- ಸಿರಿ ಮೈಸೂರು
ʼಅಯ್ಯಾ… ಪಿಚ್ಚರ್ ಲವ್ ಸ್ಟೋರಿಲಿ ಏನದೆ ಏಳಿ. ಅದ್ಕಿಂತ ನಿಜ್ವಾದ್ ಲವ್ ಸ್ಟೋರಿನೇ ಚಂದ. ಜೀವ್ನದಲ್ಲಿ ಆಗೋ ಲವ್ ಸ್ಟೋರಿನ ತೊಗೊಂಡಲ್ವಾ ಪಿಚ್ಚರ್ ಮಾಡದು?ʼ ಎನ್ನುತ್ತಾ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಿ ತಮ್ಮ ಪ್ರೇಮಕಥೆಯ ಬಗೆಗಿನ ಹಮ್ಮು-ಬಿಮ್ಮು ತೋರಿದವರು ಒಡಿಶಾದ ಸಂಜು
ಬಿಳಗಿರಿರಂಗನಬೆಟ್ಟದ ಸೋಮರಸನಕೆರೆುಂಲ್ಲಿ ನದಿಯೊಂದರ ಬಳಿ ಮೀನು ಹಿಡಿಯುತ್ತಾ, ಬದುಕನ್ನು ಬಿಚ್ಚಿಡುತ್ತಾ ಕುಳಿತ ದಂಪತಿ ಸಂಜು-ಗೀತಾರದ್ದು ಭರ್ತಿ ಇಪ್ಪತ್ತು ವರ್ಷಗಳ ಸ್ವಾರಸ್ಯ ತುಂಬಿದ ದಾಂಪತ್ಯ. ಒಡಿಶಾದ ಕಾಳಹಂದಿಯ ಸಂಜು ಇಲ್ಲಿಗೆ ಬಂದದ್ದು ಕೆಲಸಕ್ಕೆಂದು. ಅದೂ ಇಪ್ಪತ್ತು ವರ್ಷಗಳ ಹಿಂದೆ. ಇಲ್ಲಿಗೆ ಬಂದ ನಂತರ ಸೋಲಿಗರ ಗೀತಾಳನ್ನು ನೋಡಿ ಸಂಜು ಸೋತುಹೋಗಿದ್ದಾರೆ. ಪರಿಚಯ ಗೆಳೆತನವಾಗಿ ಗೆಳೆತನ ಪ್ರೀತಿಗೆ ತಿರುಗಿದೆ. ಆ ಪ್ರೀತಿಗೀಗ ಎರಡು ದಶಕಗಳೂ ತುಂಬಿವೆ. ಮೊದಲು ಹೀಗೆ ಚೊಕ್ಕವಾಗಿ ತಮ್ಮ ಕಥೆಯನ್ನು ಹೇಳಿದ ಈ ದಂಪತಿ ನಂತರ ವಿವರಣೆ ನೀಡಲು ಆರಂಭಿಸಿದರು.
ಆಗಿನ್ನೂ ಸಂಜುಗೆ ಇಪ್ಪತ್ತು ವಯಸ್ಸು, ಗೀತಾರಿಗೆ ಕೇವಲ ಹದಿನೆಂಟು ವರ್ಷ. ದೂರದ ರಾಜ್ಯದಿಂದ ಇಲ್ಲಿಗೆ ಕೆಲಸಕ್ಕೆಂದೇ ಬಂದಿದ್ದ ಸಂಜುಗೆ ಗೀತಾರನ್ನು ನೋಡಿ ಪರಿಚಯ ಮಾಡಿಕೊಳ್ಳುವ ಮನಸ್ಸಾಗಿದೆ. ಪರಿಚಯ ಕಾಲಕಳೆದಂತೆ ಪ್ರೀತಿಗೆ ತಿರುಗಿದೆ. ʼನೋಡಿದ ತಕ್ಷಣ ಒಬ್ಬರಿಗೊಬ್ಬರ ಮೇಲೆ ಪ್ರೀತಿ ಆಗಿಹೋಯಿತಾ?ʼ ಎಂದು ಕೇಳಿದರೆ ಇಬ್ಬರೂ ʼಇಲ್ಲ…, ಎಂದು ನಾಚುತ್ತಲೇ ಉತ್ತರಿಸುತ್ತಾರೆ. ಪ್ರೀತಿಯಾಗುವ ಮುನ್ನ ಇಬ್ಬರೂ ಒಬ್ಬರೊಟ್ಟಿಗೊಬ್ಬರು ಓಡಾಡುತ್ತಿದ್ದರಂತೆ, ಸಿನಿಮಾ ನೋಡುತ್ತಿದ್ದರಂತೆ, ಮನೆಯವರಿಗೆ ತಿಳಿಯದಂತೆ ಭೇಟಿಯಾಗುತ್ತಿದ್ದರಂತೆ. ಇಷ್ಟೆಲ್ಲಾ ಅರ್ಥಮಾಡಿಕೊಳ್ಳದೆ ಪ್ರೀತಿ ಇಷ್ಟುಕಾಲ ಉಳಿಯಲು ಸಾಧ್ಯವೇ?
