Mysore
23
overcast clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಈಗಿಲ್ಲದ ಗಂಗೋತ್ರಿಯ ಆ ಆಲದ ಮರ

ಆಹಾ! ಗಂಗೋತ್ರಿಯೇ ನಿನ್ನ ಜೊತೆ ನನಗೆ ನೆನಪಿನ ವಿರಹ ಒಂದೇ ಎರಡೇ?

• ಡಾ.ಮೊಗಳ್ಳಿ ಗಣೇಶ್
ಮಾನಸಗಂಗೋತ್ರಿಯ ನೆನಪಾದ ಕೂಡಲೆ ಎಂಥದೊ ವಿರಹ ಬಂದು ಮನಸ್ಸು ಸುಖದುಃಖಗಳ ನಡುವೆ ಸಿಲುಕಿ ಮೌನ ಆವರಿಸುತ್ತದೆ. ಗಂಗೋತ್ರಿಯ ಲೈಬ್ರರಿಯಲ್ಲಿ ಅದೆಷ್ಟು ಪುಸ್ತಕಗಳ ಮುಟ್ಟಿ ಮುಟ್ಟಿ ನೋಡಿ
ಎದೆಗಪಿಕೊಂಡೆನೊ ಎಂಬುದು ನನಗಷ್ಟೇ ಗೊತ್ತು. ಓದಿ ಓದಿ ಸುಸ್ತಾಗಿ ಹೊರಗೆ ಬಂದರೆ ಅದೇ ದುಂಡು ಕ್ಯಾಂಟೀನು? ಅದರ ಎದುರಲ್ಲೇ ಸಿಗರೇಟ್ ಮಾರುತ್ತಿದ್ದ ಬಡಪಾಯಿ ಒಬ್ಬನಿದ್ದ. ಅವನು ಆಗ ನನ್ನಂಥವರಿಗೆ ಸಿಗರೇಟು ಸಾಲ ಕೊಟ್ಟು ಕೊಟ್ಟು ನಾವು ಸಾಲ ತೀರಿಸಲಾರದೆ ಪರದಾಡುವಾಗ ಆತ ಪಾಪರಾಗಿ ಇಷ್ಟು ಜನ ನನಗೆ ಸಾಲ ಕೊಡದೆ ತಲೆಮರೆಸಿಕೊಂಡು ನನ್ನ ವ್ಯಾಪಾರವನ್ನೇ ಮುಗಿಸಿಬಿಟ್ಟರು ಎಂದು ಎಲ್ಲ ಸಾಲಗಾರರ ಹೆಸರು ಬರೆದು ಅಲ್ಲಿದ್ದ ಆಲದ ಮರಕ್ಕೆ ಚೀಟಿ ಅಂಟಿಸಿ, ಪಾಪ ಹೊರಟುಹೋಗಿದ್ದ. ನನಗಾಗ ವಿಪರೀತ ಪಾಪಪ್ರಜ್ಞೆ ಕಾಡಿತ್ತು. ಈಗಲೂ ಆತನ ನೆನಪಾಗುತ್ತಲೇ ಇರುತ್ತದೆ. ಬೇಸರವಾಗಿ ಲೈಬ್ರರಿ ಮುಂದಿದ್ದ ಇನ್ನೊಂದು ಆಲದ ಮರದ ಕೆಳಗೆ ಇದ್ದ ಸುಂದರ ಕಲ್ಲು ಬೆಂಚಿನ ಮೇಲೆ ಕೂತು ಹತಾಶನಾಗಿ ಸಿಗರೇಟ್ ಎಳೆದು ಹೊಗೆ ಚೆಲ್ಲಿ ಎದುರಿಗೆ ಕಾಣುತ್ತಿದ್ದ ಆಟದ ಬಯಲು ದಾಟಿ, ಅಲ್ಲಿ ಹಸಿರಾಗಿ ಕಾಣುತ್ತಿದ್ದ ಕುಕ್ಕರಹಳ್ಳಿಕೆರೆಯ ಸಾಲುಮರಗಳ ದಿಟ್ಟಿಸಿ ನೋಡುತ್ತ; ಓದಿದ್ದ ತರಹೇವಾರಿ ಮಾನವಿಕ ಅಧ್ಯಯನಗಳ ಪುಸ್ತಕಗಳನ್ನು ಮನದಲ್ಲೇ ಅವಲೋಕಿಸಿಕೊಳ್ಳುತ್ತಿದ್ದೆ.

