Mysore
27
overcast clouds

Social Media

ಬುಧವಾರ, 09 ಏಪ್ರಿಲ 2025
Light
Dark

ಹೂತ ಹೊಂಗೆಯೊಳಗೆ ರಸ್ತೆಯೇ ಹೂತು ಹೋಯಿತೆನ್ನುವ ಭಾವ

ನಾಗರಾಜ ವಸ್ತಾರೆ

ತೀರಾ ನನ್ನ ಮನೆ ಮಗ್ಗುಲಿಗಲ್ಲದಿದ್ದರೂ ನೇರ ನನ್ನತ್ತಲೇ ಗೋಣಿಟ್ಟು ಕಣ್ಣಿಟ್ಟು ಕಾಯುತ್ತ, ಸದಾ ಒನ್ನಮೂನೆ ಗಹನವಾದ ನಿಗಾ ಕೈಕೊಂಡಂತನಿಸುವಒಂದು ಸೊಂಪಾದ ತಂಪಾದ ಹೊಂಗೆಮರವಿದೆ. ವರ್ಷಪೂರ್ತಿ ಹಸುರುಟ್ಟು ಯಾವುದೇ ಏರುಪೇರಿಲ್ಲದೆ, ಬಲು ಭೀಕರ ಚಳಿಯಲ್ಲೂ ಇನಿತಾದರೂ ಎಲೆದಟ್ಟಣೆ ತಗ್ಗಿಸದೆ ಮತ್ತು ಅನವರತವಿಂತಿರುವುದೇ ತನ್ನೊಡಬೆಸೆದ ಕರುಮವೆನ್ನುವ ಹಾಗೆ ಇದ್ದೂ ಇದ್ದಂತನಿಸದೆ ಇದ್ದೇಯಿದೆ. ನನ್ನ ಮನೆಯ ನೆಲಹಂತದಲ್ಲಿ ಅಷ್ಟೇನೂ ಕಾಣಸಿಗದ ಈ ಮರವು, ಮೇಲು ಮಹಡಿಯಲ್ಲಿರುವ ನನ್ನ ಕೆಲಸದ ಮೇಜಿನಲ್ಲಿ ಅಷ್ಟಿಷ್ಟು ನೋಟ ಹೊರಳಲು ಸಾಕು- ತನ್ನಷ್ಟೂ ಸಮಸ್ತ ಹರಿದ್ವೈಭವವನ್ನು ತೆರೆದು ತೋರುತ್ತದೆ. ಇಕೋ, ಇಲ್ಲಿದ್ದೇನೆ ಕಾಣು… ಕಂಡುಕೋ… ಎಂದು ಕರೆಕರೆದು ಮೊರೆಯುತ್ತದೆ.

