ಅಕ್ಷತಾ
ಕೊಡಗಿನ ಆದಿವಾಸಿಗಳೆನಿಸಿಕೊಂಡ ಕುಡಿಯರಲ್ಲಿ ಪೂಮಲೆ ಕುಡಿಯ, ತೇಮಲೆ ಕುಡಿಯ ಮತ್ತು ಅಡಿಕೆ ಕುಡಿಯ ಎಂಬ ಮೂರು ಪಂಗಡಗಳಿವೆ. ಪೂಮಲೆ ಕುಡಿಯರು ಕೊಡಗಿನೊಳಗೇ ವಾಸವಿದ್ದರೆ, ಅಡಿಕೆ ಕುಡಿಯ ಮತ್ತು ತೇಮಲೆ ಕುಡಿಯ ಎನ್ನುವ ಪಂಗಡದವರು ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕಲ್ಲುಗುಂಡಿ, ಸಂಪಾಜೆ ಕಡೆಗಳಲ್ಲಿ ವಾಸವಾಗಿರುವುದು ವಿಶೇಷ. ಕುಡಿಯ ಜನಾಂಗದ್ದೇ ಮೂರು ಪಂಗಡಗಳಾದರೂ ಮೂರೂ ಪಂಗಡಗಳ ಮಾತೃಭಾಷೆಯಲ್ಲಿ ವಾಸಕ್ಕನುಗುಣವಾಗಿ ವ್ಯತ್ಯಾಸ ಕಾಣಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಂಚಿನ ಕಲ್ಲುಗುಂಡಿ, ಸಂಪಾಜೆ ಭಾಗಗಳ ಘಟ್ಟದಲ್ಲಿ ವಾಸಿಸುವುದರಿಂದ ಹಾಗೂ ಅಲ್ಲಿ ಅಡಕೆ ಕೃಷಿ ಸಾಮಾನ್ಯವಾಗಿರುವುದರಿಂದ ತಪ್ಪಲಿನಲ್ಲಿ ವಾಸಿಸುವ ಪಂಗಡ ಸ್ಥಳಕ್ಕನುಗುಣವಾಗಿ ಅಡಿಕೆ, ತೇಮಲೆ ಇತ್ಯಾದಿ ಹೆಸರನ್ನು ಪಡೆದಿರಬಹುದು, ಘಟ್ಟ ಪ್ರದೇಶದಲ್ಲಿ ವಾಸಿಸುವ ಪಂಗಡ ಎತ್ತರದಲ್ಲಿರುವುದರಿಂದ ಪೂಮಲೆ ಕುಡಿಯ ಎಂಬ ಹೆಸರು ಬಂದಿರಬಹುದೆಂದು ಅಂದಾಜಿಸಬಹುದಾಗಿದೆ. ಕುಡಿಯರು ಶಿವನ ವರಪ್ರಸಾದ ಸ್ವೀಕರಿಸಿ ಹಾಗೆಯೇ ಬದುಕಿಬಂದರು ಎಂಬುದಕ್ಕೆ ಸ್ವಾರಸ್ಯಕರ ಜನಪದ ಕತೆಯಿದೆ.
ಬಹಳ ಹಿಂದೆ ಶಿವ ದೇವರು ಈಟಿ ಹಿಡಿದು ಬೆಟ್ಟದಿಂದ ಇಳಿದು ಬರುತ್ತಿದ್ದಾಗ ಕುಡಿಯನೊಬ್ಬ ಹಸಿವಿನಿಂದ ಕಂಗಾಲಾಗಿ ನರಳುತ್ತಿದ್ದ. ‘ತಿನ್ನಲು ಆಹಾರ ಕರುಣಿಸು’ ಎಂದು ಶಿವನಲ್ಲಿ ಬೇಡಿದಾಗ ಎದುರಿದ್ದ ಬೈನೆಮರಕ್ಕೆ ಈಟಿಯನ್ನು ಗುರಿಯಿಟ್ಟು ಎಸೆಯುತ್ತಾನೆ. ಆಗ ಚಿಮ್ಮಿದ ರಸ ಹಾಗೂ ಬೈನೆಮರದ ತಿರುಳನ್ನು ಕುಡಿಯನಿಗೆ ತೋರಿಸಿ ‘ಇಂದಿನಿಂದ ಇದೇ ನಿನ್ನ ಆಹಾರ’ ಎನ್ನುತ್ತಾನಂತೆ. ಅಂದಿನಿಂದ ಬೈನೆ ಶೇಂದಿ ಹಾಗೂ ಬೈನೆ ಮರದ ತಿರುಳಿನಿಂದ ತಯಾರಿಸಿದ ತಿನಿಸು ಕುಡಿಯರ ಆಹಾರ ಪದ್ಧತಿಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿತು ಎಂಬುದು ಬೈನೆ ಕಳ್ಳು ಅಥವಾ ಬೈನೆ ಶೇಂದಿಯ ಕುರಿತು ಕುಡಿಯರೊಳಗಿರುವ ಒಂದು ಜನಪದ ನಂಬಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಬೈನೆ ಶೇಂದಿ ನಿಷೇಧವಾದುದರಿಂದ ವಿಶೇಷ ದಿನಗಳಲ್ಲಿ ಬೈನೆಯನ್ನು ಸಾಂಕೇತಿಕವಾಗಿ ಇಡುವುದನ್ನು ನೋಡಬಹುದು.
ಪೂಮಲೆ ಕುಡಿಯರು ಕೊಡಗಿನೊಳಗೆ ವಾಸವಿರುವುದರಿಂದ ಕೊಡವ ಮಾತೃಭಾಷಿಕರಾದರೆ, ಅಡಿಕೆ ಕುಡಿಯರು ತುಳು ಭಾಷೆಯನ್ನು ಮನೆಮಾತನ್ನಾಗಿಸಿದ್ದಾರೆ. ತೇಮಲೆ ಕುಡಿಯ ಎಂದು ಹೆಸರಿಸಿಕೊಳ್ಳುವ ಪಂಗಡ ಮಿಶ್ರ ಕನ್ನಡ ಮಾತನಾಡುವವರಾಗಿದ್ದು ಬೆಟ್ಟ, ಕಣಿವೆಗಳಲ್ಲಿ ವಾಸವಾಗಿರುವುದರಿಂದ ತೇಮಲೆ ಎಂಬ ಹೆಸರು ಬಂದಿರಬಹುದು. ಈ ಪಂಗಡಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಕುಡಿಯ ಜನಾಂಗದ ಉಪಪಂಗಡಗಳಾದರೂ ತಮ್ಮ ಪಂಗಡದೊಳಗೆ ಕೆಲವು ನಿಷಿದ್ಧಗಳಿವೆ. ಉದಾಹರಣೆಗೆ, ಪೂಮಲೆ ಕುಡಿಯ ಪಂಗಡ ಉಳಿದೆರಡು ಪಂಗಡಗಳ ಹೆಣ್ಣು ಅಥವಾ ಗಂಡಿನ ಜೊತೆ ವಿವಾಹ ಸಂಬಂಧ ಮಾತುಕತೆ ಮಾಡುವಂತಿಲ್ಲ. ಅದೇ ರೀತಿಯಾಗಿ ಅಡಿಕೆ ಕುಡಿಯ, ತೇಮಲೆ ಕುಡಿಯ ಜನಾಂಗದವರೂ ಪೂಮಲೆ ಕುಡಿಯರ ಜೊತೆ ವಿವಾಹ ಮಾತುಕತೆ ನಡೆಸುವಂತಿಲ್ಲ. ಒಂದೇ ಸಮುದಾಯದ ಮೂರು ಪಂಗಡಗಳಾದರೂ ಇಲ್ಲಿನ ಒಳ ನಿಷಿದ್ಧಗಳು ಗಮನಿಸುವಂತಹದ್ದು. ಮದುವೆ ಮಾತುಕತೆಗಳು ಹೆಣ್ಣು ಗಂಡಿಗೆ ಕೂಡಿ ಬರುವ ಗಣ ನಿರ್ಧರಿತವಾಗಿದ್ದು, ಗಣಗಳು ಕೂಡಿ ಬಂದರೆ ಒಪ್ಪಿತವಾಗುತ್ತದೆ. ಪೂಮಲೆ ಕುಡಿಯರ ಬಹುತೇಕ ವಿವಾಹ ಸಂಬಂಧಗಳು ಕುಟುಂಬದೊಳಗೇ ನಡೆಯುವ ಪದ್ಧತಿಯಿದ್ದು, ಸೋದರಮಾವ ಅಥವಾ ಸೋದರತ್ತೆ ಹೀಗೆ ಸೋದರಿಕೆಯ ಸಂಬಂಧಗಳನ್ನು ನೋಡಬಹುದಾದರೂ ಈ ಸಂಪ್ರದಾಯ ಆಚರಿಸುವ ಇತರೆ ಜಾತಿ, ಉಪಜಾತಿಯಲ್ಲಿರುವಂತೆ ಮಾತೃಮೂಲೀಯ ಪದ್ಧತಿಯ ಅನುಸರಣೆಯಿಲ್ಲ. ಪಿತೃಮೂಲ ಕಟ್ಟುಗಳನ್ನು ಆಚರಿಸುವ ಪೂಮಲೆ ಕುಡಿಯರಲ್ಲಿ ಆಸ್ತಿ ಹಕ್ಕುಗಳು ಗಂಡು ಮಕ್ಕಳದ್ದಾಗಿರುತ್ತದೆ.
