ಶೇಷಾದ್ರಿ ಗಂಜೂರು
ಮಧ್ಯಪ್ರಾಚ್ಯದಿಂದ ಪ್ರತಿನಿತ್ಯ ವಿಸ್ತರಿಸುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದರೆ, ಇಸ್ರೇಲಿನ ಆಕ್ರಮಣಕಾರಿ ಧೋರಣೆ, ಅಮೆರಿಕದ ಟ್ರಂಪ್ ದುರಾಡಳಿತದ ತರ್ಕರಹಿತ ನಡೆಗಳು ಮತ್ತು ಇರಾನಿನ ಧರ್ಮಾಂಧ ನಾಯಕರ ಹಠಮಾರಿತನ ಇವೆಲ್ಲಾ ಜಗತ್ತನ್ನು ಮತ್ತೊಂದು ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿವೆ ಎಂದೆನಿಸದೆ ಇರದು. ಟೆಹ್ರಾನ್‌ನ ಬೀದಿಗಳಲ್ಲಿ ಹಾರುತ್ತಿರುವ ಕ್ಷಿಪಣಿಗಳು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉರಿಯುತ್ತಿರುವ ತೈಲ ಟ್ಯಾಂಕರ್‌ಗಳನ್ನು ನೋಡಿದಾಗ “ಮನುಕುಲಕ್ಕೆ ಉಳಿ ಗಾಲವಿದೆಯೇ?” ಎಂಬ ಆತಂಕವೂ ಮೂಡಬಹುದು. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಒಂದು ಆಶ್ಚರ್ಯವೆನಿಸುವ ಸತ್ಯ ಗೋಚರಿಸುತ್ತದೆ: ಲೆಕ್ಕವಿಲ್ಲದಷ್ಟು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಯುದ್ಧ-ಸಂಘರ್ಷಗಳಂತಹ ಅಮಾನುಷ ದುರಂತಗಳ ಬೆನ್ನಲ್ಲೇ ಜಗತ್ತು ಹೊಸದೊಂದು ಶಾಂತಿ ಮತ್ತು ಸ್ವಾತಂತ್ರ್ಯದ ಯುಗಕ್ಕೆ ಕಾಲಿಟ್ಟಿರುತ್ತದೆ.
ಪ್ರಸ್ತುತ ಇರಾನ್ ಸಂಘರ್ಷದಲ್ಲಿ ತೊಡಗಿರುವ ಯಾವುದೇ ರಾಷ್ಟ್ರಗಳ ನಾಯಕರ ಉದ್ದೇಶವನ್ನು ನಾವು “ಖಂಡಿತವಾಗಿ ಒಳ್ಳೆಯದು” ಎನ್ನಲಾಗುವುದಿಲ್ಲ. ತನ್ನ ದೇಶದ ಅಸ್ತಿತ್ವದ ಉಳಿವಿನ ಹೆಸರಿನಲ್ಲಿ ಇಸ್ರೇಲಿನ ನೇತನ್ಯಾಹು ಸರ್ಕಾರ ನಡೆಸುತ್ತಿರುವ ಮಾರಣಹೋಮ, ಜಾಗತಿಕ ಸೌಹಾರ್ದತೆಯ ಕನಿಷ್ಠ ಅಂಶಗಳನ್ನೂ ಧಿಕ್ಕರಿಸುವ ಟ್ರಂಪ್ ಸರ್ಕಾರದ ‘ಅಮೆರಿಕ ಫಸ್ಟ್’ ದುರ್ನೀತಿ, ಪ್ರತಿನಿತ್ಯ “ಅಮೆರಿಕ-ಇಸ್ರೇಲ್‌ಗಳು ಸೈತಾನರು” ಎಂದೆನ್ನುತ್ತಲೇ ತನ್ನ ದೇಶದ ಪ್ರಜೆಗಳನ್ನೇ ಕೊಲ್ಲುವ ಇರಾನ್ ಆಡಳಿತದ ಧಾರ್ಮಿಕ ಹಠಮಾರಿತನ- ಇವೆಲ್ಲವೂ ದುರಾಽಕಾರ ಮತ್ತು ದುರಹಂಕಾರದ ಸಂಕೇತಗಳೇ. ಇವುಗಳಲ್ಲಿ ಯಾವೊಂದನ್ನೂ ನೈತಿಕವಾಗಿ ಒಪ್ಪಲಾಗದು. ಆದರೆ, ಅಮೆರಿಕದ ನ್ಯೂರೋಸೈಂಟಿಸ್ಟ್ ಮತ್ತು ಸುಪ್ರಸಿದ್ಧ ಚಿಂತಕ ಸ್ಟೀವನ್ ಪಿಂಕರ್ ಅವರು ತಮ್ಮ ‘ದ ಬೆಟರ್ ಏಂಜೆಲ್ಸ್ ಆಫ್ ಅವರ್ ನೇಚರ್’ ಪುಸ್ತಕದಲ್ಲಿ ವಾದಿಸುವಂತೆ, ಮನುಷ್ಯನ ವಿನಾಶಕಾರಿ ಬುದ್ಧಿಗಿಂತ ಅವನ ‘ತಾರ್ಕಿಕ ಬುದ್ಧಿ’ಯೇ (Reason) ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ. ಹಲವಾರು ಉದಾಹರಣೆಗಳು ಮತ್ತು ಅಂಕಿ-ಅಂಶಗಳ ಆಧಾರದೊಂದಿಗೆ ತಮ್ಮ ಪುಸ್ತಕದಲ್ಲಿ ಅವರು ತೋರುವಂತೆ, ಜಗತ್ತಿನಲ್ಲಿ ಕಾಲಕ್ರಮೇಣ ಹಿಂಸೆ-ಕ್ರೌರ್ಯಗಳು ಕಡಿಮೆಯಾಗುತ್ತಿವೆ. ಉದಾಹರಣೆಗೆ, ೧೯೫೦ರ ದಶಕದ ಆಸುಪಾಸಿನಲ್ಲಿ, ವಿಶ್ವದ ಪ್ರತಿ ಒಂದು ಲಕ್ಷ ಜನರಲ್ಲಿ ೨೨ಮಂದಿ ಯುದ್ಧಗಳಲ್ಲಿ ಹತರಾಗುತ್ತಿದ್ದರು – ಈಗ ಅದು ಒಂದಕ್ಕಿಂತ ಕಡಿಮೆಯಾಗಿದೆ; ನರಮೇಧಗಳ (Genocides) ಸಂಖ್ಯೆ ಶೇ.೯೦ರಷ್ಟು ಕಡಿಮೆಯಾಗಿದೆ. ಇದು ಕೇವಲ ಯುದ್ಧ-ನರಮೇಧಗಳ ವಿಚಾರದಲ್ಲಷ್ಟೇ ನಿಜವಲ್ಲ; ದೈನಂದಿನ ಜೀವನದಲ್ಲೂ ಕೊಲೆ-ಹಿಂಸೆಗಳು ಗಮನಾರ್ಹ ಇಳಿತ ಕಂಡಿವೆ.
ಯೂರೋಪಿನಲ್ಲಿ ಒಂದು ಕಾಲದಲ್ಲಿ ವರ್ಷಕ್ಕೆ ಲಕ್ಷ ಜನರಿಗೆ ೧೦೦ ಕೊಲೆಗಳು ಆಗುತ್ತಿದ್ದರೆ, ಈಗ ಆ ಸಂಖ್ಯೆ ಒಂದಕ್ಕಿಂತ ಕಡಿಮೆಯಾಗಿದೆ. ಇದೆಂತಹ ಉತ್ತಮ ಬೆಳವಣಿಗೆಯೆಂದರೆ, ಒಂದು ಕಾಲದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಇದ್ದ ಮರಣ ದಂಡನೆಯ ಶಿಕ್ಷೆ ಈಗ ವಿಶ್ವದ ಶೇ.೭೦ರಷ್ಟು ದೇಶಗಳಲ್ಲಿ ರದ್ದಾಗಿದೆ!
ಇದೆಲ್ಲಾ ನಿಜವೇ ಆಗಿದ್ದರೆ, ಈಗಾಗಲೇ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿರುವ ಮಧ್ಯಪ್ರಾಚ್ಯದ ಇಂದಿನ ಯುದ್ಧವನ್ನು ಅರ್ಥೈಸಿಕೊಳ್ಳುವುದಾದರೂ ಹೇಗೆ? ಇಂತಹದನ್ನು, ಪಿಂಕರ್, ಶಾಂತಿಯೆಡೆಗಿನ ನಮ್ಮ ಯಶಸ್ವಿ ಯಾತ್ರೆಯಲ್ಲಿ ಅಲ್ಲೊಮ್ಮೆ-ಇಲ್ಲೊಮ್ಮೆ ಕಂಡುಬರುವ “ತಾತ್ಕಾಲಿಕ ಹಿನ್ನಡೆ ಮಾತ್ರ” ಎನ್ನುತ್ತಾರೆ. ಕಳೆದ ಒಂದು ಶತಮಾನದಲ್ಲಾದ ಇಂತಹದೊಂದು “ಹಿನ್ನಡೆಗೆ” ಸೂಕ್ತ ಉದಾಹರಣೆಯೆಂದರೆ ಎರಡನೆಯ ಮಹಾಯುದ್ಧ. ಹಿಟ್ಲರ್‌ನ ನಾಜ಼ಿಸಂ, ಜಪಾನಿನ ಸಾಮ್ರಾಜ್ಯಶಾಹಿ ಹಸಿವು, ಅವಕ್ಕೆ ಪ್ರತಿಯಾಗಿ ಯೂರೋಪಿಯನ್ ರಾಷ್ಟ್ರಗಳು ಸುರಿಸಿದ ಬಾಂಬ್-ಬುಲೆಟ್ಟುಗಳ ಸುರಿಮಳೆ, ಕೊನೆಗೆ ಅಮೆರಿಕ ಸಿಡಿಸಿದ ಅಣುಬಾಂಬುಗಳು, ಇವೆಲ್ಲಾ ಜಗತ್ತಿಗೆ ನೀಡಿದ್ದು ಕೋಟ್ಯಂತರ ಸಾವುಗಳನ್ನು ಮಾತ್ರ. ಆದರೆ, ಆ ಭೀಕರ ಯುದ್ಧದ ಅಂತಿಮ ಫಲಿತಾಂಶವೇನಾಯಿತು? ಬ್ರಿಟನ್ ಮತ್ತು ಫ್ರಾನ್ಸ್ ನಂತಹ ವಸಾಹತುಶಾಹಿಗಳು ಹೈರಾಣಾದವು. ಅವುಗಳ ಮಿಲಿಟರಿ ಮತ್ತು ಆರ್ಥಿಕ ಶಕ್ತಿಗಳು ಕುಸಿದುಬಿದ್ದವು. ಇದರ ನೇರ ಪರಿಣಾಮವಾಗಿ ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾದ ೮೦ಕ್ಕೂ ಹೆಚ್ಚು ರಾಷ್ಟ್ರಗಳು ದಾಸ್ಯದ ಸಂಕೋಲೆಯಿಂದ ಮುಕ್ತಿ ಪಡೆದವು. ಹಿಟ್ಲರ್ ತಾನು ಇಡೀ ಜಗತ್ತನ್ನೇ ಆಳಬೇಕೆಂದು ಪ್ರಾರಂಭ ಮಾಡಿದ ಯುದ್ಧ, ಭಾರತದಂತಹ ಹಲವು ದೇಶಗಳು ಸ್ವಾತಂತ್ರ್ಯ ಪಡೆಯುವಲ್ಲಿ ಕ್ಯಾಟಲಿಸ್ಟ್‌ನಂತೆ (ವೇಗ ವರ್ಧಕದಂತೆ) ಕೆಲಸ ಮಾಡಿತು. ಆ ಯುದ್ಧದ ಬೀಭತ್ಸತೆಯಿಂದ ಬೆಚ್ಚಿಬಿದ್ದ ಜಗತ್ತು ಒಟ್ಟಾಗಿ ವಿಶ್ವಸಂಸ್ಥೆಯೂ ಸೇರಿದಂತೆ ಹಲವಾರು ಜಾಗತಿಕ ಸಂಘಟನೆಗಳ ಸ್ಥಾಪನೆಗೆ ಮುಂದಾಯಿತು. ಈ ಸಂಸ್ಥೆಗಳು ತಮ್ಮ ಉದ್ದೇಶಗಳಲ್ಲಿ ಪೂರ್ಣ ಯಶ ಕಂಡಿಲ್ಲವೆನ್ನುವುದು ಸತ್ಯವಾದರೂ — ಇಂದು ನಡೆಯುತ್ತಿರುವ ಸಂಘರ್ಷವೇ ವಿಶ್ವಸಂಸ್ಥೆಯ ಅಂತಹ ವೈಫಲ್ಯಕ್ಕೊಂದು ಉದಾಹರಣೆ — ಅವುಗಳ ಪ್ರಯತ್ನಗಳ ಫಲವಾಗಿ ಜಗತ್ತು ಹೆಚ್ಚಿನ ಶಾಂತಿಯನ್ನು ಕಂಡಿರುವುದೂ ನಿಜ.
ಇಂದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ, ನಾಲ್ಕು ಕೋಟಿ ಜನ ಸಂಖ್ಯೆ ಇದ್ದರೂ ತಮ್ಮದೆನ್ನುವ ಒಂದು ನಾಡಿಲ್ಲದೆ ಹರಿದು-ಹಂಚಿ ಹೋಗಿರುವ ಕುರ್ದ್‌ರಿಗೆ ಸ್ವತಂತ್ರ ಕುರ್ದಿಸ್ತಾನದ ಅಂತಹದೊಂದು ಆಶಾವಾದದ ಕನಸಿಗೆ ಕಾರಣವಾಗುತ್ತಿದೆ. ಆದರೆ, ಇದು ಜಾಗತಿಕ ಸಂಘರ್ಷವೊಂದು ಕೇವಲ ಯಾರೋ ಕುರ್ದರಿಗೆ ಮಾತ್ರ ಅನುಕೂಲವಾಗುವ ವಿಷಯವಲ್ಲ; ಇಂದಿನ ಸಂಘರ್ಷದಿಂದ ಭಾರತವೂ ಸೇರಿದಂತೆ ಇಡೀ ಜಗತ್ತಿಗೇ ಒಳಿತಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಭಾರತಕ್ಕೆ ಇರಾನ್ ಎನ್ನುವುದು ಕೇವಲ ತೈಲ ಪೂರೈಸುವ ದೇಶವಲ್ಲ; ಅದು ಮಧ್ಯ ಏಷ್ಯಾಗೆ ತೆರೆಯುವ ನಮ್ಮ ಪಾಲಿನ ‘ಮಹಾದ್ವಾರ’. ಇರಾನಿನ ಮೇಲೆ ನಡೆಯುತ್ತಿರುವ ದಾಳಿಯ ಫಲವಾಗಿ, ಅಲ್ಲಿನ ಧರ್ಮಾಂಧ ಸರ್ಕಾರ ಉರುಳಿ, ಅಲ್ಲಿನ ‘ಮಹಿಳೆ, ಜೀವನ, ಸ್ವಾತಂತ್ರ್ಯ’ (Women, Life, Freedom) ಚಳವಳಿಗೆ ಯಶ ಸಿಕ್ಕು ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವ ಸರ್ಕಾರವೊಂದು ಅಲ್ಲಿ ಸ್ಥಾಪಿತವಾದರೆ, ಅದು ಭಾರತಕ್ಕೂ ರಾಜತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಫಲಪ್ರದ ಬೆಳವಣಿಗೆಯೇ ಎನ್ನಬಹುದು. ಇರಾನ್‌ನಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಕ್ಕು, ಅಲ್ಲಿನ ಸಮಾಜವು ಆಧುನಿಕ ಮತ್ತು ಉದಾರವಾದಿ ಪ್ರಜಾಪ್ರಭುತ್ವದತ್ತ ಸರಿದರೆ, ಅದರಿಂದ ದೊರೆಯುವ ಸ್ಥಿರತೆ ಮತ್ತು ಮೃದು ಶಕ್ತಿ (Soft Powe) ಇಡೀ ಮಧ್ಯಪ್ರಾಚ್ಯದ ‘ಮೂಲಭೂತವಾದ’ದ ಅಲೆಗೆ ತಡೆಗೋಡೆಯಾಗಿ ಕೆಲಸ ಮಾಡುವ ಸಾಧ್ಯತೆ ಇದೆ.
ಭಾರತದಂತಹ ವೈವಿಧ್ಯಮಯ ದೇಶಕ್ಕೆ ತನ್ನ ನೆರೆಹೊರೆಯಲ್ಲಿ ಉದಾರವಾದಿ ರಾಷ್ಟ್ರಗಳಿರುವುದು ಸುರಕ್ಷತೆಯ ದೃಷ್ಟಿಯಿಂದ ಅತಿ ಅಗತ್ಯ. ಮಹಿಳಾ ಸಬಲೀಕರಣಗೊಂಡ ಇರಾನ್, ಆಂತರಿಕವಾಗಿ ಹೆಚ್ಚು ಸ್ಥಿರವಾದರೆ, ಇದು ಭಾರತದ ಹೂಡಿಕೆಗಳಿಗೆ ಭದ್ರತೆ ನೀಡುತ್ತದೆ. ಪ್ರಸ್ತುತ ಇರಾನ್ ಮೇಲಿರುವ ಅಂತಾರಾಷ್ಟ್ರೀಯ ನಿರ್ಬಂಧಗಳಿಂದಾಗಿ ಭಾರತದ ಚಾಬಹಾರ್ ಬಂದರು ಮತ್ತು ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಯೋಜನೆಗಳು ಕುಂಟುತ್ತಾ ಸಾಗಿವೆ. ಇರಾನ್‌ನಲ್ಲಿ ಜನಪರ ಮತ್ತು ಮುಕ್ತ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಅದರ ಮೇಲಿರುವ ಇಂದಿನ ಜಾಗತಿಕ ನಿರ್ಬಂಧಗಳು ತೆರವಾಗಿ ಹೆಚ್ಚಿನ ವ್ಯಾಪಾರ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತದೆ. ಮಹಿಳಾ ಸ್ವಾತಂತ್ರ್ಯವನ್ನು ಗೌರವಿಸುವ ಉದಾರ ಇರಾನ್ ಎಂದರೆ ಅದು ಜಾಗತಿಕ ಸಮುದಾಯದೊಂದಿಗೆ ಮುಕ್ತವಾಗಿ ವ್ಯವಹರಿಸುವ ಇರಾನ್ ಎಂದೇ ಅರ್ಥ. ಭಾರತಕ್ಕೆ ಅಗ್ಗದ ದರದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯಾಗುವುದಷ್ಟೇ ಅಲ್ಲದೆ, ಭಾರತದ ಐಟಿ, ಕೃಷಿ ಮತ್ತು ಔಷಧಿಯ ಉತ್ಪನ್ನಗಳಿಗೆ ಇರಾನ್ ಒಂದು ಬೃಹತ್ ಮಾರುಕಟ್ಟೆಯಾಗಿ ತೆರೆದುಕೊಳ್ಳುತ್ತದೆ. ಭಾರತದ ಸಂಸ್ಕ ತಿಯೊಂದಿಗೆ ಐತಿಹಾಸಿಕ ನಂಟಿರುವ ಪರ್ಷಿಯನ್ ಸಮಾಜವು ಮುಕ್ತಗೊಂಡರೆ, ಅದು ಭಾರತದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ (Geopolitica) ಗೆಲುವೂ ಹೌದು. ಅಷ್ಟೇ ಅಲ್ಲದೆ, ಇರಾನಿನಲ್ಲಿ ಧರ್ಮಾಂಧ ಸರ್ಕಾರದ ಅಳಿವು ಮೇಲ್ನೋಟಕ್ಕೆ ಅಮೆರಿಕನ್ ಶಕ್ತಿಯ ಗೆಲುವೆಂದೇ ಕಂಡರೂ, ವಾಸ್ತವದಲ್ಲಿ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಶಾಂತಿ-ಸಹಕಾರಗಳು ಹೆಚ್ಚಾದಷ್ಟೂ ಆ ದೊಡ್ಡಣ್ಣನ ಮೇಲಿನ ಅವಲಂಬನೆ ಕಡಿಮೆಯಾಗಿ ಅಲ್ಲಿನ ರಾಷ್ಟ್ರಗಳು ಅಮೆರಿಕನ್ ಅಽನತೆಯಿಂದ ಹೊರ ಬರಲೂ ಸಾಧ್ಯವಿದೆ. ಯುದ್ಧವು ಎಂದಿಗೂ ಮೊದಲ ಆಯ್ಕೆಯಾಗಬಾರದು. ಆದರೆ ಇತಿಹಾಸವು ತೋರಿಸಿಕೊಟ್ಟಿರುವಂತೆ, ಹಳೆಯ ಮತ್ತು ತುಕ್ಕು ಹಿಡಿದ ರಾಜತಾಂತ್ರಿಕ ಸಂಬಂಧಗಳನ್ನು ಕಿತ್ತೊಗೆಯಲು ಇಂತಹ ಬಿಕ್ಕಟ್ಟುಗಳು ಅವಕಾಶಗಳನ್ನೊದಗಿಸುತ್ತವೆ. ಸ್ಟೀವನ್ ಪಿಂಕರ್ ಹೇಳುವಂತೆ, ಮನುಷ್ಯನು ತನ್ನ ತಪ್ಪುಗಳಿಂದ ಕಲಿಯುತ್ತಾ ಮುನ್ನಡೆಯುವ ಜೀವಿ. ಕತ್ತಲೆ ದಟ್ಟವಾದಷ್ಟೂ ಸೂರ್ಯೋದಯ ಹತ್ತಿರವಿದೆ ಎಂದೇ ಅರ್ಥ. ಮುಕ್ತ ಇರಾನ್ ಎಂದರೆ ಅದು ಕೇವಲ ಆ ದೇಶದ ಜನರ ಗೆಲುವಲ್ಲ, ಬದಲಿಗೆ ಭಾರತದಂತಹ ನೆರೆಯ ರಾಷ್ಟ್ರಗಳ ಸಮೃದ್ಧಿಯ ಹಾದಿಯೂ ಹೌದು.
೨೦೨೬ರ ಈ ರಕ್ತಪಾತವು ಇರಾನ್‌ನ ಜನರಿಗೆ ಅವರದ್ದೇ ಆದ — ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ — ಪ್ರಜಾಪ್ರಭುತ್ವವನ್ನು ಕಟ್ಟಿಕೊಳ್ಳುವ ಅವಕಾಶವಾಗಿ ಮಾರ್ಪಾಡಾಗಬಲ್ಲದೇ? ಈ ಭೀಕರ ಸಂಘರ್ಷದ ಅಂತ್ಯವು ಜಗತ್ತಿನ ಹೊಸದೊಂದು ‘ದೀರ್ಘ ಶಾಂತಿ’ಯ ಆರಂಭವೇ?
” ಲೆಕ್ಕವಿಲ್ಲದಷ್ಟು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಯುದ್ಧ-ಸಂಘರ್ಷಗಳಂತಹ ಅಮಾನುಷ ದುರಂತಗಳ ಬೆನ್ನಲ್ಲೇ ಜಗತ್ತು ಹೊಸದೊಂದು ಶಾಂತಿ ಮತ್ತು ಸ್ವಾತಂತ್ರ್ಯದ ಯುಗಕ್ಕೆ ಕಾಲಿಟ್ಟಿರುತ್ತದೆ.”




