ಸಿರಿ ಮೈಸೂರು
ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಮಾಧವ ರಾವ್ ವೃತ್ತದವರೆಗೂ (ಅಗ್ರಹಾರ ವೃತ್ತ) ಇರುವ ರಸ್ತೆಯನ್ನು ವಾಣಿವಿಲಾಸ ರಸ್ತೆ ಎಂದು ಕರೆಯುತ್ತಾರೆ. ಇದು ಇದರ ಅಧಿಕೃತ ಹೆಸರು. ಅಲ್ಲಿಂದ ಮುಂದಿನ ರಸ್ತೆ ಮಹಾತ್ಮ ಗಾಂಧಿಯ ಹೆಸರಿನದ್ದು. ಮೈಸೂರಿನಲ್ಲಿ ವಾಣಿವಿಲಾಸ ಮೊಹಲ್ಲಾ ಕೂಡ ಇದೆ. ಅದೇ ಮೊಹಲ್ಲಾದಲ್ಲಿ ವಾಣಿವಿಲಾಸ ವಾಟರ್ ವರ್ಕ್ಸ್ ಇದೆ. ಅದೂ ಅಲ್ಲದೆ ಚೆಲುವಾಂಬ ಆಸ್ಪತ್ರೆಯ ಮೊದಲಿನ ಹೆಸರು ವಾಣಿವಿಲಾಸ ಆಸ್ಪತ್ರೆ.
ಅಬ್ಬಾ! ಅದೆಷ್ಟು ಕಡೆ ಕೇಳಿದ್ದಾಯಿತು ಈ ಹೆಸರನ್ನು. ಈ ಹೆಸರಿನ ಬೆನ್ನು ಹತ್ತಿ ಹೋದರೆ ತಿಳಿಯುವುದು ಕೇವಲ ಕಥೆಯಲ್ಲ, ಬದಲಿಗೆ ಒಂದು ಹೆಣ್ಣು ಅಧಿಕಾರವನ್ನು ಬಳಸಿಕೊಂಡು ಎಂಟೇ ವರ್ಷಗಳಲ್ಲಿ ಹೇಗೆ ಒಂದಿಡೀ ರಾಜ್ಯದ ದಿಕ್ಕನ್ನೇ ಸುಭಿಕ್ಷತೆಯತ್ತ ಕೊಂಡೊಯ್ಯಬಹುದು ಎಂಬ ಸಾಹಸಗಾಥೆ. ತೊಟ್ಟಿಲು ತೂಗುವ ಕೈ ದೇಶವನ್ನೂ ಆಳುತ್ತದೆ ಎಂಬ ಮಾತಿನಂತೆ ಬದುಕಿ ತೋರಿಸಿದ ಮಹಾನ್ ತಾಯಿ ಕೆಂಪಾನಂಜಮ್ಮಣ್ಣಿ ದೇವಿ ವಾಣಿವಿಲಾಸ ಸನ್ನಿಧಾನ. ಇವರ ಮೂಲ ಹೆಸರು ಕೆಂಪಾನಂಜಮ್ಮಣ್ಣಿ ದೇವಿ. ಕಳಲೆಯಲ್ಲಿ ೧೮೮೬ರಲ್ಲಿ ಜನಿಸಿದ ಇವರು ೧೮೭೮ರಲ್ಲಿ ಹತ್ತನೇ ಚಾಮರಾಜ ಒಡೆಯರ್ ಅವರೊಂದಿಗೆ ವಿವಾಹವಾದ ನಂತರ ಮಹಾರಾಣಿ ಕೆಂಪಾನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಆಗುತ್ತಾರೆ. ವಿವಾಹವಾದಾಗ ಇವರಿಗೆ ೧೨ ವರ್ಷ ಹಾಗೂ ಇವರ ಪತಿಗೆ ೧೫ ವರ್ಷ. ಹೇಗೂ ಮೈಸೂರು ರಾಜ್ಯದಲ್ಲಿ ೧೮೩೧ರಿಂದ ಬ್ರಿಟಿಷರ ಮೇಲ್ವಿಚಾರಣೆಯಲ್ಲಿ ಮೈಸೂರು ಕಮಿಷನ್‌ನ ಆಡಳಿತ ನಡೆಯುತ್ತಿರುತ್ತದೆ. ಹತ್ತನೇ ಚಾಮರಾಜ ಒಡೆಯರ್ ಅವರ ವಿವಾಹವಾದ ಮೂರು ವರ್ಷಗಳ ನಂತರ, ಅಂದರೆ ಅವರಿಗೆ ೧೮ ವರ್ಷವಾದಾಗ ರೆಂಡಿಷನ್ ಆಫ್ ಮೈಸೂರು ಆಕ್ಟ್ ೧೮೮೧ರ ಪರಿಣಾಮವಾಗಿ ಅಧಿಕಾರ ಮತ್ತೆ ಮೈಸೂರು ಒಡೆಯರ್ ಮನೆತನಕ್ಕೆ ಸಿಗುತ್ತದೆ. ಪ್ರಜೆಗಳ ಹಾಗೂ ರಾಜ್ಯದ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿದ್ದ ಹತ್ತನೇ ಚಾಮರಾಜ ಒಡೆಯರ್ ಅವರೊಟ್ಟಿಗೆ ನಿಂತು ರಾಜ್ಯದ ಏಳಿಗಾಗಿ ದುಡಿದ ಕೀರ್ತಿ ವಾಣಿವಿಲಾಸ ಸನ್ನಿಧಾನ ಅವರದ್ದು. ಇವರ ಮಕ್ಕಳು ನಾಲ್ವಡಿ ಕೃಷ್ಣರಾಜ ಒಡೆಯರ್, ಕಂಠೀರವ ನರಸರಾಜ ಒಡೆಯರ್, ಕೃಷ್ಣಾಜಮ್ಮಣ್ಣಿ, ಚೆಲುವಾಜಮ್ಮಣ್ಣಿ. ೧೮೯೪ರಲ್ಲಿ ಹತ್ತನೇ ಚಾಮರಾಜ ಒಡೆಯರ್ ಅವರು ಅನಾರೋಗ್ಯದಿಂದ ಮೃತಪಟ್ಟಾಗ ಹಿರಿಯ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ವಯಸ್ಸು ಇನ್ನೂ ಹತ್ತು ವರ್ಷ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರಾಜಪ್ರತಿನಿಧಿಯಾಗಿ ಅಧಿಕಾರ ವಹಿಸಿಕೊಂಡ ಮಹಾರಾಣಿ ಸೃಷ್ಟಿಸಿದ್ದು ಎಂದೂ ಮರೆಯದ ಸಾಮಾಜಿಕ ಸುಧಾರಣೆಯ ಇತಿಹಾಸ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಹಳ ಮಹತ್ವ ನೀಡುತ್ತಿದ್ದ ಇವರು ಮಹಾರಾಣಿ ಕಾಲೇಜನ್ನು ಸ್ಥಾಪಿಸಿದರು. ಬೆಂಗಳೂರಿನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಇವರ ದೂರದೃಷ್ಟಿಯ ಫಲ. ನಂತರ ಮೈಸೂರು ಭಾಗದಲ್ಲಿ ಮಹಿಳೆಯರ ಶಾಲೆ, ಕಾಲೇಜುಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ೧೯೦೨ರ ವೇಳೆಗಾಗಲೇ ಮಹಿಳೆಯರಿಗಾಗಿ ೨೦೦ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಸ್ಥಾಪನೆಯಾಗಿ ೧೦ ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಾಲೆ, ಕಾಲೇಜಿನ ಮೆಟ್ಟಿಲು ಹತ್ತಿದ್ದರು. ಇವರ ಆಳ್ವಿಕೆಯ ಸಮಯದಲ್ಲಿ ಬಂದ ಅತಿದೊಡ್ಡ ಸವಾಲೆಂದರೆ ಪ್ಲೇಗ್. ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಶ್ರಮಿಸಿದ ಮಹಾರಾಣಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸ್ಥಾಪಿಸಿದರು. ೧೯೦೨ರಲ್ಲಿ ಶಿವನಸಮುದ್ರದಲ್ಲಿ ಏಷ್ಯಾದ ಮೊದಲ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಶನ್ ಕಾರ್ಯಾರಂಭ ಮಾಡಿದ್ದು ಇವರದ್ದೇ ನಿರ್ದೇಶನದ ಮೇರೆಗೆ, ಅಂದಿನ ದಿವಾನರ ಸಹಕಾರದೊಂದಿಗೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ೧೮೯೬-೧೯೦೦ರ ಸಂದರ್ಭದಲ್ಲಿ ಮಹಾರಾಣಿಯವರು ವಾಣಿವಿಲಾಸ ವಾಟರ್ ವರ್ಕ್ಸ್ ಸ್ಥಾಪಿಸಿದರು. ಇಂದಿಗೂ ಇಡೀ ಮೈಸೂರಿನ ಕುಡಿಯುವ ನೀರು ಸರಬರಾಜು ನಿರ್ವಹಿಸುತ್ತಿರುವುದು ಇದೇ ಐತಿಹಾಸಿಕ ಸಂಸ್ಥೆ. ಈ ಯೋಜನೆಯಡಿ ಬೆಳಗೊಳದಲ್ಲಿ ಕಾವೇರಿ ನದಿಯ ಬಳಿ ಪಂಪ್ ನಿರ್ಮಿಸಿ ಅಲ್ಲಿಂದ ಮೈಸೂರಿನ ಯಾದವಗಿರಿಯ ಮೂಲಕ ನಗರಕ್ಕೆಲ್ಲಾ ನೀರು ಸರಬರಾಜು ಮಾಡಲಾಗುತ್ತಿತ್ತು. ಇದು ಅಂದಿನ ಕಾಲಕ್ಕೆ ದೇಶದ ಜನರಿಗೆ ಮಾದರಿಯಾದ ಯೋಜನೆ. ಮಾರಿಕಣಿವೆ ನೀರಾವರಿ ಯೋಜನೆಯನ್ನು ರೂಪಿಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ವಾಣಿವಿಲಾಸ ಸಾಗರ ಡ್ಯಾಂ ನಿರ್ಮಿಸಿದ್ದು ಕೂಡ ಮಹಾರಾಣಿ ವಾಣಿವಿಲಾಸ ಸನ್ನಿಧಾನ. ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (ಐಐಖಇ) ಸ್ಥಾಪಿಸಲು ಮಹಾರಾಣಿ ೩೭೧.೧೬ ಎಕರೆ ಜಾಗವನ್ನು ದಾನವಾಗಿ ನೀಡಿದ್ದು ಚಿರಸ್ಮರಣೀಯ. ಕೇವಲ ೮ ವರ್ಷಗಳಲ್ಲಿ ದಿವಾನ್ ಕೆ.ಶೇಷಾದ್ರಿ ಅಯ್ಯರ್ ಹಾಗೂ ಇತರ ತಜ್ಞರೊಂದಿಗೆ ಸೇರಿ ಇಷ್ಟೆಲ್ಲಾ ಕೆಲಸ ಮಾಡಿದ ನಂತರ ೧೯೦೨ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಧಿಕಾರ ವಹಿಸಿಕೊಂಡರು.
ಆನಂತರವೂ ಮಹಾರಾಣಿಯವರು ಕೃಷ್ಣರಾಜ ಸಾಗರ (ಕೆಆರ್‌ಎಸ್) ನಿರ್ಮಾಣ ಮಾಡುವಾಗ ಹಣದ ಅಭಾವ ಎದುರಾದ ಕಾರಣ ತಮ್ಮ ಒಡವೆಗಳನ್ನು ನೀಡುವ ಮೂಲಕ ಹಣದ ಅಭಾವ ನೀಗಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೆಣ್ಣುಮಕ್ಕಳಿಗೆ ಪ್ರಾಪಂಚಿಕ ಜ್ಞಾನ ಪಡೆಯಲು ಅಷ್ಟೇನೂ ಮುಕ್ತ ಅವಕಾಶ ಇಲ್ಲದಿದ್ದ ಆ ಕಾಲದಲ್ಲೇ ೨೬ನೇ ವಯಸ್ಸಿನಲ್ಲಿ, ಅನನುಕೂಲಕರ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲೇ ಮೈಸೂರು ರಾಜ್ಯವನ್ನು ಸುಭಿಕ್ಷತೆಯತ್ತ ನಡೆಸಿದ ಮಹಾರಾಣಿ ವಾಣಿವಿಲಾಸ ಸನ್ನಿಧಾನ ಅವರ ಹೆಸರು ಮೈಸೂರಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜರ್ಷಿಯಾಗಲು, ಅತ್ಯದ್ಭುತ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಂದಿಗೂ ಪ್ರಾತಃಸ್ಮರಣೀಯರೆನಿಸಿಕೊಳ್ಳಲು ಇಂತಹ ತಾಯಿ ಹಾಗೂ ಮಹಾನ್ ಶಕ್ತಿಯ ಮಡಿಲಲ್ಲಿ ಬೆಳದದ್ದೂ ಮುಖ್ಯ ಕಾರಣಗಳಲ್ಲೊಂದು ಎಂದು ನಂಬುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ!
” ಹೆಣ್ಣುಮಕ್ಕಳಿಗೆ ಪ್ರಾಪಂಚಿಕ ಜ್ಞಾನ ಪಡೆಯಲು ಅಷ್ಟೇನೂ ಮುಕ್ತ ಅವಕಾಶ ಇಲ್ಲದಿದ್ದ ಆ ಕಾಲದಲ್ಲೇ ೨೬ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲೇ ಮೈಸೂರು ರಾಜ್ಯವನ್ನು ಸುಭಿಕ್ಷತೆಯತ್ತ ನಡೆಸಿದವರು ಮಹಾರಾಣಿ ವಾಣಿವಿಲಾಸ ಸನ್ನಿಧಾನ”