ಅಲ್ಲದೆ, ನನ್ನ ಕೆಲಸದ ಮೇಜಿನಿಂದ ತುಸುವೇ ಬಲಕ್ಕೆ ಕಣ್ಣು ಮಿಸುಕಲು ಸಾಕು, ಅಲ್ಲೇ ತುಸುವಾಚೆ ಈ ಇನ್ನೊಂದು ಮರವೆದ್ದು ತೋರುತ್ತದೆ. ಹೊಂಗೆಗೆ ಹೋಲಿಸುವಲ್ಲಿ, ದುಪ್ಪಟ್ಟು ಮುಪ್ಪಟ್ಟು ಎತ್ತರಕ್ಕೆ ದಿಟ್ಟವಾಗಿ ನೆಟ್ಟಗೆ ನೆಟ್ಟುನಿಂತು- ಸೀದಾ ಆಕಾಶದೊಳಕ್ಕೇ ತನ್ನೆಲ್ಲ ಕೊಂಬೆತೋಳು ತೂರುವಂತನಿಸುವ ಈ ಮರಕ್ಕೆ, ಬಹುಶಃ, ಕನ್ನಡದ ಹೆಸರಿಲ್ಲವೇನೋ. ಕಾರಣ ಇದೊಂದು ‘ಪರಂಗೀ’ವೃಕ್ಷ. ಸಪ್ತ ಸಾಗರದಾಚೆಯ ಅಮೆರಿಕಾ ಖಂಡಗಳ ಮೂಲವಿದರದ್ದು. ನಿಖರವಾಗಿ ಹೇಳಿದ್ದಾದರೆ, ಮೆಕ್ಸಿಕೋ ಮತ್ತು ವೆನೆಜ಼ುಲಾಗಳ ಸಂಽ ಪ್ರದೇಶದ್ದು. ನೂರಾರು ಸಾವಿರಾರು ಕಾಲದ ಮನುಷ್ಯ ವಲಸೆಯ ಸುಮಾರಿನಲ್ಲೆಲ್ಲೋ ಅಲ್ಲಿಂದಿಲ್ಲಿಗೆ ಆಮದಾದದ್ದು. ಇನ್ನು, ಅಮೆರಿಕಾ ಮೂಲದ ಈ ವೃಕ್ಷದ ವಿಶೇಷವೇನೆಂದರೆ ಇದು ವರ್ಷದಲ್ಲಿ ಆರು ತಿಂಗಳು ಮಾತ್ರ ಹಸುರಾಗಿರುವುದು. ಡಿಸೆಂಬರ್ ತಿಂಗಳಿನ ಚಳಿಗುಳಿರು ಸೋಕಿದ್ದೇ ಸೈಯಿ- ಥರಥರನೆ ನಡುಗಿ ಮೈಕೈಯದುರಿಸಿ ತನ್ನೆಲ್ಲ ಎಲೆಯುದುರಿಸಿ ನೂರಕ್ಕೆ ನೂರು ಬೋಳಾಗಿ ಬಿಡುವುದು. ಅಂದರೆ, ತನ್ನೆದುರಿಗಿರುವ ಹೊಂಗೆ ಮರಕ್ಕಿರುವ ನಿತ್ಯಹರಿದ್ವರ್ಣದ ಜಾಯಮಾನ ಈ ಮರಕ್ಕಿಲ್ಲ. ಕಾಲಕ್ಕೆ ತಕ್ಕುದಾಗಿ ಬದಲುವ ಪ್ರಕೃತಿ ಮತ್ತು ಪ್ರವೃತ್ತಿಯಿದರದ್ದು. ಹೀಗೆ, ಕಾಲಾನುಕಾಲಕ್ಕೆ ಮತ್ತು ಕಾಲಾನುಕೂಲಕ್ಕೆ ತಕ್ಕ ನೇಮನಿಷ್ಠೆ ಪ್ರಕಟಿಸುವ ಸದರಿ ಮರವನ್ನು ತಬೂಬಿಯ (Tabebuia) ಎಂದು ಕರೆಯುವುದು ವಾಡಿಕೆ.

ಇವುಗಳಲ್ಲದೆ, ನನ್ನ ಮನೆಬದಿಯನ್ನು ವಿವರಿಸಲಿಕ್ಕೆಂದೇ ಉಂಟಾದ ನಾಲ್ಕು ಮರಗಳಿವೆ. ನಾನೇ ತಂದು ನೆಟ್ಟಂಥವು. ಹೌದು, ಮನೆಯ ಪೂರ್ವದಿಕ್ಕಿನಲ್ಲಿ ಆಕ್ಟೋಪಸ್ ಮತ್ತು ದೇವಕಣಗಿಲೆಗಳಿವೆ. ದಕ್ಷಿಣಕ್ಕೆ ಕೆಂಡಸಂಪಿಗೆ ಮತ್ತು ಬೇವುಗಳಿವೆ. ಇದೇ ತೆಂಕಣದೆಸೆಯಲ್ಲಿ ನಮ್ಮ ಗಡಿಗಂಟಿಕೊಂಡಂತೆ ಮುಗಿಲೆತ್ತರಕ್ಕೆ ಬೆಳೆದ ಬಿದಿರುಮೆಳೆಯೊಂದಿದೆ. ಮನೆಯೆಂಬುದು ನಿಜವಾಗಿ ಕಾಡೆನ್ನಲಾಗದ ‘ವನ್ಯ’ದೊಳಗೆ ಕಳೆದು ಹೋಗಬೇಕೆನ್ನುವ ನನ್ನದೇ ಉಮೇದಿನ ಮೇರೆಗೇನೋ, ಈ ಬಿದಿರು ಬಲು ಹುಲುಸಾಗಿ ಬೆಳೆದುನಿಂತಿದೆ. ಇನ್ನು, ಮನೆಯ ಪೂರ್ವಕ್ಕಿರುವ ರಸ್ತೆಯ ಆಚೆಬದಿಯಲ್ಲಿ ಅಪರ್ಣೆ ತಂದು ನೆಟ್ಟ ಹಲಸು, ಮಾವು, ಬೆಟ್ಟದನೆಲ್ಲಿ, ದಾಳಿಂಬೆ, ಮದರಂಗಿ… ಇತ್ಯಾದಿ ಮರಗಳಿವೆ. ಇವುಗಳಲ್ಲಿ ಹಲಸು ಮೂರು ಸಾರಿ ಭಾರೀ ರಸವತ್ತಾದ ಫಲಕೊಟ್ಟಿದೆ. ಮಾವು ಇನ್ನೇನು ಕೆಲ ವರ್ಷದಲ್ಲಿ ಹೂತು ಹಣ್ಣೊದಗಿಸಲಿದೆ.

