ಸಿರಿ ಮೈಸೂರು
ನಮ್ಮ ರಾಜ್ಯ ಹಾಗೂ ದೇಶದೆಲ್ಲೆಡೆ ಈ ರೀತಿ ನೇಯ್ಗೆ ಮಾಡುವವರು ಸಿಗುತ್ತಾರಾದರೂ, ಈ ರೀತಿ ಊರಿಗೂರೇ ಇದೇ ಕಸುಬಿನಲ್ಲಿ ತೊಡಗಿಕೊಂಡಿರುವುದು ವಿರಳ. ಶತಮಾನಗಳಿಂದ ನಡೆಯುತ್ತಾ ಬಂದಿರುವ ಈ ಕೆಲಸವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಇಲ್ಲಿನ ಪದ್ಮಶಾಲಿ ಜನಾಂಗದವರ ಶ್ರಮ, ಕಲಾಸಕ್ತಿ ಶ್ಲಾಘನೀಯವಾದುದು
ಕರ್ನಾಟಕದಲ್ಲಿ ನೇಯ್ಗೆಯಾಗುವ ವಿಶೇಷ ಸೀರೆಗಳು ಯಾವುವು ಎಂದು ಕೇಳಿದರೆ ನಮಗೆ ಥಟ್ಟಂತ ನೆನಪಾಗುವುದು ಇಳಕಲ್ ಸೀರೆ, ಉಡುಪಿ ಕಾಟನ್, ಬೆಟಗೇರಿ ಸೀರೆ ಇತ್ಯಾದಿ. ಇನ್ನು ಹಳೇ ಮೈಸೂರು ಭಾಗದಲ್ಲಂತೂ ವೈಭವೋಪೇತ ಮೈಸೂರು ರೇಷ್ಮೆಯದ್ದೇ ಪಾರುಪತ್ಯ. ರಾಜರ ಕಾಲದಲ್ಲಿ ಆರಂಭವಾದ ಮೈಸೂರು ಸಿಲ್ಕ್ ಸೀರೆಗಳ ಉತ್ಪಾದನೆ ಇಂದು ಅತ್ಯಂತ ಬೃಹತ್ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನೂ ಹೊಂದಿದೆ. ಆದರೆ ಇದೇ ಹಳೇ ಮೈಸೂರು ಭಾಗದಲ್ಲಿ ಇನ್ನೊಂದು ಸರಳ ಕೈಮಗ್ಗದ ಸೀರೆಯ ಬ್ರ್ಯಾಂಡ್ ಇದೆ ಎಂಬುದು ಬಹುಪಾಲು ಜನರಿಗೆ ಗೊತ್ತಿರಲಿಕ್ಕಿಲ್ಲ. ಇದು ಮಂಡ್ಯದ ಬಳಿ ಇರುವ ಪುಟ್ಟದೊಂದು ಹಳ್ಳಿ. ಇಲ್ಲಿರುವವರೆಲ್ಲಾ ನೇಯ್ಗೆ ಮಾಡುವವರು. ಇವರು ಇಲ್ಲಿಗೆ ಬಂದಿದ್ದು ಹೇಗೆ? ಇವರ ಸೀರೆಗಳ ವಿಶೇಷತೆ ಏನು? ಇವರು ನೇಯುವ ಸೀರೆಗಳು ಎಲ್ಲಿಗೆಲ್ಲಾ ತಲುಪುತ್ತವೆ ಎಂಬುದೇ ಇತಿಹಾಸ.