ಆ ಆಲದ ಮರ ಈಗ ಇಲ್ಲ. ಆ ಮರದ ಕಲ್ಲು ಬೆಂಚಿನ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ಅದೆಷ್ಟು ಹಿರಿಯ ಪ್ರಾಜ್ಞರು ಕುಳಿತಿದ್ದರೊ? ಆ ಕಲ್ಲು ಬೆಂಚಿನ ಮೇಲೆ ಕುವೆಂಪು ಅವರು ವಾಯುವಿಹಾರ ಮುಗಿಸಿ ಬಂದು ಕೂರುತ್ತಿದ್ದರು ಎಂದು ಕತೆಗಳಿದ್ದವು. ಅಂತಹ ಮಹಾನ್ ಲೇಖಕರು ಕೂತಿದ್ದ ಜಾಗದಲ್ಲಿ ಅಯೋಗ್ಯನಾದ ನಾನು ಕೂರುವುದು ಎಷ್ಟು ಸರಿ ಎಂದು ಎದ್ದು ಬರುತ್ತಿದ್ದೆ. ಆಗ ನಾನಿನ್ನೂ ಒಂದು ಹಳೆಯ ಚಡ್ಡಿ’ ಯನ್ನೂ ಬರೆದಿರಲಿಲ್ಲ. ಒಳಗೆ ಕುದಿವ ಲಾವಾದಂತಿದ್ದೆ. ಸಾಹಿತ್ಯದ ಬಗ್ಗೆ ಉತ್ಸಾಹ ಇತ್ತಾದರೂ ಬೂಸಾ ಲೇಖಕರ ಕಂಡು ದೂರ ಇದ್ದೆ.

ಆ ಆಲದ ಮರದ ಕೆಳಗೆ ಕೂತು ಬ್ಲಾಕ್ ಪೊಯೆಟ್ರಿ’ಯನ್ನು ಓದುತ್ತಿದ್ದ ಸುಖ ಈಗಲೂ ಹಸಿಯಾಗಿಯೇ ಇದೆ. ಆಫ್ರಿಕಾದ ಕಪ್ಪು ಜನಾಂಗದ ಪ್ರಾತಿನಿಧಿಕ ಕವಿಗಳ ಕವಿತೆಗಳ ಸಂಗ್ರಹ ಅದಾಗಿತ್ತು. ವೊಲೆಸೋಯೆಂಕ ಸಂಪಾದಿಸಿದ್ದ ಆ ಕೃತಿ ನನ್ನ ಕಾವ್ಯದ ದಾಹಕ್ಕೆ ಬಹಳ ಹತ್ತಿರವಿತ್ತು. ಆಲದ ಮರ ತುಂಬ ಚಾಚಿಕೊಂಡಿತ್ತು. ಹತ್ತಾರು ಹೋರಾಟಗಳ ಪೂರ್ವಭಾವಿ ಮೀಟಿಂಗ್‌ಗಳನ್ನು ನಾವಲ್ಲಿ ನಡೆಸುತ್ತಿದ್ದೆವು. ನಾನು ಹಾಗೂ ಬಂಜಗೆರೆ ಆವತ್ತು ವಿದ್ಯಾರ್ಥಿ ಹೋರಾಟಗಳಲ್ಲಿ ಮುಂದಿದ್ದೆವು. ಆಗ ತಾನೇ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸರ್ಕಾರ ಮುಂದಾಗಿ ಕುವೆಂಪು ಅವರನ್ನು ಸರ್ವಾಧ್ಯಕ್ಷರನ್ನಾಗಿಸಿತ್ತು. ಆಗ ಬರಗಾಲವಿತ್ತು. ಇಂತಹ ಕಷ್ಟ ಕಾಲದಲ್ಲಿ ನಮಗೇಕೆ ವಿಶ್ವ ಕನ್ನಡ ಸಮ್ಮೇಳನ ಎಂದು ಧಿಕ್ಕಾರ ಕೂಗಿದೆವು. ಬರ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ಅದೇ ಆಲದ ಮರದಡಿ ಕೂತು ವಿಚಾರ ಮಾಡಿ, ಹಣ ಸಂಗ್ರಹಿಸಿ ಬಡವರಿಗೆ ಹಂಚಿದೆವು. ಆಗ ನಮಗೆ ಗುರುವಾಗಿ ನಾಯಕರಾಗಿದ್ದವರು ಪ್ರೊ.ಕೆ.ರಾಮದಾಸ್, ಪ್ರೊ. ರಾಮಲಿಂಗಂ ಮುಂತಾದವರು. ಅದೇ ಆಲದ ಮರ ನಮ್ಮ ಹೋರಾಟಗಳಿಗೆ ಕೂಡಲ ಸಂಗಮವಾಗಿತ್ತು. ಆಗ ಆ ಮರಕ್ಕೆ ನಾನು ನನ್ನ ದುಃಖವನ್ನು ಅದೆಷ್ಟು ಹೇಳಿಕೊಂಡಿದ್ದೇನೊ, ಲೆಕ್ಕವೇ ಇಲ್ಲ.

ನಾನೊಬ್ಬನೇ ಕೂರುತ್ತಿದ್ದೆ. ಆದರೂ ಆ ಮರದ ತುಂಬಾ ಹಕ್ಕಿಗಳು ಮಾತಾಡಿಕೊಳ್ಳುತ್ತಿದ್ದವು. ಈ ಹಕ್ಕಿಗಳ ಹಾಗೆ ಹಾರಿಹೋಗಲು ನನ್ನಿಂದಾಗದಲ್ಲಾ ಎಂದು ಪರಿತಪಿಸುತ್ತಿದ್ದೆ. ಇದೇ ಆಲದ ಮರದ ಕೆಳಗೆ ಕೂತಿದ್ದಾಗ ಕ್ಯಾಂಟೀನ್ ಕಡೆಯಿಂದ ಲೋಕೇಶ್ ಮೊಸಳೆ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಬರುತ್ತಿದ್ದರೆ; ಆಗ ತಾನೇ ತರಗತಿಯಿಂದ ಹೊರಬಂದ ಪ್ರಾಯದ ಜೋಡಿಹಕ್ಕಿಗಳಾಗಿದ್ದ ಅಬ್ದುಲ್ ರಶೀದ್ ಹಾಗೂ ಮೋಳಿ ಇಬ್ಬರೂ ಚೆಲುವಾಗಿ ಬರುತ್ತಿದ್ದರು. ನೋಡಿ ನಗಾಡಿದೆ. ತಕ್ಷಣ ಲೋಕೇಶ್ ಕ್ಯಾಮೆರಾ ಹಿಡಿದು ಮೂವರ ಫೋಟೋ ತೆಗೆದ. ಮತ್ತೆ ತಾನೂ ನಿಂತು ಆ ಆಲದ ಮರದ ಜೊತೆಗೆ ಫೋಟೋ ತೆಗೆಸಿಕೊಂಡ. ಅದೊಂದು ಸುಂದರ ನೆನಪು. ಆಲದ ಮರ ಇವತ್ತು ಇಲ್ಲವಾದರೂ ಕಲ್ಲು ಬೆಂಚು ಹಾಗೆ ಇದ್ದುದ ಕಂಡ ನೆನಪು. ಕಲ್ಲು ಬೆಂಚು ಮರದ ಸಹವಾಸ ಇಲ್ಲದೆ ತಬ್ಬಲಿಯಂತೆ ಕುಸಿದಂತೆ ಕೂತಿತ್ತು. ಆ ಆಲದ ಮರ, ರಶೀದ್, ಮೋಳಿ ಯಾವತ್ತೂ ನನ್ನ ನೆನಪಿನಬುತ್ತಿಯಲ್ಲಿ ಸದಾ ಜೀವಂತವಾಗಿರುತ್ತಾರೆ. ಕ್ಯಾಂಟೀನಿನ ಮುಂದಿದ್ದ ಆಲದ ಮರ ವಿಸ್ತರಿಸಿಕೊಂಡು ದೊಡ್ಡದಾಗಿದೆ. ಅದರ ಕೆಳಗೂ ನಾವು ಪ್ರೊ.ನಂಜುಂಡಸ್ವಾಮಿ ಅವರಿಂದ ಕ್ರಾಂತಿಕಾರಿ ಭಾಷಣ ಮಾಡಿಸಿದ್ದೆವು.

ಆಹಾ! ಗಂಗೋತ್ರಿಯೇ ನಿನ್ನ ಜೊತೆ ನನಗೆ ನೆನಪಿನ ವಿರಹ ಒಂದೇ ಎರಡೇ? ನಾನು ಬುಗುರಿ ಕಥೆ ಬರೆದು ಲೈಬ್ರರಿಯಿಂದ ಹೊರ ಬಂದು ಅದೇ ಆಲದ ಮರದ ಕೆಳಗೆ ಕೂತು ನಿಟ್ಟುಸಿರುಬಿಟ್ಟಿದ್ದೆ. ಭಾಗಶಃ ಆ ನಿಟ್ಟುಸಿರನ್ನು ಆ ಆಲದಮರ ಆಲಿಸುತ್ತೇನೋ!
mogalliganesh@gmail.com

 


ಆ ಆಲದ ಮರದ ಕೆಳಗೆ ಸಹಪಾಠಿಗಳ ಜೊತೆ ಲೇಖಕ

Tags: