Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಾಡುಪಾಡು: ವೃತ್ತ

ಸುರೇಶ ಕಂಜರ್ಪಣೆ
ಚನ್ನರಾಜುಗೆ ತಾನು ಈ ಯುವ ಸಂಘಟನೆಗೆ ಬಂದಿದ್ದರ ಬಗ್ಗೆ ತುಂಬಾ ಹೆಮ್ಮೆ. ಉಳಿದವರಿಗಿಂತ ತಾನು ಎಷ್ಟು ಸ್ಪೆಷಲ್ ಎಂಬುದಕ್ಕೆ ಇದು ಪುರಾವೆಯಾಗಿ ಅವನಿಗೆ ಇನ್ನಷ್ಟು ಪುಳಕ ನೀಡುತ್ತಿತ್ತು. ತನ್ನ ಸಹಪಾಠಿಗಳ ಪೈಕಿ ಪೇಪರಲ್ಲಿ ತನ್ನ ಫೋಟೊ, ಸುದ್ದಿ ಬಂದಿದ್ದು ಕಾಲೇಜಲ್ಲಿ ಎಲ್ಲರೂ ಅವನೆಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಕಾಲೇಜಿನ ಪ್ರಿನ್ಸಿಪಾಲರು ಕರೆದು, “ಪರ್ವಾಗಿಲ್ಲ ಕಣಯ್ಯಾ, ನಮ್ ಫೋಟೋನೇ ಬರಲ್ಲ, ನೀನು ಪರವಾಗಿಲ್ಲ. ನೋಡ್ದೆ. ಗುಡ್, ಪ್ರೊಟೆಸ್ಟ್ ಸಬ್ಜೆಕ್ಟ್ ಚೆನ್ನಾಗಿದೆ. ಬಟ್ ಚೆನ್ನಾಗಿ ಓದೋದು ಮರಿಬೇಡ? ” ಎಂದು, “ನೋಡಪ್ಪಾ, ಒಂದು ಹದದಲ್ಲಿ ಇರ್ಲಿ, ನಾಳೆ ಪೊಲೀಸ್ ಕೇಸು ಅದೂ ಇದೂ ಅಂತ ಮೈ ಮೇಲೆ ಬಿದ್ರೆ ಕಷ್ಟ ಕಣಪ್ಪಾ” ಎಂದಿದ್ದರು. ಅವರ ಅಭಿಮಾನ ಭರಿತ ಎಚ್ಚರಿಕೆಗೆ ಚೆನ್ನರಾಜು ಪುಳಕಿತಗೊಂಡಿದ್ದ.

ಹೊರಗೆ ಬಂದಾಗ ಪ್ರಿನ್ಸಿಪಾಲರು ಕ್ಯಾರಿಯರ್ ಅಂತ ವ್ಯವಸ್ಥೆಯೊಳಗೆ ಬಂದಿಯಾಗಿ ಕೂತಿರುವ ಅವರ ಅಸಹಾಯಕತೆಗೆ ಅನುಕಂಪವೂ ಬಂದಿತ್ತು.

ಸುತ್ತ ಎಲ್ಲಿ ನೋಡಿದರೂ ಇದೇ ರೀತಿಯ ಹಿರಿಯರು ಅವನಿಗೆ ಕಾಣಿಸಿ ಪಿಚ್ಚೆನ್ನಿಸಿತ್ತು. ಬದಲಾವಣೆಗೆ, ವ್ಯವಸ್ಥೆಯನ್ನೇ ಬದಲು ಮಾಡಲು ತನ್ನಂಥಾ ಯುವಕರು ಮತ್ತು ತನ್ನನ್ನೀಗ ಮುನ್ನಡೆಸುತ್ತಿರುವ ನಾಯಕರು ಬಿಟ್ಟರೆ ಬೇರೆ ಯಾರೂ ಇಲ್ಲ ಅನ್ನಿಸಿತು. ವ್ಯವಸ್ಥೆಗೆ ಸವಾಲು ಹಾಕುತ್ತಿರುವವರು ಈ ವ್ಯವಸ್ಥೆಯ ಗಾಣಕ್ಕೆ ಸಿಕ್ಕಿ ದುಡಿಯುತ್ತಿರುವ ಉದ್ಯೋಗಿಗಳಲ್ಲ; ಅವರೆಲ್ಲಾ ಸಾಂಸಾರಿಕ, ವೈಯಕ್ತಿಕ ಕಾರಣಕ್ಕೆ ಈ ನೊಗಕ್ಕೆ ಒಪ್ಪಿಸಿಕೊಂಡು ಕೂತಿದ್ದಾರೆ. ಹೆಚ್ಚೆಂದರೆ ಅನಧಿಕೃತವಾಗಿ ಅಭಿಪ್ರಾಯ ಹೇಳುವವರಷ್ಟೇ. ಇದರಿಂದ ಹೊರಗಿರುವ ರಾಜಕಾರಣಿಗಳು, ಅವರ ಅಪವಿತ್ರ ಮೈತ್ರಿಯ ಭಾಗವಾಗಿರುವ ಗುತ್ತಿಗೆದಾರರು ವ್ಯವಸ್ಥೆಗೇ ಕನ್ನ ಹಾಕುತ್ತಿದ್ದಾರೆ. ಆದರೆ ಇದೇ ರೀತಿ ವ್ಯವಸ್ಥೆಯ ಒಳಗೆ ಸಿಕ್ಕಿಕೊಳ್ಳದೇ ಇರುವ ರೈತರು, ಕೂಲಿ ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಅವರು ಸಂಘಟಿತರಾದರೆ ಅವರ ಸುನಾಮಿ ಎದುರು ಈ ಗೆದ್ದಲುಗಳು ಕೊಚ್ಚಿ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಸಂಘಟನೆಯ ನಾಯಕ ಸರ್ದಾರ್ ಹೇಳಿದ್ದು, ಚನ್ನರಾಜು ಕಿವಿಯಲ್ಲಿ ಗುನುಗಿ, ಬಾಯಲ್ಲಿ ನಿತ್ಯಪಠಣದ ಶ್ಲೋಕದ ಹಾಗೆ ಬಾಯಿಪಾಠವಾಗಿತ್ತು.