ಈ ಹಳ್ಳಿಯಲ್ಲಿ ನಡೆದು ಹೋಗುತ್ತಿದ್ದರೆ ಸುತ್ತ ಕಾಣುವುದೆಲ್ಲಾ ಸೀರೆ ಅಂಗಡಿಗಳು, ಕೇಳಿಸುವುದೆಲ್ಲಾ ಮಗ್ಗದ ಸದ್ದು. ಬಣ್ಣಬಣ್ಣದ ದಾರಗಳನ್ನು ನೇಯುತ್ತಾ, ಸೀರೆಗಳನ್ನು ತಯಾರಿಸುತ್ತಾ ಬದುಕುವ ಇವರನ್ನು ನೋಡಿದರೆ ಬಟ್ಟೆ ಹೇಗೆ ಒಂದು ಜನಾಂಗದ ಬದುಕನ್ನು ಶತಶತಮಾನಗಳಿಂದ ಸಲಹುತ್ತಾ ಬಂದಿದೆ ಎಂಬುದು ತಿಳಿಯುತ್ತದೆ. ಈ ಹಳ್ಳಿ ಮಂಡ್ಯ ಜಿಲ್ಲೆಯಲ್ಲಿರುವ ಕೊಡಿಯಾಲ. ಇದು ಶ್ರೀರಂಗಪಟ್ಟಣದಿಂದ ಇಪ್ಪತ್ತು ನಿಮಿಷ ಹಾಗೂ ಮೈಸೂರಿನಿಂದ ನಲವತ್ತ್ತ್ಯೈದು ನಿಮಿಷ ದೂರದಲ್ಲಿದೆ. ಕೊಡಿಯಾಲ ಸೀರೆಗಳ ಬಗ್ಗೆ ಎಲ್ಲರಿಗೂ ತಿಳಿದಿಲ್ಲದಿದ್ದರೂ, ತಿಳಿದಿರುವವರಿಗೆ ಇದರ ಗುಣಮಟ್ಟದ ಪರಿಚಯ ಇದ್ದೇ ಇರುತ್ತದೆ. ಕೊಡಿಯಾಲ ಮಗ್ಗದ ಕಾಟನ್ ಸೀರೆಗಳ ಸ್ವರ್ಗ. ಹಿಪ್ಪುನೇರಳೆ, ಹತ್ತಿ, ದಾರಗಳೆಲ್ಲವನ್ನೂ ಇಲ್ಲೇ ಅಣಿಮಾಡಿಕೊಂಡು, ವಿನ್ಯಾಸ ರಚಿಸಿ, ಸೀರೆ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಇಷ್ಟೂ ಪ್ರಕ್ರಿಯೆ ನಡೆಯುವುದು ಇದೇ ಹಳ್ಳಿಯಲ್ಲಿ. ಕೊಡಿಯಾಲ ಸೀರೆಗಳು ಸರಳವಾಗಿದ್ದರೂ ಅತ್ಯುತ್ತಮ ಗುಣಮಟ್ಟ ಹೊಂದಿದ್ದು, ಅಷ್ಟೇ ಬಾಳಿಕೆಯೂ ಬರುತ್ತವೆ. ನಮ್ಮ ಹಳೇ ಮೈಸೂರು ಭಾಗದಲ್ಲಿ ಇಂತಹ ನೇಯ್ಗೆಕಾರರ ಸ್ವರ್ಗ ಇದೆ ಎಂಬುದು ನಮ್ಮೆಲ್ಲರ ಹೆಮ್ಮೆ.
