• ಅಕ್ಷತಾ
ಮೂವತ್ತರ ಆಸುಪಾಸಿನ ಕಪ್ಪು ಜಾಕೆಟ್ ತೊಟ್ಟಿದ್ದ ಸ್ಪುರದ್ರೂಪಿ ಯುವಕ. ತನ್ನ ಹಿಪ್ಪಿ ಕೂದಲನ್ನು ಬೆರಳಿನಿಂದ ಸರಿಸಿ ಮತ್ತೆ ಪುಂಗಿ ಊದತೊಡಗಿದ. ಆತನೆದುರು ಬುಟ್ಟಿಯಲ್ಲಿದ್ದ ಹಾವು ತಾನೊಬ್ಬ ಮಹಾ ವಿದ್ವಾನನಂತೆ ತಲೆಯಾಡಿಸುತ್ತಿತ್ತು. ಇನ್ನೊಂದು ಬದಿಯಲ್ಲಿ ಪಂಜರದೊಳಗೆ ಮುದ್ದಾದ ಇಲಿಮರಿಗಳು, ಸ್ವಲ್ಪ ಹೊತ್ತು ಪುಂಗಿ ನುಡಿಸಿದ. ಕುಣಿಯುವ ಹಾವು, ಕಿಚಿಕಿಚಿ ಎನ್ನುತ್ತಿದ್ದ ಪಂಜರದೊಳಗಿನ ಇಲಿಗಳು! ಏನೇನೋ ಮ್ಯಾಜಿಕ್ ಮಾಡಿ ನೋಡುತ್ತಿದ್ದವರನ್ನು ಮೋಡಿ ಮಾಡಿದ. ಒಂದು ರೌಂಡ್ ಶೋ ಮುಗಿಯುತ್ತಿದ್ದಂತೆ ತಮಗಿಷ್ಟ ಬಂದಷ್ಟು ಕಾಸು ಕೊಟ್ಟು ಜನ ಚದುರಿದರು. ಅವನು ಮತ್ತೆ ಹೊಸ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದ.
ಆತನ ಹೆಸರು ಮುಬಾರಕ್, ಜಾತ್ರೆಗಳು ನಡೆಯುವಲ್ಲಿ ತನ್ನ ಸಹವರ್ತಿಗಳಾದ ಇಲಿ, ಹಾವು ಮುಂತಾದವುಗಳನ್ನು ತಂದು ಮ್ಯಾಜಿಕ್ ಮಾಡುವುದು ಈತನಿಗೆ ಒಲಿದ ವಂಶಪಾರಂಪರ್ಯ ಕಲೆ. ಮೈಸೂರಿನ ಬೋಗಾದಿಯಲ್ಲಿ ವಾಸವಿರುವ ದೊಡ್ಡ ಕುಟುಂಬ ಮುಬಾರಕ್ ನದ್ದು. ಅವನ ಹಿರಿಯರೆಲ್ಲ ಇದೇ ರೀತಿ ಜಾತ್ರೆಗಳು ಆಗುವಲ್ಲಿ ಜಾದೂ ಪ್ರದರ್ಶನ ಮಾಡಿಕೊಂಡು ಊರೂರು ತಿರುಗುತ್ತಿದ್ದವರು. ಜಾತ್ರೆಗಳಿಲ್ಲದ ಸಮಯ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದವರು.
“ಅಜ್ಜ, ಅಪ್ಪ ಎಲ್ಲೂ ಹಿಂಗೆ ಮ್ಯಾಜಿಕ್ ಮಾಡ್ಕಂ ಬಂದದ್ರೆ, ಈಗ ನಾನೂ ಅದೇ ಮಾಡ್ತಿದ್ವಿ. ನೋಡಿ ಇವೆಲ್ಲ ಫಾರಂ ಇಲಿಗಳು’ ಎಂದು ತೋರಿಸಿದ ಮುಬಾರಕ್. ಫಾರಂ ಕೋಳಿಗಳು ಗೊತ್ತಿತ್ತು. ಆದರೆ ಫಾರಂ ಇಲಿಗಳನ್ನು ನಾನು ನೋಡಿದ್ದು ಅದೇ ಮೊದಲು. ‘ಇಷ್ಟು ಚೆನ್ನಾಗಿದ್ದೀ, ಸೀರಿಯಲ್ ನಟನ ಹಾಗೆ” ಎಂದೆ. ನನ್ನಪ್ಪ ಸಿನಿಮಾ ಶೂಟಿಂಗ್‌ಗೆ ಹಾವುಗಳನ್ನು ಕೊಡ್ತಿದ್ದ. ಹಂಗೆ ನಂಗೆ ಲುಕ್ಕು ಬಂದುಟೈತೆ ಅನ್ಸತ್ತೆ’ ಗಲ್ಲ ಸವರಿಕೊಂಡು ಬೀಗಿದ. ‘ಮತ್ತೆ ನಿಂಗೂ ಕೊಡ್ಬಹುದಲ್ಲ! ಶೂಟಿಂಗ್ ಸೆಟ್‌ಗೆ ಕೊಟ್ರೆ ಕಾಸು ಚೆನ್ನಾಗಿ ಕೊಡ್ತಾರೆ ಕಣಪ್ಪ’ ಹೇಳಿದೆ.
