Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪೌರಕಾರ್ಮಿಕ ಶೋಭಾ ಹೇಳಿದ ಸಂಗತಿಗಳು…

ಮಧುಕರ ಮಳವಳ್ಳಿ

ಕೆಲದಿನಗಳ ಹಿಂದೆ ಪೌರಕಾರ್ಮಿಕರು ತಮ್ಮ ನೌಕರಿಯ ಖಾಯಂಗಾಗಿ ಮುಷ್ಕರ ನಡೆಸುತ್ತಿದ್ದರು.ಇದರಿಂದಾಗಿ ಇಡೀ ಯಳಂದೂರು ಪಟ್ಟಣವೂ ಕಸದಿಂದ ತುಂಬಿಹೋಗಿತ್ತು. ಆಗ ಬರೀ ನಗುವಿನಿಂದಲೇ ನಮಸ್ತೇ ಸಾ ಎಂಬ ನುಡಿಯಿಂದಲೇ ಪರಿಚಯವಿದ್ದ ಶೋಭಾಳನ್ನು ಏನು ಮೇಡಂ ನಿಮ್ಮ ಮುಷ್ಕರ ಮುಗಿತಾ ಅಂದೆ. ಆಗ ಶೋಭಾ ‘ಅದು ಬುಡಿ ಸಾ, ಈಗ ನಿಮ್ಮ ಜೊತೆಗೆ ಮಾತಾನಾಡ ಬಹುದಾ ಸಾ’ ಎಂದಳು. ಬನ್ನಿ ಏನ್ ಸಮಾಚಾರಯೆಂದೆ. ಸಾ ನಾವು ಎಡ್‌ಬಿಡಂಗಿಗಳು ಇತ್ತಾಗೆ ಓದು ಸರಿಯಾಗಿ ಇಲ್ಲ. ಅತ್ತಾಗೆ ಸರ್ಕಾರದವರು ನಮ್ಮ ಕೆಲಸಗಾರು ಅಂತ ಹೇಳಿ ಸಂಬಳಾನೂ ಸರಿಯಾಗಿ ಕೊಡುತ್ತಿಲ್ಲ. ನಮ್ಮ ಕತೆ ಹಿಂಗೇ ಎನ್ನುತಾ ಪಕ್ಕದಲ್ಲೇ ಕುಳಿತಳು.

ಯಾಕೆ ನೀವು ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ ಪಾಸು ಮಾಡಿಲ್ಲವಾ ಎಂದೆ. ಅಯ್ಯೋ ಸಾ ಅದು ಒಂದು ಕರ್ಮದ ಕತೆ. ನಿಮಗೆ ಬೇಜಾರ್ ಆಗ್‌ಬಹುದು. ನಾನು ಸ್ಕೂಲ್ಗೆ ಹೋಗುತ್ತಾಯಿದ್ದೆ. ಲಾಂಗ್ ಜಂಪ್, ರನಿಂಗ್, ನಂಗೆ ಇಷ್ಟವಾದ ಆಟ. ಡ್ಯಾನ್ಸ್ ಕೂಡ ಚನ್ನಾಗಿ ಮಾಡುವೆ. ಅದರೆ ಆ ಹೆಡ್‌ಮೇಷ್ಟರು ಒಂದು ತಪ್ಪ ಮಾಡಿದ್ದರು. ನಾವು ಕೊನೆ ಬೆಂಚು, ಹೋಮ್‌ವರ್ಕ್ ಮಾಡ್‌ಕಂಡು ಹೋದರೆ. ಸರಿಯಾಗಿ ನೋಡುತ್ತಾ ಇರ್ಲಿಲ್ಲ. ಮತ್ತೆ ನಿಮಗೆ ಯಾಕೆ ಓದು? ತೊಳೆಯುವ ಕೆಲಸ ಇದಿಯಲ್ಲ ಎನ್ನುತ್ತಾ ಇದ್ದರು. ಆಗಾ ಮನಸ್ಸಿಗೆ ತುಂಬಾ ಬೇಸರ ಆಗ್ತಿತ್ತು. ಆವತ್ತು ಒಂದು ದಿನ ನಮ್ಮ ಮೇಷ್ಟರು ಯಾರೋ ಆಫೀಸ್ಸರ್ ಬರ‍್ತಾರೆ ಅಂತ ನನ್ನ ಕರೆದು ಪೊರಕೆ ಎಸದು. ನಿಮ್ಮ ಕಡೆ ಜನ ಬಂದಿಲ್ಲ ನೀನೆ ಆ ಟಾಯ್ಲೆಟ್ ತೊಳೆದು ಬಿಡು ಅಂದರು. ನಂಗೆ ಆಳು ಬಂದ್ಹಂಗೆ ಆಯಿತು. ಆದರೂ ಭಯದಿಂದ ತೊಳೆದೆ ಆವತ್ತೇ ಕೊನೆ ಸ್ಕೂಲ್ ಎಂದಳು.

