Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೂದಲು ವ್ಯಾಪಾರದ ರಂಗಮ್ಮ ಹೇಳಿದ ಸಂಗತಿಗಳು

ಮಧುಕರ ಮಳವಳ್ಳಿ

ಸದಾ ಭುಜದ ಮೇಲೆ ಎರಡು ದೊಡ್ಡ ಬ್ಯಾಗ್‌ನಂತಹ ಚೀಲಗಳು. ಮತ್ತೆ ತಲೆಯ ಮೇಲೆ ಒಂದು ಬಿದಿರು ಬುಟ್ಟಿ. ಅವುಗಳ ತುಂಬಾ ಪಾತ್ರೆಗಳು. ಬಹಳ ದಿನಗಳಿಂದಲೂ ಗಮನಿಸುತ್ತಾಯಿದ್ದೆ. ಇವರು ಯಳಂದೂರಿನಿಂದ ಸುಮಾರು ೪೦ ಕಿಲೋಮೀಟರ್ ದೂರ ಇರುವ ತಿ.ನರಸೀಪುರದಿಂದ ವ್ಯಾಪಾರಕ್ಕೆ ಬರುತ್ತಾರೆಯೆಂದು ತಿಳಿಯಿತು. ಈ ಸದೃಢ ಮೈಕಟ್ಟಿನ ಹೆಂಗಸರು ತಮ್ಮ ಜೊತೆಗೆ ಮಕ್ಕಳನ್ನೂ ಕರೆದುಕೊಂಡು ಬರುವರು. ಯಾವಾಗಲೂ ನಮಗೆ ಪರಿಚಯ ಇರುವ ಕ್ಯಾಂಟೀನ್‌ಗೆ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ ಬರುವುದು, ಹಳ್ಳಿ ಹಳ್ಳಿ ತಿರುಗಾಡಿ ಸಂಜೆ ವೇಳೆ ತಮ್ಮ ಊರಿಗೆ ತೆರಳುವುದು ರೂಢಿ.

ಇಂದು ಅವರನ್ನು ಮಾತಾನಾಡಿಸುವ ಯೋಗ ಕೂಡಿ ಬಂತು. ಜೊತೆ ಒಂದು ಹೆಣ್ಣು ಹುಡುಗಿ. ‘ಹೇ ಪುಟ್ಟ ಏನ್ ನಿನ್ನ ಹೆಸರು ’ ಎಂದು ಕೇಳಿದೆ. ನಗುತ್ತಲೇ ‘ಪ್ರೇಮ’ ಯೆಂದಳು. ‘ಸ್ಕೂಲ್ಗೆ ಹೋಗುತ್ತಾ ಇದಿಯಾ’ ಯೆಂದೆ. ‘ಹೂಂ, ಎಂಟನೇ ಕ್ಲಾಸ್’ ಎಂದಳು. ಮೊದಲೇ ಮೇಷ್ಟ್ರಾದ ನಾನು ‘ರಜೆಯಲ್ಲಿ ಪುಸ್ತಕ ಮುಟ್ಟಲ್ಲವೇನು ಅಂದೆ’. ಪ್ರೇಮ ಹೂ ನಗೆ ಬೀರಿ ಕ್ಯಾಂಟೀನ್ ಹೊಕ್ಕಳು.