ಹಾಗೆಂದ ಮಾತ್ರಕ್ಕೆ ಇಬ್ಬರ ಪ್ರೇಮದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಂಡರು. ಅನಂತರ ಮದುವೆಯಾಗಲು ನಿರ್ಧರಿಸಿದರು. ಆದರೆ ಅದಕ್ಕೆ ಮನೆಯವರ ಒಪ್ಪಿಗೆಯೂ ಬೇಕಲ್ಲವೇ? ಆಗ ಆರಂಭವಾದದ್ದು ಸಮಸ್ಯೆ. ಗೀತಾರ ಕುಟುಂಬದಲ್ಲಿ ಅಂತರ್ಜಾತಿ ವಿವಾಹಕ್ಕೆ ಅವಕಾಶ ಇರಲಿಲ್ಲ. ಅಷ್ಟು ಸಾಲದೆಂಬಂತೆ ಸಂಜು ದೂರದ ಊರಿನವರು. ʼನಾನು ಇವನನ್ನೇ ಮದುವೆಯಾಗಬೇಕು ಅಂದುಕೊಂಡಿದ್ದೇನೆ ʼ ಎಂದು ಗೀತಾ ಹೇಳಿದಾಗ ಮನೆಯಲ್ಲಿ, ಊರಲ್ಲಿ ಸಿಟ್ಟಿನ ಸುನಾಮಿಯೇ ಎದ್ದಿತ್ತು. ʼಅಂತರ್ಜಾತಿ ವಿವಾಹ ಆಗುವಂತಿಲ್ಲ. ಆಗಬೇಕಿದ್ದರೆ ಊರನ್ನು ಬಿಟ್ಟು ಹೋಗಬೇಕುʼ ಎಂದು ಊರಿನ ಹಿರಿಯರು ಫರ್ಮಾನು ಹೊರಡಿಸಿದರು. ಇಷ್ಟೆಲ್ಲಾ ಆದರೂ ಪ್ರೇಮಪಕ್ಷಿಗಳು ಮಾತ್ರ ಒಂದಿನಿತೂ ಧೃತಿಗೆಡಲಿಲ್ಲ.
ʼನೀ ಕೊಡೆ, ನಾ ಬಿಡೆʼ ಎಂಬಂತೆ ಊರಿನವರು ಹಾಗೂ ಇವರಿಬ್ಬರ ನಡುವೆ ಜಟಾಪಟಿ ನಡೆದೇ ಇತ್ತು. ಕೊನೆಗೊಂದು ದಿನ ಇಬ್ಬರನ್ನೂ ದೂರದ ಮಲೆ ಮಹದೇಶ್ವರಬೆಟ್ಟಕ್ಕೆ ಕಳುಹಿಸಲಾಯಿತು. ಒಂದಾಗಿಯೇ ಊರು ಬಿಟ್ಟು ಬಂದ ಜೋಡಿ ಕೂಡಲೆ ಸಾಮೂಹಿಕ ವಿವಾಹವಾದರು. ಆಗ ಶುರುವಾದ ಇವರ ಸುಂದರ ದಾಂಪತ್ಯಕ್ಕೀಗ ಇಪ್ಪತ್ತರ ಹರೆಯ ಮೊದ್ಲೆಲ್ಲಾ ಭಾಷೆ ಸಮಸ್ಯೆ ಇದ್ದೇ ಇತ್ತು. ಆದ್ರೆ ಹೋಗ್ತಾ ಹೋಗ್ತಾ ನಾನು ಒಡಿಯಾ ಸ್ವಲ್ಪ ಕಲ್ತಿದ್ದೀನಿ, ಇವ್ರು ಕನ್ನಡ ಕಲ್ತಿದಾರೆ. ಇವರನ್ನ ಮದ್ವೆ ಆಗೋವಾಗ ಇವರ ಅಣ್ಣ ನಮ್ಮೂರಿಗೆ ಬಂದಿದ್ರು. ನನ್ನ ನೋಡ್ಕೊಂಡು ಹೋಗಿದ್ರು. ನಮ್ಮನೇಲಿ ಆದಷ್ಟ್ ತೊಂದ್ರೆ ಅವ್ರ ಮನೇಲಿ ಆಗ್ಲಿಲ್ಲ ಎನ್ನುತ್ತಾ ತಮ್ಮ ಮದುವೆಯ ದಿನಗಳನ್ನು ಮೆಲುಕು ಹಾಕುತ್ತಾರೆ ಗೀತಾ.
ಮದುವೆಯ ಸಮುಂದಲ್ಲಿ ಗಲಾಟೆ ಆದಾಗ ಇಬ್ಬರಿಗೂ ಪ್ರೀತಿಯನ್ನು ಬಿಟ್ಟುಬಿಡಬೇಕು ಎನಿಸಲಿಲ್ಲವೇ? ಎಂಬ ಪ್ರಶ್ನೆಗೆ ಸಂಜು ಮುಗುಳುನಗೆಯೊಂದಿಗೆ ಇಲ್ಲ ಎಂಬಂತೆ ತಲೆಯಾಡಿಸಿದರೆ ಗೀತಾ, ಅವ್ರು ಅಷ್ಟ್ ದೂರದ ಊರಿಂದ ಬಂದು ನನ್ನ ಇಷ್ಟಪಟ್ಟೋರು. ಮನ್ಯೋರು ಒಪ್ಕಂಡಿಲ್ಲ ಅಂತ ಬುಟ್ಬುಡಕ್ಕಾಯ್ತುದಾ! ಎನ್ನುತ್ತಲೇ ತಮ್ಮ ಪ್ರೀತಿಯ ತೀವ್ರತೆಯನ್ನು ತೆರೆದಿಡುತ್ತಾರೆ. ಈಗ ಇವರಿಬ್ಬರ ಮಕ್ಕಳು ಕೆಲಕಾಲ ಒಡಿಶಾದಲ್ಲಿದ್ದಾರೆ. ಅಲ್ಲಿಯ ಭಾಷೆ, ಸಂಸ್ಕೃತಿಯನ್ನೂ ಕಲಿಯುವ ಸಲುವಾಗಿ ಮಕ್ಕಳನ್ನು ಅಲ್ಲಿಗೆ ಕಳುಹಿಸಿದ್ದಾರೆ. ಒಡಿಶಾದಲ್ಲಿ ಸಂಜುರದ್ದು ಆದಿವಾಸಿಗಳ ಕುಟುಂಬ. ಇವರಿಬ್ಬರ ಮಧ್ಯೆ ಇದ್ದದ್ದು ಅದೊಂದೇ ಸಾಮಾನ್ಯ ಸಂಗತಿ. ಭಾಷೆ, ಸಂಸ್ಕೃತಿ, ಊರು, ಹಿನ್ನೆಲೆ ಸೇರಿದಂತೆ ಎಲ್ಲವೂ ವಿಭಿನ್ನ. ಆದರೂ ಅವೆಲ್ಲವನ್ನೂ ಮೀರಿ ಇಬ್ಬರೂ ಒಂದಾದರೆಂಬುದು ಸಂತಸದ ಸಂಗತಿ.
ಒಟ್ಟಾರೆ ಭಾರತದ ವಿವಿಧ ಭಾಗಗಳಲ್ಲಿರುವ ಆದಿವಾಸಿಗಳಲ್ಲೆರದ್ದೂ ಒಬ್ಬರಿಗಿಂತ ಒಬ್ಬರದ್ದು ಒಂದು ರೀತಿಯಲ್ಲಿ ವಿಭಿನ್ನ ಜೀವನ. ಸಾಮಾಜಿಕ ಕಟ್ಟುಪಾಡುಗಳು, ಮಾನವ ನಿರ್ಮಿತ ನೀತಿ-ನಿಯಮಗಳು, ಪಾಲಿಸಲೇಬೇಕಾದ ಸಂಪ್ರದಾಯಗಳನ್ನು ಮೀರಿ ಬದುಕುವ ಅವರು ನಮ್ಮೆಲ್ಲರಿಗಿಂತ ಬಹಳ ಭಿನ್ನವಾಗಿ ಕಾಣುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ಬದುಕಿನಲ್ಲಿ ಕಟ್ಟುಪಾಡುಗಳಿಲ್ಲ ಎಂದರೆ ತಪ್ಪಾಗುತ್ತದೆ. ಅವರ ಸವಾಜದಲ್ಲೂ ಬದುಕಲು ಇಂತಹದ್ದೇ ಎಂಬ ರೀತಿ-ನೀತಿಗಳಿವೆ. ಆದರೆ ಅವೆಲ್ಲವನ್ನೂ ಮೀರಿ ತಮಗೆ ಬೇಕಾದ ಬದುಕನ್ನು ಆರಿಸಿಕೊಳ್ಳುವ ಅಥವಾ ರೂಪಿಸಿಕೊಳ್ಳುವ ಛಲ ಅವರಲ್ಲಿದೆ. ನನಗೆ ಇಂತಹದ್ದೇ ಬದುಕು ಬೇಕು ಎಂದು ನಿರ್ಧರಿಸಿದರೆ ಅವರು ಅದನ್ನು ಪಡೆದೇ ತೀರುತ್ತಾರೆ ಎಂಬುದು ಶತಃಸಿದ್ಧ. ನಾವು ಹೀಗೆ ಮಾಡಿದರೆ ನಾಲ್ಕು ಜನ ಏನಂದುಕೊಳ್ತಾರೆ ಎಂಬ ಮನೋಭಾವ ಅವರಲ್ಲಿಲ್ಲ.
ಇನ್ನು ಅವರಿಗೆ ಸಿಗುವ ಮೂಲಸೌಕರ್ಯಗಳು, ಸೌಲಭ್ಯಗಳ ವಿಷಯಕ್ಕೆ ಬರುವುದಾದರೆ, ಇಲ್ಲಿ ನಮ್ಗೆಲ್ಲಾ ಸರ್ಕಾರ್ದೋರು ಎಲ್ಲ ಕೊಟ್ಟವ್ರೆ. ನಾವೆಲ್ಲಾ ಚೆಂದಾಗೇ ಇದ್ದೀವಿ. ಆದ್ರೆ ನಮ್ ಮನೆಯೋರ್ ಊರಲ್ಲಿ ಇನ್ನೂ ಕಷ್ಟಾನೆ. ಅದ್ಕೇ ನಾವು ಅಲ್ಲಿಂದ ಇಲ್ಲೇ ಬಂದು ಕೆಲ್ಸ ಮಾಡ್ತಿದೀವಿ ಎನ್ನುತ್ತಾರೆ ಗೀತಾ. ಆದಿವಾಸಿಗಳಿಗೆ ಒಂದೊಂದು ಸ್ಥಳಗಳಲ್ಲಿ ಒಂದೊಂದು ರೀತಿಯ ಸೌಕರ್ಯಗಳು ಸಿಗುತ್ತವೆ. ತಮಗೆ ಸಿಕ್ಕಿರುವ ಸೌಕರ್ಯಗಳ ಬಗ್ಗೆ ಗೀತಾ, ಸಂಜು ಇಬ್ಬರೂ ಖುಷಿಯಿಂದಿದ್ದಾರೆ. ಆದಿವಾಸಿಗಳ ಬದುಕಲ್ಲಿ ಮೊಗ್ಗಾಗಿ ಜನ್ಮಪಡೆದಿದ್ದ ಪ್ರೇಮಪುಷ್ಟ ಈಗ ಹೂವಾಗಿ ಅರಳಿ ಕಂಪು ಬೀರುತ್ತಿದೆ. ನಾಗರಿಕ ಜೀವನ, ಆಧುನಿಕ ಸಮಾಜದಲ್ಲಿ ಬದುಕುವ ಜನರು ಪ್ರೀತಿಯಂತಹ ಸಾಮಾನ್ಯ, ವೈಯಕ್ತಿಕ ಹಾಗೂ ಅತ್ಯವಶ್ಯ ಸಂಗತಿಯನ್ನು ತಮ್ಮಿಚ್ಛೆುಯಂತೆ ಆರಿಸಿಕೊಳ್ಳಲು ಹೆಣಗುವ ಈ ದಿನಗಳಲ್ಲಿ ನಾಡಿನಿಂದ ದೂರ ಉಳಿದಿರುವ ಆದಿವಾಸಿಗಳ ಬದುಕು ಸ್ವತಂತ್ರವಾಗಿ, ಸ್ವಚ್ಛಂದವಾಗಿ ಭಾಸವಾಗುವುದು ಸುಳ್ಳಲ್ಲ.