ತಾನು ಸಂಘಟನೆಯೊಂದಿಗೆ ಹೆಚ್ಚು ಹೆಚ್ಚು ಗುರುತಿಸಿಕೊಂಡು ಓಡಾಡಲು ಶುರು ಮಾಡಿದ ಮೇಲೆ ಮನೆಯಲ್ಲಿ, ಊರಲ್ಲಿ ತನ್ನ ಬಗ್ಗೆ ನಿಲುವು ಬದಲಾಗಿದ್ದನ್ನು ಚನ್ನರಾಜು ಗಮನಿಸಿದ್ದ.

ಅವನ ಅಪ್ಪ ಅಮ್ಮ ಪೂರಾ ಗೊಂದಲದಲ್ಲಿದ್ದರು. ಆಕ್ಷೇಪ ಹೇಳೋಣ ಅಂದರೆ ಯಾವ ಚಟವೂ ಇಲ್ಲ, ದೂರೂ ಇಲ್ಲ. ಅವನ ಗೆಳೆಯರು ಆಗೀಗ ಮನೆಗೆ ಬರುತ್ತಿದ್ದರು. ಅವರು ಮನೆಯಲ್ಲಿ ಅವನಿಗಿಂತಲೂ ಕಾಳಜಿಯಲ್ಲಿ ತಮ್ಮನ್ನು ಮಾತಾಡಿಸುವುದು ಕಂಡು ಬೆಪ್ಪುಗಟ್ಟಿದ್ದರು. ಉಂಡರೆ ತಟ್ಟೆ ತೊಳೆದು ಹೋಗದ ಗೆಳೆಯರೇ ಇರಲಿಲ್ಲ. ಆಮೇಲೆ, ಮನೆಯ ಹೊರಗಿನ ಕಟ್ಟೆಯಲ್ಲಿ ಅದೇನೋ ಗುಸುಗುಸು ಧಾಟಿಯಲ್ಲಿ ಗಂಭೀರ ಚರ್ಚೆ ಮಾಡುತ್ತಿದ್ದರೇ ವಿನಾ ಅಹಹಾ ಎಂಬ ಗಲಾಟೆ ಇರಲೇ ಇಲ್ಲ. ಚನ್ನರಾಜು ತಂಗಿ ಪಿಯುಸಿ ಓದುತ್ತಿದ್ದವಳು ಹಾಗೆ ತೇಲಿ ಒಳಗೆ ಹೋಗಿ ಹೀಗೆ ಹೊರಗೆ ಹೋದರೂ, ಯಾವೊಬ್ಬನೂ ಅವಳ ಬಗ್ಗೆ ಚೆಂಗಲು ಆಡಿದ್ದು ಅವರು ನೋಡಿರಲಿಲ್ಲ. ಈ ಪುಟ್ಟಿಗೇನಾದರೂ ಅವರಲ್ಲೊಬ್ಬನ ಬಗ್ಗೆ ಏನಾದರೂ ಹುಟ್ಟಿದೆಯಾ ಅಂದರೆ ಅದೂ ಗೋಚರಿಸಲಿಲ್ಲ. ಅಪ್ಪ ಅಮ್ಮನ ನಿಗರಾಣಿ ಇದರಿಂದ ಹೆಚ್ಚೇನು ಇರುತ್ತೆ?

ಮನೆಯಲ್ಲಿ ಚನ್ನರಾಜು ಪ್ರಾಸಂಗಿಕವಾಗಿ ಊರಿನ ಏನಾದರೂ ಆಗು ಹೋಗು ಬಗ್ಗೆ ಅಪ್ಪ-ಅಮ್ಮ ಮಾತಾಡಿದರೆ ತನ್ನ ಅಽಕೃತ ಅಭಿಪ್ರಾಯ ಮಂಡಿಸುವುದಿತ್ತು.

ಉದಾ: ಚೆಲುವೇಗೌಡರ ಮಗ ಗಾಣಿಗರ ಹುಡುಗಿಯನ್ನು ಇಷ್ಟಪಟ್ಟ ಗುಮಾನಿ ಬಂದು, “ಜಾತಿ ಪಾತಿ ಗ್ಯಾನ ಬೇಡ ಇವಂಗೆ, ಅದೇನೋ ಕುಣಿತಿದ್ರೆ ಎಲ್ಲಿ ನೆಂಪಾಗುತ್ತೆ ? ” ಎಂದು ಅಪ್ಪ ಹೇಳಿ ಅಮ್ಮನೂ ಅದಕ್ಕೆ ಕಬೂಲಿ ನೀಡಿದ್ದಳು. ಚನ್ನರಾಜು ಮಾತ್ರಾ, “ ಏನೀವಾಗ, ಜಾತಿ ಅಂತ ಯಾಕೆ ಸಾಯ್ತೀರಿ, ನಿಮಗೇನು ಕೊಪ್ಪರಿಗೆ ಕಾಸು ಬಂತೇ? ಕಿರೀಟ ಕೊಡ್ತೇ? ಮಡುಗಿದಲ್ಲಿ ಇರು ಅನ್ನಂಗೆ ಇರೋದಾದ್ರೆ ಜಾತಿ ಅಂತ ಯಾಕೆ ಸಾಯ್ತೀರಿ? ” ಎಂದು ಹೇಳಿ ಹೆತ್ತವರನ್ನು ಬೆಚ್ಚಿ ಬೀಳಿಸಿದ್ದ.

