ಪ್ರೊಫೆಸರ್ ಬಿ. ಎನ್. ಶ್ರೀರಾಂ
ಬಾಂಗ್ಲಾದೇಶ ವಿಮೋಚನೆ ಗೊಂಡಾಗ ನನಗೆ ೩೩ರ ವಯಸ್ಸು. ೧೯೪೭ರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ವಿಭಜನೆಯ ನಂತರ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಎಂಬ ವಿಭಾಗವೂ ಆಯಿತು. ಪೂರ್ವ ಪಾಕಿಸ್ತಾನ ಎಂದರೆ ಬಾಂಗ್ಲಾದೇಶ. ಅಲ್ಲಿ ಬಂಗಾಳಿಯ ಭಾಷೆಯನ್ನು ಹೊರತುಪಡಿಸಿ ಉರ್ದು ಮಾತನಾಡುವ ಯಾರೊಬ್ಬರೂ ಇರಲಿಲ್ಲ. ಈಗಿನ ಪಾಕಿಸ್ತಾನ, ಆಗ ಪಶ್ಚಿಮ ಪಾಕಿಸ್ತಾನವೆಂದಾಗಿತ್ತು.
ಮೇಲುನೋಟಕ್ಕೆ ಈ ಎರಡೂ ದೇಶಗಳ ವ್ಯವಸ್ಥೆ ಸುಸೂತ್ರವಾಗೇ ಸಾಗುತ್ತಿರುವಂತೆ ಅನಿಸುತ್ತಿತ್ತು. ಆದರೆ ವಿಷಗಾಳಿಯಂತೆ ಹರಡುತ್ತಿದ್ದ ಭಾಷಾ ದ್ವೇಷ ಮಾತ್ರ ಯಾರ ಕಣ್ಣಿಗೂ ಕಾಣಲೇ ಇಲ್ಲ. ಪೂರ್ವ ಪಾಕಿಸ್ತಾನದಲ್ಲಿದ್ದವರನ್ನು ಎರಡನೇ ದರ್ಜೆಯ ನಾಗರಿಕರೆಂದು ಪರಿಗಣಿಸಲಾಗುತ್ತಿತ್ತು. ಅದರೊಂದಿಗೆ ಈ ಪಶ್ಚಿಮ ಪಾಕಿಸ್ತಾನದಲ್ಲಿದ್ದ ಬಹುತೇಕರಿಗೆ ತಾವೇ ಮೇಲೆಂಬ ದರ್ಪವಿತ್ತು. ಪೂರ್ವ ಪಾಕಿಸ್ತಾನದ ವಾಸಿಗಳಿಗೆ ನಮ್ಮ ಭಾಗದಿಂದ ಯಾರೊಬ್ಬರೂ ಉನ್ನತ ಅಧಿಕಾರಿಯ ಸ್ಥಾನ ಪಡೆಯುತ್ತಿಲ್ಲವಲ್ಲಾ ಎಂಬ ಒಳಗುದಿ. ಈ ಅಸಹನೆ ಹೊರಬಂದಿದ್ದು, ಅವಾಮೀ ಲೀಗ್ ಪಕ್ಷವನ್ನು ಮುನ್ನಡೆಸುತ್ತಿದ್ದ ಶೇಖ್ ಮುಜೀಬುರ್ ರೆಹಮಾನ್ ಎನ್ನುವವನ ಮೂಲಕ.
