Mysore
30
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಊರ ಕಾಯುವ ಹೆಣ್ಣು ದೇವಿಯರು ನಮ್ಮನ್ನು ಪೊರೆಯುವ ಸ್ತ್ರೀ ಚೈತನ್ಯದ ಕಥೆ ಹೇಳುವರು  

ರಾಧಾ

ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು.

ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ ತೋರಿಬಂದ ಪ್ರಕೃತಿಯ ವಿಕೋಪ ಮತ್ತು ವೈಚಿತ್ರ್ಯಗಳು ಕುತೂಹಲವನ್ನೋ, ದುಗುಡ ದುಮ್ಮಾನಗಳನ್ನೋ ತಂದೊಡ್ಡುವುದು ಸಹಜವಾಗಿತ್ತು. ಕಾಲಕ್ರಮೇಣ ಪ್ರಕೃತಿ -ಪುರುಷರ ಅವಿ ನಾಭಾವದ ಸಂಬಂಧವನ್ನು ಅರಿತುಕೊಂಡಾಗ, ಪುರುಷನಿಗಿಂತ ಪ್ರಕೃತಿಯೇ ಉಗ್ರವಾದುದೆಂದು ತಿಳಿದು ಪ್ರಕೃತಿ ಪೂಜೆಗೆ ಮುಂದಾದ. ತನಗೆ ಬರುವ ಕಷ್ಟಗಳನ್ನು ದೂರವಾಗಿಸಲು ಪ್ರಕೃತಿಯನ್ನು ಆರಾಧಿಸಿದ.

ಈತ ಪ್ರಕೃತಿಯನ್ನೇ ಆದಿಶಕ್ತಿ ಎಂದು ಬಗೆದು ‘ಶಕ್ತಿ’ ಪೂಜೆಯಲ್ಲಿ ನಿರತನಾದ. ಹೀಗೆ ಗ್ರಾಮದೇವತೆಯ ಉದಯವಾಯಿತು, ಶಕ್ತಿ ಎಲ್ಲ ಗ್ರಾಮದೇವತೆಗಳ ಮೂಲ ಸ್ವರೂಪವೆಂದು ತಿಳಿದು ಅವಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದ. ಮಾತೃಪ್ರಧಾನತೆಯು ಒಂದು ಸಾಮಾಜಿಕ ವ್ಯವಸ್ಥೆಯಾಗಿದ್ದು, ಇದರಲ್ಲಿ ಮಹಿಳೆಯರು ರಾಜಕೀಯ ಮುಖ್ಯಸ್ಥತ್ವ, ನೈತಿಕ ಶಕ್ತಿ, ಸಾಮಾಜಿಕ ಗೌರವ ಮತ್ತು ಆಸ್ತಿಯ ನಿಯಂತ್ರಣದಂತಹ ಪ್ರಮುಖ ಪಾತ್ರಗಳಲ್ಲಿ ಪ್ರಾಬಲ್ಯವನ್ನು ಹೊಂದಿರುತ್ತಾರೆ.

ಭಾರತದಲ್ಲಿ ಮಾತೃಪ್ರಧಾನ ಸಮಾಜಗಳು ಪ್ರಾಚೀನ ಯುಗಗಳಿಂದಲೂ ಅಸ್ತಿತ್ವದಲ್ಲಿವೆ. ಅನೇಕ ಬುಡಕಟ್ಟು ಜನಾಂಗಗಳು ಇನ್ನೂ ಮಾತೃಪ್ರಧಾನ ವ್ಯವ ಸ್ಥೆಯನ್ನು ಉಳಿಸಿಕೊಂಡಿವೆ. ಮಾತೃಪ್ರಧಾನ ವ್ಯವಸ್ಥೆಯೇ ಶಕ್ತಿ ದೇವತೆಯ ಆರಾಧನೆಗೆ ಪ್ರಮುಖ ಕಾರಣವಾಗಿದೆ. ಅಂದಿನಿಂದ ಇಂದಿನ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯವರೆಗೆ ಈ ದೇವತೆಗಳ ಅಸ್ತಿತ್ವವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ ಹೆಣ್ಣುದೇವತೆ ಹೆಚ್ಚು ಶಕ್ತಿಶಾಲಿ. ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರಿದರೂ ಆಧುನಿಕತೆಯ ದಾಪುಗಾಲು ಎಷ್ಟೇ ಗಾಢವಾಗಿದ್ದರೂ ಮಾನವ ತನ್ನ ಸಿದ್ಧಾಂತಗಳನ್ನು ಬಿಟ್ಟು ಕೊಡಲಾರ. ಆ ಸಿದ್ಧಾಂತಗಳೇ ಅವನ ಜೀವಿತಾವಧಿಯ ಬಹುಮುಖ್ಯ ಭಾಗವಾಗಿ ಉಳಿದುಕೊಂಡು ಬಂದಿದೆ.

ಗ್ರಾಮದೇವತೆಯ ಆಚರಣೆಯನ್ನು ಪುನಃ ಪರಿಶೀಲಿಸಿದಾಗ ಅವುಗಳಲ್ಲಿ ಅನೇಕ ಆಚರಣೆಗಳು ವೈಜ್ಞಾನಿಕ ಸಿದ್ಧಾಂತದ ಹಿನ್ನೆಲೆಯಲ್ಲಿ ನಡೆಯುತ್ತವೆಯೆಂದು ಗುರುತಿಸಬಹುದು. ಅದೇನೇ ಆದರೂ ಗ್ರಾಮದೇವತೆಯ ಆರಾಧನೆಯ ಮೂಲ ಉದ್ದೇಶ ಪ್ರಗತಿ. ಊರು-ಕೇರಿ, ಮಳೆ-ಬೆಳೆ, ಪ್ರಾಣಿ- ಪಕ್ಷಿ ಹೀಗೆ ಒಟ್ಟಾರೆ ಜೀವ ಸಂಕುಲದ ಸಮೃದ್ಧಿಯ ಸಂಕೇತವೇ ಆಗಿದೆ. ಹೆಣ್ಣು ಜೀವೋತ್ಪತ್ತಿಯ ಮೂಲಶಕ್ತಿಯಾದಳು. ಹೀಗಾಗಿ ಆಕೆಯ ಅಂಗಾಂಗಗಳು ಮತ್ತು ಗುಣಶಕ್ತಿಗಳಿಗೆ ಸೃಷ್ಟಿಶಕ್ತಿಯ ಸಾಮರ್ಥ್ಯವಿದೆಯೆಂದು ಭಾವಿಸಲಾಯಿತು. ಅವುಗಳನ್ನು ಚೈತನ್ಯ ಶಕ್ತಿಯ ಸಂಕೇತಗಳೆಂದು ತಿಳಿಯಲಾಯಿತು.

ಸಮಾಜದ ಬೆಳವಣಿಗೆಯ ಮೊದಲ ಹಂತದಲ್ಲಿ ಮಾತೃವೇ ಧರ್ಮದ ಕೇಂದ್ರಸ್ಥಾನದಲ್ಲಿದ್ದಳು. ಈ ಮಾನ್ಯತೆಯೇ ಅವಳನ್ನು ದೈವತ್ವಕ್ಕೆ ಏರಿಸಿತು. ಅವಳ ಗರ್ಭಧಾರಣೆ ಮತ್ತು ಭೂಮಿಯ ಸಸ್ಯಧಾರಣೆ ಇವೆರಡಕ್ಕೂ ಸಾಮ್ಯತೆ ಇದ್ದ ಕಾರಣ ಭೂಮಿ ಮತ್ತು ಹೆಣ್ಣಿನಲ್ಲಿ ಅಭೇದ ಕಲ್ಪಿಸಿ ಪೂಜ್ಯ ನೆಲೆಯಲ್ಲಿ ನೋಡುವ ನೆಲೆ ಆರಂಭವಾಯಿತು. ಗ್ರಾಮದೇವತೆಗಳು ಸ್ತ್ರೀ ಚೈತನ್ಯಶಕ್ತಿಯ ಆರಾಧನೆಗಳಾಗಿವೆ. ಯಾವುದೇ ಗ್ರಾಮದೇವತೆ ಮನುಷ್ಯ ಮತ್ತು ಸಮಾಜದ ನೆಲೆಯಲ್ಲಿ ಸಮಾಜದ ಒಟ್ಟು ಭಾವಸಂಬಂಧವನ್ನು ಸ್ಥಿರಪಡಿಸುವ ಸಾಧನಗಳಾಗಿವೆ.