ಕೊಡಿಯಾಲದಲ್ಲಿ ಸೀರೆಗಳ ಉತ್ಪಾದನೆ, ತಯಾರಿಕೆ ಹೇಗೆ ಆರಂಭವಾಯಿತು ಎಂಬುದಕ್ಕೆ ಸ್ವಾರಸ್ಯಕರ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ಸೀರೆಗಳನ್ನು ತಯಾರಿಸುವವರೆಲ್ಲಾ ಪದ್ಮಶಾಲಿ ಎಂಬ ಒಂದು ಜನಾಂಗಕ್ಕೆ ಸೇರಿದವರು. ಇವರ ಮೂಲ ಸ್ಥಳ ಆಂಧ್ರಪ್ರದೇಶ. ಪ್ರಸ್ತುತ ನಾವು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಪದ್ಮಶಾಲಿ ಜನಾಂಗದವರನ್ನು ಕಾಣಬಹುದು. ಇವರ ಮೂಲ ಕಸುಬೇ ನೇಯ್ಗೆ. ಅನಾದಿಕಾಲದಿಂದಲೂ ನೇಯ್ಗೆ ಮಾಡಿಕೊಂಡು ಬಂದಿರುವ ಪದ್ಮಶಾಲಿ ಜನಾಂಗದವರು ತಾವು ಇರುವೆಡೆಯಲ್ಲೆಲ್ಲಾ ಇದೇ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾರೆ. ತಮ್ಮ ಕೌಶಲಗಳನ್ನು ನೇಯ್ಗೆಯ ಮೂಲಕ ಹೊರಹಾಕುತ್ತಾರೆ. ಕೊಡಿಯಾಲದ ಹಿರಿಯರು ಹೇಳುವ ಪ್ರಕಾರ ಪದ್ಮಶಾಲಿ ಜನಾಂಗದವರು ಆಂಧ್ರಪ್ರದೇಶದಲ್ಲಿ ಸೀರೆ ನೇಯ್ಗೆ ಮಾಡುತ್ತಾ ಜೀವನ ನಡೆಸುತ್ತಿದ್ದರಂತೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದ ಮೈಸೂರಿನ ಒಡೆಯರ್ ಮನೆತನದ ರಾಜರು ಇವರ ಕೌಶಲ ನೋಡಿ ಚಕಿತರಾದರಂತೆ. ಇವರಿಗೆ ನಮ್ಮಲ್ಲಿ ಜಾಗ ನೀಡಿ ನೇಯ್ಗೆಯನ್ನು ಪ್ರೋತ್ಸಾಹಿಸಬೇಕು ಎಂದು ನಿರ್ಧಾರ ಮಾಡಿದರಂತೆ. ಆಗಲೇ ಅಲ್ಲಿನ ನೇಯ್ಗೆಕಾರರನ್ನು ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣದ ಬಳಿಯ ಕೊಡಿಯಾಲಕ್ಕೆ ಕರೆಸಿಕೊಂಡು ಇಲ್ಲಿ ನೇಯ್ಗೆ ಉದ್ಯಮ ಆರಂಭಿಸಿದರಂತೆ. ಪದ್ಮಶಾಲಿಗಳ ಕೈಚಳಕದಿಂದ ನಮ್ಮ ನೆಲದಲ್ಲಿ ಕೊಡಿಯಾಲ ಸೀರೆಗಳ ನೇಯ್ಗೆ ಆರಂಭವಾದದ್ದು ಹೀಗೆ.
