Mysore
22
broken clouds
Light
Dark

ಯುದ್ಧವು ಆ ದೇಶಗಳ ಪಕ್ಕೆಲುಬುಗಳನ್ನು ಮುರಿದು ಬೀದಿಯಲ್ಲಿ ಬಿಸಾಕಿತ್ತು

  • ಮಂಜುನಾಥ್ ಕುಣಿಗಲ್

ಪ್ರಸ್ತುತ “ಇಸ್ರೇಲ್-ಹಮಾಸ್” ಮತ್ತು “ಉಕ್ರೇನ್-ರಷ್ಯಾ” ಯುದ್ಧಗಳು ಜಗತ್ತಿನೆಲ್ಲೆಡೆ ಕೊಂಚ ಭೀತಿಯನ್ನು ತಂದೊಡ್ಡಿರುವುದು ನಿಜವೇ. ಯುದ್ಧಕ್ಕೆ ಏನೇ ಕಾರಣ ಇರಲಿ, ಅದರ ಅಪಾರ ಜೀವ-ದ್ರವ್ಯ ನಷ್ಟಗಳನ್ನು ಎಂದಿಗೂ-ಯಾರೂ ಭರಿಸಲಾರರು ಎಂಬುದು ಅಷ್ಟೇ ಸತ್ಯ.ಕೇವಲ ಯುದ್ಧಾಸ್ತ್ರಗಳನ್ನು ಮಾರುವ ಕಂಪನಿಗಳಷ್ಟೇ ಅಲ್ಲದೆ ಯುದ್ಧಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಸೇವೆ ಒದಗಿಸುವ ಕಂಪನಿಗಳೂ ಬಹಳಷ್ಟಿವೆ. 2006 ರಿಂದ 2020ರ ನಡುವೆ ನಾನು ಲೆಕ್ಕವಿಲ್ಲದಷ್ಟು ಸಲ ಯುದ್ಧಪೀಡಿತ ಆಫ್ಘಾನಿಸ್ತಾನ, ಇರಾಕ್, ಇತರೆ ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳಿಗೆ ಹೋಗಿ ಬಂದಿದ್ದೇನೆ. ಹೆಚ್ಚಿನ ಭಾಗ ಮಿಲಿಟರಿ ಯುದ್ಧಶಿಬಿರಗಳಲ್ಲಿ ಕಾಲ ಕಳೆದಿದ್ದೆನಾದರೂ ಕೆಲವು ಸಲ ಸೇನಾ ಶಿಬಿರದ ಹೊರಗೂ ಮತ್ತು ಯುದ್ಧಕ್ಕೆ ತೆರೆದುಕೊಂಡ ಅಸುರಕ್ಷತಾ ವಲಯಗಳಲ್ಲಿಯೂ ಸುತ್ತಾಡಿದ್ದಿದೆ. ಎಲ್ಲವೂ ಕೆಲಸದ ಭಾಗವಾಗಿ ವಾತ್ರ! ಅಂದಿನ ಯುದ್ಧದ ಕಾಲಘಟ್ಟದಲ್ಲಿ ನನ್ನ ಅನುಭವಕ್ಕೆ ಬಂದ ಈ ಕೆಲವು ಸಂಗತಿಗಳು ನನ್ನನ್ನು ದೀರ್ಘ ಕಾಲದವರೆಗೆ ಕಾಡಿವೆ.