ಊಟ ಬೇಗ ಮುಗಿಸಿ ಬಂದ ಪ್ರೇಮಳ ಜೊತೆಗೆ ಮತ್ತೊಬ್ಬಳು ಹೆಂಗಸು ಅವಸರವಾಗಿ ಹೆಗಲಿಗೆ ಬ್ಯಾಗ್ ಏರಿಸಿಕೊಂಡು, ತಲೆಯಲ್ಲಿ ಬುಟ್ಟಿ ಹೊತ್ತು ಬಸ್ಸಿನ ಕಡೆ ಹೊರಟರು. ಮಾತನಾಡಿಸಬೇಕು ಎನ್ನುವಾಗಲೇ ನನಗೆ ನಿರಾಸೆ ಆಯಿತು. ಒಮ್ಮೆ ಕ್ಯಾಂಟೀನ್ ಕಡೆಗೆ ನೋಡಿದೆ. ಒಬ್ಬ ಗಂಡಸು- ಹೆಂಗಸು ಇನ್ನು ಊಟ ಮಾಡುತ್ತಿದ್ದರು. ನಾನು ಕೂಡ ಅವರ ಎದರು ಕೂತೆ. ನಮಸ್ತೆ ಎನ್ನುವಾಗ ಅಂಜಿಕೆಯಿಂದಲೇ ನಮಸ್ಕಾರ ಎಂದು ತೆಲುಗು ಭಾಷೆಯಲ್ಲಿ ಇಬರೂ ಮಾತನಾಡಿಕೊಂಡರು. ಏನ್ ನಿಮ್ಮ ವ್ಯಾಪಾರ’ ಅಂದೆ. ತಕ್ಷಣ ಆ ಹೆಂಗಸು ‘ನಮ್ಮದು ಕೂದಲು ವ್ಯಾಪಾರ ಸ್ವಾಮಿ’ಯೆಂದಳು. ‘ನನ್ನ ಹೆಸರು ರಂಗಮ್ಮ ಇವರು ನಮ್ಮ ಯಾಜಮಾನರು ನಂಜಯ್ಯ’ಯೆಂದು ಪರಿಚಯ ಮಾಡಿಸಿದಳು.

‘ಸಾರ್ ನಾವು ನಲವತ್ತು ಕುಟುಂಬ, ನಮ್ಮ ಹಿಂದಿನವರು ದಾವಣಗೆರೆ ಕಡೆಯಿಂದ ವಲಸೆ ಬಂದವರು. ಕೂದಲು ವ್ಯಾಪಾರ ನಮ್ಮ ಕಸುಬು. ಒಂದು ಕೆಜಿ ಕೂದಲಿಗೆ ನಮಗೆ ಐದು ಸಾವಿರ ಸಿಗುತ್ತದೆ. ಆದರೆ ಅದನ್ನು ಸಂಪಾದನೆ ಮಾಡಬೇಕಾದರೆ, ಹತ್ತಾರು ಹಳ್ಳಿ ಸುತ್ತಬೇಕು. ಜೊತೆಗೆ, ಈ ಪಾತ್ರೆ-ಪಗಡೆ ಮಾರಾಟವಾಗಬೇಕು. ಇದಕ್ಕೂ ಬಂಡವಾಳ ಬೇಕು ’ಎಂದ ರಂಗಮ್ಮ, ಸ್ವಾಮಿ ಪಾತ್ರೆಗೆ ೧ ಕೆಜಿಗೆ ೪೦೦ ರೂಪಾಯಿ ಆಗುತ್ತದೆ. ನಮಗೆ ಅದು ೩೦-೪೦ ರೂಪಾಯಿ ಲಾಭ ತಂದು ಕೊಡುತ್ತದೆ ಎನ್ನುವಾಗ, ‘ಹಳ್ಳಿಗಳಲ್ಲಿ ಜನ ಹ್ಯಾಗೆ ಇರುತ್ತಾರೆ ನಿಮ್ಮ ಜೊತೆಗೆ ’ ಎಂದೆ. ಹೊಸ ಊರು ಆದರೆ ಸ್ವಲ್ಪ ಕಷ್ಟನೇಸ್ವಾಮಿ, ಒಂದ್ ಒಂದ್ ಸಾರಿ ಕುಡಿಯೋಕೆ ನೀರು ಕೊಡಲ್ಲ. ಪರಿಚಯದ ಊರಿನಲ್ಲಿ ವ್ಯಾಪಾರ ಸರಾಗ. ದಿನಕ್ಕೆ ಎರಡೋ-ಮೂರು ಊರಿಗೆ ಹೋಗ್ ಬಂದರೆ ಒಂದು ಅಷ್ಟು ಕೂದಲು ಸಿಗುತ್ತೆ ಎಂದು ಉಸಿರು ಬಿಟ್ಟಳು ರಂಗಮ್ಮ.

‘ಜೀವನ ಹ್ಯಾಂಗೆ ’ಅಂದೆ. ’ಸುಮಾರು ವರ್ಷದಿಂದಲೂ ಪ್ಲಾಸ್ಟಿಕ್ ಚೀಲದ ಗುಡಿಸಲೇ ಗತಿ, ಯಾವುದೋ ಕಾಲದಲ್ಲಿ ನಮ್ಮ ಹಿರಿಯರು ಈ ಕಡೆಗೆ ಬಂದು ವ್ಯಾಪಾರ ಶುರು ಮಾಡಿದ್ದರು, ನಮ್ಮದು ಕೂಡ ಅವರದ್ದೇ ದಾರಿಯಾಗಿದೆ. ಆದರೆ ನಮಗೆ ಅಲ್ಲೂ ಜಾಗ ಇಲ್ಲ, ಇಲ್ಲೂ ಕೂಡ ಈಗ, ಸರ್ಕಾರದವರು ನಮ್ಮದು ಅಂತ ಜಾಗ ತೋರಿಸವರೆ, ಅದು ಇನ್ನು ನಮ್ಮ ಜನರ ಹೆಸರಿಗೆ ಆಗಿಲ್ಲ. ಅಕ್ಕಿ ಕಾರ್ಡ್ ಸಿಕ್ಕದೆ, ನಾವು ಇನ್ನು ಗುಡಿಸಲಲ್ಲೇ ಕಾಲ ನೂಕ್ತಾ ಇದ್ದೀವಿ. ಬಂಡವಾಳಕ್ಕೆ ಅಂತ. ಸಾಲ ಮಾಡಿದ್ದೀವಿ. ವಾರಕೊಂದು ಬಾರಿ ದುಡು  ಕಟ್ಟುತ್ತಿವಿ. ಓಟಿನ ಕಾಲದಲ್ಲಿ ಬಂದು ಭರವಸೆ ಕೊಡುತ್ತಾರೆ ಎಂದ ನಂಜಯ್ಯ . ‘ನಮಗೆ ಒಂದೇ ತೊಂದರೆ. ಸ್ನಾನ ಮಾಡಬೇಕು ಅಂದರೆ ಕತ್ತಲೆಯನ್ನೇ ಕಾಯಬೇಕು’ , ಅದೂ ಸೀರೆಯ ಮರೆಯಲ್ಲಿ. ನಮಗೆ ಸ್ನಾನಕ್ಕೆ ಅಂತ ಒಂದು ಜಾಗ ಮಾಡಿಕೊಟ್ಟರೆ ನೆಮ್ಮದಿಯಾಗಿ ಜೀವನ ಕಳೆಯಬಹುದು ಎಂದು ಒಂದೇ ಉಸಿರಿಗೆ ರಂಗಮ್ಮ ಹೇಳಿದಳು.

” ನಮಗೆ ಒಂದೇ ತೊಂದರೆ ಸ್ನಾನ ಮಾಡಬೇಕು ಅಂದರೆ ಕತ್ತಲೆಯನ್ನೇ ಕಾಯಬೇಕು, ಅದೂ ಸೀರೆಯ ಮರೆಯಲ್ಲಿ. ನಮಗೆ ಅಂತ ಒಂದು ಜಾಗ ಮಾಡಿಕೊಟ್ಟರೆ ನೆಮ್ಮದಿಯಾಗಿ ಜೀವನ ಕಳೆಯಬಹುದು ಎಂದು ಒಂದೇ ಉಸಿರಿಗೆ ರಂಗಮ್ಮ ಹೇಳಿದಳು”

Tags:
error: Content is protected !!