- ಸಂತೋಷ್ ನಾಯಕ್ ಆರ್.
ನಾನು ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಗೆ ಸೇರಿದ ಮತ್ತು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡ ಶಿವನಸಮುದ್ರದಲ್ಲಿ. ಅಲ್ಲಿನ ಜಲವಿದ್ಯುತ್ ಕೇಂದ್ರದ ಬಹುತೇಕರು ಆಗಿನ ಕೆಇಬಿಯ ಉದ್ಯೋಗಿಗಳಾದ್ದರಿಂದ ನಮ್ಮೂರಿನಲ್ಲಿ ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿಯೇ ಇತ್ತು.
ನಮ್ಮ ಶಾಲೆಯಲ್ಲಿಯೇ ಅತ್ಯುತ್ತಮ ಗ್ರಂಥಾಲಯ ಇದ್ದು, ಮಕ್ಕಳಿಗೆ ಪುಸ್ತಕ ಕೊಡುತ್ತಿದ್ದುದರಿಂದ ಹಾಗೂ ಊರಿನಲ್ಲಿ ಖಾಸಗಿ ಗ್ರಂಥಾಲಯ ಕೂಡ ಇದ್ದುದರಿಂದ, ಟಿವಿ ಹೆಚ್ಚು ಚಾಲ್ತಿ ಇರದ ಆ ಕಾಲದಲ್ಲಿ, ನನ್ನ ತಾಯಿಯೂ ಸೇರಿದಂತೆ ಅನೇಕ ಗೃಹಿಣಿಯರಿಗೆ ಬಿಡುವು ದೊರೆತಾಗ ಓದುವುದೇ ಹವ್ಯಾಸವಾಗಿ ನನಗೂ ಸಣ್ಣ ವಯಸ್ಸಿನಲ್ಲಿಯೇ ಓದುವ ಆಕರ್ಷಣೆ ಹುಟ್ಟಿತು. ನಾನು ಐದನೇ ತರಗತಿಯಲ್ಲಿದ್ದಾಗಲೇ ರವೀಂದ್ರನಾಥ ಟಾಗೋರರ ಜೀವನ ಚರಿತ್ರೆ ಓದಿ, ನನಗೂ ಕವಿ, ಲೇಖಕ ಆಗಬೇಕೆಂಬ ಆಸೆ ಹುಟ್ಟಿತು. ಹಾಗೆಯೇ ಏಳನೇ ತರಗತಿಯಲ್ಲಿ ವಿವೇಕಾನಂದರ, ರಮಣರ ಜೀವನದ ಕಥೆ ಓದಿದ ಮೇಲೆ ಸನ್ಯಾಸಿಯೇ ಆಗಬೇಕು ಅಂದುಕೊಂಡಿದ್ದೂ, ಎಡಿಸನ್ ಬಗ್ಗೆ ಓದಿ ವಿಜ್ಞಾನಿ ಆಗಲೇಬೇಕು ಅಂದಿಕೊಂಡಿದ್ದೂ ನಿಜ.