ಅಂದು ಮುಖ್ಯ ಮಿಲಿಟರಿ ಶಿಬಿರದಿಂದ ದೂರದ ಇನ್ನೊಂದು ಉಪಶಿಬಿರಕ್ಕೆ ಹೊರಟ ನ್ಯಾಟೋ ಮಿಲಿಟರಿ ಕಾರವಾನಿನ ಸಾಲಿನಲ್ಲಿ ನಾನೂ ಇದ್ದೆ. ಬೆಳಗ್ಗೆ ಹತ್ತು-ಹನ್ನೊಂದರ ಸಮಯವಿದ್ದಿರಬಹುದು. ಯಾವುದೋ ಒಂದು ಹಳ್ಳಿ ಕಾಣಿಸುತ್ತಿತ್ತು. ರಸ್ತೆಯ ಮುಂದೆ ಅದೇನೋ ಢಾಂ… ಎನ್ನುವ ಶಬ್ದ ದಿಢೀರನೆ ಬಂದು ಬೆಂಕಿಯ ಉರಿ ಒಮ್ಮೆಗೆ ಒಂದಷ್ಟು ಜಾಗದಲ್ಲಿ ಆವರಿಸಿಕೊಂಡಿತು. ಇದ್ದಕ್ಕಿದ್ದ ಹಾಗೆ ಗುಂಡಿನ ಮೊರೆತ ಶುರುವಾಯಿತು. ವಾಕೀ-ಟಾಕಿಯಂತಿದ್ದ ರೇಡಿಯೋ ಸಾಧನ ಅಸ್ಪಷ್ಟ ಗಾಬರಿ ದನಿಯಲ್ಲಿ ಕಿರುಚುತ್ತಿತ್ತು. ನಾನಿದ್ದ ಮಿಲಿಟರಿ ಟ್ಯಾಂಕ್ ನಂತಹ ವಾಹನದಲ್ಲಿದ್ದ ಸೈರನ್ನು ವಿಚಿತ್ರವಾಗಿ ಕೂಗಲು ಶುರುವಾಯಿತು. ಅಲ್ಲಿದ್ದ ಸೈನಿಕ ಹೊರಗೆ ಅದೆಲ್ಲಿಗೋ ಗುರಿಯಿಟ್ಟು ಗುಂಡಿನ ಸುರಿಮಳೆಗೈಯುತ್ತಿದ್ದ. ಒಮ್ಮೆಲೇ ಗುಂಡಿನ ಜೋರು ಮೊರೆತ! ಕಿವಿ ಕಿತ್ತು ಹೊಯಿತೆುನೋ ಅನ್ನುವಷ್ಟು ಭೀಕರ ಶಬ್ಧ. ಗ್ರೇನೆಡ್ ಎಸೆದ ಬ್ಲಾಮ್… ಎನ್ನುವ ಶಬ್ದದೊಂದಿಗೆ ನೆಲ ಅದುರಿತ್ತು. ಇದೆಲ್ಲಾ ಮುಗಿದು ತಣ್ಣಗಾಗಲು ಸುಮಾರು ಇಪ್ಪತ್ತು ನಿಮಿಷಗಳು ಬೇಕಾದವು. ಎಲ್ಲರಿಗಿಂತ ಮುಂದಿದ್ದ ವಾಹನ ದೂರ-ದೂರಕ್ಕೆ ಬೆಂಕಿಯ ಜ್ವಾಲೆಯನ್ನುಗುಳುತ್ತಾ ಹೊರಟಿತ್ತು. ಸಣ್ಣ ಸಣ್ಣ ಊರು ಸಮೀಪಿಸಿದಾಗಲೆಲ್ಲಾ ಆಗಾಗ ಸಣ್ಣದೊಂದು ಸುತ್ತಿನ ಗುಂಡಿನ ಮೊರೆತ ಚಾಲ್ತಿಯಲ್ಲಿರುತ್ತಿತ್ತು. ಯಾವುದೋ ಎಳಸು ಹುಡುಗ ನಮ್ಮ ಕಡೆ ಪೆಟ್ರೋಲ್ ಬಾಂಬ್ ಎಸೆದಿದ್ದನಂತೆ. ಉಗ್ರರು ಈ ಹುಡುಗರನ್ನು ಮುಂದೆ ಬಿಟ್ಟು ಮಿಲಿಟರಿ ಪಡೆಯನ್ನು ಗೊಂದಲಗೊಳಿಸಿ ಆಕ್ರಮಣ ಮಾಡುವುದು ಅವರ ಗೆರಿಲ್ಲಾ ಯುದ್ಧ ನೀತಿಗಳಲ್ಲಿ ಒಂದು. ಪೆಟ್ರೋಲ್ ಬಾಂಬುಗಳನ್ನೋ, ಗ್ರೇನೆಡ್ ಗಳನ್ನೋ ಇಲ್ಲವೆಂದರೆ ಕಲ್ಲುಗಳನ್ನೋ ಎಸೆದು ಇವರ ಸೇನಾ ವಾಹನ ಸಾಲನ್ನು ಧೃತಿಗೆಡಿಸಲು ಪ್ರಯತ್ನಿಸುವುದು ಸಾಮಾನ್ಯ. ಅಂದು ಪೆಟ್ರೋಲ್ ಬಾಂಬ್ ಎಸೆದು ಓಡಿ ಹೋದ ಸಣ್ಣ ಹುಡುಗರ ಹಿಂದೆ ಮರೆಯಲ್ಲಿ ಅವಿತು ಕುಳಿತ ದೊಡ್ಡ ಉಗ್ರಗಾಮಿ ಪಡೆಯೇ ಇತ್ತಂತೆ. ಆ ಭಾರಿ ಕಾಳಗದಲ್ಲಿ ಅದೆಷ್ಟೋ ಜೀವಗಳು-ಮನೆಗಳು ಉರುಳಿ ಹಳ್ಳಿಗೆ-ಹಳ್ಳಿಯೇ ಹೊಸ ಸ್ಮಶಾನವಾಯಿತು!

ಮಿಲಿಟರಿ ಚಾಪರುಗಳಲ್ಲಿ ಓಡಾಡುವಾಗ ಬಾಗಿಲಿಗೆ ಆತುಕೊಂಡು ದೂರ್ಬಿನ್ನಿನಲ್ಲಿ ಕೆಳಗೆ ನೋಡುತ್ತ ನಿಲ್ಲುತ್ತಿದ್ದ ಯುವ ಮಿಲಿಟರಿ ಪಡೆ ವಿನಾಕಾರಣ ಕೆಳಗೆ ಕಾಣುವ ಸಣ್ಣಪುಟ್ಟ ಊರಿನೆಡೆ ಹೆಚ್ಚು ಜನಸಂದಣಿ ಸೇರಿದ್ದ ಜಾಗಗಳಿಗೆ ಗುರಿಯಿಟ್ಟು ಗುಂಡಿನ ಮೊರೆತವನ್ನು ಮಾಡುತ್ತಿದ್ದರು, ಕೆಟ್ಟಮಾತುಗಳಲ್ಲಿ ಬೈಯುುತ್ತಿದ್ದರು. ಇವೆಲ್ಲಾ ನನಗೆ ಕುಚೇಷ್ಟೆ ಎನಿಸುತ್ತಿತ್ತು. ನೂರಾರು ದಿನಗಳು ಮನೆಯ ಸೌಖ್ಯದಿಂದ ಹೊರಗಿದ್ದು ಇಷ್ಟೊಂದು ಅಪಾಯವನ್ನು ಎದುರಿಸುತ್ತಿರುವ ಈ ಮಿಲಿಟರಿ ಹುಡುಗರ ಮನಸ್ಥಿತಿ ಹೀಗಾಗಿದೆಯೋ ಅಥವಾ ಇದು ಅವರ ಯುದ್ಧನೀತಿಯ ಭಾಗವೇ? ಯುದ್ಧಭೂಮಿಯ ಕರಾಳ ಸತ್ಯಗಳು ಇನ್ನೂ ಏನೇನಿವೆಯೋ? ಎಂದೆಲ್ಲಾ ಕಾಡಿದ್ದಿದೆ. ಅದೇನೇ ಇರಲಿ, ಹೀಗೆ ಗುಂಡು ತಗುಲಿ ಅನೇಕ ಅಮಾಯಕರು ಸತ್ತ ಉದಾಹರಣೆಗಳು ಮಾತ್ರ ಸಾಕಷ್ಟಿವೆ.
