ಗಣರಾಜ್ಯೋತ್ಸವ ಎಂದೊಡನೆ ನಾನು ಪ್ರೌಢಶಾಲೆಯಲ್ಲಿ ಸತತವಾಗಿ ೩ವರ್ಷ ಮಾಡಿದ ಇಂಗ್ಲಿಷ್ ಭಾಷಣ ನೆನಪಾಗುತ್ತದೆ. ಈ ದಿನದ ಮಹತ್ವದ ಬಗ್ಗೆ ಇತ್ತೀಚೆಗೆ ತಿಳಿದುಕೊಂಡಿದ್ದರೂ ಅಂದು ಯಾವ ಮುಖ ಹೊತ್ತುಕೊಂಡು ಭಾಷಣ ಮಾಡಿದ್ದೆನೊ ಗೊತ್ತಿಲ್ಲ.
ಆದರೆ ನ್ಯೂಸ್ ಚಾನೆಲ್‌ನಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಪ್ರಸಾರವಾಗುವ ಪರೇಡುಗಳನ್ನು ನೋಡುವುದು ಹಾಗೂ ನಮ್ಮ ಕರ್ನಾಟಕದವರು ಈ ಬಾರಿ ಯಾವ ಜಿಲ್ಲೆಯ ಗೊಂಬೆಗಳನ್ನು ತಂದಿದ್ದಾರೆ ಎಂದು ಗಮನಿಸುವುದು, ಅಪ್ಪನಿಗೆ ನಂತರ ಇವೆಲ್ಲದರ ಕುಳಿತು ಪ್ರಶ್ನೆಗಳ ಸುರಿಮಳೆ ಸುರಿಸುವುದೇ ಕೆಲಸವಾಗಿತ್ತು. ಒಮ್ಮೆ ೮ನೇ ತರಗತಿಯಲ್ಲಿ ನಾನು ಮೊದಲ ಬಾರಿಗೆ ಇಂಗ್ಲಿಷ್ ಭಾಷಣ ಮಾಡಲು ಆಯ್ಕೆಯಾಗಿದ್ದಾಗ ಅಂದು ನಮ್ಮ ಏರಿಯಾದ ಕಾರ್ಪೊರೇಟರು ಬರುತ್ತಾರೆಂದು ಸುದ್ದಿಯಿದ್ದ ಕಾರಣ ನಮಗೆಲ್ಲ ನಿರಂತರವಾಗಿ ಒಂದು ವಾರದಿಂದ ಭಾಷಣ ಬಿಗಿಯುವುದನ್ನು ಅಭ್ಯಾಸ ಮಾಡಿಸಿದ್ದರು. ಧ್ವಜಾರೋಹಣ ಮಾಡಿ, ರಾಷ್ಟ್ರ ಗೀತೆ ಹಾಡಿದೆವು. ನಂತರ ಅತಿಥಿಗಳು ಭಾಷಣ ಮಾಡಿ ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಆದರೆ ಪಾಠ ಕೇಳಿಕೇಳಿ ಬೇಸತ್ತಿದ್ದ ನಾವು ಭಾಷಣ ಕೇಳುವ ಮನಸ್ಥಿತಿಯುಳ್ಳವರಾಗಿರಲಿಲ್ಲ. ವಿದ್ಯಾರ್ಥಿಗಳಾದ ನಾವು ಉರು ಹೊಡೆದ ಭಾಷಣವನ್ನು ಒದರುವ ಘಟ್ಟಕ್ಕೆ ತಲುಪಿದ್ದೆವು. ನಾನು ಸ್ಟೇಜ್ ಮೇಲೆ ಹೋಗಿ ಮೈಕ್ ಸರಿ ಮಾಡಿಕೊಂಡು ಸಭೆಯತ್ತ ನೋಡಿದರೆ ಬಿಸಿಲಿನ ಝಳಕ್ಕೆ ಮುಂದಿದ್ದವರು ನಿದ್ರೆಯಲ್ಲಿ, ಹಿಂದಿದ್ದವರು ಹರಟೆಯಲ್ಲಿ ಮುಳುಗಿದ್ದರು. ಭಾಷಣ ಶುರು ಮಾಡಿದೆ. ‘ಟುಡೇ ಐ ಎಮ್ ವೆರಿ ಹ್ಯಾಪಿ. ಬಿಕಾಸ್ ಟುಡೇ ಇಸ್ ರಿಪಬ್ಲಿಕ್ ಡೇ ಆಫ್ ಅವರ್ ಇಂಡಿಯಾ, ಟುಡೇ ದಟ್ ಡೇ ಕಾನ್ಸ್ತ್ರ್ಟಿಟ್ಯೂಷನ್ ಕೇಮ್ ಇಂಟು ಆಕ್ಷನ್. ಇಂಡಿಯಾ ಐಸ್ ಗ್ರೇಟ್‘ ಎನ್ನುತ್ತಿದ್ದಂತೆ ಬೇಸತ್ತಿದ್ದ ಸಭಿಕರ ನಡುವೆ ನನ್ನ ಕ್ರಷ್ ಹುಡುಗ ನನ್ನನ್ನೇ ನೋಡುತ್ತಿದ್ದದ್ದು ಕಂಡು ಗಾಬರಿಯಾಗಿ ಮಾತು ಮರೆತೆ. ನಮ್ಮ ಟೀಚರ್ ಬದಿಯಿಂದ ‘ಸ್ನೇಹಾ ಕಂಟಿನ್ಯೂ, ಕಂಟಿನ್ಯೂ‘ ಎಂದದ್ದು ನನಗೆ ಕೇಳಿಸಲೇ ಇಲ್ಲ ಅದೇ ಹೊತ್ತಿಗೆ ಸರಿಯಾಗಿ ಜೋತಾಡುತ್ತಿದ್ದ ಶಾಮಿಯಾನದ ಕಂಬ ನನ್ನ ಮುಂದೆ ಬಂದು ದೊಪ್ಪನೇ ಬಿತ್ತು. ಅದೃಷ್ಟವಶಾತ್ ನನಗೇನು ಆಗಲಿಲ್ಲ. ಒಂದೆರಡು ಮಿಠಾಯಿ ಹೆಚ್ಚೇ ಸಿಕ್ಕಿತು.
ಸ್ನೇಹಾ ಮುಕ್ಕಣ್ಣಪ್ಪ, ರಂಗನಟಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿ, ಮಳವಳ್ಳಿ ತಾಲ್ಲೂಕು





