಸರದಿಂದ ಹಿಂದೆ ತಿರುಗಿ, ಇವರನ್ನ ಯಾಕಪ್ಪ ಕರ್ಕಬಂದೆ? ಆನೆಗೀನೆ ಬಂದರೆ ಓಡ್ತಾರ ಅಂತ ಭದ್ರಣ್ಣನಿಗೆ ಬಯ್ಯುವುದಕ್ಕೆ ಶುರು ಮಾಡಿದ. ಏ ನಡೆಯಣ್ಣ, ನಂಗೂ ವಸಿ ಕಾಡಿಂದು ಅನುಭವ ಅದೆ ಎಂದೆ. ನಮ್ಮೂರಿನ ಬಗ್ಗೆ ಗೊತ್ತಿದ್ದ ಆತ ಸುಮ್ಮನೆ ನಡೆದ. ಕಾಡಿನ ನಡುಮಧ್ಯಕ್ಕೆ ಬರುವ ಹೊತ್ತಿಗೆ ಗಂಟೆ ಹನ್ನೊಂದು ಆಗಿತ್ತು. ಎಲ್ಲರೂ ಒಂದುಕಡೆ ಕಲ್ಲಿನ ಮೇಲೆ ಬಂದೂಕುಗಳನ್ನಿಟ್ಟು ಮದ್ದು ತುಂಬಿಸಿದರು. ಆಗ ತಾನೇ ಮಾಡಿಕೊಂಡು ಬಂದಿದ್ದ ಹಸಿಮದ್ದಿನ ಘಾಟು ಮೂಗಿಗೆ ಅಡರಿತ್ತು. ಒಣ ಎಕ್ಕದಕಡ್ಡಿಯ ಇದ್ದಲಿಗೆ ಗಂಧಕವನ್ನು ಹಾಕಿ ಮಿಕ್ಸ್ ಮಾಡಿದ್ದರಿಂದ ಅದು ವಾಂತಿ ಬರಿಸುವ ಮಟ್ಟಿಗೆ ವಾಸನೆ ಬರುತ್ತಿತ್ತು. ಎರಡು ಗುಂಪು ಮಾಡಿ ಕಾಡಿನ ಎರಡು ಕೊಂಚಲುಗಳಿಗೆ ಆಳುಗಳನ್ನು ಕಳಿಸಿದ ಮೇಲೆ ಬಂದೂಕುಧಾರಿಯಾದ ಶಂಭು ಮಾದಶೆಟ್ಟಿ ಮತ್ತು ಮಾದ್ಲ ನಾಯಕ ತಮ್ಮ ಕೊಂಬಾಳುಗಳ ಜೊತೆ ಉಳಿದರು. ಶಂಭು ಮಾದಶೆಟ್ಟಿ ಭಾರಿ ಬೇಟೆಗಾರ ಎಂದು ಕೇಳಿದ್ದ ನಾನು ಮತ್ತು ರಮೇಶ ಅವನೊಂದಿಗೆ ಬೆಟ್ಟದ ಇಳಿಜಾರಿನ ಹಳ್ಳದ ಕಮರಿ ಬಳಿಗೆ ಹೊರಟೆವು. ಮೇಲಿನಿಂದ ಕೆಳಕ್ಕೆ ಬರುವ ಪ್ರಾಣಿಗಳು ಹಳ್ಳದಾಟಿ ಬಂದರೆ ಈ ದಾರಿಯಲ್ಲೇ ಮುಂದಿನ ಗುಡ್ಡಕ್ಕೆ ದಾಟಬೇಕಿತ್ತು.