ಅದರ ತರ್ಕ ಸರಿ ಅನ್ನಿಸಿದರೂ ಮಗ ತನಗೆ ಬೆಂಬಲ ನೀಡಿಲ್ಲ ಎಂಬ ರೊಚ್ಚು ಅವನ ಅಪ್ಪನಲ್ಲಿ ಹೆಡೆಯಾಡುತ್ತಿತ್ತು. ಹೀಗೆ ಚನ್ನರಾಜು ಮಾತಾಡಿದರೂ ಅವನ ಅಪ್ಪನಿಗೆ ಮಗನ ಬಗ್ಗೆ ಅಪಾರ ಹೆಮ್ಮೆ ಇತ್ತು. ಊರಲ್ಲಿ ಡಜನ್ ಮಕ್ಳು ಕಾಲೇಜು ಓದ್ತಿದಾರೆ. ನಂದೂ ಅಂತ ಏನೋ ಮಾತಾಡೋನು ನನ್ನ ಮಗ ಮಾತ್ರಾ ಅಂತ ಅವನಿಗೆ ಹೆಮ್ಮೆ.

ಏನು ಓದುತ್ತಿದ್ದಾನೆ ಎಂಬ ಪೂರಾ ಜ್ಞಾನ ಇಲ್ಲದ ಕಾರಣ ಆರು ತಿಂಗಳಿಗೊಮ್ಮೆ, “ಮಗಾ ಎಕ್ಸಾಮಲ್ಲಿ ಹೆಂಗೆ ಮಾಡಿದೀ? ” ಎಂದು ಕೇಳುವರು. ಚನ್ನರಾಜು ನಕ್ಕು ತೆಗಳಪ್ಪಾ, ಮಾರ್ಕ್ಸ್ ಕಾರ್ಡು ಎಂದು ತೋರಿಸುವನು. ಅದನ್ನು ಓದಲಾರದೇ ಅವನ ಅಪ್ಪ, ಸೂಕ್ಷ್ಮವಾಗಿ ಮೂವತ್ತೈದಕ್ಕಿಂತ ಕಡಿಮೆ ಇದೆಯೇ ಎಂದು ನೋಡುತ್ತಿದ್ದ. ಸಣ್ಣ ಸ್ಕೂಲಲ್ಲಿ ಮೇಷ್ಟ್ರುಗಳು ಫೇಲಾದ ಸಬ್ಜೆಕ್ಟ್ ಕೆಳಗೆ ಕೆಂಪು ಗೆರೆ ಹಾಕುತ್ತಿದ್ದ ಕಾರಣ ತನ್ನಂಥೋರಿಗೆ ಮಕ್ಕಳ ಜುಟ್ಟು ಬಗ್ಗಿಸಿ ಬರಲು ಪುಡಿಯಾಗೋವರೆಗೂ ಬಡಿಯಲು ಸುಲಭ ಆಗೋದು. ಕಾಲೇಜು ಮೆಟ್ಲು ಹತ್ತಿದ ಮೇಲೆ ನಂಬಿಕೆ ಬಿಟ್ಟರೆ ಇನ್ನೇನು ಇರಲಿಲ್ಲ.

ಅಮ್ಮ ಮಾತ್ರಾ “ಎಕ್ಸಾಮ್ ಮುಗೀತು ಕಣವ್ವಾ” ಅಂದ ದಿನ ಮಾದಪ್ಪನಿಗೂ ಧರ್ಮಸ್ಥಳಕ್ಕೂ ಹರಕೆ ಕಟ್ಟುವಳು.

ಸಂಘಟನೆಯ ಕಳೆದ ಬಾರಿಯ ರಾಜ್ಯ ಸಮ್ಮೇಳನಕ್ಕೆ ಚನ್ನರಾಜು ಹೋಗಿದ್ದ. ಅಲ್ಲಿ ಸೇರಿದ್ದ ಯುವಸಮೂಹ ನೋಡಿ ಬೆರಗಾಗಿದ್ದ. ಏನಿಲ್ಲವೆಂದರೂ ಮೂರು ಸಾವಿರ ತನ್ನಂಥಾ ಯುವ ಪಡೆ. ಬ್ಯಾಡ್ಜ್ ಎದೆಗೆ ಸಿಕ್ಕಿಸಿ ಎರಡು ದಿನವೂ ತದೇಕ ಚಿತ್ತವಾಗಿ ಭಾಷಣ ಕೇಳಿದ್ದ. ನಿರ್ಣಯಗಳ ಕಾಪಿ ನೋಡಿ ಅಲ್ಲಲ್ಲಿ ಗುರುತು ಹಾಕಿಕೊಂಡಿದ್ದ. ಅಭಿಪ್ರಾಯ ಹೇಳಲು ಆ ಸಮಾವೇಶದಲ್ಲಿ ತಾನು ತೀರಾ ಚಿಕ್ಕವನು ಅನ್ನಿಸಿ ಹಿಂಜರಿದಿದ್ದ.