ಮತ್ತೆ ಮುಂದುವರಿದು ‘ಸಾ ಯಾಕ್ ಸಾ ಮಕ್ಕಳು ಅಂತ ತಿಳಿದೇ ಮೇಷ್ಟರುಗಳು ಆ ಕೆಲಸ ಮಾಡುಸುತ್ತಾರೆ ಸಾ’ ಎಂದು ಕೇಳಿದಳು. ಒಂದು ಘಳಿಗೆ ಇಬ್ಬರೂ ಮೌನವಾದೆವು. ಈಗ ಹೇಗಿದೆ ಜೀವನಯೆಂದೆ. ಅದ್ ಬಿಡಿ ಸಾ ಗಂಡ ಹೊಡೆದಂಗಲ್ಲ, ಹೆಂಡತಿ ಅತ್ತಂಗಲ್ಲ ಆ ಪರಿಸ್ಥಿತಿ ನಮ್ಮದು. ನೀವು ಒಂದು ಸಹಾಯ ಮಾಡ್‌ಬೇಕು ಅಂದಳು . ಏನದು? ಅಂದೆ ‘ಸಾ ನಮ್ಮ ಬೀದಿಯಲ್ಲಿ ಮಕ್ಕಳು ಯಾವಾಗಲೂ ಕೇರಿಯ ಒಳಗೆ ಕುಣಿತಾ ಇರುತ್ತವೆ. ವಾರಕ್ಕೆ ಎರಡು ದಿನ ಸ್ಕೂಲ್ಗೆ ಹೋದರೆ ಹೆಚ್ಚು. ಸುಮಾರು ೧೦ರಿಂದ ೧೫ ಮಕ್ಕಳು ಅವೆ . ಏನಾದರೂ ಮಾಡಿ ಅವು ಸ್ಕೂಲ್ ಹೋಗೋ ಅಂಗೆ ಮಾಡ್ ಬೇಕ್ ಅಲ್ಲ’ ಎನ್ನುತ್ತಾ ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದಳು.

ನಾನು ಪ್ರಯತ್ನ ಮಾಡುವೆಯೆಂದೆ. ಅವಳೇ ಮುಂದುವರಿದು ‘ಸಾ ನಿಮ್ಮ ಜೊತೆಗೆ ನಾ ಸಮನಾಗಿ ಕುಳಿತು ಮಾತಾನಾಡುದು ಬೇಜಾರು ಇಲ್ಲ ತಾನೆ’ ಎಂದು ಕೇಳಿದಳು. ಆಗ ನಂಗೆ ಈ ಸಮಾಜದ ಕೆಲವು ಮನಸ್ಸುಗಳು ತಳವರ್ಗದ ಜನರ ಮನಸ್ಸನ್ನು ಹೇಗೆ ರೂಪಿಸಿವೆ ಎಂದುಕೊಂಡೆ ಮುಂದುವರೆದು ಜೀವನ ಹೇಗಿದೆ ಎಂದು ಕೇಳಿದೆ.

‘ಅದಾ ಸಾ, ಬುದ್ಧ್ದಿ ಬರೋಕೆ ಮುಂಚೆ ಮದುವೆ ಆಯ್ತು ಕುಡುಕನೊಂದಿಗೆ, ಈಗ ವಿಧವೆ. ಎರಡು ಮಕ್ಕಳು, ಈಗ ಅವರ್ ಕತೆ ಅವರಿಗೆ ನನ್ನ ಕತೆ ನಂಗೆ. ಮಗ ನಮ್ಮ ಕೆಲಸನೇ ಮಾಡುತ್ತಾನೆ. ಮಗಳಿಗೆ ಮದುವೆ ಆಗಿದೆ’ ಎಂದು ನಗುತ್ತಾ ಹೇಳಿ, ಮತ್ತೆ ಹಿಂಗೆ ವಾರಕ್ಕೆ ಒಂದು ಸಾರಿ ಸಿಕ್ಕಿ ಸಾ ಖುಷಿಯಾಗಿ ಮಾತನಾಡುವ ಎನ್ನುತ್ತ ಲೋಟದಲ್ಲಿದ್ದ ಟೀ ಮುಗಿಸತೊಡಗಿದಳು.

ಆಕೆ ಮತ್ತೆ ಮುಂದುವರಿದು ಸಾ ಯಾಕ್ ಸಾ ಮಕ್ಕಳು ಅಂತ ತಿಳಿದೇ ಮೇಷ್ಟರುಗಳು ಆ ಕೆಲಸ ಮಾಡುಸುತ್ತಾರೆ ಸಾ ಎಂದು ಕೇಳಿದಳು

Tags:
error: Content is protected !!