ಮಲೆಗಳಲ್ಲಿ ವಾಸಿಸುವ ಕುಡಿಯರ ಮನೆತನಗಳು ಮಲೆಯನ್ನವಲಂ ಬಿಸಿರುತ್ತವೆ. ತಾವು ಯಾವ ಮಲೆ ಎಂದರೆ ಬೆಟ್ಟದಲ್ಲಿರುತ್ತಾರೋ ಅದುವೇ ಮನೆತನದ ಹೆಸರಾಗುತ್ತದೆ. ಮಲೆಗಳಿಂದ ಮನೆತನವನ್ನು ಗುರುತಿಸಿ ಕೊಳ್ಳುವವರಲ್ಲಿ ವಿಶೇಷರಾದವರು ಪೂಮಲೆ ಕುಡಿಯ ಪಂಗಡದವರು. ಕೊಡಗಿನ ಸುತ್ತಮುತ್ತಲಿನ ಮಲೆಗಳನ್ನೇ ಮನೆತನವನ್ನಾಗಿಸಿದವರು ತಮ್ಮ ಹೆಸರಿನ ಜೊತೆಗೆ ಮಲೆಯ ಹೆಸರನ್ನೂ ಸೇರಿಸಿಕೊಳ್ಳುತ್ತಾರೆ. ಪೂಮಲೆ ಕುಡಿಯರ ಸಾಂಪ್ರದಾಯಿಕ ನೃತ್ಯ ‘ಉರುಟಿ ಕೊಟ್ಟು’ ಹಾಡುಗಳನ್ನು ‘ಪಾಟ್’ ಎಂದೂ ನೃತ್ಯವನ್ನು ‘ಆಟ’ ಎಂದೂ ಕರೆಯುವ ಪೂಮಲೆ ಕುಡಿಯರ ಸಾಂಪ್ರದಾಯಿಕ ನೃತ್ಯ ‘ಉರುಟಿ ಕೊಟ್ಟು’. ತಲೆಗೆ ರುಮಾಲು ಕಟ್ಟಿ ಇಳಿಬಿಟ್ಟು ತಮ್ಮ ಸಾಂಪ್ರದಾಯಿಕ ಶೈಲಿಯ ಕೈಮಗ್ಗದ ಸೀರೆಯನ್ನುಟ್ಟು ಸುತ್ತುಕಟ್ಟಿ ದುಡಿಯ ತಾಳ ಮತ್ತು ಹಾಡಿಗೆ ತಕ್ಕಂತೆ ಕುಣಿಯುವ ಮೇಲು ಕುಡಿಯರ ನೃತ್ಯವನ್ನು ‘ಉರುಟ್ಟು ಕೊಟ್ಟು’ ಎನ್ನುತ್ತಾರೆ. ತಂಡದಲ್ಲಿ ಸಾಮಾನ್ಯವಾಗಿ ಎಂಟು ಮಂದಿಯಿದ್ದು ಹಾಡಿನ ಅನುಕರಣೆ ನೃತ್ಯ ಭಂಗಿಗಳಲ್ಲಿ ಸಾಗುತ್ತದೆ. ಹಾಡನ್ನು ‘ಉರುಟಿ ಪಾಟ್’ ಎಂದು ಕರೆದರೆ ನೃತ್ಯವನ್ನು ‘ಉರುಟಿ ಆಟ’ ಎನ್ನುತ್ತಾರೆ. ಶುಭ ಸಂದರ್ಭಗಳಲ್ಲಿ ಎಲ್ಲರೂ ಒಟ್ಟು ಸೇರಿ ಈ ನೃತ್ಯ ಅಥವಾ ಹಾಡನ್ನು ಹಾಡುತ್ತಾರೆ. ಉರುಟಿ ಪಾಟ್ ಅಥವಾ ಆಟ ಅಶುಭ ದಿನಗಳಲ್ಲಿ ನಿಷಿದ್ಧವಾಗಿದ್ದು ಸಂದರ್ಭ, ಸಮಯಕ್ಕನುಸಾರವಾಗಿ ಕುಣಿತ, ಹಾಡುಗಳೂ ಬದಲಾಗುತ್ತವೆ. ಸಾವಿನ ಮನೆಗಳಲ್ಲಿ ಹಾಡುವ ಪೂಮಲೆ ಕುಡಿಯರ ಹಾಡನ್ನು ‘ಚಾವು ಪಾಟ್ಟ್’ ಎಂದರೆ ಶ್ರಾದ್ಧಾದಿ ಕಾರ್ಯಗಳಲ್ಲಿ ಹಾಡುವ ಹಾಡನ್ನು ‘ಕೊಲ್ಚಿಪಾಟ್ಟ್’ ಎನ್ನುತ್ತಾರೆ. ‘ಕೊಲ್ಚಿ ಪಾಟ್ಟ್’ ಹಾಡನ್ನು