ಶಿಕ್ಷಣ, ಉದ್ಯೋಗ ನಮ್ಮ ಹಕ್ಕು. ಅದರ ಜೊತೆಗೇ ಅಲಕ್ಷಿತ, ಅಂಚಿಗೆ ಸರಿದ ದಮನಿತರ ಪರವಾಗಿ ಹೋರಾಡುವುದೂ ನಮ್ಮ ಕರ್ತವ್ಯ ಎಂದು ಕರೆ ಕೊಟ್ಟಿದ್ದು ಎದೆಯೊಳಗೆ ಇಳಿದಿತ್ತು. ಹಾಡುಗಳು ಎಷ್ಟು ಗುನುಗಿದರೂ, ತನ್ನ ಕಂಠ ಅಷ್ಟಕ್ಕಷ್ಟೇ ಎನ್ನಿಸಿ ಚನ್ನರಾಜು ಹಾಡಲು ಹೋಗುತ್ತಿರಲಿಲ್ಲ. ಅದರೆ ಸಂಘಟನೆಯ ನಾಯಕರು ಅವನನ್ನು ಗುರುತಿಸಿದ್ದು ಅವನಿಗೇ ಅಚ್ಚರಿ ತಂದಿತ್ತು. ಜಿಲ್ಲಾವಾರು ಸಮಿತಿ ಮಾಡುವಾಗ ಅವನನ್ನು ಕರೆದು, “ಚೆನ್ನರಾಜು, ನಿನ್ನನ್ನ ಡಿಸ್ಟ್ರಿಕ್ಟ್ ಸೆಕ್ರೆಟರಿ ಮಾಡ್ತೀವಪ್ಪಾ, ಮುಂದಿನ ಸಾರಿ ನಿಮ್ ಜಿಲ್ಲೇಲೇ ಸಮಾವೇಶ ಮಾಡಬೇಕು, ಅಷ್ಟು ಆರ್ಗನೈಜ್ ಮಾಡಬೇಕು. . . ” ಎಂದು ಬೆನ್ನು ತಟ್ಟಿ ಹುರಿದುಂಬಿಸಿದ್ದರು.

ಆ ವೇಳೆಗೆ ಡಿಗ್ರಿ ಮುಗಿದಿದ್ದ ಕಾರಣ ಚನ್ನರಾಜುವಿಗೂ ಅಕಾಡೆಮಿಕ್ ಒತ್ತಡ ಇರಲಿಲ್ಲ. “ಸಾರ್, ಡಿಸ್ಟ್ರಿಕ್ಟಲ್ಲಿ ಒಂದು ಮೀಟಿಂಗ್ ಆರ್ಗನೈಸ್ ಮಾಡ್ತೀವಿ ಸಾರ್, ನೀವು ಬಂದು ನೆಕ್ಸ್ಟ್ ಏನು, ಹೆಂಗೆ ಸಂಘಟಿಸೋದು ಅಂತ ಗೈಡ್ ಮಾಡಬೇಕು” ಎಂದು ಹೇಳಿ ಹೊಸ ಜವಾಬ್ದಾರಿಯೊಂದಿಗೆ ಊರಿಗೆ ಮರಳಿದ್ದ.

ಈಗಾಗಲೇ ಇದ್ದ ಪುಟ್ಟ ಆಫೀಸಲ್ಲಿ ಮಾರನೇ ದಿನ ಕೂತಾಗ ಽಗ್ಗನೆ ಮನೆ ನೆನಪಾಯಿತು. ಡಿಗ್ರಿ ಮುಗಿಸಿದ್ದ ಬಗ್ಗೆ ಅಪ್ಪ ಅಮ್ಮನಿಗೆ ಹೇಳಿದ್ದ. ಆಗಲೇ ತಂಗಿ ಡಿಗ್ರಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಳಷ್ಟೆ. ಅವಳ ಮದುವೆಗೆ ಪಿಯುಸಿಯಿಂದಲೇ ಹವಣಿಸುತ್ತಿದ್ದ ಅಪ್ಪ ಅಮ್ಮನನ್ನು ತಡೆದು ನಿಲ್ಲಿಸಿದ್ದೇ ಚನ್ನರಾಜುವಿನ ಪರಮ ಸಾಧನೆ.

“ಅವಳ ಡಿಗ್ರಿ ಮುಗಿಯೋವರೆಗೂ ಲಗ್ಣ ಅದೂ ಇದೂ ಅಂತ ಶುರು ಮಾಡಿದ್ರೆ ಗ್ಯಾರಂಟಿ ಗೂಸಾ ಬೀಳುತ್ತೆ. ಅಪ್ಪ-ಅಮ್ಮಂತಾನೂ ನೋಡಲ್ಲ” ಎಂದು ಚನ್ನರಾಜು ಗರ್ಜಿಸಿದ್ದ.

ಮನೆಗೆ ಬಂದ ಯಾರೋ ನೆಂಟರು, “ಎಷ್ಟು ಮುದ್ದಾಗವ್ಳೆ. ಪುಣ್ಯವೇ ಅಂತ ಲಗ್ಣ ಮಾಡ್ಕೊತಾರೆ” ಅಂತ ಇದನ್ನೇ ವಾರೆಯಾಗಿ ಹೇಳಿದಾಗ, ಚನ್ನರಾಜು, “ಸರಿಯಪ್ಪಾ, ಮದುವೆ ಖರ್ಚು ಮಡುಗ್ಲಿ ಅದರ ಮೇಲೆ ೨೫ ಲಕ್ಷ ರೂ. ಕೊಡ್ಲಿ, ಡಿಗ್ರಿ ಓದಿಸ್ತೀವಿ ಅಂತ ಸ್ಟಾಂಪ್ ಪೇಪರಲ್ಲಿ ಬರ್ಕೊಡ್ಲಿ ಎಂದು ತಾರಾಡಿದ್ದ. ಈ ಹೊಸ ಷರತ್ತುಗಳ ಪಟ್ಟಿ ನೋಡಿ ಆ ನೆಂಟರು ಬೆಪ್ಪು ಹಿಡಿದು ಹೋಗಿದ್ದರು. ಅದು ಹರಡಿದ ಕಾರಣ ಬೇರೆ ನೆಂಟರು ಯಾರೂ ಈ ಉಪದೇಶ ಕೊಡುವ ಧೈರ್ಯ ಮಾಡಲಿಲ್ಲ.