ಮಿಲಿಟರಿ ಆಡಳಿತವಿದ್ದ ಆ ದೇಶಗಳಲ್ಲಿ ಜನರಲ್ ಟಿಕ್ಖಾ ಖಾನ್ ಪ್ರೆಸಿಡೆಂಟ್ ಆಗಿದ್ದ. ತನ್ನ ಅಧಿಕಾರಾವಧಿಯಲ್ಲಿ ಉರ್ದುವನ್ನೇ ದೇಶಭಾಷೆಯನ್ನಾಗಿ ಮಾಡಲು ಆಜ್ಞೆ ಹೊರಡಿಸಿದ್ದ. ಭಾಷೆ ಎಂಬುದು ಧರ್ಮದಷ್ಟೇ ಸೂಕ್ಷ್ಮ ವಿಚಾರ. ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದರೆ ಯಾವೆಲ್ಲ ವಿವಾದಗಳು ಸೃಷ್ಟಿಯಾಗಬಹುದೊ, ಅದೇ ರೀತಿಯಲ್ಲಿ ಆಳುವ ವರ್ಗ ಭಾಷೆಯ ಮೇಲೆ ನೀತಿಯನ್ನು ಹೇರಲಾರಂಭಿಸಿದರೆ ದಂಗೆಯೇಳುವುದು ಖಾತ್ರಿ ಎಂಬ ಮಾತಿಗೆ ನಮ್ಮ ಇತಿಹಾಸವೇ ಪುರಾವೆಗಳನ್ನು ಒದಗಿಸುತ್ತವೆ. ಉರ್ದು ಭಾಷೆಯ ಹೇರಿಕೆಗೆ ಪೂರ್ವ ಪಾಕಿಸ್ತಾನದ ಜನರು ಪ್ರತಿರೋಧವನ್ನು ವ್ಯಕ್ತಪಡಿಸಿದರು. ಇದರ ಹಿನ್ನೆಲೆಯಲ್ಲಿ ಚುನಾವಣೆಯೂ ನಡೆಯಿತು. ಶೇಖ್ ಮುಜೀಬುರ್ ರೆಹಮಾನ್ ಭರ್ಜರಿ ಬಹುಮತ ಪಡೆದಿದ್ದ!
ಚುನಾವಣೆಯಲ್ಲಿ ಗೆದ್ದವರಿಗೆ ಅಧಿಕಾರ ಹಸ್ತಾಂತರವಾಗ ಬೇಕು. ಆದರೆ ಪಶ್ಚಿಮ ಪಾಕಿಸ್ತಾನದ ಜನರು ಆಡಳಿತ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಲೇ ಇಲ್ಲ. ಇನ್ನು ಪಶ್ಚಿಮ ಪಾಕಿಸ್ತಾನದೊಂದಿಗೆ ಇದ್ದರೆ ನಮಗೆ ಉಳಿಗಾಲವಿಲ್ಲ ಎನಿಸಿ, ಜನರು ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದರು. ಕೇವಲ ಒಂದು ಚುನಾವಣೆಯ ಘಟಿಸಿದ ನಂತರದ ಬೆಳವಣಿಗೆಯಲ್ಲ; ಅನೇಕ ವರ್ಷಗಳಿಂದ ಬಾಂಗ್ಲಾದೇಶಿಗರು ಅನುಭವಿಸಿದ್ದ ಶೋಷಣೆಯ ಸ್ಛೋಟ!
ಅವರೆಲ್ಲರೂ ಒಗ್ಗೂಡಿ ‘ಮುಕ್ತಿಬಾಹಿನಿ’ ಎಂಬ ಭೂಗತ ಸೇನೆಯೊಂದನ್ನು ಆರಂಭಿಸಿದರು. ಇದರಿಂದಾಗಿ ಅಲ್ಲಿದ್ದ ಹಿಂದೂ ಮುಸ್ಲಿಮರ ಮೇಲೆಲ್ಲ ದೌರ್ಜನ್ಯಗಳು ನಡೆದವು. ಅಲ್ಲಿಯ ತನಕ ನಿರಾಶ್ರಿತರು, ವಲಸಿಗರು, ಪರದೇಶಿಗರು ಎಂಬೆಲ್ಲ ಪದಗಳನ್ನು ನಾವು ಕೇಳಿಯೇ ಇರಲಿಲ್ಲ. ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿ ಬಂದು ಸೇರಿದ್ದು, ಭಾರತವನ್ನು. ಮಾನವೀಯತೆಯ ಆಧಾರದಲ್ಲಿ ಬಂದ ನಿರಾಶ್ರಿತರಿಗೆಲ್ಲ ಉಳಿಯಲೊಂದು ಸೂರು, ತಿನ್ನಲೊಂದಿಷ್ಟು ಆಹಾರವನ್ನೇನೊ ಸರಕಾರ ಒದಗಿಸಿತು. ಆದರೆ, ಇಲ್ಲಿನ ಬಡವರಿಗೇ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದಿರುವ ಸಂದರ್ಭದಲ್ಲಿ ನಿರಾಶ್ರಿತರಿಗೆ ಪೂರೈಸುವ ತುರ್ತಾದರೂ ಏನಿತ್ತು? . . . ಹೀಗೆ ಭಿನ್ನಾಭಿಪ್ರಾಯಗಳು ತಲೆದೋರುತ್ತಲೇ ಇದ್ದವು.