ಇದೇ ಸರಿಯಾದ ಜಾಗವೆಂದು ತೀರ್ಮಾನಿಸಿದ ಶಂಭು ಮಾದ ನಮ್ಮನ್ನು ಎತ್ತರದ ಬಂಡೆಯ ಮೇಲೆ ಕೂರಲು ಹೇಳಿ ತಾನು ಬಂದೂಕು ಸಿದ್ಧ ಮಾಡಿಕೊಂಡು ಸುಂಡ್ರೆ ಮೆಳೆಯ ಮರೆಯಲ್ಲಿ ಅವಿತು ಕುಳಿತ. ಇನ್ನೂ ಕೈಯಾಳುಗಳು ಗುಡ್ಡವನ್ನು ಸುತ್ತುವರಿದೇ ಇಲ್ಲ! ಅದೆಲ್ಲಿತ್ತೋ ಒಂದು ಮರಿಯಾನೆ ಸುಳಿವೇ ಕೊಡದೇ ಊಹಿಸದ ರೀತಿಯಲ್ಲಿ ಸುಂಡ್ರೆಮೆಳೆಯ ಮರೆಯಿಂದ ಬಂದು ಸೊಂಡಿಲಿನಿಂದ ಅವನ ಬಂದೂಕು ಕಿತ್ತು, ನೆಲಕ್ಕೆ ಹಾಕಿ ಕಾಲಿಟ್ಟು ಪುಡಿಪುಡಿ ಮಾಡಿತು. ತಪ್ಪಿಸಿಕೊಳ್ಳಲೆಂದು ನುಗ್ಗಿದ ಶಂಭುಮಾದನನ್ನು ಅನಾಮತ್ತಾಗಿ ಎತ್ತಿ ದೊಡ್ಡದಾದ ಸುಂಡ್ರೆ ಮುಳ್ಳಿನ ಮೆಳೆಗೆ ಎಸೆದು ತನ್ನ ಮರಿಯನ್ನು ಕರೆದುಕೊಂಡು ಪೊದೆಯಲ್ಲಿ ಮರೆಯಾಯಿತು. ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ಚೇತರಿಕೊಳ್ಳಲಾಗದೆ ನಾವು ಜೋರಾಗಿ ಕಿರುಚಿ ಕೊಂಡೆವು. ಶಂಭುಮಾದನ ಹತ್ತಿರದಲ್ಲೇ ಇದ್ದ ಕೊಂಬಾಳು ಸೇವನಾಯ್ಕ ಮೈ ಮೇಲೆ ಆವೇಶ ಬಂದವರ ಹಾಗೆ ಸುಂಡ್ರೆಮುಳ್ಳಿನ ಮೆಳೆಯ ಮೇಲೆ ಏರುತ್ತ ನೋವಿನಿಂದ ಕಿರುಚುತ್ತಾ ಇರುವ ಶಂಭುಮಾದನನ್ನು ಕೆಳಕ್ಕೆ ಇಳಿಸಲು ಪ್ರಯತ್ನಿಸುತ್ತಿದ. ನಾನು, ರಮೇಶ ಓಡೋಡಿ ಬಂದು; ಆನೆ ಹೋಯಿತಲ್ಲ ಗಾಬರಿ ಯಾಕೆ? ನಿಧಾನಕ್ಕೆ ಇಳಿಸಿ ಕೊಳ್ಳೋಣ, ಆತುರ ಮಾಡಿದರೆ ಮೈಮೇಲೆಲ್ಲಾ ಸುಂಡ್ರೆಮುಳ್ಳು ಚುಚ್ಚು ಕೊಳ್ಳುತ್ತೆ ಎಂದೆವು. ನಿಮಗೇನು ಗೊತ್ತು ಸುಮ್ನಿರಿ ಮೇಷ್ಟ್ರೇ ಆನೆ ವಾಪಸ್ ಬರುತ್ತದೆ ಎಂದವನೇ ಅಸಹನೆಯಿಂದ ಮುಳ್ಳು ಬಿಡಿಸಿದ. ಅಷ್ಟರಲ್ಲಿ ಎಲ್ಲರೂ ಇತ್ತಕಡೆ ಬಂದು ಐದೇ ನಿಮಿಷದಲ್ಲಿ ಮೆಳೆ ಕತ್ತರಿಸಿ ತೊಡೆ ಮುರಿದುಕೊಂಡು ಬಿದ್ದಿದ್ದ ಶಂಭುಮಾದನನ್ನು ಲುಂಗಿ ಅಡ್ಡಮುರಿಕಟ್ಟಿ ಸರಸರನೆ ಬಂಡೆಕಲ್ಲು ಏರಿದರು. ಯಾಕೆ ಇಷ್ಟು ಅವಸರ ಮಾಡುತ್ತಿ ದ್ದಾರೆಂದು ತಕ್ಷಣಕ್ಕೆ ಅರ್ಥವಾಗಲಿಲ್ಲ. ಪುನಃ ವಾಪಸ್ ಆನೆ ಎಲ್ಲಿ ಬರುತ್ತದೆ ಹೆದರಿಕೊಂಡು ಓಡಿ ಹೋಗಿದೆ ಎಂದು ಕೊಂಡಿದ್ದೆ. ನಾವೆಲ್ಲ ಅವನನ್ನು ಹೊತ್ತುಕೊಂಡು ಪೂರ್ತಿ ಬಂಡೆ ಹತ್ತಿರಲೇ ಇಲ್ಲ! ಚಂಡಿಬಾಲ ಎತ್ತಿ ಕೊಂಡು ಬಂದ ಆನೆ, ರೋಷದಿಂದ ಇಡೀ ಸುಂಡ್ರೆ ಮೆಳೆಯನ್ನು ಇಂಚಿಂಚೂ ಬಿಡದೆ ತುಳಿದು ಹಪ್ಪಳ ಮಾಡಿ ಶಂಭು ಮಾದ ನಿಗಾಗಿ ಹುಡುಕಾಡಿತು. ಸುತ್ತ ಹತ್ತಾರು ಮೀಟರ್ ಪರಿಧಿಯಲ್ಲಿ ತುಳಿಯುತ್ತಾ ಕೊನೆಗೆ ಅವನನ್ನು ಕಾಣದೆ ನಿರಾಶೆಯಿಂದ ಜೋರಾಗಿ ಘೀಳಿಡುತ್ತಾ ವಾಪಸ್ ಹೋಯಿತು.