ಕ್ಷಣಕ್ಕೊಮ್ಮೆ ಎದೆಬಿರಿಯುವಂತೆ ರೊಯ್ಯನೆ ಶಬ್ದ ಮಾಡುತ್ತಿದ್ದ ಯುದ್ಧವಿವಾನಗಳ ಹಾರಾಟ ಅಲ್ಲಿನ ಜನರಿಗೆ ಅಭ್ಯಾಸವಾಗಿಬಿಟ್ಟಿತ್ತು. ಯಾವ ವಿಮಾನ ಎತ್ತ ಬಾಂಬ್ ಎಸೆಯುವುದೋ ಎಂಬ ಭಯವನ್ನು ಮೀರಿ ಬದುಕುವ ಕಲೆ ಕರಗತವಾಗಿ ಹೋಗಿತ್ತು ಎನ್ನುವ ಸಂಗತಿಯೇ ಭಯಾನಕವಾದದ್ದು! ಊರಿನ ಮಧ್ಯೆ ನಾವು ಮಿಲಿಟರಿಯವರೊಡನೆ ಓಡಾಡುವಾಗ ವಿಶೇಷವಾಗಿ ಸಣ್ಣ ಹುಡುಗರು ತಮ್ಮ ಮಧ್ಯದ ಬೆರಳನ್ನು ನಮ್ಮತ್ತ ತೋರಿಸುತ್ತಿದ್ದರು. ಕೆಲವರು ಕಲ್ಲನ್ನೆತ್ತಿ ಬೀಸುತ್ತಿದ್ದುದೂ ಉಂಟು. ಈ ಎಲ್ಲವೂ ನೀವಿಲ್ಲಿಂದ ತೊಲಗಿ ಎಂದು ಹೇಳಲಷ್ಟೇ! ಯುದ್ಧವು ಎಳೆಯ ಮನಸ್ಸುಗಳನ್ನು ಇನ್ನೆಂದೂ ಮಾಯದಷ್ಟು ಘಾಸಿಗೊಳಿಸಿತ್ತು! ಯುದ್ಧ ಬಹುತೇಕ ಜನರ ಕಾಲುಗಳನ್ನು ಮುರಿದು ಬೀದಿಗೆ ತಂದಿತ್ತು ಎಂಬ ನೈಜತೆಯ ಜೊತೆಗೇ ಯುದ್ಧದಿಂದಲೇ ರಾತ್ರೋರಾತ್ರಿ ಶ್ರೀಮಂತರಾದ ಸ್ಥಳೀಯ ವ್ಯಾಪಾರಿ ಬುದ್ಧಿವಂತರಿಗೂ ಕಡಿಮೆಯಿರಲಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ.

ತೀವ್ರತರ ಯುದ್ಧದ ತರುವಾಯ ಅಲ್ಲಿನ ಆಡಳಿತ ವ್ಯವಸ್ಥೆ ಭಾರೀ ಹದಗೆಟ್ಟು ಹೋಗಿದ್ದಕ್ಕೆ ನನಗೆ ಅಲ್ಲಿ ಹಲವು ನಿದರ್ಶನಗಳು ಸಿಕ್ಕವು. ಅದರಲ್ಲೂ ವಿಶೇಷವಾಗಿ ಪೊಲೀಸ್ ಮತ್ತು ಸೈನಿಕ ವ್ಯವಸ್ಥೆ ನೈತಿಕ ಅಧಃಪತನಕ್ಕೆ ಇಳಿದಿತ್ತು. ವಿವಾನ ನಿಲ್ದಾಣದಲ್ಲಿ ವೀಸಾ ಅಧಿಕೃತಗೊಳಿಸಲು ನೇರವಾಗಿ ಲಂಚ ತೆಗೆದುಕೊಳ್ಳುತ್ತಿದ್ದರು. ವಿವಾನ ನಿಲ್ದಾಣದಿಂದ ಶುರುವಾಗಿ ದಾರಿಯಲ್ಲಿ ಸಿಗುವ ಎಲ್ಲಾ ಪೊಲೀಸ್ ಮತ್ತು ಮಿಲಿಟರಿ ಚೆಕ್-ಪೋಸ್ಟುಗಳಲ್ಲಿ ಕೆಲವು ಡಾಲರುಗಳ ಲಂಚವಿಲ್ಲದೆ ನಮ್ಮನ್ನು ಮುಂದೆ ಬಿಡುತ್ತಿರಲಿಲ್ಲ. ವೀಸಾ ಸಲುವಾಗಿ ವೈದ್ಯಕೀಯ ತಪಾಸಣೆಗೆ ಹೋದಾಗಲೂ ಲಂಚ ಕೊಡಬೇಕಾಯಿತು. ಪ್ರತಿಯೋಬ್ಬರೂ ಒಂದಲ್ಲ ಒಂದು ರೀತಿ ಭ್ರಷ್ಟರಾಗಿದ್ದರು. ಉಗ್ರರ ಹೆಸರು ಹೇಳಿಕೊಂಡು ನಮ್ಮಂತಹ ಅನ್ಯದೇಶಗಳ ಪ್ರಜೆಗಳನ್ನು ಅಪಹರಿಸಿ ದೊಡ್ಡ ಮೊತ್ತಕ್ಕೆ ಬೇಡಿಕೆಯಿಡುತ್ತಿದ್ದರು. ನನ್ನೊಟ್ಟಿಗೆ ಕೆಲಸ ವಾಡುತ್ತಿದ್ದ ನಾಲ್ಕು ಮಂದಿ ಅಪಹರಣಕ್ಕೊಳಗಾಗಿದ್ದರು. ದೊಡ್ಡ ಮೊತ್ತ ಕೊಟ್ಟ ಹೊರತಾಗಿಯೂ ವಾಪಸ್ ಬಂದಿದ್ದು ಅವರ ಹೆಣ ಮಾತ್ರ! ಹೊಟ್ಟೆಹೊರೆಯಲು ಅಗತ್ಯವಿದ್ದ ಎಲ್ಲಾ ನೇರ-ಅನೇರ ಮಾರ್ಗಗಳನ್ನು ಜನ ಕಂಡುಕೊಂಡಿದ್ದರು. ಎಳೆಯ ಕಂದಮ್ಮಗಳನ್ನು ತಬ್ಬಿಹಿಡಿದು ರಸ್ತೆಯ ಮಧ್ಯಕ್ಕೆ ನುಗ್ಗಿ ಗಾಡಿಗಳಿಗೆ ಅಡ್ಡ ಬಂದು ಭಿಕ್ಷೆ ಬೇಡುತ್ತಿದ್ದ ಹೆಣ್ಣುಮಕ್ಕಳ ದೃಶ್ಯಗಳು ಕರುಳನ್ನು ಕಿವುಚುತ್ತಿದ್ದವು. ನೆಲಬಾಂಬುಗಳಿಂದ ಕಾಲನ್ನು ಕಳೆದುಕೊಂಡು ಕುಂಟುತ್ತಾ ಭಿಕ್ಷೆ ಬೇಡುತ್ತಿದ್ದ ಗಂಡಸರು ಒಂದು ಕಡೆಯಾದರೆ, ನಶೆಗೆ ದಾಸರಾದ ದೊಡ್ಡದೊಂದು ಯುವ ಸಮೂಹ ಇನ್ನೊಂದು ಕಡೆ. ಎಲ್ಲೆಲ್ಲೂ ಪಾಳುಬಿದ್ದ ಕಟ್ಟಡಗಳ ಸ್ಮಶಾನ ಸದೃಶ ನೋಟ. ಯುದ್ಧದ ಮುಂಚೆ ಎಲ್ಲವೂ ಸರಿಯಿತ್ತು, ಎಲ್ಲರೂ ಸರಿಯಿದ್ದರು ಎಂಬುದೇ ಅಲ್ಲಿನೆಲ್ಲರ ಮಾತಾಗಿತ್ತು.

(ಪ್ರಸ್ತುತ ಬರಹಗಾರರು ಯುದ್ಧಭೂಮಿಯಲ್ಲಿನ ತಮ್ಮ ಅನುಭವಗಳ ಕಥನ “ಕುಣಿಗಲ್ ಟು ಕಂದಹಾರ್” ಎಂಬ ಕೃತಿಯ ಲೇಖಕರು)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