ಆದರೆ ಇತ್ತೀಚೆಗೆ ಓದು-ಬರಹ ಎರಡೂ ಬದಲಾದ ಸನ್ನಿವೇಶದಲ್ಲಿ ನಾವಿದ್ದೇವೆ. ಜಾಗತೀಕರಣದ ಆಧುನಿಕ ಜಗತ್ತಿನಲ್ಲಿ ಓದಿನ ಸುಖ ಆಗಿನ ಓದುವ ಸುಖ ಮತ್ತು ಬರೆಯುವ ಈಗಿನ ಸಂಕಟ ಅನುಭವಿಸಲು ಬಿಡುವು ಕೊಡದ ಜೀವನಶೈಲಿ, ಕಾರ್ಯದೊತ್ತಡ, ಬದುಕಿನ ಧಾವಂತಗಳ ಜೊತೆಗೆ ಅಳಿದುಳಿದ ಸಮಯವನ್ನೂ ಕಸಿದುಕೊಳ್ಳುವ ಟಿವಿ, ಓಟಿಟಿ, ರೀಲ್ಸ್, ಫೇಸ್‌ಬುಕ್ ಮೊದಲಾದವು ಗಂಭೀರ ಓದು ಬರವಣಿಗೆಗೆ ಅವಕಾಶವನ್ನು ಕಡಿಮೆ ಮಾಡುತ್ತಿದೆ. ಹಾಗೆಯೇ ಬರೆಯುವವನಿಗೆ ಸವಾಲಾಗಿರುವ ಹೊಸ ಸಾಮಾಜಿಕ ಪರಿಸ್ಥಿತಿಗಳು, ಧೃವೀಕರಣಗಳು ಏನನ್ನು ಬರೆಯಬೇಕು ಎನ್ನುವುದಕ್ಕಿಂತಲೂ ಏನನ್ನು ಬರೆಯಬಾರದು ಎಂಬ ಎಚ್ಚರಿಕೆಯನ್ನೇ ಕೊಡುತ್ತಿರುತ್ತವೆ. 90 ರ ದಶಕದ ಹಿಂದಿನ ಅನೇಕ ಕನ್ನಡ ಲೇಖಕರು ಬರೆದ ಹಾಗೆ ನಿಷ್ಟೂರತೆಯಿಂದ ಬರೆದು ದಕ್ಕಿಸಿಕೊಳ್ಳುವುದು ಇಂದು ಕಷ್ಟವೇ ಸರಿ.
ನೀವು ಗೆಲ್ಲಬಲ್ಲಿರಿ, ಹಣ ಸಂಪಾದಿಸುವುದು ಹೇಗೆ?, ವ್ಯಕ್ತಿತ್ವ ನಿರ್ಮಾಣ, ಮನಸ್ಸು ಲಘು ಮಾಡುವ ಬರಹಗಳು- ಇಂತಹ ಅನೇಕ ವಿಷಯಗಳ ನೂರಾರು ಪುಸ್ತಗಳು ಮಾರಾಟವಾಗುತ್ತಿವೆ. ಬಹುತೇಕ ಪ್ರಕಾಶಕರು ತಮ್ಮ ಉದ್ದಿಮೆಗೆ ಲಾಭದಾಯಕವಾದ ಪುಸ್ತಕಗಳನ್ನೇ ಮುದ್ರಿಸುತ್ತಾರೆ. ಬರಹ ಬದುಕು ಇಂದು ವಿಶ್ವವಿದ್ಯಾನಿಲಯ ಒಂದರ ಪ್ರಕಟಣಾ ವಿಭಾಗದ ಮುಖ್ಯಸ್ಥನಾಗಿ, ಇಂದಿನ ಆಧುನಿಕೋತ್ತರ ಜಗತ್ತಿನ ಕನ್ನಡ ಪುಸ್ತಕಗಳ ಮಾರುಕಟ್ಟೆಯನ್ನು ನೋಡಿದಾಗ, ಕನ್ನಡದಲ್ಲಿ ಬರವಣಿಗೆ ಕಡಿಮೆ ಆಗಿಲ್ಲ, ಓದುಗರೂ ಕೂಡ ಕಡಿಮೆ ಆಗಿಲ್ಲ ಎಂಬುದನ್ನು ಗಮನಿಸಿದ್ದೇನೆ. ಆದರೆ ಯಾವ ಬಗೆಯ ಪುಸ್ತಕಗಳು ಮಾರಾಟವಾಗುತ್ತಿವೆ? ಧ್ಯಾನ, ಏಕಾಗ್ರತೆ, ಜ್ಞಾನವನ್ನು ವೃದ್ಧಿಸುವ, ಬೌದ್ಧಿಕ ವಲಯವನ್ನು ವಿಸ್ತರಿಸುವ, ಸಂಶೋಧನೆಗಳನ್ನು ಆಧರಿಸಿದ, ಕನ್ನಡ ಜ್ಞಾನಶಿಸ್ತನ್ನು ಬೆಳೆಸುವ, ಚಿಂತನೆಗೆ ಹಚ್ಚುವ, ಸಾಮಾಜಿಕ ಜೀವನವನ್ನು, ಸಮುದಾಯವನ್ನು ಪ್ರೇರೇಪಿಸುವ ಮೌಲಿಕ ಬರಹಗಳು ಗಾಬರಿ ಹುಟ್ಟಿಸುವಷ್ಟು ಕಡಿಮೆ ಇವೆ.