‘ಅಕ್ಕೋ ಈಗ ಕಂಪೂಟರ್ ಬಂದೈತೆ, ಹಾವು, ಚೇಳು ಹಿಂಗೆ ಎಲ್ಲಾನೂ ಅದೇನೋ ಅನಿಮೇಸನಲ್ಲಿ ತೋರುಸ್ತಾರೆ. ಬದ್ದಿರೋ ನಮ್ಗಿಂತ ಅನಿಮೇಶನ್ನು ಗೊಂಬೆಗಳೇ ಜಾದೂ ಮಾಡತ್ವೆ. ಅದ್ಕೆ ಸಾವಾಸಾನೇ ಬೇಡ ಅಂದ್ಬುಟ್ಟು, ಹಿಂಗೆ ಜಾತ್ರೆಗಳಿದ್ದಲ್ಲಿ ಹೋಗಿ ಜನರೆದ್ರು ಮ್ಯಾಜಿಕ್ ಮಾಡ್ತಿದ್ದಿ’ ಎಂದ.
ಜಾತ್ರೆಗಳಿಲ್ಲದ ಟೈಮಲ್ಲಿ ಜೀವನ ಹೇಗೆ? ಕೇಳಬೇಕೆಂದುಕೊಂಡೆ. ಆದರೆ ಅವನೇ ಮಾತು ಮುಂದುವರಿಸಿದ. ಜಾತ್ರೆಯಲ್ಲಿರೋ ಹೊತ್ನಲ್ಲಿ ಸಿಗ್ನಲಲ್ಲಿ ಏನಾರ ಮಾರ್ತೀನಿ. ಅದೂ ಇಲ್ಲ, ಕೂಲಿ ಮಾಡ್ತೀನಿ. ದೊಡ್ಡ ಕುಟುಂಬ ನದ್ದು. ಬೋಗಾದಿ ಹತ್ರ ಬಾಡ್ಗೆ ಮನೇಲಿದ್ವಿ. ಈಗ ಸೊಂತಕ್ಕೆ ಮನೆ ಮಾಡ್ಕೊಟ್ಕವ್ರೇ. ಬದುಕಿಗೇನಕ್ಕಾ! ಬಾಳ್ವೆ ಮಾಡೋಕಾ ದುಡಿಯೋ ಕಲೆ ಗೊತ್ತಿರ್ಬೇಕು. ತಾತ, ಅಪ್ಪ ಮಾಡ್ಕೊಂಡಂದಿರೋ ವೃತ್ತೀನಾ ನಾನು ಉಳ್ತಿದೀನಿ ಅನ್ನೋ ನೆಮ್ಮಿ ಇದೆ ಸಾಕಲ್ಪ ಎಂದ ಮುಬಾರಕ್.
ಮುಬಾರಕನಲ್ಲಿ ಇನ್ನೂ ಮಾತನಾಡುವುದಿತ್ತು. ಆದರೆ ಅವನ ಮುಂದಿನ ಶೋಗೆ ಹೊತ್ತಾಯಿತು. ಹೊಸ ಗುಂಪು ಮತ್ತೆ ಅವನನ್ನು ಸುತ್ತುವರಿಯಿತು. ಪುಂಗಿಯನ್ನು ಸರಿಪಡಿಸಿಕೊಂಡ. ಪಂಜರದ ಫಾರಂ ಇಲಿಗಳು ‘ಕಚ್ ಪಿಚ್’ ಎನ್ನುತ್ತಾ ಸಿದ್ಧವಾದವು. ಮುಬಾರಕನ ಮ್ಯಾಜಿಕ್ ಶೋ ಸ್ವಲ್ಪ ಹೊತ್ತು ನಿಂತು ನಾನೂ ನೋಡಿದೆ. ಕಲೆಗೆ ನೆಲೆಯ ಹಂಗಿಲ್ಲ. ಎಲ್ಲೋ ಹುಟ್ಟಿಕೊಳ್ಳುತ್ತೆ, ಹೇಗೇಗೋ ಬೆಳೆದುಬರುತ್ತೆ. ಸೂಕ್ತ ಬೆಲೆ ಸಿಕ್ಕಿದರೆ ದೊಡ್ಡ ವೇದಿಕೆಗಳಲ್ಲಿ ನಿಂತು ಮೋಡಿಯ ಬಲೆ ಬೀಸುತ್ತಾರೆ. ಸಿಗದಿದ್ದರೆ ಮುಬಾರಕ್‌ನಂತಹ ಅದೆಷ್ಟೋ ಪ್ರತಿಭಾ ರೈತರು ಜಾತ್ರೆ, ಊರು, ಕೇರಿ ತಿರುಗುತ್ತಲೇ ಇರುತ್ತಾರೆ.
akshathagraj@gmail.com




