ಡಾ.ಶೋಭಾ ರಾಣಿ
ತಾತ್ಕಾಲಿಕ ಖಿನ್ನತೆ ಅನ್ನುವುದೊಂದಿದೆ, ಮುಗಿದ ಜಾತ್ರೆಯ ಸಂಭ್ರಮ, ಹಬ್ಬ ಮುಗಿಸಿ ನೆಂಟರು ಹೊರಾಟಾಗ, ತುಂಬಿ ತುಳುಕುತ್ತಿದ್ದ ರಸ್ತೆ, ಬೀದಿಗಳು ದಿಢೀರ್ ಎಂದು ಖಾಲಿಯಾದಾಗ ಈ ತಾತ್ಕಾಲಿಕ ಖಿನ್ನತೆಯೊಂದು ಮೆಲ್ಲನೆ ನುಸುಳಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಂತಹ ತಾತ್ಕಾಲಿಕ ಖಿನ್ನತೆ ನಮ್ಮ ಮೈಸೂರಿಗರಿಗೆ ಪ್ರತೀ ವರ್ಷವೂ ಕಾಡುವ ಸಾವಾನ್ಯ ಸಮಸ್ಯೆ,
ದಸರೆಯ ಡ್ಯೂಟಿ ಮತ್ತು ಆಫೀಸ್ ಕೆಲಸ ಎರಡನ್ನೂ ಒಟ್ಟೊಟ್ಟಿಗೆ ನಿಭಾಯಿಸಬೇಕಾಗುತ್ತದೆ ಮೈಸೂರು ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳಿಗೆ. ಹೀಗೆ ಎರಡೆರಡು ಒತ್ತಡಗಳನ್ನು ಬ್ಯಾಲೆನ್ಸ್ ಮಾಡುವಾಗ ಒಂದು ಗಳಿಗೆ ಈ ಗದ್ದಲವೆಲ್ಲಾ ಮುಗಿದು ಹೋದರೆ ಸಾಕಪ್ಪಾ ಅನಿಸುವುದೂ ಇದೆ, ಹಾಗಂತ ದಸರೆಯ ಸಮಯದ ಕರ್ತವ್ಯ ನಿಭಾಯಿಸುವಾಗ ಸಹೋದ್ಯೋಗಿಗಳೆಲ್ಲಾ ಒಂದೆಡೆ ಕಲೆತು, ರಂಗು ರಂಗಿನ ಧಿರಿಸುಗಳನ್ನು ತರಿಸಿ, ರ್ಟಿಸ್ಟಿಕ್ ಮೇಕಪ್ ನೊಂದಿಗೆ ಓಡಾಡುತ್ತಾ, ಹೊಟ್ಟಯೊಳಗೆ ಕೂಡಿಟ್ಟುಕೊಂಡಿದ್ದ ಅಷ್ಟೂ ಗಾಸಿಪ್ ಗಳಿಗೆ ಮುಕ್ತಿ ಕೊಟ್ಟು, ಯಾವ ಮಾಡಲ್ ಗಳಿಗೂ ಕಡಿಮೆ ಇಲ್ಲದಂತೆ ಫೋಸ್ ಕೊಟ್ಟು, ಮೊಬೈಲ್ ಗೆ ಬೇಸರ ಬರುವಷ್ಟು ಪೋಟೋ ಕ್ಲಿಕ್ಕಿಸಿ, ಅದೆಷ್ಟೇ ಸುಸ್ತಾಗಿದ್ದರೂ ಅಂದಿನ ಪೋಟೋಗಳನ್ನು ಅಂದೇ ವಾಟ್ಸಾಪ್ ಸ್ಟೇಟಸ್ ಗೆ ಛಾಪಿಸಿ, ಸಂಭ್ರಮಿಸುವ ಅವಕಾಶವನ್ನೂ ಕಳೆದುಕೊಳ್ಳಲು ಯಾವ ಮಹಿಳಾ ಅಧಿಕಾರಿಯೂ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ. ಪಾದರಸ ಕುಡಿದಂತೆ ಓಡಾಡುವ ನಾವು ದಸರೆ ಮುಗಿದ ನಂತರ ದಿಢೀರ್ ಶುಗರ್ ಲೆವೆಲ್ ಕುಸಿದಂತೆ ತಣ್ಣಗಾಗುವುದು ಅಷ್ಟೇ ದಿಟ.
ಇಂದು ದಸರೆ ಮುಗಿದು ಆಫಿಸ್ ಗೆ ತೆರಳಲು ರಸ್ತೆಗಿಳಿದಾಗ ಈ ತಾತ್ಕಾಲಿಕ ಖಿನ್ನತೆಯ ಘಾಟು ತಟ್ಟಿತು, ಸಾವಿರಾರು ಜನರಿಂದ ತುಳಿಸಿಕೊಂಡು ಮೈ ಕೈ ನೋವು ಮಾಡಿಕೊಂಡ ರಸ್ತೆಗಳು ಡೋಲೊ ೬೫೦ ತಗೊಂಡು ನಿರುಮ್ಮಳವಾಗಿ ಮಲಗಿರುವಂತೆ ಕಂಡರೆ, ಪೇಟೆ, ಬೀದಿಗಳು ಮದುವೆ ಮುಗಿಸಿ ಭಾರೀ ಸೀರೆ, ಒಡವೆಗಳನ್ನು ಕಳಚಿ ಸೀದಾ ಸಾದಾ ಕಾಟನ್ ಬಟ್ಟೆ ತೊಟ್ಟು ಹೆಣ್ಣಿನಂತೆ ನಿರಾಳತೆಗೆ ಜಾರಿದರೆ, ತಮ್ಮ ಉದ್ದಕ್ಕೂ ದೀಪಾಲಾಂಕಾರಕ್ಕೆ ಒಡ್ಡಿಕೊಂಡ್ಡಿದ್ದ ರಸ್ತೆಯುದ್ದದ ಮರಗಳು, ಕಳಚಿದ ಬೆಳಕಿನ ಭಾರಕ್ಕೆ ನೆಮ್ಮದಿಯಾಗಿ ಉಸಿರಾಡುತ್ತಾ ಜಗದ ಜಂಜಡಕ್ಕೆ ಸಿಲುಕದ ಸರದಾರರಂತೆ ರಸ್ತೆಯುದ್ದಕ್ಕೂ ನಿಂತಿವೆ. ಯಾವುದೇ ಟ್ರಾಫಿಕ್ಕಿನ ಸಿಕ್ಕಿಲ್ಲದೆ ವಾಹನಗಳು ಚಲಿಸುತ್ತಿವೆ, ಈ ಸಣ್ಣದೊಂದು ನೀರವತೆ ಬೇಕಿತ್ತಿನೋ ಎಂದೆನಿಸಿದರೂ, ದಾರಿಯುದ್ದಕ್ಕೂ ಕಾಣ ಸಿಗುವ ಮುಗಿದ ಸಂಭ್ರಮದ ಗುರುತುಗಳು ಕಾರಣವೇ ಇಲ್ಲದ ಬೇಸರಿಕೆ ತರುವುದಂತೂ ದಿಟ.
ಇನ್ನೂ ಆಫೀಸ್ ನಲ್ಲಿ ತಾತ್ಕಾಲಿಕ ಖಿನ್ನತೆಯ ಸಿಂಡ್ರೋಮ್ ವಿರಾಟ್ ರೂಪವನ್ನು ಪಡೆದುಕೊಂಡು ಗಂಡು, ಹೆಣ್ಣು ಎಂಬ ಭೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಆವರಿಸಿಕೊಂಡಿರುತ್ತದೆ. ಇದನ್ನು ಪೋಸ್ಟ್ ಹಾಲಿಡೆ ಸಿಂಡ್ರೋಮ್ ಅಂತಲೂ ಕರೆುಂಬಹುದು. ಟೇಬಲ್ ಮೇಲೆ ಕುಳಿತಿರುವ ವಿಲೇವಾರಿಗೆ ಬಾಕಿ ಇರುವ ರಾಶಿ ರಾಶಿ ಕಡತಗಳು, ತಾತ್ಕಲಿಕ ರೀಲಿಫ್ ಗೆ ಒಳಗಾಗಿದ್ದ ಪರಿಹರಿಸಲೇ ಬೇಕಾಗಿದ್ದ ಸಮಸ್ಯೆಗಳು, ಮೇಲಾಧಿಕಾರಿಗಳು ವಿಧಿಸಿರುವ ಸಾಧಿಸಬೇಕಾಗಿರುವ ಪ್ರಗತಿಯ ಗುರಿಗಳು ಈ ಪೋಸ್ಟ್ ಹಾಲಿಡೆ ಸಿಂಡ್ರೋಮ್ ತುಸು ಹೆಚ್ಚು ಮಾಡಲು ಕಾರಣವಾಗುತ್ತವೆ. ಭಾರವಾದ ಹೆಜ್ಜೆಗಳು, ಟೀ, ಊಟದ ವಿರಾಮದಲ್ಲೂ ಸಪ್ಪೆ ನಗು, ಮಾತುಗಳು, ಕಳೆದ ಹೋದ ಸಂಭ್ರಮದ ಹಳಹಳಿಕೆಗಳು, ಸರ್ಕಾರಿ ಕಛೇರಿಗಳಲ್ಲಿ ಕಾಣ ಸಿಗುವ ದಸರೆ ಮುಗಿದ ನಂತರದ ದೃಶ್ಯಗಳು ಇವು. ಒಂದೆರೆಡು ದಿನವಷ್ಟೇ, ಹೆಜ್ಜೆಗಳು ವೇಗ ಹೆಚ್ಚಿಸಿಕೊಳ್ಳುತ್ತವೆ, ಹಿಂದಿನಂತೆ ಸಹಜ ಸ್ಥಿತಿಗೆ ಬಂದು ಮತ್ತೆ ಸಮಯದ ಜೊತೆ ಕಛೇರಿಯ ಬದುಕು ಓಡುತ್ತದೆ.
ಇನ್ನೂ ದಸರೆಯ ನಂತರದ ಸಂಜೆಗಳೂ ದೀರ್ಘವೆನಿಸುತ್ತವೆ. ಲವ ಲವಿಕೆ ಇಲ್ಲದ ಸಂಜೆಯ ನಡಿಗೆಗಳು ಇದಕ್ಕೆ ಸಾಕ್ಷಿ. ನಾನು ನಿತ್ಯವೂ ಓಡಾಡುವ ದಾರಿಯಲ್ಲಿ ಸಿಗುವ ವಿಜಯನಗರ ಪಾರ್ಕ್ನಲ್ಲಿ ಒಂದೆರೆಡು ವಯಸ್ಸಾದವರ ಅಡ್ಡಗಳು ಹಾಗೂ ವೇಗದ ನಡಿಗೆ ಮತ್ತು ಮಾತು ಎರಡನ್ನೂ ಸಮನಾಗಿ ಹೊಂದಿಸಿಕೊಂಡ ಒಂದಷ್ಟು ಮಹಿಳಾ ಗುಂಪುಗಳ ಕಲರವ ಪಾರ್ಕಿಗೆ ಮತ್ತಷ್ಟು ಮೆರಗು ನೀಡುತ್ತವೆ. ನಿತ್ಯವೂ ೫ ಗಂಟೆಗೆ ಸೇರುವ ಇವರು ರಾತ್ರಿ ೭ ವರೆಗೂ ವಿವಿಧ ವಿಷಯಗಳ ಗೋಷ್ಟಿಗಳು ನಡೆಯುತ್ತಿರುತ್ತವೆ. ದಸರೆ ಮುಗಿದ ಒಂದೆರೆಡು ದಿನ ಈ ಪಾರ್ಕಿನಲ್ಲಿ ಅವರ ಸುಳಿವಿರುವುದಿಲ್ಲ, ದಸರೆಯ ಒಡಾಟಾವೋ, ಜನರ ಗದ್ದಲಕ್ಕೋ, ಒಂದರ ಹಿಂದೆ ಒಂದು ಬಂದು ಹೋದ ಹಬ್ಬಗಳ ಆಯಾಸಕ್ಕೋ ಈ ಹಿರಿಯರು ಮತ್ತು ಮಹಿಳೆಯರು ಒಂದೆರೆಡು ದಿನ ಬ್ರೇಕ್ ತಗೊಂಡಿರುತ್ತಾರೆ ಅನ್ನೋದು ನನ್ನ ಗೆಸ್, ಇವರ ಗೋಷ್ಟಿಗಳ ಸದ್ದಿಲ್ಲದೇ, ಅವರ ನಗು ಕೇಳದೇ ಅಲ್ಲಿ ನಿತ್ಯವೂ ಸಂಜೆಯ ನಡಿಗೆಯಲ್ಲಿ ತೊಡಗಿರುವವರಿಗೆ ನೀರವತೆ ಕಾಡುವುದು ಸತ್ಯ. ಹಾಗಂತ ಈ ಆಲಸ್ಯ, ಆಕಳಿಕೆ ಒಂದೆರೆಡು ದಿನದ ಕಾರುಬಾರು ಅಷ್ಟೇ, ಮತ್ತೆ ಮೊಗ್ಗರಳಿ ಹೂವಾಗಿ, ಕಾಡು ಕುಸುಮದ ಹಾಗೇ ಅರಳಿ ತನ್ನ ಸುತ್ತಲೂ ಕಲರವದ ಪರಿಮಳ ಬೀರತೊಡಗುತ್ತದೆ ಪಾರ್ಕು.
ಆಫೀಸ್ ಮತ್ತು ನಿತ್ಯದ ವಾಕ್ ಮುಗಿಸಿ ಮನೆಯ ದಾರಿಯಲ್ಲಿ ನನಗೆ ಒಂದೆರೆಡು ಪ್ರಿಯವಾದ ಕೆಲಸಗಳಿವೆ, ನಾಳಿನ ಅಡುಗೆ ಮತ್ತು ಪೂಜೆಗೆ ಹೂವು ಮತ್ತು ತರಕಾರಿಯನ್ನು ಸಾಕಮ್ಮ ಮತ್ತು ಲಕ್ಷಿ ಯರಿಂದ ಕೊಳ್ಳುವುದು. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಈ ಎರಡೂ ಜೀವಗಳ ದೈನಿಕವೂ ಒಂದಕ್ಕೊಂದು ಬೆಸೆದುಕೊಂಡು ಈಗ ಅಕ್ಕ ತಂಗಿಯರಂತೆ ಬದುಕುತ್ತಿರುವ ಇವರು ನವರಾತ್ರಿಯ ಅಷ್ಟೂ ದಿನಗಳಲ್ಲಿ ವಾರುಕಟ್ಟೆಯಲ್ಲಿ ನಡೆವ ತರಹೇವಾರಿ ಕಥೆಗಳಿಗೆ ಇನ್ನಷ್ಟು ಬಣ್ಣಗಳನ್ನ ತುಂಬಿ ನನಗೆ ಹೇಳುವುದು ರೂಢಿ. ಯಾವುದೇ ಮಹತ್ವಾಕಾಂಕ್ಷೆ ಇಲ್ಲದೇ ಬದುಕುತ್ತಿರುವ ಇವರಿಗೆ ದಸರೆಯ ದಿನಗಳಲ್ಲಿ ಉತ್ಸಾಹ ನೂರ‌್ಮಡಿಯಾಗುವುದಲ್ಲದೇ, ಕಿಕ್ಕಿರಿದ ಮಾರುಕಟ್ಟೆ, ಗದ್ದಲ, ಬೆಲೆಯ ಚೌಕಾಸಿ, ಭೋರ್ಗರಿದ ವ್ಯಾಪಾರ ಎಲ್ಲವನ್ನೂ ಇಂಚಿಂಚು ಆಸ್ವಾದಿಸುತ್ತಾರೆ. ಹೀಗೆ ನಳ ನಳಿಸುತ್ತಿದ್ದ ನಮ್ಮ ಪಳಗಿದ ಕೈಯ ಹೆಂಗಳೆಯರು ದಸರಾ ಮುಗಿಯುತ್ತಿದ್ದಂತೆ ಮಂಕು ಕವಿದವರಂತಾಗಿ, ಕಥೆ ಹೇಳುವ ಉಮೇದಾಗಲೀ, ವ್ಯಾಪಾರ ಮಾಡುವ ಮನಸಾಗಲಿ ಇರದೆ ಒಂದೆರೆಡು ದಿನ ಅವರ ಜೀವಕ್ಕೆ ಒಗ್ಗದ ಮೌನಕ್ಕೆ ಶರಣಾಗುತ್ತಾರೆ. ಈ ತಾತ್ಕಲಿಕ ಬೇಸರಿಕೆ ಸರಿದು ಹೋಗುವ ವರೆಗೆ ನಾ ಕೂಡಾ ಅತ್ತ ತಲೆ ಹಾಕುವುದಿಲ್ಲ.
ನಿತ್ಯ ಜಂಜಟಾದ ಎಲ್ಲಾ ಅನುಲೋಮ ವಿಲೋಮಗಳನ್ನು ಮುಗಿಸಿ ಮನೆಗೆ ಬಂದಾಗ ನಮ್ಮ ಅಡುಗೆಯ ಲಕ್ಷ್ಮೀ, ಗಂಡ ಮಕ್ಕಳೊಂದಿಗೆ ನೋಡಿ ಬಂದ ಜಂಬೂ ಸವಾರಿಯನ್ನು ಬಣ್ಣಿಸಲು ಸಿದ್ದಳಾಗಿರುತ್ತಾಳೆ. ಅವಳ ಬಣ್ಣನೆಗೆ ಯಾವುದೇ ಚೌಕಟ್ಟಿರುವುದಿಲ್ಲ ನದಿ ಹರಿದಷ್ಟೇ ಸಹಜವಾಗಿ ಮೂರು ಗಂಟೆಗಳ ಜಂಬೂ ಸವಾರಿಯ ಕಥೆಯನ್ನ ಮೂರು ದಿನಗಳವರೆಗೆ ಹೇಳಿ ನೀಳ್ಗತೆಯಾಗಿಸುತ್ತಾಳೆ. ಮಕ್ಕಳ ಕರಕೊಂಡು ಮದುವೆಗೆ, ಗಂಡನ್ನ ಕರಕೊಂಡು ಜಾತ್ರೆಗೆ ಹೋಗಬಾರದು ಅಂತ ಹೇಳುತ್ತಲೇ ಪ್ರತೀ ವರ್ಷ ಅವರನ್ನು ಕಟ್ಟಿಕೊಂಡು ಪಟ್ಟದಾನೆಯ ಮೇಲೆ ಕುಳಿತ ತಾಯಿ ಚಾಮುಂಡಿಯನ್ನು ನೋಡಿ ಧನ್ಯಳಾಗುತ್ತಾಳೆ. ದಸರೆ, ಜಂಬೂಸವಾರಿಯನ್ನು ಬಣ್ಣಿಸುತ್ತಲೇ ನನ್ನೊಳಗಿನ ಒಳಗನ್ನು ಅರಿತವಳಂತೆ ಆಲಸ್ಯ, ಬೇಸರಿಕೆಯನ್ನು ಹೋಗಲಾಡಿಸಿ ಮುಂದಿನ ದಸರೆಗೆ ನನ್ನ ಮನಸನ್ನು ಅಣಿಗೊಳಿಸುತ್ತಾಳೆ.