ನಿಜಕ್ಕಾದರೆ, ಇಲ್ಲಿ ಸುರುವಿನಲ್ಲಿ ಹೇಳಿದ ಹೊಂಗೆ ಮರವು ನನ್ನ ಎಡಪಕ್ಕದ ಮನೆಯೆದುರಿದೆ. ತಬೂಬಿಯಾ ನನ್ನ ಮನೆಗೆ ಅತ್ತಲ ಬದಿಯಲ್ಲಿರುವ ಹೆಸರಾಂತ ಶಾಲೆಯ ಕಂಪೋಂಡಿನೊಳಗಿದೆ. ಬಲ ಪಕ್ಕದ ಮನೆಯೆದುರು ಅದರ ಎರಡಂತಸ್ತಿನ ಕಟ್ಟಡಕ್ಕಿಂತಲೂ ಎತ್ತರಕ್ಕೆ ಕೊಡೆ ಬಿಚ್ಚಿರುವ ಒಂದು ಬಾದಾಮಿ ಮರವಿದೆ. ಇದರ ಸಸಿಯನ್ನು ಅಪರ್ಣೆಯೇ ತಂದುಕೊಟ್ಟಿದ್ದೆಂಬುದು ಇಲ್ಲಿ ಪ್ರಾಸಂಗಿಕ ಮಾತ್ರ. ಇನ್ನು, ಈ ಬಾದಾಮಿ ಮರದ ಮಗ್ಗುಲನ್ನಾತುಕೊಂಡಿರುವಂತೆಯೇ, ಸುಮಾರು ನಲವತ್ತು ಕಾಲದ ಹಿಂದೆ, ನನ್ನ ಮನೆ ಗಡಿಯೊಳಗೆ ನನ್ನಪ್ಪ ತಂದು ನೆಲೆಗೊಳಿಸಿ ಉದ್ದಾನುದ್ದವೆದ್ದ ತೆಂಗಿನ ಮರವಿದ್ದು- ಇದರ ಫಲವನ್ನೇ, ನನ್ನಮ್ಮ ಶಾಂತಾಮಣಿ ಮತ್ತು ಅಪರ್ಣೆ ಎಲ್ಲ ವರ್ಷಾವರಿ ಹಬ್ಬಗಳಲ್ಲಿ ದೇವರೆದುರು ನೈವೇದ್ಯಕ್ಕೆ ಇಡುತ್ತಿದ್ದುದಿದೆ.

* *

ಕಳೆದ ಏಳೆಂಟು ತಿಂಗಳಿಂದಲಿನ ನನ್ನ ಮನಃಸ್ಥಿತಿಯೇನೇ ಇದ್ದರೂ ‘ವಸ್ತಾರೆ’ಯ ಒಳಹೊರಗಿನ ಪ್ರಕೃತಿಯಂತೂ ತನ್ನ ಸುತ್ತಲಿನ ಕಾಲಕ್ಕೆ ತಕ್ಕುದಾಗಿ ಜರುಗಿದೆ. ಯಾರಿರಲಿ ಬಿಡಲಿ ಜರುಗುವುದೇ ಸೈಯೆಂದು ಹಠಕ್ಕೆ ಬಿದ್ದಂತೆ ತನ್ನ ಪಾಡಿಗೆ ತಾನು ನಡೆದಿದೆ; ನಡೆಯುತ್ತಲೇ ಇದೆ. ಸರಿಯಾಗಿ ತಿಂಗಳೊಪ್ಪತ್ತಿನ ಹಿಂದೆ ಶಿವರಾತ್ರಿ ಪೂರಯಿಸಿದ್ದೇ, ಲೋಕಕ್ಕೆ ಲೋಕವೇ ಚಳಿ ಕಳೆದುಕೊಂಡು ಬಿಸಿಲಿಗೆ ಮೈಯೊಡ್ಡಿತಷ್ಟೆ- ನನ್ನ ಮನೆಯ ಸುತ್ತಲಿನ ಮತ್ತು ಮನೆಯೊಳಗಿನ ‘ಮೈಕ್ರೋ’ಲೋಕವೂ ಹೊಚ್ಚ ಹೊಸ ಬೇಸಗೆಗೆಂದು ಮೈಯಣಿಯಿಟ್ಟುಕೊಂಡಿದೆ. ಮಾಡು ಇಲ್ಲವೇ ಮಡಿ ಅಂತೆಂಬ ಮೊಳಗಿಗೆ ತಕ್ಕುದಾಗಿ ಝಳಕ್ಕೆ ವಿರುದ್ಧವಾಗಿ ಸನ್ನದ್ಧಗೊಂಡಿದೆ. ಟೆರೇಸಿನಲ್ಲಿರುವ ಕುಂಡಗಳಲ್ಲಿ ಹೂವು ದುಪ್ಪಟ್ಟಾಗಿದೆ. ಕೆಲವಂತೂ ನಾಲ್ಕಾರು ಐದಾರು ಪಟ್ಟು ಹೆಚ್ಚಿವೆ. ಕಂಬವೊಂದನ್ನಾತು ಸುತ್ತುವ ಮಲ್ಲಿಗೆಯ ಹಂಬು ದಂಡಿದಂಡಿ ಕುಸುಮಿಸಿದೆ. ಕಾಕಡ, ದುಂಡುಮಲ್ಲಿಗೆ, ಸೂಜಿಮಲ್ಲಿಗೆಗಳು ಅನುದಿನವೂ ಬೊಗಸೆ ತುಂಬಿದಷ್ಟೂ ಸಾಲದೆನ್ನುವ ಹಾಗೆ ಹೊಸ ಹುರುಪಿನ ಬಿಳುಪು ಭರಿಸುತ್ತವೆ. ಬಗೆಬಗೆಯ ದಾಸವಾಳಗಳು ಬಣ್ಣಬಣ್ಣದ ಬಗೆಯೊಡೆಯುತ್ತವೆ. ನೇಸರದ ದಿನದಿನದ ಹುಟ್ಟನ್ನೇ ಎದುರು ನೋಡುವ ಮಾರ್ನಿಂಗ್ ಗ್ಲೋರಿಗಳು ಪೈಪೋಟಿಯಲ್ಲಿ ಅರಳುತ್ತವೆ. ಅಲಮಂಡ, ಮಾಂಡಿ ವಿಲಾ, ಪ್ಲುಮೆರಿಯ… ಇತ್ಯಾದಿ ಪೊಗದಸ್ತಾಗಿವೆ. ಒಟ್ಟಾರೆ ಮನೆಗೆ ಮನೆಯೇ ಬಂಡೆದ್ದು ಬಣ್ಣದ ದಂಗೆಯೆಬ್ಬಿಸಿದೆ.

ಕಳೆದ ವಾರವಷ್ಟೇ, ಮನೆ ಬದಿಯ ಸ್ಕೂಲಿನ ಕಂಪೋಂಡೊಳಗಿನ ತಬೂಬಿಯ- ಬರೇ ತಿಂಗಳ ಹಿಂದೆ ಒಂದೇ ಸಮನೆ ಶಿಶಿರದ ಥಳಿತಕ್ಕೀಡಾದ ಒಬ್ಬಂಟಿ ಸಂತ್ರಸ್ತನಂತಿದ್ದುದು, ಒಮ್ಮಿಂದೊಮ್ಮೆ ಮೈಕೊಡವಿಕೊಂಡೆದ್ದು ಗುಲಾಬಿ ಬಣ್ಣದ ಮೋಡವನ್ನೆಬ್ಬಿಸಿದೆ. ನೆಲದೊಳಗಿನ ಕಸುವೆಲ್ಲ ಬಿಸಿಲೆದುರು ಮಣಿಯಿತೆನ್ನುವ ಹಾಗೆ ಗುಲಾಲಿನ (ಕಾಟನ್) ಕ್ಯಾಂಡಿಯಂತಾಗಿದೆ. ತನ್ನ ಪೂರ್ತಿ ಹೆಸರಾದ ತಬೂಬಿಯ ‘ರೋಸಿಯಾ’ ಎಂಬುದನ್ನು ಸಾರ್ಥಯಿಸುವ ಮೋಡಿ ಮೆರೆದಿದೆ.