ಆಗೆಲ್ಲಾ ಸೀರೆಗಳ ವಿನ್ಯಾಸ ತಯಾರು ಮಾಡುವುದನ್ನು ಕೈಯಿಂದಲೇ ಮಾಡಬೇಕಿತ್ತು. ಆದರೆ ಈಗ ಅದಕ್ಕೂ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಆದರೂ ಕಲೆಯ ಬೆಲೆಯಂತೂ ಹಾಗೇ ಇದೆ. ಬರುಬರುತ್ತಾ ಈ ಊರಿನಲ್ಲಿರುವ ಮಗ್ಗಗಳ ಸಂಖ್ಯೆ ಹಾಗೂ ನೇಯ್ಗೆ ಮಾಡುವವರ ಸಂಖ್ಯೆ ಇಳಿಮುಖವಾಗಿದ್ದರೂ ‘ಸೀರೆಗಳ ಸ್ವರ್ಗ’ ಎಂಬ ಪಟ್ಟಕ್ಕೆ ಕುತ್ತು ಬರುವ ಪರಿಸ್ಥಿತಿಯಂತೂ ಖಂಡಿತ ಇಲ್ಲ. ಪದ್ಮಶಾಲಿಗಳು ನಮ್ಮ ನೆಲಕ್ಕೆ ಬಂದು ಒಡೆಯರ್ ರಾಜಮನೆತನದ ಆಶ್ರಯದಲ್ಲಿ ಇಲ್ಲಿ ನೇಯ್ಗೆ ಮಾಡುತ್ತಾ ಸೀರೆಗಳನ್ನು ತಯಾರಿಸುತ್ತಿದ್ದಾರೆ ಎಂಬ ವಿಷಯ ಇತಿಹಾಸದಲ್ಲಿ ಅಚ್ಚಾಗಿದ್ದರೂ ಕರ್ನಾಟಕದ ಇತರ ಕೈಮಗ್ಗದ ಸೀರೆಗಳಾದ ಇಳಕಲ್, ಬೆಟಗೇರಿ, ಉಡುಪಿ ಕಾಟನ್‌ನಂತೆ ಕೊಡಿಯಾಲ ಸೀರೆ ಜನಜನಿತವಾಗಿಲ್ಲ. ಆದರೂ ಇದಕ್ಕೆ ಬಹಳಷ್ಟು ಬೇಡಿಕೆ ಇದೆ. ಬೇರೆ ಬೇರೆ ಊರುಗಳು, ರಾಜ್ಯಗಳಿಂದ ಜನರು ಬಂದು ಇಲ್ಲಿ ಸೀರೆ ಕೊಳ್ಳುತ್ತಾರೆ. ಎಷ್ಟೋ ಜನ ಇಲ್ಲಿ ಹೋಲ್‌ಸೇಲ್ ಬೆಲೆಯಲ್ಲಿ ಸೀರೆ ಖರೀದಿಸಿ ತಾವು ಮಾರಾಟ ಮಾಡುತ್ತಾರೆ. ದಿನವೂ ಸಾವಿರಾರು ಸೀರೆಗಳು ತಯಾರಾಗಿ ದೇಶದ ಉದ್ದಗಲಕ್ಕೂ ತಲುಪುತ್ತವೆ. ಇದು ಕೈಮಗ್ಗದ ಗುಣಮಟ್ಟಕ್ಕಿರುವ ಶಕ್ತಿ. ಇಲ್ಲಿ ೩೦೦ ರೂಪಾಯಿಗಳಿಂದ ೩೦ ಸಾವಿರ ರೂಪಾಯಿಗಳವರೆಗೆ ಸೀರೆಗಳನ್ನು ಕೊಳ್ಳಬಹುದು. ಮದುವೆ ಮತ್ತಿತರ ಶುಭಸಮಾರಂಭಗಳಿಗೆ ರೇಷ್ಮೆ ಸೀರೆಯೂ ಇಲ್ಲಿ ಸಿಗುತ್ತದೆ.
ಇಲ್ಲಿ ಕೆಲವರು ಸೀರೆ ನೇಯಲು ಕಾರ್ಖಾನೆಗಳನ್ನು ಇರಿಸಿಕೊಂಡಿದ್ದರೆ ಇನ್ನು ಕೆಲವರು ಮನೆಯಲ್ಲೇ ಮಗ್ಗದ ಯಂತ್ರ ಇಟ್ಟಿದ್ದಾರೆ. ‘ಒಂದು ಸೀರೆ ತಯಾರಿಸಲು ೨-೩ ಗಂಟೆಗಳಂತೂ ಬೇಕೇ ಬೇಕು. ದಿನಕ್ಕೆ ಸುಮಾರು ಮೂರು ಸೀರೆಗಳನ್ನು ನೇಯುತ್ತೇವೆ. ನಮ್ಮೂರಲ್ಲಿ ಹೆಚ್ಚೂಕಡಿಮೆ ಆರು ನೂರು