ಮೆಳೇಕಲ್ಲಳ್ಳಿ ಉದಯ
ನಾನೂ ಗಣೇಶ್ ಇದ್ದದ್ದು ಮಹಾರಾಜ ಹಾಸ್ಟೆಲಿನ ೧೦೧ನೇ ರೂಮಿನಲ್ಲಿ. ಪ್ರಾರಂಭದಲ್ಲಿ ನಾವು ಚೆನ್ನಾಗಿಯೆ ಸಿಳ್ಳೆ ಹೊಡೆದುಕೊಂಡು ಓಡಾಡುತಿದ್ವಿ.
ತೂಕದಲ್ಲಿ ನಾವಿಬ್ಬರೂ ನಲವತ್ತು ಕೇಜಿ ಒಳಗೆ ಇದ್ದುದರಿಂದಲೂ ಹಾಗೂ ಸಿಳ್ಳೆ ಹೊಡೆದುಕೊಂಡು ಓಡಾಡುತ್ತಿದ್ದು ದರಿಂದಲೂ ನಮ್ಮನ್ನು ನಾವೇ ಸಿಳ್ಳೆಕ್ಯಾತರೆಂದು ಕರೆದುಕೊಂಡಿದ್ದೆವು. ಬರುಬರುತ್ತಾ ಹಾಸ್ಟೆಲಿನಲ್ಲಿ ನಮಗೆ ಊಟ ನಿಲ್ಲಿಸುತ್ತಿದ್ದರು. ಕಾರಣ ನಮಗೆ ಸ್ಕಾಲರ್‌ಶಿಪ್ ಬರಲು ತಡವಾಗುತ್ತಿದ್ದುದು ಹಾಗೂ ಹಾಸ್ಟೆಲ್ಲಿನ ಊಟದ ಬಿಲ್ಲು ನಮ್ಮ ಸ್ಕಾಲರ್‌ಶಿಪ್‌ಗಿಂತ ಹೆಚ್ಚಾಗಿ ಬರುತ್ತಿದ್ದುದು.
ಮನೆಯಲ್ಲಿ ನಮಗೆ ಹಣ ಕಳುಹಿಸುತ್ತಿದ್ದುದು ತಡವಾದ ಕಾರಣ ತಿಂಗಳಲ್ಲಿ ಐದಾರು ದಿನ ಊಟಕ್ಕೆ ತೊಂದರೆಯಾಗುತ್ತಿತ್ತು. ಆ ದಿನಗಳಲ್ಲಿ ನಾವಿಬ್ಬರೂ ಹಸಿದೇ ಇರುತ್ತಿದ್ದೆವು. ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ಟೀ ಮತ್ತು ಬ್ರೆಡ್ಡು ಮಾರುತ್ತಿದ್ದ ಜಾಗದಲ್ಲಿ ನಾವಿಬ್ಬರೂ ಚೋಟಾ ಟೀ ಮತ್ತು ನಾಕಾಣೆ ಬ್ರೆಡ್ಡು ತಿನ್ನುತ್ತಿದ್ದೆವು.
ರಾತ್ರಿ ನಾವಿಬ್ಬರೂ ಮಲಗಿದಾಗ ಗಣೇಶ್ ಹೇಳುತ್ತಿದ್ದ ಮಾತು ಇನ್ನೂ ನೆನಪಿನಲ್ಲಿದೆ, ‘ನಾವು ಎರಡು ದಿನ ಕಕ್ಕಸ್ಸಿಗೆ ಹೋಗಬಾರದು ಕಣೋ, ತಿಂದ ಟೀ ಬ್ರೆಡ್ಡು ಹೊಟ್ಟೆಯಲ್ಲೆ ಉಳಿದಿ ರಲಿ’. ಅಂತಾ ಗೆಳೆಯ ದೂರ ಹೋದ… ಆದರೂ ಆ ಮಾತುಗಳು ಇನ್ನೂ ಎದೆಯಲ್ಲೇ ಉಳಿದಿವೆ.
(ಲೇಖಕರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಮೊಗಳ್ಳಿಯವರ ಸಹಪಾಠಿ)