ಹಿಂದಿನ ದಿನ ಆನೆಗಳ ಹಿಂಡು ಮುಗ್ಗೂರಿನ ರಾಮ್ಲಾನಾಯ್ಕನ ತೋಟಕ್ಕೆ ನುಗ್ಗಿವೆ. ಅವನು ಬಂದೂಕಿನಿಂದ ಗುಂಡು ಹಾರಿಸಿ ಆನೆಗಳನ್ನು ಕಾಡಿಗೆ ಅಟ್ಟಿದ್ದಾನೆ. ಆನೆಗಳ ಹಿಂಡು ದೂರ ಹೋಗಿಬಿಟ್ಟಿದೆ. ಇದೊಂದು ಮರಿಯಾನೆ ಮಾತ್ರ ಮರಿಯನ್ನು ಹೆಚ್ಚು ದೂರ ಸಾಗಹಾಕಲಾರದೆ ಅಲ್ಲೇ ಉಳಿದುಕೊಂಡಿದೆ. ಯಾವಾಗ ಮದ್ದಿನ ವಾಸನೆ ಅದಕ್ಕೆ ಬಿತ್ತೋ ಸರಿಯಾಗಿ ಆಘ್ರಾಣಿಸಿಕೊಂಡು ನೇರ ಶಂಭುಮಾದನ ಕಡೆ ನುಗ್ಗಿದೆ. ವಾಸನೆಯ ಸಿಟ್ಟಿಗೆ ಬಂದೂಕನ್ನು ಧ್ವಂಸ ಮಾಡಿ ಆಮೇಲೆ ಅವನನ್ನು ಮೆಳೆಗೆ ಎಸೆದು ಹೋಗಿದೆ. ನೋಡಿದ್ರಾ ಮೇಷ್ಟ್ರೇ ಆನೆ ಬರಲ್ಲ ಅಂದ್ರಲ್ಲಾ! ಮರಿಯನ್ನು ಜೋಪಾನ ಸ್ಥಳದಲ್ಲಿ ಬಿಟ್ಟು ವಾಪಸ್ ಇವನನ್ನು ತುಳಿಯಲು ಬಂದಿದೆ. ಸ್ವಲ್ಪ ಯಾಮಾರಿದ್ರೆ ಈವತ್ತು ಶಂಭುಮಾದನ ಕಥೆ ಅಷ್ಟೇ ಎಂದ ಖೇದದಿಂದ. ಇದ ಕೇಳಿ ಮೈಯೆಲ್ಲಾ ಬೆವರಿತು. ಅದು, ಬಂದೇ ಬರುತ್ತದೆ ಎಂದು ಗೊತ್ತಿದ್ದೇ ಅಷ್ಟು ಬೇಗ ಅವರೆಲ್ಲರೂ ಕ್ಷಣಮಾತ್ರದಲ್ಲಿ ಅವನನ್ನು ಮೆಳೆಯಿಂದ ಬಿಡಿಸಿ ದೂರ ತಂದಿದ್ದರು. ಪುಣ್ಯಕ್ಕೆ ಅವನ ಬಲತೊಡೆ ಮುರಿದು ಚರ್ಮ ಕಿತ್ತುಹೋಗಿದ್ದು ಬಿಟ್ಟರೆ ಪ್ರಾಣಾಪಾಯದಿಂದ ಪಾರು.
ಮೊನ್ನೆ ದಬ್ಬಗುಳಿ ಮಾರ್ಗದಲ್ಲಿ ಪೊನ್ನಾಚಿಗೆ ಹೋಗಬೇಕೆಂದು ಹೊರಟು ರಮೇಶನ ಜೊತೆ ಮಾತನಾಡುವಾಗ ಶಂಭುಮಾದಶೆಟ್ಟಿ ನೆನಪಾದ. ಬಾ ತೋರಿಸುತ್ತೇನೆ ಎಂದು ರಮೇಶ ಅರಳೀಮರದ ಜಗುಲೀಕಟ್ಟೆಯ ಕಡೆ ನಡೆದ. ಜಗುಲಿ ಮೇಲೆ ಆರಾಮಾಗಿ ಮಲಗಿದ್ದ ಅವನು ದೂರದಿಂದಲೇ ನನ್ನ ಗುರುತು ಹಿಡಿದ. ನೋಡಲು ಕೃಶವಾಗಿದ್ದ. ದೃಢಕಾಯನಾಗಿ ಒಂದೇ ಏಟಿಗೆ ಮೂರು ಮಿಕಗಳನ್ನು ಕೆಡವುತ್ತಿದ್ದ ಪರಾಕ್ರಮಿ ಈಗ ಮಂಡಿ ಎತ್ತಲಾರದೆ ಒದ್ದಾಡುವುದನ್ನು ನೋಡಿ ಅಯ್ಯೋ ಕಾಲವೇ ಎನಿಸಿತು. ಬಲತೊಡೆಯಲ್ಲಿ ಮೂಳೆ ಮುರಿದ ಗುರುತು ತೋರಿಸುತ್ತಾ ನೋಡಿ ಮೇಷ್ಟ್ರೇ ನೀವು ಸೋಬಡಿಗೆ ಬಂದ ದಿನವೇ ಹೀಗಾಯ್ತು, ಇಲ್ಲ ಅಂದಿದ್ರೆ ನನ್ನ ಪರಾಕ್ರಮ ನೋಡುತ್ತಿದ್ದೀರಿ ಎಂದ. ನಡೆ ಈಗಲೂ ಹೋಗೋಣ ಎಂದೆ. ಅಯ್ಯೋ ಸಾ ಆ ಕಾಲ ಹೋಯ್ತು ಬುಡಿ, ಈಗ ಕಾಡಿಗೆ ನುಗ್ಗೋ ಹಾಗಿಲ್ಲ. ಬಂದೂಕುಗಳನ್ನೆಲ್ಲ ಫಾರೆಸ್ಟ್‌ನವರು ಕಿತ್ಕೊಂಡು ಹೋಗಿದ್ದಾರೆ. ದನ ಮೇಯಿಸೋಕೆ ಅಂತ ಮಚ್ಚು ಕೂಡ ಕಾಡಿಗೆ ತಗೊಂಡು ಹೋಗೋ ಆಗಿಲ್ಲ ಎಂದ. ಅಂದಹಾಗೆ ಇದು ಸುಮಾರು ಎರಡು ದಶಕಗಳ ಹಿಂದಿನ ಘಟನೆ.
ಮತ್ತೆ ನಾಡಬಂದೂಕು ಹಿಡಿದು ಸೋಬಡಿಗೆ ಹೋಗುವ ಮಂದಿಯನ್ನು ಇನ್ನು ಜೀವಮಾನದಲ್ಲೂ ನೋಡುವುದಕ್ಕೆ ಆಗುವುದಿಲ್ಲ. ಎಷ್ಟು ಜನರಿಗೆ ಈಗ ಸೋಬಡಿ ಎಂದರೇನು ಗೊತ್ತಿರುವುದಿಲ್ಲ. ಮೊದಲೆಲ್ಲಾ ಅದೊಂದು ಸಂಭ್ರಮ. ಕಾಲಪಲ್ಲಟದಲ್ಲಿ ಎಲ್ಲವೂ ಮರೆಯಾಗಿ ಬಿಡುತ್ತದೆ. ಕೊನೆಗೆ ನಾವೂ!
” ಮೊದಲೆಲ್ಲಾ ಸೋಬಡಿ ಎಂಬುದು ಒಂದು ಸಂಭ್ರಮ. ಕಾಲಪಲ್ಲಟದಲ್ಲಿ ಎಲ್ಲವೂ ಮರೆಯಾಗಿ ಬಿಡುತ್ತದೆ. ಕೊನೆಗೆ ನಾವೂ… ಅಂದ ಹಾಗೆ ಇದು ಸುಮಾರು ಎರಡು ದಶಕಗಳ ಹಿಂದಿನ ಘಟನೆ”





