Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸರೋದ್ ಮಾಂತ್ರಿಕನ ಮಾನವೀಯ ಮುಖಗಳು

ಚಿತ್ರಾ ವೆಂಕಟರಾಜು

ನಾನು ಧಾರವಾಡದಿಂದ ಚಾಮರಾಜನಗರಕ್ಕೆ ಬಂದಾಗಲೆಲ್ಲಾ ಮರಳಿ ಹೋಗುವಾಗ ಮೈಸೂರಿನ ತಾರಾನಾಥರ ಮನೆಗೆ ಹೋಗಿಯೇ ನಂತರ ರೈಲು ಹತ್ತುತ್ತಿದ್ದೆ. ಹೀಗೆ ಒಮ್ಮೆ ಹೋದಾಗ ಅಲ್ಲಿ ನಾಲ್ಕೈದು ಮಕ್ಕಳು ಕೂತಿದ್ದರು. ಅವರ ಮನೆಯ ಮುಂದೆ ಒಂದು ಕಟ್ಟಡದ ಕಾಮಗಾರಿ ನಡೀತಿತ್ತು. ಅಲ್ಲಿದ್ದ ಮಕ್ಕಳಿಗೆ ಇವರು ಸಂಜೆಯ ಹೊತ್ತು ಇಂಗ್ಲಿಷ್ ಪಾಠ ಮಾಡುತ್ತಿದ್ದರು. ವರ್ಷಕ್ಕೊಮ್ಮೆ ವಿದೇಶಕ್ಕೆ ಹೋಗುತ್ತಿದ್ದವರು. ಬರುವಾಗ ಅಲ್ಲಿನ ಬಟ್ಟೆಗಳನ್ನು ತಂದು ಈ ಮಕ್ಕಳಿಗೆ ಕೊಡುತ್ತಿದ್ದರು.

ಮತ್ತೊಮ್ಮೆ ಅವರ ಮನೆಗೆ ಹೋದಾಗ ಪಂಡಿತ್ ಭೀಮಸೇನ ಜೋಶಿಯವರು ತೀರಿಕೊಂಡ ಸುದ್ದಿ ಟಿವಿ ಯಲ್ಲಿ ಬರುತ್ತಿತ್ತು. ನಾನು ಅವರ ಮನೆಗೆ ಹೋದೆ. ಅಂದಿನ ಮಂತ್ರಿಗಳೆಲ್ಲಾ ಭೀಮಸೇನ ಜೋಶಿಯವರ ನಿಧನದ ಬಗ್ಗೆ ಸಂತಾಪ ಹೇಳುತ್ತಿರುವ ವಿಡಿಯೋ ತುಣುಕುಗಳು ಟಿವಿಯಲ್ಲಿ ಬರುತ್ತಿತ್ತು. ಒಮ್ಮೆಲೆ ಸಿಟ್ಟು ಮಾಡಿಕೊಂಡ ತಾರಾನಾಥರು “ಇವರಿಗೇನು ಯೋಗ್ಯತೆ ಇದೆ ಅಂತ ಮಾತಾಡ್ತಾರೆ, ಇವರುಗಳ ಹತ್ರ ಮಾತಾಡಿಸಲೇಬಾರದು” ಅಂತ ಟಿವಿ ಆಫ಼್ ಮಾಡಿ ಮೌನವಾಗಿ ಕೂತರು.

ಧಾರವಾಡ ಉತ್ಸವದಲ್ಲಿ ಒಮ್ಮೆ ಅವರ ಕಛೇರಿ ಇತ್ತು. ಹುಬ್ಬಳ್ಳಿ ಧಾರವಾಡದ ಮಧ್ಯೆ ಇರುವ ಎಸ್.ಡಿ.ಎಂ. ಸಭಾಂಗಣದಲ್ಲಿ ಕಾರ್ಯಕ್ರಮ. ಹುಬ್ಬಳ್ಳಿ ಧಾರವಾಡ ಎರಡು ಊರಿಗೂ ಆ ಸಭಾಂಗಣ ದೂರ. ಸರ್ಕಾರೀ ಉತ್ಸವವಾದ್ದರಿಂದ ಪ್ರಾರಂಭವಾಗುವುದೇ ತಡವಾಯಿತು. ಯಾವ ಕಲಾವಿದರೂ ತಮಗೆ ಕೊಟ್ಟ ಸಮಯವನ್ನು ಕಡಿಮೆ ಮಾಡಿಕೊಳ್ಳಲು ಇಷ್ಟಪಡಲಿಲ್ಲ. ಪೂರ್ತಿ ಒಂದೊಂದು ಗಂಟೆಯನ್ನೂ ಬಳಸಿಕೊಂಡರು.

ಸುಮಾರು ೧೦ ಗಂಟೆಗೆ ವೇದಿಕೆಗೆ ತಾರಾನಾಥರು ಬಂದರು. ಬಂದ ವರೆ ಸರೋದ್ ಅನ್ನು ಟ್ಯೂನ್ ಮಾಡಿ ‘ತಡ ಆಗಿ ಬಿಟ್ಟಿದೆ. ಇದು ಊರ ಹೊರಗೆ ಬೇರೆ. ಚಳಿ. ವಯಸ್ಸಾದವರು ಬಂದೀರಿ. ಏನ್ಮಾಡ್ಲಿ ನೀವೇ ಹೇಳ್ರಿ. ಒಂದು ಧುನ್ ನುಡಿಸಿ ಮುಗಿಸಿಬಿಡ್ಲಾ?’ ಅಂತ ಕೇಳಿದರು. ಪ್ರೇಕ್ಷಕರು ನಾವು ಕೇಳ್ತೀವಿ ನೀವು ನುಡಿಸ್ರೀ ಅಂದರು. ಹೀಗೆ ೧೧ ರ ನಂತರ ಅವರ ಕಛೇರಿ ಮುಗಿಯಿತು.