ಮೊನ್ನೆಯೇ ಅಪ್ಪ ಇದರ ಮುನ್ನುಡಿ ಬರೆದಿದ್ದ. ಎಲ್ಲಾದರೂ ಜಾಬ್‌ಗೆ ನೋಡಿದೀಯಾ? ಅಂತ ಸುಮ್ಮನೆ ಕೇಳಿದ್ದ. ತಂಗಿ ಇದ್ದವಳು ಇನ್ನೂ ರಿಜಲ್ಟ್ ಬಂದಿಲ್ಲಪ್ಪಾ, ರಿಜಲ್ಟ್ ಬಾರ್ದೇ ಅದೆಂಗೆ ಅಪ್ಲೈ ಮಾಡಾದು?ಅಂತ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ್ದಳು. ಇನ್ನು ಮೂರು ತಿಂಗಳು ಹೇಗೋ ಪರವಾಗಿಲ್ಲ. ಮತ್ತೆ. . ? ಒಂದೋ ಸಂಘಟನೆಗೆ ವರ್ಕ್ ಮಾಡ್ತಿದೀನಿ, ಜಾಬ್ ಗೀಬ್ ಸೇರಲ್ಲ ಅನ್ನಬೇಕು. ಇಲ್ಲಾ ಹೇಳದೇ ದಿನ ದೂಡಬೇಕು. ಹಂಗೆ ದಿನ ದೂಡಿದರೆ ಫೇಲಾಗವ್ನೆ ಮಗ ಅಂತ ಅಪ್ಪ-ಅಮ್ಮಂಗೆ ಗುಮಾನಿ ಬರುತ್ತೆ. . . ಮೊದಲ ಬಾರಿಗೆ ಚನ್ನರಾಜು ಒದ್ದಾಡಿದ್ದ.

ಆ ವೇಳೆಗೆ ಫ್ಯಾಸಿಸ್ಟ್ ಪಕ್ಷವನ್ನು ಸೋಲಿಸುವ ಹೊಸ ಸಿದ್ಧತೆಯೊಂದಿಗೆ ಕೆಲಸ ಮಾಡಬೇಕು ಎಂಬುದು ಲಕ್ಷ್ಯವಾಯಿತು. ಎಲ್ಲರೂ ನಿರ್ದಿಷ್ಟ ಪಕ್ಷಕ್ಕೆ ಗರಿಷ್ಟ ಕೆಲಸ ಮಾಡುವ ತೀರ್ಮಾನ ರಾಜ್ಯ ಮಟ್ಟದಲ್ಲೇ ಆಗಿದ್ದ ಕಾರಣ ಚನ್ನರಾಜೂ ಸತತವಾಗಿ ಸಭೆಗಳನ್ನು ಸಂಘಟಿಸಿದ್ದಾಯಿತು. ಆ ಸಭೆಗಳಿಗೆ ಮುಖ್ಯ ಪಕ್ಷದವರಾರೂ ಬಂದಿದ್ದು ಚನ್ನರಾಜುಗೆ ಕಾಣಿಸದೇ ಕಸಿವಿಸಿಯಾಯಿತು. ಒಮ್ಮೆ ಅದೇ ಕಚೇರಿಗೆ ಹೋದರೆ ಪಕ್ಷದ ಅಭ್ಯರ್ಥಿ, ಅವನೊಂದಿಗಿದ್ದ ಸ್ಥಳೀಯ ಮತ ಗಾಳದಾರರ ನಡುವೆ ಚನ್ನರಾಜುವನ್ನು ಯಾರೂ ಗುರುತಿಸಲಿಲ್ಲ. ಅಂತೂ ಅಭ್ಯರ್ಥಿ ಬಳಿ, “ಸಾರ್. . . ನಾವು ಹಿಂಗಿಂಗೆ ಕ್ಯಾಂಪೇನ್ ಮಾಡ್ತಿದೀವಿ. . . ನೀವು ಬರಬೇಕು” ಅಂತ ಹೇಳಿದ. ಅಭ್ಯರ್ಥಿ ಬಲು ನಾಜೂಕು ನಗೆಯಲ್ಲಿ, “ಪ್ರೋಗ್ರೆಸಿವ್ಸ್ ಎಲ್ಲಾ ನಮ್ ಜೊತೆಗಿದಾರೆ. ಅದೇ ಧೈರ್ಯ ನಮಗೆ, ಖರ್ಚಿಗೇನಾದರೂ ಬೇಕೇನಪ್ಪಾ? ” ಎಂದು ವ್ಯಾವಹಾರಿಕವಾಗಿ ಕೇಳಿ, ತನ್ನ ಸಹಾಯಕನಲ್ಲಿ ಅದೇನೋ ಕಿವಿಯಲ್ಲಿ ಹೇಳಿದ.