ಇನ್ನು, ಬಲಪಕ್ಕದ ಮನೆಯ ಬಾದಾಮಿಮರವು ಫೆಬ್ರವರಿ ಠೀಕು ಹದಿನೈದರಂದು ವಿನಾಕಾರಣ ಮೈಕೊಡವಿ ರಸ್ತೆಭರ್ತಿ ಕಸ ಪೇರಿಸುತ್ತಿದ್ದುದನ್ನು ನಿಲ್ಲಿಸಿ, ಮುಂದೊಂದು ಮಾಸಕ್ಕೆಲ್ಲ ಹೊಚ್ಚಹೊಸ ಹಸುರನ್ನುಟ್ಟು ಹಚ್ಚವಾಗಿದೆ. ಮಗ್ಗುಲಿನ ಬೇವಿನ ಮರವೂ ಅಷ್ಟೆ, ಅಷ್ಟೇ ತಣ್ಣಗೆ ಮತ್ತು ಮಿಣ್ಣಗೆ ಬಗುಲಿನ ಬಾದಾಮಿಯನ್ನು ಅನುಸರಿಸಿದೆ. ಇತ್ತಲಿನ ಬಿದಿರುಮೆಳೆಯಲ್ಲೂ ತುಸುವತ್ತಲಿನ ಆಕ್ಟೋಪಸಿನಲ್ಲೂ ಹಸುರು ನಳನಳಿಸಿದೆ. ಹಲಸು, ದಾಳಿಂಬೆ, ಮದರಂಗಿ, ಬೆಟ್ಟದ ನೆಲ್ಲಿಗಳೂ ಪುಳಪುಳಪುಳ ಪುಳಕಕ್ಕೀಡಾಗಿ ಕಂಗೊಳಿಸಿವೆ. ಇತ್ತಲಿರುವ ಮಾವೂ ತಾನೂ ಹಿಂದಿಲ್ಲವೆಂದು ಹೊಸಚಿಗುರಿನ ತಳಿರುಟ್ಟು ತಂತಾನೇ ತೋರಣವಾಗಿದೆ.

ಇಷ್ಟರ ನಡುವೆ, ಎಡಪಕ್ಕದ ಮನೆಯೆದುರಿನ ಹೊಂಗೆಯಂತೂ ಇನ್ನೊಂದೇ ಆಟ ಕಟ್ಟಿದೆ. ಅದಾವ ಮಾಯೆಯಲ್ಲಿ ಅದೆಂತು ತಂತಾನು ನವೀಕರಿಸಿತೆಂದು ತಿಳಿಯಗೊಡದೆ ಮೈಯುದ್ದ ನಿಲುವುದ್ದ ಹೊಚ್ಚಹೊಸ ಹಸುರನ್ನು ಉಟ್ಟು ತೊಟ್ಟು, ತನ್ನೆಲ್ಲ ತನ್ನತನವನ್ನೇ ಬಿಸಿಲಿಗೊಡ್ಡಿ- ಯಾವ ಕೋನದಲ್ಲಾದರೂ ಕಾಣಿ, ತಾನು ಹಸನೇ ಹಸನೆಂದು ಹಸುರೇ ಹಸುರೆಂದು ಸೊಗಸೇ ಸೊಗಸೆಂದು ಮೆರೆದು ಮೊಳಗುತ್ತಿದೆ. ಅರೆ, ಏನಿದೇನಿದು… ಇದೇನು ಮೆರೆತವೋ, ನಿಂತು ನಿಂತಂತೇ ನಡೆದ ಮೆರವಣಿಗೆಯೋ, ಹೊಸ ಹಸುರೊಳಗುಂಟಾದ ಮೈಮರೆವೋ… ಇನ್ನಾವುದೋ ಮೋಡಿಯುಂಟಾಗಿಸಿದ (ಇತರೆ ಲೋಕದ) ಅರಿವಳಿಕೆಯೋ… ಎಂದು ತಿಳಿಬಾರದಂತೆ ಇದ್ದಲ್ಲೇ ಇರುವಲ್ಲೇ ಹೂತುಕೊಂಡಿದೆ.