ಸಣ್ಣ ಹಳ್ಳಿಯ ಸಾಮಾಜಿಕ ಪರಿಸರದಿಂದ ಬಂದ ನನ್ನಂತಹವರಿಗೆ ಮೈಸೂರಿನಂತಹ ನಗರಗಳು, ಇಲ್ಲಿನ ಬೌದ್ಧಿಕ ಪರಂಪರೆ, ವಿಶ್ವವಿದ್ಯಾನಿಲಯಗಳು ಬೆರಗನ್ನೂ, ಭಯವನ್ನೂ ಹುಟ್ಟಿಸಿದ್ದು ನಿಜ. ಸಾಂಸ್ಕೃತಿಕ ಭಿನ್ನತೆಗಳು ಹೊಂದಿಕೊಳ್ಳಲಾಗದ ಅನ್ಯತೆಯನ್ನು, ಪರಕೀಯತೆಯನ್ನು, ಕೀಳರಿಮೆಯನ್ನು ಉಂಟುಮಾಡಿದ್ದವು. ಆದರೆ ಇಂದು ಮೈಸೂರಿನಂತಹ ನಗರಗಳಲ್ಲಿಯೇ ಜಗತ್ತಿನ ಆಗುಹೋಗುಗಳನ್ನು ಗಮನಿಸುವ, ಶ್ರೇಷ್ಠವಾದದ್ದನ್ನು ಚಿಂತಿಸುವ,
ಬರೆಯುವ, ಮಾತನಾಡುವ ಅವಕಾಶಗಳು ಕಡಿಮೆ ಆಗಿವೆ. ಹಾಗಾಗಿಯೇ ವಾವ್ ಅನಿಸುವ, ದೀರ್ಘಕಾಲ ಉಳಿಯುವ, ಬೇರೆ ಭಾಷೆಗಳಿಗೂ ಹೋಗಬಲ್ಲ ಒರಿಜಿನಲ್ ಆದ ಮೌಲಿಕ ಪುಸ್ತಕಗಳು ಕೂಡ ಬರುವುದು ಅಪರೂಪದ ಸಂಗತಿಯಾಗಿದೆ.
ಬರವಣಿಗೆ ಲೇಖಕನ ಅಸ್ಥಿತೆಯ ಕಥನಗಳನ್ನು, ಅನುಭವ, ಚಿಂತನೆಗಳನ್ನು ಇತರರೊಂದಿಗೆ ಹೇಳಿಕೊಳ್ಳುವ ಒತ್ತಡದಿಂದಲೇ ಹುಟ್ಟುವುದಾದರೂ, ನಮ್ಮ ಸಾಮಾಜಿಕ ವಾತಾವರಣ, ಪ್ರಭುತ್ವದ ನಿಯಮಗಳು, ಆರ್ಥಿಕ ಪರಿಸ್ಥಿತಿಗಳು, ಜಾತಿ ಬಂಡವಾಳ, ಉದ್ಯೋಗದ ಪರಿಸರ, ಸಾಮಾಜಿಕ ಜಾಲತಾಣಗಳು ಹುಟ್ಟಿಸುವ ಆತಂಕ ಇವೇ ಮೊದಲಾದವು ಏನನ್ನು ಬರೆಯಬೇಕು, ಬರೆಯಬಾರದು ಮತ್ತು ಏನನ್ನು ಮಾತನಾಡಬೇಕು ಅಥವಾ ಮಾತನಾಡಬಾರದೆಂಬುದನ್ನು ನಿಯಂತ್ರಿಸುವುದು, ಬರೆಯಲಾಗದ ಒತ್ತಡವನ್ನು ನಿರ್ಮಿಸಿದಲ್ಲಿ ಅದು ಕನ್ನಡದ ಅರಿವಿನ ವಲಯವನ್ನು ಕುಗ್ಗಿಸಿಬಿಡುತ್ತದೆ.
(ಲೇಖಕರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕ ಮತ್ತು ಪ್ರಸಾರಾಂಗ ನಿರ್ದೇಶಕ) santhoshnaikr@gmail.com