ಮಗ್ಗಗಳಿವೆ. ಹೀಗೆ ನೋಡಿದರೆ ದಿನಕ್ಕೆ ನಮ್ಮಲ್ಲಿ ಎಷ್ಟು ಸೀರೆಗಳು ಉತ್ಪಾದನೆಯಾಗುತ್ತವೆ ಎಂದು ನೀವೇ ಲೆಕ್ಕ ಹಾಕಿ. ಅಷ್ಟು ಸೀರೆಗೂ ಬಹಳ ಬೇಡಿಕೆ ಇದೆ. ನಾವೇ ವಿನ್ಯಾಸ ತಯಾರಿಸಿ ಸೀರೆ ನೇಯುತ್ತೇವೆ. ಮನೆಯಲ್ಲಿ ಬಹುಪಾಲು ಎಲ್ಲರೂ ಈ ವಿದ್ಯೆಯನ್ನು ಕಲಿತೇ ಇರುತ್ತಾರೆ. ನಮ್ಮ ಕುಲಕಸುಬು ಇದೇ ಆದ್ದರಿಂದ ಇದನ್ನು ಮಾಡಿದರೇ ನಮಗೆ ಖುಷಿ’ ಎನ್ನುತ್ತಾರೆ ಇಲ್ಲಿನ ಹಿರಿಯ ನೇಕಾರರೊಬ್ಬರು. ಇನ್ನು ಇಲ್ಲಿ ತಯಾರಿಸುವ ಸೀರೆಗಳಿಗೆ ಹಿಪ್ಪುನೇರಳೆ, ಹತ್ತಿ ಬೆಳೆಯುವುದು ಇಲ್ಲೇ ಸುತ್ತಮುತ್ತಲಿನ ಹೊಲಗಳಲ್ಲಿ. ರೇಷ್ಮೆಯನ್ನು ಮಾತ್ರ ರಾಮನಗರದಿಂದ ತರಿಸಿಕೊಳ್ಳಲಾಗುತ್ತದೆ.
‘ನಮ್ಮ ಕಸುಬಿನ ಬಗ್ಗೆ ನಮಗಂತೂ ಯಾವಾಗಲೂ ಹೆಮ್ಮೆ ಇದ್ದೇ ಇದೆ. ರಾಜಮನೆತನದವರು ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದರಿಂದ ನಮ್ಮ ಪೂರ್ವಜರು ಹಾಗೂ ನಾವು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಯಿತು. ಈಗಲೂ ನಮ್ಮ ಸೀರೆಗಳಿಗೆ ಅತ್ಯುತ್ತಮ ಮಾರುಕಟ್ಟೆ ಇದೆ. ಬಹುಪಾಲು ಸೀರೆಗಳು ಹೋಲ್‌ಸೇಲ್‌ನಲ್ಲಿ ಹೋಗುವ ಕಾರಣ ನಾವು ಮೈಸೂರು, ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಸೀರೆ ಕಳಿಸುವುದೇ ಹೆಚ್ಚು. ಇನ್ನು ಎಷ್ಟೋ ಜನರು ತಾವಾಗಿಯೇ ನಮ್ಮ ಬಳಿ ಬಂದು ಸೀರೆ ಕೊಳ್ಳುತ್ತಾರೆ. ಮದುವೆಗೆಂದು ಸೀರೆ ಕೊಳ್ಳಲು ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಇಲ್ಲಿ ಹತ್ತಿ, ಹಿಪ್ಪುನೇರಳೆಗಳನ್ನು ಬೆಳೆಯಲು ಸಹ ಅವಕಾಶ ಇರುವ ಕಾರಣ ನಮಗೆ ವ್ಯವಹರಿಸಲು ಬಹಳ ಅನುಕೂಲ’ ಎನ್ನುತ್ತಾರೆ ಮತ್ತೊಬ್ಬರು ಹಿರಿಯ ನೇಯ್ಗೆಕಾರರು.
ಒಟ್ಟಿನಲ್ಲಿ ಕೊಡಿಯಾಲ ಸೀರೆಗೆ ಕರ್ನಾಟಕದ ಜವಳಿ ಮಾರುಕಟ್ಟೆಯಲ್ಲಿ ವಿಶೇಷ ಹೆಸರಿದೆ. ಮೈಸೂರಿನೊಂದಿಗೆ ಬೆಸೆದುಕೊಂಡಿರುವ ಹಲವಾರು ಐತಿಹಾಸಿಕ ಕೊಂಡಿಗಳ ಪೈಕಿ ಇದೂ ಪ್ರಮುಖವಾದುದು. ನಮ್ಮ ರಾಜ್ಯ ಹಾಗೂ ದೇಶದೆಲ್ಲೆಡೆ ಈ ರೀತಿ ನೇಯ್ಗೆ ಮಾಡುವವರು ಸಿಗುತ್ತಾರಾದರೂ, ಈ ರೀತಿ ಊರಿಗೂರೇ ಇದೇ ಕಸುಬಿನಲ್ಲಿ ತೊಡಗಿಕೊಂಡಿರುವುದು ವಿರಳ. ಶತಮಾನಗಳಿಂದ ನಡೆಯುತ್ತಾ ಬಂದಿರುವ ಈ ಕೆಲಸವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಇಲ್ಲಿನ ಪದ್ಮಶಾಲಿ ಜನಾಂಗದವರ ಶ್ರಮ, ಕಲಾಸಕ್ತಿ ಶ್ಲಾಘನೀಯವಾದುದು. ಈಗಲೂ ಕೊಡಿಯಾಲ ಸೀರೆಗಳ ಮಾರುಕಟ್ಟೆಯನ್ನು ವಿಸ್ತರಿಸುವ ಹಾಗೂ ಹೆಚ್ಚೆಚ್ಚು ಪ್ರಚುರಪಡಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಪುಷ್ಟಿ ಕೊಡುವಂತೆ ಸೀರೆಗಳ ಗುಣಮಟ್ಟ ಎಂದಿನಂತೆ ಉತ್ತಮವಾಗಿ ಉಳಿದುಕೊಂಡಿದೆ. ಇವರೆಲ್ಲಾ ಬಂದಿರುವುದು ಆಂಧ್ರಪ್ರದೇಶದಿಂದಲಾದರೂ ಒಮ್ಮೆ ಅಂಗಡಿಗೆ ಅಥವಾ ಮಗ್ಗಕ್ಕೆ ಹೋಗಿ ಅವರ ಹಿನ್ನೆಲೆ, ಸೀರೆಗಳ ಇತಿಹಾಸ, ತಯಾರಿಕೆಯ ರೀತಿ, ಕೊಡಿಯಾಲ ಸೀರೆಯ ವೈಶಿಷ್ಟ್ಯತೆಗಳನ್ನು ಕೇಳಿದರೆ ನಗುತ್ತಲೇ ಮಾತನಾಡುವ ಇವರಿಗೂ, ಮೂಲತಃ ಮಂಡ್ಯದವರೇ ಆದ ಸ್ನೇಹಿಮಯಿ ಜನರಿಗೂ ಹೆಚ್ಚೇನೂ ವ್ಯತ್ಯಾಸ ಕಾಣಿಸುವುದಿಲ್ಲ. ತಮ್ಮ ನೆಲದ ಕಲೆಯನ್ನು ನಮ್ಮ ನೆಲೆಯಲ್ಲಿ ಉಳಿಸಿ, ಬೆಳೆಸುತ್ತಿರುವ ಇವರ ಕೊಡುಗೆ ಜವಳಿ ಉದ್ಯಮಕ್ಕೆ ಸಾಕಷ್ಟಿದೆ. ದೇಶದಾದ್ಯಂತ ಹೆಸರು ಮಾಡಿರುವ ಚಂದೇರಿ, ಬನಾರಸಿ, ಪಟೋಲ, ಕಾಂಚೀಪುರಂ, ಇಳಕಲ್ ಮುಂತಾದ ಸೀರೆಗಳ ಪಟ್ಟಿಯಲ್ಲಿ ಕೊಡಿಯಾಲ ಸೀರೆ ಸಹ ಗುರುತಿಸಿಕೊಳ್ಳಬೇಕು. ಇದಕ್ಕೆ ಗ್ರಾಹಕರು ಹಾಗೂ ಸರ್ಕಾರದ ಸಹಕಾರ ಅಗತ್ಯ ಬಹಳವೇ ಇದೆ. ಒಟ್ಟಿನಲ್ಲಿ ಕೊಡಿಯಾಲ ಹಳೇ ಮೈಸೂರು ಭಾಗದ ಹೆಮ್ಮೆ.





