ದೆಹಲಿ ಕಣ್ಣೋಟ
ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಇಂಧನ ಮತ್ತು ಅನಿಲ ಕೊರತೆಯಿಂದ ಭಾರತದ ಅರ್ಥವ್ಯವಸ್ಥೆ ಮತ್ತು ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನು ಬಿಟ್ಟರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಈಗ ಕಾಡುತ್ತಿರುವ ಪ್ರಶ್ನೆ ಐದು ರಾಜ್ಯಗಳ ಚುನಾವಣೆ. ಹೀಗಾಗಿ ಭಾರತೀಯ ಜನತಾ ಪಕ್ಷ ಮತ್ತು ಸ್ಥಳೀಯ ರಾಜಕೀಯ ಪಕ್ಷಗಳಿಗೆ ವಿಧಾನಸಭೆ ಚುನಾವಣೆ ಜ್ವರ ಬಿಟ್ಟರೆ ಮತ್ತೇನಿಲ್ಲ.
ಬಿಜೆಪಿ ಸರ್ಕಾರವಿರುವ ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಬಿಟ್ಟರೆ ಕೇರಳ ರಾಜ್ಯ ವಿಧಾನಸಭೆ ಚುನಾವಣೆಯೇ ಬಿಜೆಪಿಗೆ ಪ್ರತಿಷ್ಠೆಯಾಗಿತ್ತು. ಅಸ್ಸಾಂ ರಾಜ್ಯವನ್ನು ನಿರಾಯಾಸವಾಗಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಬಿಜೆಪಿಯದು. ಆದರೆ ಕಾಂಗ್ರೆಸ್ಸಿಗೆ ಈ ಆತ್ಮವಿಶ್ವಾಸ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇನ್ನು ಪುದುಚೇರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಆದರೂ ಈ ಚುನಾವಣೆ ರಾಜಕೀಯ ಪಕ್ಷಗಳಿಗೆ ಮತ್ತು ಆಯಾ ಪ್ರದೇಶದ ಜನರಿಗೆ ಮುಖ್ಯ ಎನ್ನುವುದನ್ನೂ ತಳ್ಳಿಹಾಕುವಂತಿಲ್ಲ.
ಬಿಜೆಪಿಗೆ ಈಗ ಮುಖ್ಯ ಮತ್ತು ನೇರ ಸವಾಲು ಇರುವುದು ಪಶ್ಚಿಮ ಬಂಗಾಳ. ೨೦೧೧ರಿಂದ ನಿರಂತರವಾಗಿ ಅಧಿಕಾರ ನಡೆಸಿಕೊಂಡು ಬಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮಣಿಸುವುದು ಬಿಜೆಪಿಗೆ ಅಷ್ಟು ಸುಲಭವಾಗಿಲ್ಲ. ಇದೇ ಈಗ ಬಿಜೆಪಿಗೆ ತಲೆನೋವಾಗಿದೆ. ಎಡಪಕ್ಷಗಳ ಆಡಳಿತವನ್ನು ಹೇಳ ಹೆಸರಿಲ್ಲದಂತೆ ಮಾಡಿದ ಮಮತಾ ಬ್ಯಾನರ್ಜಿ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಮುಂದಾಗಿದೆ. ಎನ್‌ಡಿಎ ಆಳ್ವಿಕೆ ಇರುವ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಪ್ರತಿ ಪಕ್ಷಗಳ ಸರ್ಕಾರವಿರುವುದು ಬಿಜೆಪಿಗೆ ನೆಮ್ಮದಿ ಇಲ್ಲದಂತಾಗಿದೆ. ಇಡೀ ದೇಶವನ್ನೇ ಕೇಸರಿಮಯ ಮಾಡುವ ಗುರಿ ಬಿಜೆಪಿಯದ್ದು.
ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡನ್ನು ಕೇಸರಿಮಯ ಮಾಡುವ ಕನಸು ಬಿಜೆಪಿಯದ್ದು. ಕೇರಳದಲ್ಲಿ ಹತ್ತು ವರ್ಷಗಳಿಂದ ಸಿಪಿಐ (ಎಂ) ನೇತೃತ್ವದ ಎಡರಂಗ ಆಡಳಿತವಿದ್ದರೂ, ಅದರ ನೇರಸ್ಪರ್ಧಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ. ಆದರೂ ಬಿಜೆಪಿ ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಅದರ ಹುಮ್ಮಸ್ಸು ನೂರ್ಮಡಿಗೊಂಡಿದೆ. ಉದ್ಯಮಿ ಮತ್ತು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿಯ ಚುಕ್ಕಾಣಿ ಹಿಡಿದ ಮೇಲೆ ಈ ಪಕ್ಷವು ಅಲ್ಲಲ್ಲಿ ನೆಲೆಯೂರುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿ ತನ್ನ ಕಾಲೂರಲು ಅಲ್ಲಲ್ಲಿ ನೆಲ ಹದಗೊಂಡಂತಿದೆ. ಆದರೂ ನಿಜವಾದ ಚುನಾವಣೆ ಹೋರಾಟ ನಡೆದಿರುವುದು ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಎನ್ನುವುದು ವಾಸ್ತವ. ಕೇರಳಂನಲ್ಲಿ ಬದಲಾವಣೆ ಆಗುವುದಿದ್ದರೆ ಅದು ಯುಡಿಎಫ್ ಅಽಕಾರಕ್ಕೆ ಬರುವುದಷ್ಟೇ ಎನ್ನುವುದನ್ನು ಬಿಟ್ಟರೆ ಬಿಜೆಪಿ ಅಷ್ಟು ಸುಲಭವಾಗಿ ಅಽಕಾರದ ಗದ್ದುಗೆ ಏರುತ್ತದೆ ಎನ್ನುವ ಭರವಸೆ ಈಡೇರಲು ಇನ್ನೂ ಕಾಯಬೇಕಾಗಬಹುದು.
ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ವಿಶೇಷ ಪರಿಷ್ಕರಣಾ ಪಟ್ಟಿಯ ಮೂಲಕ ಅರ್ಹರಲ್ಲ ಎನ್ನುವ ಕಾರಣಗಳನ್ನು ಒಡ್ಡಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕಿತ್ತುಹಾಕುವ ಮೂಲಕ ಬಿಜೆಪಿಗೆ ಸಹಾಯ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕಳೆದ ಒಂದು ವರ್ಷದಿಂದ ಕೇಳಿ ಬರುತ್ತಲೇ ಇದೆ. ಹೀಗೆ ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗುತ್ತಿರುವ ಕಸರತ್ತಿನಲ್ಲಿ ಮುಸ್ಲಿಮರು ಮತ್ತು ಬಾಂಗ್ಲಾದೇಶದಿಂದ ನುಸುಳಿಕೊಂಡು ಬಂದು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿರುವವರು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಕೆಲವು ತಿಂಗಳಷ್ಟೇ ಹಿಂದೆ ಚುನಾವಣೆ ನಡೆದ ಬಿಹಾರದಲ್ಲಿಯೂ ಇದೇ ಆರೋಪ ಇತ್ತು. ಈಗ ಈ ಆರೋಪ ಪಶ್ಚಿಮ ಬಂಗಾಳವನ್ನೂ ಬಿಟ್ಟಿಲ್ಲ.
ಚುನಾವಣಾ ಆಯೋಗದ ಈ ಕ್ರಮವನ್ನು ವಿರೋಽಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸುಪ್ರೀಂ ಕೋರ್ಟಿನಲ್ಲಿ ತಾವೇ ವಕೀಲರಾಗಿ ವಾದ ಮಾಡಿದ್ದು ಉಂಟು. ಬಂಗಾಳದಲ್ಲಿ ಸುಮಾರು ೯೧ ಲಕ್ಷ ಮಂದಿಯನ್ನು ಅಕ್ರಮ ಮತದಾರರು ಎಂದು ಚುನಾವಣಾ ಆಯೋಗ ಪಟ್ಟಿಯಿಂದ ತೆಗೆದಿರುವುದರ ವಿರುದ್ಧ ನಡೆಯುತ್ತಿರುವ ಸಮರ ಇನ್ನೂ ನಿಂತಿಲ್ಲ. ತಮಿಳುನಾಡಿನಲ್ಲೂ ಸುಮಾರು ೭೧ ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಆದರೆ ತಮಿಳುನಾಡು ಸರ್ಕಾರವಾಗಲಿ ಅಥವಾ ಅಲ್ಲಿನ ಜನರಾಗಲಿ ಈ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ.