ಈ ‘ಹೂತು’ಕೊಂಡಿದೆ ಎಂಬುದು ಸಾಮಾನ್ಯವೇನಲ್ಲ. ಕನ್ನಡವೆನ್ನುವ ಕನ್ನಡವೇ ಮೋಡಿಗೊಳ್ಳವ ಬಗೆಯಿಲ್ಲಿದೆ. ‘ಹೂ’ ಅಂತಂದರೆ ‘ಹೂವೂ’ಹವುದು. (ಮೊಗ್ಗಿದ್ದುದು ಹೂವಾಗಿ) ‘ಅರಳು’ ಅಂತೆಂಬುದೂ ಹವುದು. ಅಂದರೆ, ‘ಹೂ’ವೆನ್ನುವ ನಾಮಪದವು ಕ್ರಿಯಾಸೂಚಕವಾಗಿ ‘ಜರುಗುವ’ ಬಗೆಯೂ ಹವುದು. ಹಾಗೆ ನೋಡಿದರೆ, ‘ಹೂ’ ಅಂತನ್ನುವುದೇ ಸ್ವಯಂ ಒಂದು ಕೆಲಸ. ಅಂದರೆ ಪ್ರಫುಲ್ಲಿಸುವ ರೀತಿ.

ಇನ್ನು, ಹೊಂಗೆಯು ‘ಹೂತ’ ಅಂದರೆ ಹೂಬಿಟ್ಟ ಬಗೆಯೂ ಸಾಮಾನ್ಯವಲ್ಲ. ಸಣ್ಣ ಸಣ್ಣದಾಗಿ, ಮಣಿಮಣಿ ಯಾಗಿ ಮತ್ತು ಕಟ್ಟಿರುವೆ ಗಾತ್ರದ ಹೂವುಗಳುಳ್ಳ ಜೊಂಪೆ ಜೊಂಪೆಯಾಗಿ ಹೂತುಕೊಳ್ಳುವ ಹೊಂಗೆಯು ಹೂತಿದೆಯೆಂದು ಗೊತ್ತಾಗಲಿಕ್ಕೆ ಅಲ್ಲಿ ಮದೋನ್ಮತ್ತ ದುಂಬಿಗಳ ಗುಂಗು ಕೇಳಿಸಬೇಕು. ಗುಂಗು ಗುನುಗಾಗಬೇಕು. ‘ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ…’ ಈ ಪ್ರಸಿದ್ಧ ಬೇಂದ್ರೆ-ಸಾಲನ್ನು ನೆನಪಿಸಿಕೊಳ್ಳಿ. ಹೊಂಗೆಯು ‘ಹೂತ’ ತೊಂಗಲಲ್ಲಿ ಭೃಂಗದ ಸಂಗೀತ ‘ಕೇಳಿ’ ಕಂಡರಷ್ಟೇ ಮತ್ತು ಕೇಳಿಸಿದರಷ್ಟೇ ಹೊಂಗೆಯು ಹೂತಿದೆಯೆಂದು ಅರ್ಥ.

ಆದರೆ ಬೆಂಗಳೂರೆಂಬ ಅತ್ಯಪ್ಪಟ ಮನುಷ್ಯ ಅಡಾವುಡಿ ಜರುಗುವ ನಾಗರಿಕತೆಯಲ್ಲಿ ದುಂಬಿಗಳು ತಾನೇ ಎಲ್ಲಿವೆ? ನಾನಂತೂ ಕಂಡಿಲ್ಲ. ಕಂಡಿದ್ದರೂ ನೆನಪಿನಲ್ಲಿಲ್ಲ. ಬಗೆ ಬಗೆಯ ಕೀಟನಾಶಕಗಳ ಸಿಂಪಡಣೆಯ ನಡುವೆ ಬದುಕುವ ನಾವು ಈ ಭ್ರಮರಗಳನ್ನು ಕಾಣುವುದೇ ಅಪರೂಪ. ಗೆದ್ದಲು-ಜಿರಳೆ-ಸೊಳ್ಳೆಗಳ ವಿರುದ್ಧ ಹೊಡೆಯುವ ಸುಮ್ಮನೆ ಮದ್ದು ಇತರೆ ಕೀಟಗಳನ್ನೂ ತೊಡೆಯುತ್ತದಷ್ಟೆ? ಹಾರುವ ಚಿಟ್ಟೆಯಾಗಿ ಹುಟ್ಟು ಮುಂದುವರಿಸುವ ತೆವಳುವ ಕಂಬಳಿಹುಳುವನ್ನು ನಾವು ಉಳಿಯಗೊಡುತ್ತೇವೆಲ್ಲಿ? ಸುಮ್ಮನೆ ಇರುವೆಯೊಡನೆಯೂ ಇರಲೊಲ್ಲದ ಬದುಕಲೊಲ್ಲದ ಬಾಳಲ್ಲವೇ ನಮ್ಮದು? ಪೆಸ್ಟ್ ಕಂಟ್ರೋಲ್ ಇ(ಒ)ಲ್ಲದ ನಾಗರಿಕತೆಯುಂಟೇ ಮೂಲೋಕದಲ್ಲಿ?

ಇಷ್ಟಿದ್ದೂ, ಬೆಂಗಳೂರಿನಲ್ಲಿ ಹೊಂಗೆ ‘ಹೂವದೆಂದೇನೂ’ ನಾನು ಹೇಳುತ್ತಿಲ್ಲ. ಎಲ್ಲಿರದಿದ್ದರೂ ಸರಿ, ನನ್ನ ಮನೆಯ ಸುತ್ತಮುತ್ತಲಿರುವ ಎಲ್ಲ ಹೊಂಗೆಯೂ ಸದ್ಯಕ್ಕೆ ಪೊಗದಸ್ತಾಗಿ ಹೂತಿವೆ. ಹೂತುಕೊಂಡಿವೆ. ನಂಬಿ, ‘ವಸ್ತಾರೆ’ಯ ನೆಲೆಯಿರುವ ಎರಡೂ ರಸ್ತೆಗಳ ಬಹುತೇಕ ಎಲ್ಲ ಮನೆಮನೆಯೆದುರೂ ಅಲ್ಲಲ್ಲಿನ ಹೊಂಗೆಗಳು ದಂಡಿದಂಡಿಯಾಗಿ ಹೂತಿದೆ. ಈ ದಾರಿಗಳಲ್ಲಿ ಸುಮ್ಮನೆ ನಡೆದು ಹೋದರೆ ಸಾಕು, ಒಂದೊಂದೂ ಒಂದೇ ಸಮ ಹೂಮಳೆಗರೆದು ನಿಮ್ಮನ್ನು ಸ್ವಾಗತಿಸುತ್ತವೆ. ಎರಡೂ ರಸ್ತೆಗಳ ಹರವುದ್ದಕ್ಕೂ ಹರಿವುದ್ದಕ್ಕೂ ಹೊಂಗೆಯು ಹೂವುತ್ತಿರುವುದೂ, ಆ ಮುನ್ನವೇ ಹೂತಿರುವುದೂ ಒಟ್ಟೊಟ್ಟಿಗೆ ತೋರಿಬರುತ್ತದೆ. ಬೆಳ್ಳಂಬೆಳಿಗ್ಗೆ ಮನೆಯೆದುರಿನ ಕಸಗುಡಿಸಿ, ಇನ್ನೇನು ಎಲ್ಲ ಚೊಕ್ಕವಾಯಿತೆಂದು ಒಮ್ಮೆ ಕಣ್ಮಿಡುಕಿ ತೆರೆಯಲಿಕ್ಕಿಲ್ಲ- ಕ್ಷಣಾರ್ಧದಲ್ಲಿ ರಾಶಿರಾಶಿ ಹೂವಿನ ಹಾಸು ಹರವಿಕೊಳ್ಳುತ್ತದೆ. ಎಷ್ಟರ ಮಟ್ಟಿಗೆಂದರೆ, ಹೂತ ಹೊಂಗೆಯೊಳಗೆ ರಸ್ತೆಯೇ ಹೂತುಹೋಯಿತೆನ್ನುವ ಭಾಸ ಕಟ್ಟುತ್ತದೆ

ಬೆಳ್ಳಂಬೆಳಿಗ್ಗೆ ಮನೆಯೆದುರಿನ ಕಸಗುಡಿಸಿ, ಇನ್ನೇನು ಎಲ್ಲ ಚೊಕ್ಕವಾಯಿತೆಂದು ಒಮ್ಮೆ ಕಣ್ಮಿಡುಕಿ ತೆರೆಯಲಿಕ್ಕಿಲ್ಲ- ಕ್ಷಣಾರ್ಧದಲ್ಲಿ ರಾಶಿರಾಶಿ ಹೂವಿನ ಹಾಸು ಹರವಿಕೊಳ್ಳುತ್ತದೆ

Tags: