Mysore
14
few clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕರಿಘಟ್ಟವೆಂಬ ಹಸಿರು ತುಂಬಿದ ಬೆಟ್ಟ

ಸಿರಿ ಮೈಸೂರು

ಇಂತಹದೊಂದು ಶಾಂತ ಸುಂದರ ತಾಣ ಇರುವುದು

ಮೈಸೂರಿನಿಂದ ಕೇವಲ ಅರ್ಧ ತಾಸು ದೂರದಲ್ಲಿ.

ಅದೊಂದು ಪ್ರಶಾಂತವಾದ, ಹಸಿರು ತುಂಬಿದ ಬೆಟ್ಟ. ಬೆಟ್ಟದ ಮೇಲೊಂದು ಸುಂದರ, ಪುರಾತನ ದೇವಸ್ಥಾನ. ಮೇಲೆ ನಿಂತು ನೋಡಿದರೆ ಕಾಣುವ ಜೀವನದಿ ಕಾವೇರಿ. ಇಂತಹ ಸುಂದರ ಸ್ಥಳ ಇರುವುದು ಮೈಸೂರಿನಿಂದ ಕೇವಲ ಮೂವತ್ತು ನಿಮಿಷ ಪ್ರಯಾಣದ ದೂರದಲ್ಲಿ.

ಹೌದು.. ಇದು ಇತಿಹಾಸ ಪ್ರಸಿದ್ಧ ಕರಿಘಟ್ಟ ಬೆಟ್ಟ ಹಾಗೂ ಪುರಾಣಪ್ರಸಿದ್ಧ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ. ಚಾರಣ ಪ್ರಿಯರು, ಪ್ರಕೃತಿ ಪ್ರಿಯರು, ಇತಿಹಾಸದ ಬಗ್ಗೆ ಆಸಕ್ತಿ ಉಳ್ಳವರು, ಸುಮ್ಮನೆ ಕಾಲಕಳೆಯಲು ಬರುವ ಗೆಳೆಯರು, ಕುಟುಂಬ ಸಮೇತರಾಗಿ ಭಕ್ತಿಯಿಂದ ಬರುವವರು… ಹೀಗೆ ಎಲ್ಲರಿಗೂ ಇದು ಅಚ್ಚುಮೆಚ್ಚಿನ ಜಾಗ. ಮೈಸೂರು ಹಾಗೂ ಸುತ್ತಮುತ್ತಲಿನ ಜನರಿಗೆ ಈ ಜಾಗದ ಬಗ್ಗೆ ತಿಳಿದಿದೆಯಾದರೂ, ಹೊರಗಿನವರಿಗೆ ಈ ಬಗ್ಗೆ ಅಷ್ಟು ಅಂದಾಜಿಲ್ಲ.

ಬೆಟ್ಟದ ಮೇಲಿರುವ ದೇವಸ್ಥಾನವನ್ನು ಸ್ಥಾಪಿಸಿದ್ದು ಭೃಗು ಮಹರ್ಷಿ ಎಂಬುದು ಐತಿಹ್ಯ. ಇಲ್ಲಿರುವ ದೇವರು ವೈಕುಂಠ ಶ್ರೀನಿವಾಸ. ಕರಿಘಟ್ಟ ಎಂದು ಈ ಬೆಟ್ಟಕ್ಕೆ ಏಕೆ ಹೆಸರು ಬಂತು ಎಂದರೆ, ಇಲ್ಲಿರುವ ದೇವರ ವಿಗ್ರಹ ಕಪ್ಪು ಶಿಲೆಯದ್ದು. ಇದು ಬಹಳ ಅಪರೂಪವಾದದ್ದು ಎನ್ನುತ್ತಾರೆ ಇತಿಹಾಸಕಾರರು. ಬೃಹತ್ ಗಾತ್ರದ ಕಂಬಗಳು, ವಿಶೇಷ ಕೆತ್ತನೆಗಳಿರುವ ಗೋಪುರ, ಶ್ರೀನಿವಾಸ, ಗರುಡ ಹಾಗೂ ಮತ್ತಿತರ ಕೆತ್ತನೆಗಳು ಇಲ್ಲಿನ ವಿಶೇಷ. ಇಲ್ಲಿ ಶ್ರೀನಿವಾಸ ಮಾತ್ರವಲ್ಲದೆ ಪದ್ಮಾವತಿ, ಲಕ್ಷ್ಮೀ, ರಾಮ, ಲಕ್ಷ್ಮಣ, ಸೀತೆ, ಗರುಡ, ಹನುಮಂತನ ವಿಗ್ರಹಗಳನ್ನೂ ಕಾಣಬಹುದು. ಗರುಡನ ಬೃಹತ್ ಗಾತ್ರದ ಅಪರೂಪದ ವಿಗ್ರಹ ಮುಖ್ಯದೇವರ ಎದುರಿಗೇ ಇದ್ದು, ಈ ವಿಗ್ರಹವೇ ಇಲ್ಲಿನ ಪ್ರಮುಖ ಆಕರ್ಷಣೆ.

ಕರಿಘಟ್ಟ ಶ್ರೀರಂಗಪಟ್ಟಣದಿಂದ ಕೇವಲ ಹತ್ತು ನಿಮಿಷ ದೂರವಿದೆ, ಸಮುದ್ರಮಟ್ಟದಿಂದ ೨,೬೯೭ ಅಡಿ ಎತ್ತರದಲ್ಲಿದೆ. ಬೆಟ್ಟದ ತುದಿಗೆ ತಲುಪಲು ಮೆಟ್ಟಿಲುಗಳೂ ಇವೆ, ಸುಸಜ್ಜಿತ ರಸ್ತೆಯೂ ಇದೆ. ಮೆಟ್ಟಿಲುಗಳು ಇರುವ ಕಾರಣ ಇದು ಚಾರಣಪ್ರಿಯರಿಗೆ ಬಹಳ ಅಚ್ಚುಮೆಚ್ಚಿನ ಜಾಗ. ಸುಮಾರು ೪೫೦ ಮೆಟ್ಟಿಲು ಗಳಿರುವ ಈ ಬೆಟ್ಟವನ್ನು ಹತ್ತಲು ಕನಿಷ್ಠ ೪೫ ನಿಮಿಷಗಳಾದರೂಬೇಕು. ಮಧ್ಯೆ ಹಲವು ಬಾರಿ ನಿಂತು ಸುತ್ತಲೂ ನೋಡಿದರೆ ಪ್ರಕೃತಿಯ ಅನೂಹ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಅಲ್ಲದೆ ಬೆಟ್ಟದ ಮಧ್ಯೆ ಹಲವಾರು ವಿಶೇಷ ಪ್ರಾಣಿ-ಪಕ್ಷಿಗಳನ್ನೂ ನೋಡಬಹುದು. ಇಲ್ಲಿ ದೇವಸ್ಥಾನದ ಪಕ್ಕದಲ್ಲೇ ಶ್ರೀ ವೆಂಕಟರಮಣಸ್ವಾಮಿ ಸಸ್ಯೋದ್ಯಾನವನ ಇದೆ. ಇಲ್ಲಿ ಒಳಗೆ ಹೋದರೆ ಬೇಕಾದಷ್ಟು ರೀತಿಯ ಸಸ್ಯ ಸಂಪತ್ತನ್ನು ನೋಡಬಹುದು. ಅಂದಹಾಗೆ ಶ್ರೀರಂಗಪಟ್ಟಣದಲ್ಲಿ ರಂಗನತಿಟ್ಟು ಇರುವ ಕಾರಣ ವಿಶೇಷ ಪಕ್ಷಿಗಳಿಗೇನೂ ಕೊರತೆಯಿಲ್ಲ. ಅಂತೆಯೇ ಈ ಜಾಗದಲ್ಲೂ ನಾವು ವಿವಿಧ ರೀತಿಯ ಪಕ್ಷಿಗಳನ್ನು ನೋಡಬಹುದು. ದಿ ಇಂಡಿಯಾ ಪೀಫೌಲ್, ಈಗಲ್, ವೈಟ್ ಬ್ರೆಸ್ಟೆಡ್ ವಾಟರ್ಹೆನ್ ಸೇರಿದಂತೆ ಇನ್ನೂ ಸಾಕಷ್ಟು ಸ್ಥಳೀಯ ಹಾಗೂ ವಿದೇಶಿ ಪಕ್ಷಿಗಳು ಇಲ್ಲಿ ಕಾಣ ಸಿಗುತ್ತವೆ. ಇಲ್ಲಿ ಹಸಿರು ಹೆಚ್ಚಾಗಿರುವ ಕಾರಣ ಹಾಗೂ ಕಾವೇರಿ ನದಿ ಇರುವ ಕಾರಣ ಇಷ್ಟೆಲ್ಲಾ ಪಕ್ಷಿಗಳಿಗೆ ಈ ಸ್ಥಳ ನೆಚ್ಚಿನ ತಾಣವಾಗಿದೆ. ಅದರಲ್ಲೂ ಹಕ್ಕಿಗಳು ವಲಸೆ ಬರುವ ಸಮಯದಲ್ಲಿ, ಅಂದರೆ ಚಳಿಗಾಲದಲ್ಲಿ ಇಲ್ಲಿ ನೂರಾರು ರೀತಿಯ ವಿಶೇಷ ಜಾತಿಯ ಹಕ್ಕಿಗಳನ್ನು ನೋಡಬಹುದು.

ಪ್ರತಿವರ್ಷ ಫೆಬ್ರವರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಹಬ್ಬ, ಜಾತ್ರೆ ನಡೆಯುತ್ತದೆ. ಆಗ ಬೇರೆ ಬೇರೆ ಸ್ಥಳಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಅದನ್ನು ಹೊರತುಪಡಿಸಿ ಹಬ್ಬ ಅಥವಾ ಇತರೆ ವಿಶೇಷ ದಿನಗಳಲ್ಲಿ ಹೆಚ್ಚುಜನರಿರುತ್ತಾರೆ ಎಂಬುದನ್ನು ಬಿಟ್ಟರೆ ಈ ಸ್ಥಳ ಸಾಮಾನ್ಯವಾಗಿ ಬಹಳ ನಿಶ್ಚಲವಾಗಿ, ಶಾಂತವಾಗಿ ಇರುತ್ತದೆ.

Tags:
error: Content is protected !!