ಗ್ರಾಮದೇವತೆ ಎಂಬುದು ಕೇವಲನಂಬಿಕೆಯಲ್ಲ, ಸರ್ವವನ್ನೂ ಕಾಯುವ ಶಕ್ತಿಯಾಗಿದ್ದಾಳೆ. ಅವಳು ನಿಶ್ಚಲಳಲ್ಲ, ಚಲಿಸುವವಳು. ಮೌನವಾಗಿರುವವಳಲ್ಲ, ಅನ್ಯಾಯದ ವಿರುದ್ಧ ದನಿಯೆತ್ತುವವಳು. ಆಕೆ ಸಮುದಾಯದ ಬದುಕನ್ನು ನಿಯಂತ್ರಿಸುವ ಮತ್ತು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುವ ಶಕ್ತಿಯಾಗಿ ಕಂಡುಬರುತ್ತಾಳೆ. ವಿಶ್ವದ ಮೂಲ ಸೃಷ್ಟಿ, ಶಕ್ತಿ, ಮತ್ತು ರಕ್ಷಣೆಯ ಸಂಕೇತವೇ ಸ್ತ್ರೀ ಆಗಿದ್ದಾಳೆ. ಅವಳು ರೂಪವಾಗಿದ್ದರೂ ನಿರಾಕಾರ, ‘ರೂಪವಿಲ್ಲದ ರೂಪ’. ಅರ್ಥಮಾಡಿಕೊಳ್ಳಲು ಮತ್ತು ಸಹಾಯವನ್ನು ಪಡೆಯಲು ಅವಳ ರೂಪದ ಅಗತ್ಯವಿರುವವರಿಗೆ, ಅವಳು ಪ್ರತಿ ಸಂಸ್ಕೃತಿ ಯಲ್ಲಿಯೂ ಕಾಣಿಸುತ್ತಾಳೆ. ರೂಪದ ಅಗತ್ಯವನ್ನು ಮೀರಿದವರಿಗೆ ಅವಳು ಬೆಳಕು. ಈ ಸೃಜನಶೀಲ ತತ್ವವನ್ನು ‘ಹೆಣ್ಣು’ ಎಂದು ಕರೆಯಲಾಗುತ್ತದೆ. ಏಕೆಂದರೆ ಅವಳಿಲ್ಲದೆ, ಭೂಮಿಯಲ್ಲಿ ಮಾನವರು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಜನಪದ ಪುರಾಣ ಪ್ರಪಂಚದಲ್ಲಿಗ್ರಾಮದೇವತೆಯರ ವ್ಯಕ್ತಿತ್ವ ತನ್ನೆಲ್ಲ ಮುಖಗಳಲ್ಲಿ ಪ್ರಕಟವಾಗುತ್ತದೆ. ‘ಪುರಾಣಗಳು ನಂಬಿಕೆಯ ಫಲ, ನಂಬಿಕೆಗಳು ಅನುಭವದ ಪರಿಣಾಮ’ ಎಂಬ ಮಾತಿಗೆ ಪೂರಕವಾಗಿ ಬನ್ನಮ್ಮನ ಮೂಲಕ ಅಲ್ಲಿನ ಜನಪದರು ಲೋಕವನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ಜನಪದ ಕತೆ ಪುರಾಣಗಳು ಕಟ್ಟು ಕತೆಗಳಲ್ಲ. ಅವು ಬಹುಸಂಖ್ಯಾತ ಜನತೆಯ ಬದುಕಿಗೆ ಹಿಡಿದ ಕನ್ನಡಿ. ಬನ್ನಮ್ಮ ದೇವತೆ ಗ್ರಾಮೀಣ ಜನಬದುಕಿನ ಮಾನಸಿಕ ಅಗತ್ಯ.

ಅವರ ಸಾಮರಸ್ಯದ ಜೀವಾಳ ಮತ್ತು ಅವರ ಬದುಕಿನ ಮೂಲಸೆಲೆ. ಗ್ರಾಮದೇವತೆಯಾದ ಬನ್ನಮ್ಮ ಸ್ತ್ರೀ ಶಕ್ತಿಯ ದೈವಿಕ ಅಭಿವ್ಯಕ್ತಿಯಾಗಿ ಆಕೆಯನ್ನು ಅಮರಗೊಳಿಸಿದ್ದಾರೆ. ಆದರೆ ಅವಳು ಕಾಲ ಕಾಲಕ್ಕೆ ಪುರುಷನ ರಾಕ್ಷಸತ್ವವನ್ನು ವಧಿಸಲು ಶಕ್ತಿ ರೂಪಿಣಿಯಾಗಿ ಜನ್ಮ ತಳೆಯುತ್ತಲೇ ಇರುತ್ತಾಳೆ. ಹಾಗಾದರೆ ಮಹಿಳೆಯನ್ನು ದೇವತೆಯಂತೆ ಚಿತ್ರಿಸುವುದು ಯಾಕೆಂದರೆ ಅದರಿಂದ ಅವರು ದೇವತಾ ಆರಾಧನೆಯ ಮಹಿಳೆಯರಿಗೆ ಉತ್ತಮ ಜೀವನ ಅವಕಾಶಗಳಾಗಿ ರೂಪಾಂತರಗೊಳಿಸುವುದಕ್ಕಲ್ಲ. ಇದು ಸಾಂಕೇತಿಕ ಪ್ರಾತಿನಿಧ್ಯ, ಕೇವಲ ಸಾಂಕೇತಿಕ.

ಸ್ತ್ರೀ-ಶಕ್ತಿ ಮತ್ತು ದೇವತೆ ಆರಾಧನೆ ಅತ್ಯಂತ ಹಳೆಯ ಪದ್ಧತಿಯಾಗಿದ್ದು, ಅದು ಆಳವಾಗಿ ಬೇರೂರಿರುವ ಪಿತೃಪ್ರಭುತ್ವ ಮತ್ತು ತಾರತಮ್ಯದಿಂದ ತನ್ನನ್ನು ತಾನು ಮುಕ್ತಗೊಳಿಸುತ್ತದೆ. ಸ್ತ್ರೀ ದೇಹವನ್ನು ಪೂಜಿಸುವ ಗುಣದಿಂದ ಪುರುಷ ತನ್ನ ಎಲ್ಲಾ ಆರೋಪಗಳಿಂದ ಮುಕ್ತವಾಗುತ್ತಾನೆ ಎನ್ನುವ ಪರಿಕಲ್ಪನ ಸೂಚನೆಯನ್ನು, ಸ್ತ್ರೀ ಮೂಲಕವೇ ತನ್ನ ಪೂರ್ಣತ್ವವನ್ನು ಪಡೆಯಬೇಕಿರುವ ಮತ್ತು ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಿರುವ ಪತ್ರೀಕವೂ ಆಗಿದೆ. ಆ ಮೂಲಕ ಪ್ರಾತಿನಿಧ್ಯದ ಕೊರತೆಯ ಹಕ್ಕುಗಳಿಗೂ ಅದು ಪ್ರತಿಕ್ರಿಯಿಸುತ್ತದೆ. ಮೇರಿ, ಸಾರ್ವತ್ರಿಕ ಕಪ್ಪು ತಾಯಿ, ಐಸಿಸ್, ಹೇರಾ, ಕುವಾನ್-ಯಿನ್, ಸ್ಥಳೀಯ ಅಮೆರಿಕನ್ನರ ತಾಯಿ ಭೂಮಿ, ಅಮ್ಮಾಳ್, ಶಾರದಾ ದೇವಿ, ಸರಸ್ವತಿ, ಲಕ್ಷ್ಮೀ, ದುರ್ಗಾ, ಕಾಳಿ, ಪಾರ್ವತಿ ಸೃಜನಶೀಲ ಶಕ್ತಿಯನ್ನು ವ್ಯಕ್ತಪಡಿಸುವ ಒಬ್ಬನಿಗೆ ನೀಡಲಾದ ಅನೇಕ ಹೆಸರುಗಳು ಮತ್ತು ರೂಪಗಳಲ್ಲಿ ಕೆಲವು ಮಾತ್ರ. ಅವಳು ರೂಪವಾಗಿದ್ದರೂ ನಿರಾಕಾರ, ‘ರೂಪವಿಲ್ಲದ ರೂಪ’.

ಅರ್ಥಮಾಡಿಕೊಳ್ಳಲು ಮತ್ತು ಸಹಾಯವನ್ನು ಪಡೆಯಲು ಅವಳ ರೂಪದ ಅಗತ್ಯವಿರುವವರಿಗೆ, ಅವಳು ಪ್ರತಿ ಸಂಸ್ಕ ತಿಯಲ್ಲಿಯೂ ಪ್ರಕಟಗೊಳ್ಳುತ್ತಾಳೆ. ರೂಪದ ಅಗತ್ಯವನ್ನು ಮೀರಿದವರಿಗೆ ಅವಳು ಬೆಳಕು. ಈ ಸೃಜನಶೀಲ ತತ್ವವನ್ನು ‘ತಾಯಿ’ ಎಂದು ಕರೆಯಲಾಗುತ್ತದೆ ಏಕೆಂದರೆ ಅವಳಿಲ್ಲದೆ, ಭೂಮಿಯ ಮಕ್ಕಳು ಅಸ್ತಿತ್ವದಲ್ಲಿರಲು ಸಾಧ್ಯವಿಲ

ಬನ್ನಿಕುಪ್ಪೆಯ ಮುಖ್ಯ ದೇವತೆ ಬನ್ನಮ್ಮ ತಾಯಿ: 

ಮೈಸೂರು ಜಿಲ್ಲೆ ಹುಣಸೂರು ಬಳಿಯಿರುವ ಬನ್ನಿಕುಪ್ಪೆಯ ಮುಖ್ಯ ದೇವತೆ ಬನ್ನಮ್ಮ ತಾಯಿ. ಇವಳ ಕುರಿತು ಹೇಳಬೇಕೆಂದರೆ ಮೊದಲು ಅಲ್ಲಿನ ಗಂಡು ದೇವತೆ ವೀರಭದ್ರಸ್ವಾಮಿಯ ಕುರಿತು ಹೇಳಬೇಕು. ಇವರಿಬ್ಬರು ಅಣ್ಣ-ತಂಗಿ ಎಂಬ ನಂಬಿಕೆಯಿದೆ. ಇವರ ಕುರಿತು ಗ್ರಾಮದಲ್ಲಿ ಸಾಕಷ್ಟು ಐತಿಹ್ಯಗಳಿವೆ. ವೀರಭದ್ರ ಒಬ್ಬ ಯೋಧನಾಗಿ ಊರನ್ನು ಕಾಯಲು ಹೋರಾಟ ಮಾಡಿದರೆ, ಬನ್ನಮ್ಮ ಅಣ್ಣನಿಗೆ ಬೆನ್ನೆಲುಬಾಗಿ ಅವನ ಜಯದ ಪ್ರೇರಕ ಶಕ್ತಿಯಾಗಿ ನಿಂತಿದ್ದಾಳೆ ಎಂಬುದು ನಂಬಿಕೆ. ಕ್ಷೇತ್ರಪಾಲಕಿಯಾಗಿ, ಪುರುಷನ ಸರಿಸಮನಾಗಿ, ಗ್ರಾಮವನ್ನು ರಕ್ಷಣೆ ಮಾಡುವವಳಾಗಿ ಕಂಡುಬರುತ್ತಾಳೆ. ‘ವೀರಮಗ’ ಎಂಬ ಪರಿಕಲ್ಪನೆ ಇಲ್ಲಿಯ ಆಚರಣೆಯಲ್ಲಿದೆ, ಇದು ಒಂದು ಬಗೆಯ ಹರಕೆಯಾಗಿದೆ. ವಿಶೇಷವಾಗಿ ಗಂಡಸರು ಇದರಲ್ಲಿ ಭಾಗವಹಿಸುವ ಹರಕೆಯಾಗಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ಜಾತ್ರೆಯಲ್ಲಿ ಹರಕೆ ಹೊತ್ತ ಗಂಡಸರು ಬನ್ನಮ್ಮನಿಗೆ ‘ವೀರಮಗ’ನಾಗಿ ಹೋಗುವ ಪದ್ಧತಿ. ಅದರಲ್ಲಿ ಗಂಡಸರು ಸೀರೆಯುಟ್ಟು, ತಲೆಗೆ ಜಡೆ ಹಾಕಿ, ಬಳೆತೊಟ್ಟು, ಹಣೆಗೆ ಸಿಂಧೂರವಿಟ್ಟು ಹೆಣ್ಣಿನಂತೆ ಅಲಂಕರಿಸಿಕೊಂಡು ಬಾಯಿಗೆ ಬೀಗಹಾಕಿ ಚೋಳರ ಕಾಲದ ಕಾಡು ಗುಡಿಗೆ ದೇವರ ಹಿಂದೆ ಮೆರವಣಿಗೆ ಹೋಗುವುದು. ಹೆಣ್ಣು ದೇವತೆಗೆ ಶರಣಾಗುವ ಈ ರೂಪಕವು ಪುರುಷನ ಅಹಂವನ್ನು ನಿರಸನಗೊಳಿಸುವ ಹಿನ್ನೆಲೆಯಲ್ಲಿ ಕಂಡುಬರುತ್ತದೆ. ಆ ಮೂಲಕ ಪುರುಷ ಪ್ರಕೃತಿಗೆ ಮಣಿಯಲೇ ಬೇಕು ಎಂಬ ಸಂದೇಶವನ್ನು ಸಾರುವ ಉದ್ದೇಶವಾಗಿ ತೋರುತ್ತದೆ.

” ಗ್ರಾಮದೇವತೆ ಎಂಬುದು ಕೇವಲ ನಂಬಿಕೆಯಲ್ಲ, ಸರ್ವವನ್ನೂ ಕಾಯುವ ಶಕ್ತಿಯಾಗಿದ್ದಾಳೆ. ಅವಳು ನಿಶ್ಚಲಳಲ್ಲ, ಚಲಿಸುವವಳು. ಮೌನವಾಗಿರುವವಳಲ್ಲ, ಅನ್ಯಾಯದ ವಿರುದ್ಧ ದನಿಯೆತ್ತುವವಳು. ಆಕೆ ಸಮುದಾಯದ ಬದುಕನ್ನು ನಿಯಂತ್ರಿಸುವ ಮತ್ತು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುವ ಶಕ್ತಿಯಾಗಿ ಕಂಡುಬರುತ್ತಾಳೆ.”

 

 

Tags:
error: Content is protected !!