ಸಹಾಯಕ ಒಳಗೆ ಹೋಗಿ ಮತ್ತೆ ಹೊರ ಬಂದು ಚನ್ನರಾಜುನ ಹೆಗಲ ಮೇಲೆ ಕೈಹಾಕಿ ಹಾಗೇ ಹೊರಗೆ ಕರಕೊಂಡು ಬಂದು, “ಬ್ರದರ್, ಒಳ್ಳೆ ಕೆಲಸ, ಕ್ಯಾರಿ ಆನ್ ಮಾಡಿ, ಅಣ್ಣ ಒಸಿ ಕಾಸು ಕೊಟ್ಟವ್ರೆ, ನಿಮಗೂ ಖರ್ಚಿದೆ, ನಮ್ದೆಲ್ಲಾ ದೊಡ್ಡಾಟ. . . ” ಎಂದು ಹುಸಿ ನಗೆ ನಕ್ಕು ಅದೆಷ್ಟೋ ಕಾಸು ಜೋಬಿಗೆ ತುರುಕಿದ. ಚನ್ನರಾಜುಗೆ ತನ್ನ ಬಗ್ಗೆ ಅಸಹ್ಯ ಅನ್ನಿಸಿತು. ಈ ಚುನಾವಣೆಯ ಒಳಪಟ್ಟು, ಕೊಡು-ಕೊಳು, ಒಳ ಒಪ್ಪಂದ, ಜಾತಿಯೊಳಗೆ ಮತ ಕದಿಯೋದು ಇವೆಲ್ಲಾ ತನ್ನ ಅಳವಿಗೆ ಮೀರಿದ್ದು ಅನ್ನಿಸಿ ಜೋಮು ಹಿಡಿದಂತಾಯಿತು. ಪುಣ್ಯವಶಾತ್ ತಮ್ಮ ಸಭೆಗಳ ವರದಿ ಪತ್ರಿಕೆಗಳಲ್ಲಿ ಬರುತ್ತಿದ್ದ ಕಾರಣ ಈ ಫೀಲಿಂಗ್ ಹಾಗೇ ಆರಿ ಹೋಯಿತು.

ಇದೆಲ್ಲಾ ಎಷ್ಟು ವೇಗವಾಗಿ ನಡೆಯಿತೆಂದರೆ ಚುನಾವಣೆ ಕಳೆದಿದ್ದೇ ಗೊತ್ತಾಗಲಿಲ್ಲ. ಮನೆಯಲ್ಲಿ ಅದೇನೋ ಅಪ್ಪ-ಅಮ್ಮ ಜಾಬ್ ಬಗ್ಗೆ ಮಾತಾಡಿರಲಿಲ್ಲ. ಈಗಷ್ಟೇ ಡಿಗ್ರಿ ಮುಗಿಸವ್ನೆ. ಕೇಳ್ತಿದ್ರೆ ಅವಂಗೂ ರಗಳೆ ಅನ್ನಿಸಿರಬೇಕು.

ಚನ್ನರಾಜು ಮಾತ್ರ ಮನೆಯಿಂದ ಒಂದು ರೂಪಾಯಿಯೂ ತೆಗೆದುಕೊಳ್ಳಲ್ಲ ಎಂಬ ಪ್ರತಿಜ್ಞೆ ಮಾಡಿದ್ದ. ಆದರೆ ಮನೆಗೇನೂ ಕೊಡಾಕಾಗ್ತಿಲ್ಲ ಎಂಬ ಮುಜುಗರ ಸದಾ ಕಾಡುತ್ತಿತ್ತು. ಒಂದೆರಡು ಬಾರಿ ತಂಗಿಗೆ ಅಷ್ಟೋ ಇಷ್ಟೋ ದುಡ್ಡು ಕೊಟ್ಟಿದ್ದ. ಅವಳ ಮುಖ ನೋಡಿದರೆ ಅವಳು ಕೇಳಿದ್ದಷ್ಟೇ ಅಲ್ಲ, ಅವಳಿಗೆ ಬೇಕಾಗಿರೋ ಏನೇನನ್ನೋ ಕೊಡಿಸಬೇಕು ಎಂಬ ಆಸೆ, ಮಮತೆ ಹುಟ್ಟುತ್ತಿತ್ತು ಈಗ ಫ್ಯಾಸಿಸ್ಟ್ ಪಕ್ಷ ಸೋತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿವ ಸರಕಾರ ಬಂದಿದ್ದೇ ಚನ್ನರಾಜುಗೆ ಹೊಸ ಭರವಸೆ ಮೂಡಿತು. ಇಷ್ಟು ದಿನ ಪಟ್ಟಿ ಮಾಡಿಕೊಂಡು ಇಟ್ಟಿದ್ದ ಜಿಲ್ಲೆಯ ಸಮಸ್ಯೆಗಳೆಲ್ಲಾ ಒಂದೊಂದೇ ಬಗೆಹರಿಯುತ್ತೆ, ಏನಿಲ್ಲ ಅಂದರೂ ಹಕ್ಕೊತ್ತಾಯದ ಬೇಡಿಕೆ ಇಟ್ಟರೆ ಆಗುತ್ತೆ ಎಂಬ ವಿಶ್ವಾಸ ಮೂಡಿತ್ತು.

ತಾಲೂಕಿನ ಸ್ಲಂ ಒಂದರ ನಿವಾಸಿಗಳು ಒತ್ತುವರಿ ಮಾಡಿದ್ದಾರೆ. ಮುನ್ಸಿಪಾಲಿಟಿ ಜಾಗ ಅದು, ಎತ್ತಂಗಡಿ ಮಾಡಬೇಕು ಎಂದು ಸರಕಾರ ನೋಟಿಸ್ ಕೊಟ್ಟಿದ್ದೇ ಚನ್ನರಾಜುಗೆ ಮೈ ಉರಿಯಿತು. ಆ ಸ್ಲಂನ ಹಳೇ ಪರಿಚಯದವರ ಫೋನ್ ತಲಾಶ್ ಮಾಡಿ ವಿಚಾರಿಸಿದ.