ನಿರಾಶ್ರಿತರ ಸಮಸ್ಯೆಗಳನ್ನು ದೇಶಕ್ಕೆ ತಿಳಿಯಬೇಕೆಂದು ಭಾರತದ ಆಗಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ಅವರು ನಿರಾಶ್ರಿತರ ತೆರಿಗೆಯೆಂದು ಐವತ್ತು ಪೈಸೆಗಳನ್ನು ವಿಧಿಸಿದರು. ಅಂಚೆ, ಅಬಕಾರಿ, ಸಾರಿಗೆ ಯಾವುದೇ ಸರಕಾರಿ ಕೆಲಸಕ್ಕೂ ಎಂಟಾಣೆ ಪಾವತಿಸಿ, ಸ್ಟಾಂಪ್ ಪಡೆದು ಅಂಟಿಸಿದರಷ್ಟೇ ಪೂರ್ಣವಾಗುತ್ತಿತ್ತು. ಭಾರತೀಯರಿಂದ ಇದಕ್ಕೆ ಯಾವ ವಿರೋಧವೂ ವ್ಯಕ್ತವಾಗಲಿಲ್ಲ. ಆದರೆ ಮೂವತ್ತು ನಲವತ್ತು ಲಕ್ಷದಷ್ಟು ಜನ ಭಾರತಕ್ಕೆ ಆಶ್ರಯ ಬಯಸಿ ಬರುತ್ತಿದ್ದರೆ, ದೇಶದ ಆರ್ಥಿಕ, ರಾಜಕೀಯ ಪರಿಸ್ಥಿತಿ ಹದಗೆಡುತ್ತಿತ್ತು. ಹಾಗಾಗಿ ಇಂದಿರಾಗಾಂಧಿ ಅವರು ಜಾಗತಿಕ ಮಟ್ಟದಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು.
ಇತ್ತ ಮುಕ್ತಿಬಾಹಿನಿ, ಪಶ್ಚಿಮ ಪಾಕಿಸ್ತಾನದವರ ಜಟಾಪಟಿ ಯಿಂದಾಗಿ ದಿನೇದಿನೇ ಪೂರ್ವ ಪಾಕಿಸ್ತಾನದ ಸ್ಥಿತಿ ಬಿಗಡಾಯಿಸುತ್ತಿತ್ತು. ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನ ತನ್ನ ಸೇನಾ ತುಕಡಿಯೊಂದನ್ನು ಇರಿಸಿತ್ತು. ಜನರಲ್ ನಿಯಾಝಿ ಅಲ್ಲಿನ ಸೇನೆಗೆ ಲೆಫ್ಟಿನೆಂಟ್ ಜನರಲ್ ಆಗಿದ್ದ. ಈ ನಡುವೆ ಅಮೆರಿಕ ಸೇನೆ ತಮಗೆ ಸಹಾಯ ಮಾಡುತ್ತದೆಂದು ಭಾವಿಸಿದ ಪಾಕಿಸ್ತಾನದ ಸೈನ್ಯ ಭಾರತದ ಮೇಲೆ ಯುದ್ಧ ಘೋಷಿಸಿತು.
ಭಾರತ ಸೇನೆಯನ್ನು ಮುನ್ನಡೆಸುತ್ತಿದ್ದವರು, ಸ್ಯಾಮ್ ಮ್ಯಾನೆಕ್ ಷಾ. ಜಗಜೀತ್ ಸಿಂಗ್ ಅರೋರ ಮೇಲುಸ್ತುವಾರಿ ವಹಿಸಿದ್ದರು. ನಾವೆಯ ಮೂಲಕ ಬಾಂಬುಗಳನ್ನು ಹಾಕುತ್ತಾ, ಯುದ್ಧ ಉದ್ವಿಗ್ನ ಹಂತಕ್ಕೆ ತಲುಪುತ್ತಿತ್ತು. ೧೯೭೧ರ ಹೊತ್ತಿನಲ್ಲಿ ಬಾಂಗ್ಲಾದೇಶ ವಿಭಜನೆಗಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೋರಾಟವೇರ್ಪಟ್ಟು, ಭಾರತ ಸೈನ್ಯದೆದುರು ಮಣಿದು ಶರಣಾಗತಿ ಸೂಚಿಸಿತು. ಯುದ್ಧದಲ್ಲಿ ಶರಣಾಗುವುದು ಎಂದರೆ ಬಿಳಿಯ ಬಾವುಟ ತೋರಿಸುವುದು ಮಾತ್ರವಲ್ಲ, ಇಡೀ ಜಗತ್ತಿಗೆ ಗೆದ್ದ ಸುದ್ದಿಯನ್ನು ಸಾರುವುದಕ್ಕೆಂದೇ ಸಮಾರಂಭವೊಂದು ಏರ್ಪಾಡಾಗುತ್ತದೆ. ಅಲ್ಲಿ ಸೋತ ತಂಡದ ಸೇನಾ ನಾಯಕನ ಬ್ಯಾಡ್ಜ್‌ಗಳನ್ನು ಗೆದ್ದ ದೇಶದ ಸೇನಾ ನಾಯಕ ಕತ್ತರಿಸಿ, ಸಾರ್ವಭೌಮ ಸಾಧಿಸಿದೆವು ಎಂಬ ಭಾವದಲ್ಲಿ ಅದನ್ನು ಎತ್ತಿ ಹಿಡಿಯುತ್ತಾನೆ.
ಇದು ಯುದ್ಧ ನಿಯಮ. ೧೯೪೭ಕ್ಕೂ ಮೊದಲು ಜಗಜೀತ್ ಸಿಂಗ್ ಅರೋರ ಮತ್ತು ಜನರಲ್ ನಿಯಾಝಿ ಸಹಪಾಠಿ ಮಿತ್ರರು. ಅಂದಿನ ಸನ್ನಿವೇಶ ಇಬ್ಬರಿಗೂ ಸಂಕಟವನ್ನು ಉಂಟುಮಾಡಿತ್ತು. ಗೆಳೆತನದ ದಿನಗಳು ಇಬ್ಬರ ಕಣ್ಣಮುಂದೆಯೂ ಸುಳಿದಾಡಿರಬಹುದು. ಜಗಜೀತ್ ಸಿಂಗ್ ಕತ್ತರಿಯನ್ನು ನಿಯಾಝಿಯ ಕೈಗೆ ನೀಡಿ, ‘ನಾವಿಬ್ಬರೂ ಸ್ನೇಹಿತರು. ಬ್ಯಾಡ್ಜ್ ಗಳನ್ನು ನನ್ನಿಂದ ಕತ್ತರಿಸಲು ಸಾಧ್ಯವಿಲ್ಲ. ನೀನೇ ಕತ್ತರಿಸಿಕೊ’ ಎಂದಿದ್ದ. ನಿಯಾಝಿಯೇ ಸ್ವತಃ ಕತ್ತರಿಸಿಕೊಂಡು ಶರಣಾಗತಿಯನ್ನು ಸೂಚಿಸಿದ. ನೋಡನೋಡುತ್ತಿದ್ದಂತೆ ಬಾಂಗ್ಲಾದೇಶ ಸ್ವತಂತ್ರವಾಯಿತು. ಇಂತಹ ಭೀಕರ ಯುದ್ಧ ನಡೆಯುತ್ತಿದ್ದರೂ ನಾವಿದ್ದ ದಕ್ಷಿಣ ಭಾರತದಲ್ಲಿ ಸಣ್ಣಪುಟ್ಟ ಧಾರ್ಮಿಕ ವಿವಾದಗಳು ಸೃಷ್ಟಿಯಾಗುತ್ತಿತ್ತೇ ಹೊರತು ಉಲ್ಲೇಖಿಸುವಂತಹ ಯಾವ ಘಟನೆಗಳೂ ನಡೆಯಲಿಲ್ಲ. ಇಂತಹ ಪ್ರತಿಕೂಲ ಸ್ಥಿತಿಯಲ್ಲಿ ದೇಶದ ನಡೆಗಳನ್ನು ವಿಮರ್ಶಾತ್ಮಕವಾಗಿ ಗಮನಿಸಿಯೇ ಬೆಂಬಲ ಸೂಚಿಸುವುದು ಅಥವಾ ಹೋರಾಟಗಳನ್ನು ನಡೆಸುವುದರತ್ತ ನಾವೆಲ್ಲ ಯೋಚಿಸುತ್ತಿದ್ದೆವು.
ನಿರೂಪಣೆ : ಕೀರ್ತಿ