ಬಹುಶಃ ಗಿರೀಶ್ ಕಾರ್ನಾಡರ ಆತ್ಮಕತೆ ‘ಆಡಾಡತ ಆಯುಷ್ಯ’ದ ಬಿಡುಗಡೆ ಇರಬೇಕು. ತಾರಾನಾಥರ ಕಛೇರಿ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿತ್ತು. ಅವರ ಶಿಷ್ಯನನ್ನು ಜೊತೆಗೆ ನುಡಿಸಲು ಕರೆದುಕೊಂಡು ಬಂದಿದ್ದರು. ಏನನ್ನಿಸಿತೋ ಏನೋ ಶಿಷ್ಯನನ್ನು ತೋರಿಸಿ ‘ನೋಡ್ರಿ ಇವ ಛಲೋ ಕಲತಾನ. ಬಾರಿಸ್ತಾನ. ನಿಮ್ಮೆಲ್ಲರ ಆಶೀರ್ವಾದ ಬೇಕು. ಇಲ್ಲದಿದ್ರೆ (ಅಲ್ಲೇ ಇದ್ದ ಭೀಮಸೇನ ಜೋಶಿಯವರ ಫೋಟೋ ತೋರಿಸ್ತಾ) ಅವರು ಹೋದ ಹಾಗೆ ಇವನೂ ಹೋಗಿಬಿಡ್ತಾನೆ. ಉಳಿಸ್ಕೊಳೋ ಜವಾಬ್ದಾರಿ ನಿಮ್ಮದು’ ಅಂತ ಹೇಳಿ ಕಛೇರಿ ಮುಂದುವರಿಸಿದರು.

ಒಮ್ಮೆ, ಯಾವ ನಾಟಕ ಮಾಡ್ತಿದ್ದೀರಿ ಅಂತ ಕೇಳಿದ್ರು. ಆಗ ನಾವು ಮಂಟೋನ ‘ತೋಬಾ ತೇಕ್ ಸಿಂಗ್ ’ ನಾಟಕ ಮಾಡ್ತಿದ್ದೆವು. ಅದನ್ನು ಹೇಳಿದಾಗ ಅವರು ಅಹಮದಾಬಾದ್‌ಗೆ ಹೋಗಿದ್ದಾಗಿನ ವಿಷಯವೊಂದನ್ನು ಹಂಚಿಕೊಂಡರು. ‘ಅಲ್ಲಿ ಮುಸ್ಲಿಂ ಸಮುದಾಯದವರದೇ ಒಂದು ಪ್ರದೇಶ ಇದ್ದು ಅಲ್ಲಿಗೆ ಯಾವ ಮೂಲಭೂತ ಸೌಕರ್ಯವೂ ಇಲ್ಲ’ ಎಂದು ಬಹಳ ಬೇಸರದಿಂದ ಹೇಳಿದರು.

ಕಾರ್ಯಕ್ರಮವೊಂದಕ್ಕೆ ಹೋದಾಗ ಮುಸ್ಲಿಂ ವರ್ತಕನೊಬ್ಬ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ನಾನು ಅವನಿಂದ ಬಟ್ಟೆ ಖರೀದಿಸಿ ಹೆಚ್ಚು ಹಣವನ್ನು ಕೊಟ್ಟೆ. ಅವನು ಹಣ ವಾಪಸ್ ನೀಡಲು ಬಂದಾಗ. ಇಟ್ಟುಕೊ. ಇದು ನಾವೆಲ್ಲಾ ಮಾಡಿದ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ. ತೀರಿಸಬೇಕಾದ ಋಣ’ ಅಂದರಂತೆ. ಇದನ್ನು ಹೇಳುವಾಗ ಅವರ ಕಣ್ಗಳು ತುಂಬಿದ್ದವು.

‘ಹಮೀದ್ ಬಹಳ ಶಿಷ್ಯರನ್ನು ಬೆಳೆಸಿದ. ನನಗೆ ಹಾಗೆ ಮಾಡ್ಲಿಕ್ಕಾಗ್ಲಿಲ್ಲ’ ಅಂತ ಹಮೀದ್ ಖಾನ್ ರವರು ತೀರಿಕೊಂಡಾಗ ಹೇಳಿದರು. ಮತ್ತೆ ಯಾವಾಗಲೋ ‘ಕಲಾವಿದ ತಾನು ನೋವನ್ನು ಅನುಭವಿಸಿದರೂ ಜನಕ್ಕೆ ಸಂತೋಷ ಕೊಡಬೇಕು. ತಾನೇ ಸಮಾಜಕ್ಕೆ ನೋವು ಕೊಡಬಾರದು’ ಅಂತ ಹೇಳಿದ್ರು.

ಮತ್ತಷ್ಟು ವರ್ಷಗಳಾದ ಮೇಲೆ ಅವರನ್ನು ಮಾತನಾಡಿಸಿದಾಗ, ಅವರಿಗೆ ನನ್ನ ನೆನಪಾಗಲಿಲ್ಲ. ಕೊನೆಯ ಸಮಯದಲ್ಲೂ ಅವರು ರಿಯಾಜ಼್ ಮಾಡುತ್ತಿದ್ದರಂತೆ. ಒಮ್ಮೆ ಆ ಸಮಯದಲ್ಲಿ ಅವರ ಸಂಗೀತ ಕೇಳಬೇಕು ಎನ್ನುವುದು ಆಸೆಯಾಗಿಯೇ ಉಳಿಯಿತು.

Tags:
error: Content is protected !!