“ಸಾರ್, ಅದು ಎಮ್ಮೆಲ್ಲೆ ಜಾಗ ಹೊಡೆಯೋಕೆ ಮಾಡ್ಕಂಡಿರೋ ಪ್ಲಾನ್ ಸಾರ್. . . ಅದೆಂಗೆ ಅಂತ ಮಾತ್ರಾ ಗೊತ್ತಿಲ್ಲ. . . ಏನೋ ನಿಧಾನಕ್ಕೆ ಮಾಡ್ತಾರೆ. . . ಅವರೇ ಎಲೆಕ್ಷನ್ ಟೈಮಲ್ಲಿ ಸೈಟ್ ಕೊಡ್ತೀವಿ ಅಂದಿದ್ರು. ಯಾರನ್ನು ನಂಬೋದು ಗೊತ್ತಾಗ್ತಿಲ್ಲ” ಎಂದು ಆ ಸ್ಲಂನ ನಿವಾಸಿಗಳು ಗೊಳೋ ಅಂದರು. ಅದೇ ದಿನ ಕಚೇರಿಯಲ್ಲಿ ಕೂತು ಪತ್ರಿಕಾ ಹೇಳಿಕೆ ತಯಾರು ಮಾಡಿ ಪತ್ರಿಕಾಗೋಷ್ಠಿ ಕರೆಯಲು ಇತರ ಸಂಘಟನೆಗಳೊಂದಿಗೆ ಮಾತಾಡಿದ.

“ಇರಪ್ಪಾ, ಪ್ಲಾನ್ ಮಾಡ್ಕಂಡು ಮಾಡಾನ” ಎಂದು ಒಂದು ಸಂಘಟನೆಯವರು ಹೇಳಿದರೆ, ಇನ್ನೊಬ್ಬರು, “ನನ್ ಸಪೋರ್ಟ್ ಇದೆ ಕಣಪ್ಪಾ, ಆದರೆ ಓಪನ್ ಆಗಿ ಈಗ ಬರಲ್ಲಪ್ಪಾ, ರಾಂಗ್ ಮೆಸೇಜ್ ಹೋಗತ್ತೆ” ಎಂದರು. ಸದ್ಯ ಪೇಪರಲ್ಲಾದರೂ ಬರಲಿ ಅಂತ ತಾನೇ ಹೋಗಿ ಪತ್ರಿಕೆಗಳಿಗೆ ಕೊಟ್ಟು ಬಂದು, ಹೋರಾಟ ಹೇಗೆ ಸಜ್ಜುಗೊಳಿಸಬಹುದು ಎಂದು ತಲೆಕೆಡಿಸಿಕೊಂಡು ಮನೆಗೆ ಹಿಂತಿರುಗಿದ. ಮಾರನೇ ದಿನ ಸರಕಾರ ಎತ್ತಂಗಡಿ ಪ್ರಯತ್ನ ಮಾಡಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂಬ ಹೆಡ್ಡಿಂಗ್‌ನಲ್ಲಿ ಸುದ್ದಿ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಯಿತು.

ಚನ್ನರಾಜು ಒಳಗೊಳಗೇ ಸಂಭ್ರಮ ಪಟ್ಟ. ಸಂಜೆ ವೇಳೆಗೆ ಶಾಸಕರ ಆಪ್ತನೊಬ್ಬ ಫೋನ್ ಮಾಡಿ, “ಏನ್ರಪ್ಪಾ ಇದು? ಕರೆಕ್ಟಾಗಿ ಫ್ಯಾಕ್ಟ್ ಏನು ಅಂತ ತಿಳ್ಕಂಡು ಸ್ಟೇಟ್‌ಮೆಂಟ್ ಕೊಡಬೇಕಪ್ಪಾ. . . ಎಲ್ಲಾ ವಿವರ ತಿಳ್ಕಂಡೇ ನೋಟಿಸ್ ಕೊಟ್ಟಿರೋದು. . . ” ಎಂದು ಅಸಮಾಧಾನ ವ್ಯಕ್ತಪಡಿಸಿದ. ಕಸಿವಿಸಿಗೊಂಡ ಚನ್ನರಾಜು ಸರ್ದಾರ್ ಅವರಿಗೆ ಫೋನ್ ಮಾಡಿ ಹೀಗೀಗೆ ಹೋರಾಟಕ್ಕೆ ತಾನು ತಯಾರಾಗ್ತಿದೀನಿ ಎಂದು ಆತ್ಮವಿಶ್ವಾಸ, ಸಂಭ್ರಮದಲ್ಲಿ ಹೇಳಿ, “ಏನ್ಸಾರ್ ಎಲ್ಲಾ ಮಾಡ್ಕೊಡ್ತೀವಿ ಅಂತ ಎಲೆಕ್ಷನ್ ಟೈಮಲ್ಲಿ ಹೇಳಿದ್ರಲ್ಲಾ, ಈಗ ನೋಡಿದ್ರೆ ಹಳೇ ಸರಕಾರ ಹೇಳಿದ್ದೇ ಹೇಳ್ತಿದಾರೆ. . . ” ಎಂದು ಅಸಮಾಧಾನ ವ್ಯಕ್ತಪಡಿಸಿದ.