ಏಪ್ರಿಲ್ ೯ರಂದು ಮೊದಲ ಹಂತದ ಚುನಾವಣೆ ಮುಗಿದ ಮೇಲೆ ಈಗ ಬಿಜೆಪಿಯ ಮನಸ್ಸೆಲ್ಲ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನತ್ತ ಸಾಗಿದೆ. ಪ್ರಚಾರ ಕಾರ್ಯ ಶುರುವಾಗಿ ಒಂದು ವಾರವಾಗುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿವೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಮತದಾರರನ್ನು ಸೆಳೆಯಲು ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಘೋಷಿಸಿದಾಗ ಅದನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಕರ್ನಾಟಕ ಇನ್ನು ಆರ್ಥಿಕವಾಗಿ ದಿವಾಳಿ ಆಗುತ್ತದೆ ಎನ್ನುವ ಚಿತ್ರಣವನ್ನು ದೇಶದಾದ್ಯಂತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುವಲ್ಲಿ ನಿಷ್ಣಾತ ಎಂದೇ ಖ್ಯಾತಿಯಾಗಿರುವ ಗೃಹ ಸಚಿವ ಅಮಿತ್ ಶಾ ರಿಂದ ಹಿಡಿದು ಕರ್ನಾಟಕದ ಬಿಜೆಪಿಯ ಪುಡಿ ರಾಜಕಾರಣಿಗಳ ಬಾಯಲ್ಲೂ ಇನ್ನು ಕರ್ನಾಟಕ ದಿವಾಳಿ ಆಗುವುದೊಂದೇ ಬಾಕಿ ಎನ್ನುವ ಮಾತುಗಳು ಹಾದಿ ಬೀದಿಯಲ್ಲಿ ಕೇಳಿ ಬಂದವು. ಈ ಆರೋಪ ಇನ್ನೂ ನಿಂತಿಲ್ಲ. ಈ ಆರೋಪ ಮತ್ತು ಆತಂಕದಲ್ಲಿ ಅರ್ಧ ಸತ್ಯ ಇರುವುದನ್ನು ಒಪ್ಪಿಕೊಳ್ಳಲೇಬೇಕು. ರಾಜ್ಯದ ಸಮಗ್ರ ಅಭಿವೃದ್ಧಿ ಕಡೆ ಗಮನಕೊಡುವ ಬದಲಿಗೆ ಪ್ರತಿ ತಿಂಗಳೂ ಗ್ಯಾರಂಟಿ ಕಾರ್ಯಕ್ರಮಗಳಿಗೆ ಹಣ ಒದಗಿಸುವುದೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆದ್ಯತೆಯಾಗಿರುವುದು ವಾಸ್ತವ ಸಂಗತಿ.
ಇಷ್ಟಾದರೂ ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತದಾರರನ್ನು ತನ್ನತ್ತ ಸೆಳೆಯಲು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಲೇಬೇಕಾಯಿತು. ಚುನಾವಣೆ ಘೋಷಣೆಗೆ ಒಂದೆರಡು ದಿನವಿರುವಾಗ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಪ್ರತಿಯೊಬ್ಬ ಮಹಿಳೆಯ ಬ್ಯಾಂಕಿನ ಖಾತೆಗೆ ಹತ್ತು ಸಾವಿರ ರೂಪಾಯಿ ಹಾಕುವುದನ್ನು ಘೋಷಿಸಿದರು. ಈಗ ಪಶ್ಚಿಮ ಬಂಗಾಳವನ್ನು ಗೆಲ್ಲಲೇ ಬೇಕು ಎಂದು ಹಟಕ್ಕೆ ಬಿದ್ದಿರುವ ಬಿಜೆಪಿ, ಉಚಿತ ಉಡುಗೊರೆಯನ್ನು ‘ರೇವಡಿ ಕಲ್ಚರ್’ ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಅಮಿತ್ ಶಾ ಈಗ ಬಂಗಾಳದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ನೆರವು ನೀಡುವುದನ್ನು ಘೋಷಿಸಿದ್ದಾರೆ. ಬಿಜೆಪಿ ವಿಕಸಿತ ಭಾರತ್ ಹೆಸರಿನಲ್ಲಿ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದರೆ ಕಾಂಗ್ರೆಸ್ ರಿವರ್ಸ್ ಗೇರು ಹಾಕುವ ಮೂಲಕ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ, ಕಾಂಗ್ರೆಸ್ಸಿಗೆ ಮತ್ತು ರಾಹುಲ್ ಗಾಂಽಗೆ ದೇಶದ ಹಣಕಾಸುವ ವ್ಯವಹಾರ ಅರ್ಥವಾಗುತ್ತಿಲ್ಲ ಎಂದು ಹೋದಲ್ಲಿ ಬಂದಲ್ಲಿ ಟೀಕಿಸಿದ್ದೇ ಟೀಕಿಸಿದ್ದು.
ಈ ರೇವಡಿ ಕಲ್ಚರ್ ಬಗೆಗೆ ಅಮಿತ್ ಶಾ ಅವರು ಈಗ ನೀಡುವ ಉತ್ತರವೇ ಬೇರೆ. ಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುವುದಷ್ಟೇ ನಮ್ಮ ಕರ್ತವ್ಯ ಎಂದು ತಾವೀಗ ಘೋಷಿಸಿದ ಗ್ಯಾರಂಟಿ ಕಾರ್ಯಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ರಾಜಕಾರಣಿಗಳೇ ಹೀಗೆ ಎನ್ನುವ ಜನರಾಡುವ ಮಾತನ್ನು ತಳ್ಳಿಹಾಕುವಂತಿಲ್ಲ. ಅಽಕಾರಕ್ಕಾಗಿ ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವುದು ಈಗ ಅವರಿಗೇ ಇರುಸುಮುರುಸು. ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಕೇವಲ ೨೭ ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರ ಸ್ಪಽಸಿರುವ ಬಿಜೆಪಿ ತಮಿಳುನಾಡಿನಲ್ಲಿ ಬಿಜೆಪಿ ಆಡಳಿತ ಬರಲಿದೆ ಎಂದು ಅಮಿತ್ ಶಾ ಕಳೆದವಾರ ನೀಡಿದ ಹೇಳಿಕೆಗೆ ಅವರೇ ಸ್ಪಷ್ಟನೆ ನೀಡಬೇಕಿದೆ.
ಕೇಂದ್ರ ಸರ್ಕಾರವು ೨೦೨೧ರಲ್ಲಿ ಜಾರಿಗೆ ತಂದ ನೂತನ ಶಿಕ್ಷಣ ನೀತಿ ಮತ್ತು ಹಿಂದಿ ಹೇರಿಕೆಯ ವಿರುದ್ಧ ಅರ್ಧ ಶತಮಾನಗಳಿಂದ ಗಟ್ಟಿಯಾಗಿ ಕೇಂದ್ರದ ವಿರುದ್ಧ ತೊಡೆ ತಟ್ಟಿ ನಿಂತಿರುವ ತಮಿಳುನಾಡಿನ ದ್ವಿಭಾಷಾ ನೀತಿಯ ಬಗೆಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏನು ಹೇಳಬಹುದು ಎನ್ನುವುದು ಕುತೂಹಲಕಾರಿ.
ಕಳೆದ ಜನವರಿಯಲ್ಲಿಯೇ ತೆಲಂಗಾಣ ರಾಜ್ಯದಲ್ಲಿ ಈ ಹಿಂದೆ ರಾಜ್ಯಪಾಲರಾಗಿದ್ದ ತಮಿಳ್ ಇಸೈ ಸೌಂದರರಾಜನ್ ನೇತೃತ್ವದಲ್ಲಿ ಹದಿಮೂರು ಸದಸ್ಯರ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿದ್ದರೂ ತಮಿಳುನಾಡಿಗೆ ಬೇಕಾದ ಪ್ರಣಾಳಿಕೆ ನೀಡಲು ಬಿಜೆಪಿ ಇನ್ನೂ ಹೆಣಗಾಡುತ್ತಿರುವುದು ತಮಿಳುನಾಡಿನ ಜನರ ಮನವೊಲಿಕೆ ಎಷ್ಟು ಕಷ್ಟ ಎನ್ನುವುದು ಆ ಪಕ್ಷಕ್ಕೆ ಈಗ ಅರ್ಥವಾದಂತಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ತನ್ನಿ ಎನ್ನುವ ಏಕೈಕ ಘೋಷಣೆಯನ್ನು ಮಾತ್ರ ಬಿಜೆಪಿ ಇದುವರೆಗೆ ಹೇಳಿಕೊಂಡೇ ಬಂದಿರುವುದನ್ನು ಬಿಟ್ಟರೆ ಬೇರೆ ಸಮಸ್ಯೆಗಳತ್ತ ಗಂಭೀರವಾಗಿ ಗಮನಕೊಡಲು ಸಾಧ್ಯವಾಗಿಲ್ಲ. ತಮಿಳುನಾಡಿನ ಜನರ ಮನಸ್ಸು, ಅವರ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಬಿಜೆಪಿಗೆ ಇನ್ನೂ ಕಷ್ಟವಾಗಿರಬಹುದು ಎನ್ನುವುದಷ್ಟೇ ಈಗ ಸ್ಪಷ್ಟ.