ಹಾಡಿದರೆ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಅಥವಾ ಹಾಡಿನ ಮೂಲಕ ಅಗಲಿದ ಪ್ರೀತಿಪಾತ್ರರನ್ನು ಸ್ವರ್ಗಕ್ಕೆ ಕಳುಹಿಸುವುದು ನಂಬಿಕೆ ಎನ್ನುತ್ತಾರೆ ಪೂಮಲೆ ಕುಡಿಯರ ಸಾಂಪ್ರದಾಯಿಕ ‘ಉರುಟಿ ಕೊಟ್ಟು’ ನೃತ್ಯ ತಂಡದ ಮುಂದಾಳತ್ವ ವಹಿಸಿದ ತೋರ ಶಾರದಾ ಸೋಮಯ್ಯ ಅವರು. ಸಾವಿನ ಮನೆಯ ಹಾಡುಗಳನ್ನು ಹೆಚ್ಚಾಗಿ ಗಂಡಸರೇ ಹಾಡುವುದಾಗಿದ್ದು, ತಿಳಿದಿದ್ದರೆ ಹೆಂಗಸರು ಸ್ವರವನ್ನಷ್ಟೇ ಸೇರಿಸುತ್ತಾರೆ ಎನ್ನುವ ಶಾರದಾ ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲ ಸೊಗಡನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.
‘ಆಧುನಿಕತೆಯ ಭರದಲ್ಲಿ ಸಾಂಪ್ರದಾಯಿಕ ವೇಷಭೂಷಣ, ಹಾಡು ಹಸೆ, ನೃತ್ಯ ಇವೆಲ್ಲವೂ ನಶಿಸಿ ಹೋಗುತ್ತಿವೆ. ಪೂಮಲೆ ಕುಡಿಯರ ಸಾಂಪ್ರದಾಯಿಕ ನೃತ್ಯ ಉರುಟಿ ಕೊಟ್ಟುಗೂ ಹಾಗೂ ಬಹುಸಂಖ್ಯಾತ ವರ್ಗದವರ ನೃತ್ಯಕ್ಕೂ ವ್ಯತ್ಯಾಸವಿದೆ ಎಂದು ತಿಳಿದವರ ಸಂಖ್ಯೆಯೂ ಬಹಳ ಕಡಿಮೆ. ಆದುದರಿಂದ ನಮ್ಮ ಸಾಂಪ್ರದಾಯಿಕ ನೃತ್ಯದ ಬಗ್ಗೆ ತಿಳಿಸಿ ಹೇಳುವ ಅವಕಾಶಕ್ಕೂ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಒಂದು ಕಾಲದಲ್ಲಿ ನಾವು ಹುಟ್ಟಿದ ಮಲೆಗಳಿಂದಲೇ ಗುರುತಿಸಿಕೊಳ್ಳುತ್ತಿದ್ದೆವು. ಮಲೆಗಳಲ್ಲಿ ಸಿಗುವ ಕಾಡುತ್ಪತ್ತಿ ಸಂಗ್ರಹ ಮತ್ತು ಮಾರಾಟ ಕುಲಕಸುಬಾಗಿತ್ತು. ಆದರೆ ಈಗ ಕಾಡು ಬೆಟ್ಟ ಬಯಲಾಗಿದೆ. ನಾನು ಹುಟ್ಟಿ ಬೆಳೆದ ತೋರಮಲೆಯ ಸ್ವರೂಪವೂ ಬದಲಾಗುತ್ತಿದೆ. ಹೀಗೆಯೇ ಮುಂದುವರಿದರೆ ಕಾಲಾನುಕ್ರಮದಲ್ಲಿ ಮನೆತನದ ಹೆಸರಿನೊಡನೆಯಷ್ಟೇ ನಾವು ಹುಟ್ಟಿ ಬೆಳೆದ ಮಲೆಗಳು ನೆನಪಾಗಿ ಉಳಿದುಕೊಳ್ಳುತ್ತವೆ’ ಎಂದು ನೋವಿನ ಮಾತುಗಳನ್ನಾಡುತ್ತಾರೆ ತೋರ ಗ್ರಾಮದ ಶಾರದಾ ಸೋಮಯ್ಯ ಅವರು.
” ಒಂದಾನೊಂದು ಕಾಲದಲ್ಲಿ ಬೆಟ್ಟದ ತುದಿಯಲ್ಲಿ ವಾಸಿಸುತ್ತಿದ್ದ ನಾಗರಿಕತೆಯ ಪರಿಚಯವೇ ಇಲ್ಲದ ದಂಪತಿ ಹುಟ್ಟುಡುಗೆಯಲ್ಲಿ ಕೈಯಲ್ಲಿ ಕೊಳಲು ಮತ್ತು ದುಡಿಯನ್ನು ಹಿಡಿದುಕೊಂಡು ಬೆಟ್ಟವನ್ನಿಳಿದು ಬರುತ್ತಾರೆ. ಆಗ ತಪ್ಪಲಿನಲ್ಲಿ ಮೇಲ್ವರ್ಗದ ವ್ಯಕ್ತಿಯೊಬ್ಬನನ್ನು ಕಂಡು, ಆತನ ವೇಷಭೂಷಣಗಳನ್ನು ನೋಡಿ ಭಯಭೀತರಾಗಿ ಮರವನ್ನೇರಿ ಕುಳಿತುಕೊಳ್ಳುತ್ತಾರೆ. ಆತ ಮರದ ಮೇಲೆ ಕುಳಿತ ಇಬ್ಬರನ್ನೂ ಕೋವಿ ಹಿಡಿದು ಬೆದರಿಸಿ ಮರದಿಂದ ಕೆಳಕ್ಕಿಳಿಸಿ ಅವರಲ್ಲಿದ್ದ ಕೊಳಲು ಹಾಗೂ ದುಡಿಯನ್ನು ವಶಪಡಿಸಿಕೊಂಡು ತನ್ನೂರಿಗೆ ಕರೆದುಕೊಂಡು ಹೋಗಿ ಜೀತಕ್ಕಿಡುತ್ತಾನೆ. ಅಂದಿನಿಂದ ಕುಡಿಯರ ಒಂದೊಂದೇ ಸಾಂಪ್ರದಾಯಿಕ ಆಚರಣೆಗಳು, ನೃತ್ಯ, ಹಾಡು, ಆಹಾರ ಪದ್ಧತಿ… ಹೀಗೆ ಎಲ್ಲವೂ ಪರಿವರ್ತಿತವಾಗಿ ಮೇಲ್ವರ್ಗದವರ ಸಾಂಪ್ರದಾಯಿಕ ಆಚರಣೆಗಳೆನಿಸಿಕೊಂಡವು. ಆದರೆ ಕೊಡಗಿನ ಮೂಲ ಆದಿವಾಸಿಗಳು ಕುಡಿಯರೆಂಬುದನ್ನು ಸಾರ್ವಕಾಲಿಕ ಸತ್ಯ. ಕುಡಿಯ ಜನಾಂಗದ ಮೂಲ ಅಂತಃಸತ್ವದ ಬಗ್ಗೆ ಇನ್ನಾದರೂ ತಿಳಿದುಕೊಂಡು ಉಳಿಸಬೇಕಿದೆ ಎಂಬುದು ಹತ್ತು ಹದಿನೈದು ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು ಕೊಡಗಿನ ಕೋಟಜ್ಜ ಅಲಿಯಾಸ್ ಕಾರ್ಯಪ್ಪನವರು.”
” ಕೊಡಗಿನ ಮೂಲ ಆದಿವಾಸಿಗಳಾದ ಕುಡಿಯರ ಪಾಟ್, ಆಟ್ ಎಲ್ಲವೂ ಉಳಿಯಬೇಕಾದರೆ ಕೊಡಗಿನ ಮಲೆ, ಹಸಿರು, ಕಾಡು ಎಲ್ಲವನ್ನೂ ಸಂರಕ್ಷಿಸಬೇಕಾಗಿದೆ. ಇಲ್ಲಿ ರಕ್ಷಣೆ ಬೇಕಾಗಿರುವುದು ನೆಲ ಮತ್ತು ನೆಲೆ ಎರಡರದ್ದೂ. ನೆಲ ಇಲ್ಲದೆ ನೆಲೆಯಿಲ್ಲ. ನೆಲೆ ಇಲ್ಲದಿದ್ದರೆ ಸಂಘರ್ಷವೂ ನಿತ್ಯ ನಿರಂತರ!”