ತನ್ನ ಹೋರಾಟಕ್ಕೆ ರಾಜ್ಯಮಟ್ಟದ ಬೆಂಬಲ ಸಿಗುತ್ತೆ; ಆಗ ಶಾಸಕನ ಆಪ್ತ ಮುಚ್ಕೊಂಡಿರಬೇಕಾಗುತ್ತೆ ಎಂಬ ವಿಶ್ವಾಸ ಚನ್ನರಾಜುಗೆ. “ಸರಿಯಪ್ಪಾ, ನಾಳೆ ಮಾತಾಡ್ತೀನಿ” ಎಂದು ಸರ್ದಾರ್ ಫೋನಿಟ್ಟರು. ಮರುದಿನ ಆಫೀಸಿಗೆ ಹೋಗಿ ಆ ತಾಲ್ಲೂಕಿಗೆ ಹೋಗಲು ನಿರ್ಧರಿಸಿ, ಅಲ್ಲಿನ ಸ್ಲಮ್ ನಿವಾಸಿಗಳ ಪೈಕಿ ಯಾರೋ ಒಬ್ಬನಿಗೆ ಫೋನ್ ಮಾಡಿ ತಾನು ಬರ್ತಾ ಇರೋದನ್ನು ತಿಳಿಸಿದ. ಆ ವೇಳೆಗೆ ಸರ್ದಾರ್ ಫೋನ್ ಬಂತು. ಬಲು ನಿರೀಕ್ಷೆಯಲ್ಲಿ ಚನ್ನರಾಜು, “ಸಾರ್. . . ” ಎಂದು ತಾನು ಹೋಗುತ್ತಿರುವುದರ ಬಗ್ಗೆ ಹೇಳಬೇಕೆಂದಿರುವಷ್ಟರಲ್ಲಿ, “ಚನ್ರಾಜ್, ನಾನು ಎಮ್ಮೆಲ್ಲೆ ಹತ್ರ ಮಾತಾಡಿದೀನಿ. ಅದೇನೋ ಟೆಕ್ನಿಕಲ್ ಇಶ್ಯೂ, ಎಸ್ಸಿಗೆ ಹೌಸಿಂಗ್‌ಗೆ ಅಲಾಟ್ ಮಾಡ್ತೀವಿ, ಜಾಗ ಸರ್ವೆ ಮಾಡಬೇಕು ಅಂತ ಏನೋ ಅಂದ್ರು. ಸದ್ಯಕ್ಕೆ ಸುಮ್ನಿರಪ್ಪಾ, ಸುಮ್ನೆ ಎತ್ತಾಕೋ ಬದಲು ಪರ್ಯಾಯ ವ್ಯವಸ್ಥೆ ಟೆಂಪರರಿ ಮಾಡೋದಿಕ್ಕೆ ಎಮ್ಮೆಲ್ಲೆ ಒಪ್ಕೊಂಡಿದಾರೆ” ಎಂದರು.

ಚನ್ನರಾಜುಗೆ ಗಂಟಲು ಯಾರೋ ಒತ್ತಿದಂತಾಯ್ತು. ಆ ವೇಳೆಗೆ ತಂಗಿಯ ಫೋನ್ ಬಂದಿದ್ದೇ, “ಏನ್ಸಮಾಚಾರ? ” ಎಂದು ಕೇಳಿದ. “ಅಣ್ಣಾ, ಅರ್ಜೆಂಟಾಗಿ ಅದೇನೋ ಕೊಂಡ್ಕೊಬೇಕು ಒಂದ್ಸಾವ್ರ ಫೋನ್ ಪೇ ಮಾಡ್ತೀಯಾ? ” ಎಂದು ಕೇಳಿದಳು. ಅವಳು ಅರ್ಜೆಂಟ್ ಅಂದರೆ ಚಪ್ಪಲಿ, ಡ್ರೆಸ್ ಅಂತಾನೇ ಅರ್ಥ. ಹೊಸ ಚಪ್ಪಲಿಯಲ್ಲಿ ಅವಳು ಸಂಭ್ರಮಿಸುವ ಚಿತ್ರ ಕಣ್ಣೆದುರು ಬಂದಿದ್ದೇ, ಕಾಸೆಷ್ಟಿದೆ ಎಂದು ಚೆಕ್ ಮಾಡಿದರೆ ಮಿನಿಮಮ್ ಬ್ಯಾಲೆನ್ಸ್ ತೋರಿಸುತ್ತಾ ಅಣಕಿಸುತ್ತಿತ್ತು. ಆಫೀಸ್ ಪಕ್ಕದ ಸೇಟು ಬಳಿ ಹೋಗಿ, “ಸೇಟು ಸಾವಿರ ಗೂಗಲ್ ಪೇ ಮಾಡ್ತೀರಾ, ನಾಳೆ ವಾಪಾಸ್ ಮಾಡ್ತೀನಿ” ಅಂದ. ಸೇಟು ಓಕೆ ಅಂದು ದುಡ್ಡು ಹಾಕಿದ್ದೇ, ಅದನ್ನೇ ತಂಗಿಗೆ ಮತ್ತೆ ಕಳಿಸಿ ಉಸಿರುಬಿಟ್ಟ. ಅದ್ಯಾಕೋ ಗಂಟಲು ಕಟ್ಟಿದಂತಾಗಿ ಆಫೀಸಿಗೆ ಬಂದು ಮೇಜಿಗೆ ತಲೆ ಇಟ್ಟು ಕೂತವನ ಕಣ್ಣಲ್ಲಿ ಬೇಡ ಬೇಡವೆಂದರೂ ನೀರು ತುಂಬಿತು.

 

Tags: