Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಪ್ರೊಫೆಸರ್ ಜಾಲಿಮರ

ಗುರುಪ್ರಸಾದ್ ಕಂಟಲಗೆರೆ

‘ನಿಮಗೊಂದು ವಿಷಯ ಗೊತ್ತ, ನೀವು ಬರೆದರೆ ಒಂದೊಳ್ಳೆ ಕತೆಯೇ ಆಗುತ್ತೆ ನೋಡಿ’ ಎಂದ ದನಿಆ ಕಡೆಯಿಂದ ತುಂಬಾ ಉತ್ಸಾಹದಲ್ಲಿ ಇದ್ದಂತಿತ್ತು. ಅದರ ಉತ್ಸಾಹ ಊಹಿಸಿಕೊಂಡ ಕಿರಿಯ ಕವಯಿತ್ರಿಗೆ ಯಕ್ಷಗಾನದ ಗಂಡು ಪಾತ್ರವೊಂದು ದಪ್ಪ ಕಣ್ಣನ್ನು ಇನ್ನೂ ಅಗಲಿಸಿ, ಕೆನ್ನೆಯ ಮೇಲಿನ ಮೀಸೆಯೇ ಕುಣಿದು ಕುಪ್ಪಳಿಸುವಂತಿತ್ತು. ಕಳೆದ ಒಂದು ವಾರದಿಂದ ಸತತವಾಗಿ ಶುಭೋದಯದ ಮೆಸೇಜನ್ನು ಈ ಕಿರಿಯ ಕವಯಿತ್ರಿಯ ಮೊಬೈಲ್ ಫೋನ್‌ಗೆ ಆ ಪ್ರಸಿದ್ಧ ಸಾಹಿತಿ ಬಿಡದೆ ರವಾನಿಸುತ್ತಿದ್ದರೂ ಕವಯಿತ್ರಿಯೇನು ಜುಮ್ ಅಂದಂತಿರಲಿಲ್ಲ. ಮೊದಲೆಲ್ಲ ಹೀಗೇನು ಇರಲಿಲ್ಲ. ಸಖತ್ ಬುದ್ಧಿಜೀವಿ, ವಿಮರ್ಶಕ, ಮಹಿಳಾಪರವಾದ ನಿಲುವುಳ್ಳವರು ಎಂಬಿತ್ಯಾದಿ ವಿಶೇಷಣಗಳಿಂದ ನಾಡಿನಾದ್ಯಂತ ಹರಡಿಕೊಂಡಿದ್ದ ಸದರಿ ಸಾಹಿತಿಯ ಕರೆಯಿರಲಿ, ಮೆಸೇಜ್ ಅಂದರೆ ಸಾಕು ಮಹಾಪ್ರಸಾದವೆಂದು ಸ್ವೀಕರಿಸುತ್ತಿದ್ದ ಕಾಲ ಸರಿದು ಬಹಳ ದಿನಗಳೇನೂ ಆಗಿರಲಿಲ್ಲ.

ಕಿರಿಯ ಕವಯಿತ್ರಿ, ಪ್ರಸಿದ್ಧರ ಭಾಷಣ ಕೇಳಲು ತಾನೂ ಇತರರಂತೆ ನಿಗದಿತ ಸಮಯಕ್ಕೂ ಮುಂಚಿತವಾಗಿಯೇ ಹೋಗಿ ಮೊದಲ ಸಾಲಿನ ಕುರ್ಚಿಯಲ್ಲೇ ಕೂರುತ್ತಿದ್ದಳು. ಆಸ್ವಾದಿಸುತ್ತಿದ್ದಳು, ಮೆಚ್ಚುತ್ತಿದ್ದಳು. ಈ ಪ್ರಸಿದ್ಧ ಸಾಹಿತಿ ತನ್ನ ಊರಿನ ಕೊನೆಯ ಎರಡು ಅಕ್ಷರ ಮತ್ತು ತಂದೆ ಹೆಸರಿನ ಮೊದಲೆರಡು ಅಕ್ಷರ ಸೇರಿಸಿ ‘ಜಾಲಿ ಮರ’ ಎಂಬ ಕಾವ್ಯನಾಮದಿಂದ ಲೇಖನ, ಅಂಕಣ ಬರೆಯುತ್ತಿದ್ದರು. ಇವರ ಬರಹಗಳು ತೀಕ್ಷ್ಣವೂ ವಿಮರ್ಶಾತ್ಮಕವೂ ಆಗಿರುತ್ತಿದ್ದರಿಂದ ಜಾಲಿಯಂತೆ ಮನುಷ್ಯ ಸ್ವಲ್ಪ ಒಗರು, ಮುಳ್ಳು ಮುಳ್ಳು ಎಂದು ಸಾಹಿತ್ಯ ವಲಯದಲ್ಲಿ ಚರ್ಚೆಯಲ್ಲಿರುತ್ತಿದ್ದರು. ಹೀಗೆ ವಿಮರ್ಶಾ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದ ಮಿಸ್ಟರ್ ಜಾಲಿಮರ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರು ಜಾಲಿಯಲ್ಲಿರುವ ಗುಡುಸನ್ನು ತೆಗೆದು ಕೊಂಬು ಕೊಟ್ಟು, ಒಂಚೂರು ಒತ್ತಿ ‘ಜೊಲ್ಲು’ ವಿಮರ್ಶಕ ಎಂದೂ ಕರೆಯುತ್ತಿದ್ದರು. ಹೀಗೇ ಒಂದು ದಿನ ಮಹಿಳಾ ದೌರ್ಜನ್ಯದ ಬಗೆಗೆ ಭಾಷಣ ಸಾಗಿರುವಾಗಲೇ ಪ್ರಸಿದ್ಧರ ನಾಕು ಸಾಲಿನ ಕವಿತೆಯೊಂದು ಹೊಸ ಕವಯಿತ್ರಿಯ ಸ್ಮಾರ‍್ಟ್ ಫೋನ್ ಮೊಬೈಲ್ ಹೊಕ್ಕು ವಾಟ್ಸಾಪ್‌ನಲ್ಲಿ ಕಾಣಿಸಿಕೊಂಡಿತು.

‘ನನಗೆ ಬುದ್ಧನೆಂದರೆ ಮೋಹ, ನಿನ್ನ ಮುಂಗುರುಳು ಕೂದಲು, ವಿಶಾಲ ಹಣೆ, ಬುದ್ಧನಂತೆಯೇ ಆಕರ್ಷಿಸುತ್ತದೆ’ ಹೀಗಿದ್ದ ಸಾಲುಗಳನ್ನು ಕಂಡು ಕವಯಿತ್ರಿ ಒಮ್ಮೆಲೆ ಕಕ್ಕಾಬಿಕ್ಕಿಯಾದಳು. ತನ್ನನ್ನು ಬುದ್ಧನಿಗೆ ಹೋಲಿಸಿರುವುದು ಹಿತ ನೀಡಿತಾದರೂ, ಮೊದಲ ಸಾಲಿನಲ್ಲಿ ಇದ್ದ ‘ಮೋಹ’, ‘ಇವರು ನನ್ನನ್ನು ಮೋಹಿಸುತ್ತಿದ್ದಾರಾ?’ ಎಂದು ಡೌಟ್ ಹೊಡೆಯುವಂತೆ ಮಾಡಿತು. ಒಂದು ಸಂಜೆ ಕಿರಿಯ ಕವಯಿತ್ರಿಗೆ ಫೋನ್ ಕರೆಯನ್ನೇ ಮಾಡಿ ಮಾತಿಗಿಳಿದಿದ್ದರು.

‘ನೀವು ಅಂದು ಸಂತಾಪ ಸೂಚಿಸಿ ಪೋಸ್ಟ್ ಹಾಕಿದ್ರಲ್ಲ ಅದರ ಮುಂದಿನ ಕತೆ ಏನಾಯ್ತು ಗೊತ್ತಾ? ಅಂತ ನಗುತ್ತಲೇ ಮಾತು ಮುಂದುವರಿಸಿದರು. ‘ಯಾವ ಪೋಸ್ಟ್ ಸರ್, ಯಾವ ಸಂತಾಪ?’ ಎಂದು ವಾರದ ಹಿಂದಕ್ಕೆ ಹೋಗಿ ನೆನೆದು ಬರುವಷ್ಟರಲ್ಲಿ ತಡವಾಗುವುದನ್ನು ಕಂಡ ಸುಪ್ರಸಿದ್ಧರು ‘ಏನಮ್ಮ ನೀನು, ಇಷ್ಟು ಬೇಗ ಮರೆಯೋದ? ಎಂದು ‘ಅದೆ , ನಿಮ್ಮಿಷ್ಟದ ಕಾದಂಬರಿಕಾರ್ತಿ, ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬ ಪರಿವೆಯೇ ಇರದೆ ಪುರಾಣಕಾಲದ ಮೌಲ್ಯಗಳನ್ನೇ ಜಪಿಸಿ ಈಗಲೂ ಬರೆಯುವ ಸಂಪ್ರದಾಯನಿಷ್ಠ ಕಾದಂಬರಿಕಾರ್ತಿ ಅನ್ನಪೂರ್ಣರವರ ಕುರಿತಾದ ಪೋಸ್ಟ್’ ಎಂದು ತಾವಾಗೇ ನೆನಪಿಸಿದರು.

‘ಹೊ ಅದ, ಕಳೆದ ವಾರ ಕಾದಂಬರಿಕಾರ್ತಿ ಅನ್ನಪೂರ್ಣರವರ ಪತಿ ತೀರೋಗಿದ್ದಾರೆಂಬ ಸುದ್ದಿ ಬಂದಿತ್ತಲ್ಲ, ಅಯ್ಯೋ ಪಾಪ ಅನಿಸ್ತು. ಸಾಂತ್ವನ ಕೋರಿ ಎಫ್‌ಬಿನಲ್ಲಿ ಒಂದು ಪೋಸ್ಟ್ ಹಾಕಿದ್ದೆ ಸರ್, ಅವರೇನು ನನ್ನಿಷ್ಟದ ಲೇಖಕಿ ಅಲ್ಲ’ ಅಂದಳು. ಆ ಮಾತಿಗೆ ನಾನ್ ಸ್ಟಾಪ್ ನಕ್ಕ ಸ್ತ್ರೀವಾದಿ ಲೇಖಕ, ಅಸಲಿಗೆ ನೀವು ಆ ಪೋಸ್ಟ್ ಹಾಕಿದಾಗ ಆಕೆಯ ಗಂಡ ಇನ್ನೂ ಬದುಕಿಯೇ ಇದ್ದ, ಕೇಳಿ ಹೇಳ್ತಿನಿ ಮಜ’ ಎಂದು ಹೇಳತೊಡಗಿದರು.

ಆ ಅನ್ನಪೂರ್ಣನ ಗಂಡನು ನಾನು ಒಂದೇ ಕಡೆ ಕೆಲಸ ಮಾಡೋದು. ಅವತ್ತು ಬೆಳ್ಳಂ ಬೆಳಿಗ್ಗೆ ನಮ್ಮ ಅಫೀಶಿಯಲ್ಸ್ ಗ್ರೂಪ್‌ಗೆ ರಾಮಸ್ವಾಮಿಯವರ ಫೋಟೊ ಜೊತೆಗೆ ಭಾವಪೂರ್ಣ ಶ್ರದ್ಧಾಂಜಲಿ ಅಂತ ಪೋಸ್ಟ್ ಬಂತು. ಅದು ಸ್ವತಃ ರಾಮಸ್ವಾಮಿಯವರ ನಂಬರ್‌ನಿಂದಲೇ ಬಂದದ್ದನ್ನು ನೋಡಿ, ಇದೇನಪ್ಪ ರಾಮಸ್ವಾಮಿ ತನ್ನ ಸಾವಿನ ಸುದ್ದಿಯನ್ನು ತಾನೇ ಬರ‍್ಕೊಂಡಿದಾನೆ ಅಂತ ಗಾಬರಿ ಆಗೋಯ್ತು. ಏನಾಯ್ತು ರಾಮಸ್ವಾಮಿಗೆ? ಎಷ್ಟೊತ್ತಿಗೆ? ಎಲ್ಲಿ? ಏನು? ಅಂತ ಎಲ್ಲ ಮಾತಾಡ್ಕೋತ ಇದ್ರು. ಸುಮಾರು ಅರ್ಧಗಂಟೆಗೆ ಅದೇ ನಂಬರ್ ನಿಂದ ಮತ್ತೊಂದು ಮೆಸೇಜ್ ಬಂತು. ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಆಸ್ಪತ್ರೇಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕಿಡ್ನಿ, ಲಿವರ್, ಲಂಗ್ಸ್ ಸೇರಿದಂತೆ ಬಹು ಅಂಗಾಂಗ ವೈಫಲ್ಯತೆ ಉಂಟಾಗಿತ್ತು. ಇವತ್ತು ಬೆಳಗಿನ ಜಾವ ನಮ್ಮನ್ನೆಲ್ಲ ಬಿಟ್ಟು ಹೋದರು. ಅಂತಿಮ ಸಂಸ್ಕಾರ ಅವರ ಹಳ್ಳಿಯ ತೋಟದಲ್ಲಿ ಸಂಜೆ ನಾಲ್ಕರ ಸುಮಾರಿಗೆ ನೆರವೇರಲಿದೆ ಅಂತ ಹಾಕಿ, ಅದರ ಕೆಳಗೆ ದುಃಖತಪ್ತ ಪತ್ನಿ ಅನ್ನಪೂರ್ಣ ಮತ್ತು ಮಕ್ಕಳು ಅಂತ ಬರೆದಿತ್ತು. ಕಾದಂಬರಿಕಾರ್ತಿ ಪತ್ನಿಯಿಂದಲೇ ಬಂದ ಸಂದೇಶವೆಂದಮೇಲೆ ಅಧಿಕೃತವೇ ಎಂದಾಯಿತಲ್ಲ.ನನ್ನ ಗೆಳೆಯನೊಬ್ಬ ‘ಬಾರಯ್ಯ ಬೆಂಗಳೂರು ಆಸ್ಪತ್ರೆಗೇ ಹೋಗಿ ಬಾಡಿ ಯನ್ನು ನೋಡಿಕೊಂಡು ಬರೋಣ, ಮೇಡಮ್‌ನೂ ಮಾತಾಡಿಸಿ ಸಾಂತ್ವನ ಹೇಳಿದಂತಾಗುತ್ತೆ’ ಅಂತ ಕರೆದ. ನನಗೆ ಬೇರೆ ಏನೊ ಕೆಲಸ ಇತ್ತು, ಇಲ್ಲ ನಾನು ಬೆಂಗಳೂರಿಗೆ ಬರೋಕೆ ಆಗಲ್ಲ, ನೀವು ಹೋಗಿ ಬನ್ನಿ ನಾನು ಅವರ ಊರಿಗೇ ಹೋಗಿ ಅಂತಿಮ ದರ್ಶನ ಪಡೆಯುತ್ತೇನೆ ಅಂದೆ. ಸರಿ ಅಂತ ಕೆಲವರು ಆಗಲೇ  ಆಸ್ಪತ್ರೆ ಬಳಿ ಹೋಗಿದ್ದಾರೆ, ಇರುವ ರಜೆಯೊಂದನ್ನ ಯಾಕೆ ಕಳೆದುಕೊಳ್ಳೋದು, ಬೇಗನೆ ನೋಡಿಕೊಂಡು ಬಂದು ಆಫೀಸ್‌ಗೆ ಹೋಗಬಹುದಲ್ಲ ಎಂಬುದು ಅವರ ಎಣಿಕೆಯಿದ್ದಂತಿತ್ತು.

‘ಇದನ್ನೆಲ್ಲ ಜೊಲ್ಲು ವಿಮರ್ಶಕರು ನನಗೆ ಯಾಕೆ ಹೇಳುತ್ತಿದ್ದಾರೆ? ಅವರ ವಾಟ್ಸಾಪ್ ಪ್ರೇಮಕವಿತೆಗಳ ಮುಂದುವರಿಕೆಗೆ ಇದು ಪೀಠಿಕೆ ಇರಬಹುದಾ?’ ಅಂತ ಕವಯಿತ್ರಿಗೆ ಅನಿಸದೆ ಏನಿರಲಿಲ್ಲ, ಆದರೂ ಹೊ, ಹ್ಞೂಂ , ಹೌದಾ ಎಂದು ಪ್ರತಿಕ್ರಿಯೆ ಕೊಡುತ್ತಿದ್ದಳು.

ಕುತೂಹಲಕ್ಕೆ ನಾನು ಒಂಬತ್ತು ಗಂಟೆ ಸುಮಾರಿಗೆ ಆಸ್ಪತ್ರೆಗೆ ಮೃತದೇಹ  ನೋಡಲು ಹೋಗಿದ್ದ ನನ್ನ ಗೆಳೆಯನಿಗೆ ಫೋನ್ ಮಾಡಿ ಕೇಳಿದೆ, ಏನಯ್ಯ, ಹೇಗಿದಾರೆ ಮೇಡಮ್ಮು, ಮಕ್ಳು ಎಲ್ಲ, ಅಂತಿಮ ದರುಶನವಾಯಿತಾ ಎಂದು.  ಅದಕ್ಕೆ ಅವನು ಕೊಟ್ಟ ಉತ್ತರ ಕೇಳಿ ಗಾಬರಿಯಾಯಿತು.

‘ಅಯ್ಯೋ, ನೀವಿಲ್ಲಿ ಬರದೆ ಇದ್ದದ್ದೇ ಒಳ್ಳೆಯದಾಯಿತು. ನಾವು ಹೂವಿನ ಹಾರ ಎಲ್ಲ ರೆಡಿಮಾಡಿ ಕೊಂಡು ಆಸ್ಪತ್ರೆ ಬಳಿ ಹೋದರೆ, ಮೇಡಮ್ ಆಗ ತಾನೆ ಕ್ಯಾಂಟೀನ್‌ನಿಂದ ತಿಂಡಿ ತಿಂದು ಬಾಯಿ ಒರೆಸಿಕೊಂಡು ಆಚೆ ಬರುತ್ತಿದ್ದರು. ಮಗಳು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದಳು. ನಮ್ಮನ್ನು ಕಂಡದ್ದೆ, ಇಲ್ಲಿಗೆ ಯಾಕೆ ಬರಕೋದಿರಿ ಸರ್, ಇನ್ನು ಮೃತದೇಹ ಕೊಟ್ಟಿಲ್ಲ, ಪೋಸ್ಟ್ ಮಾರ‍್ಟಮ್ ಮಾಡ್ಬೇಕಂತೆ, ಮಧ್ಯಾಹ್ನದ ಮೇಲೆ ಆಗುತ್ತಂತೆ. ಸೊ ಸಾರಿ, ಬನ್ನಿ ಕಾಫಿ ಕುಡಿಯೋಣ ಎಂದು ಮತ್ತೆ ಕರೆದುಕೊಂಡು ಹೋಗಿ ನಮಗೇ ಟೀ ಆರ‍್ಡರ್ ಮಾಡುವುದಾ!’ ಕಾದಂಬರಿಕಾರ್ತಿಯ ಮುಖದಲ್ಲಿ ಗಂಡನ ಕಳಕೊಂಡ ಯಾವ ದುಃಖದ ಛಾಯೆಯೂ ಇರಲಿಲ್ಲವಂತೆ, ನನ್ನ ಗೆಳೆಯರು ಮತ್ತೊಂದು ಬಸ್ ಹತ್ತಿಕೊಂಡು ಕಚೇರಿ ದಾರಿ ಹಿಡಿದಿದ್ದರು’

ಹೊ ಹೌದ ಸರ್, ಪಾಪ ಮೇಡಮ್ ಒಂಟಿ ಮಹಿಳೆಯೇನೊ, ಅವರ ಅಣ್ಣ ತಮ್ಮ ಅಕ್ಕ ತಂಗಿಯಾರೂ ಇರಲಿಲ್ಲವಂತಾ ಎಂದಳು ಕಿರಿಯ ಕವಯಿತ್ರಿ. ‘ಅಷ್ಟೇನು ಕೇಳ್ತಿರಿ’, ಗಹಗಹಿಸಿ ನಗುತ್ತ ‘ಇನ್ನು ಮಜ ಇದೆ ಕೇಳಿ. ಮೇಡ ಮ್ಮೋರು ಹಿಂದೆ ಟೀಚ್ ಮಾಡುತ್ತಿದ್ದ, ಯಾವಾಗಲೋ ನನ್ನ ಸಂಪರ್ಕಕ್ಕೆ ಬಂದಿದ್ದ ಕೆಲ ಶಿಷ್ಯರು ನನಗೆ ಫೋನ್ ಮಾಡಿದರು. ಸರ್ ಮಧ್ಯಾಹ್ನ ಹನ್ನೆರಡ ರಿಂದ ಒಂದು ಗಂಟೆಯವರೆಗೆ ಬೆಂಗಳೂರಿನ ಅವರ ಮನೆಯ ಬಳಿ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದೆಯಂತೆ, ಒಂದು ಶ್ರದ್ಧಾಂಜಲಿ ಫ್ಲೆಕ್ಸ್ ತೆಗೆಸಿಕೊಂಡು ಬನ್ನಿ ಎಂದು ಮೇಡಮ್ ಹೇಳಿದ್ದರು, ಅವರ ಮನೆ ವಿಳಾಸ ಸಿಗುತ್ತಿಲ್ಲ, ಅವರ ಪತಿ ನಿಮ್ಮ ಸಹೋದ್ಯೋಗಿ ಅಲ್ವ? ವಿಳಾಸ ಹೇಳಿ ಸರ್ ಎಂದು ಕೇಳಿದರು.

ನಾನೂ ನನಗೆ ಗೊತ್ತಿದ್ದ ವಿಳಾಸ ಹೇಳಿ, ಅವರು ತಲುಪಿದರೋ ಇಲ್ಲವೋ ಎಂಬುದಕ್ಕೆ ಮಧ್ಯಾಹ್ನ ಒಂದರ ಸುಮಾರಿಗೆ ಮತ್ತೆ ಆ ಶಿಷ್ಯಕೋಟಿಗೆ ಫೋನ್ ಮಾಡಿದೆ, ಅವರು ಹೇಳಿದ್ದನ್ನು ಕೇಳಿ ಇನ್ನೂ ಗಾಬರಿಬಿದ್ದೆ. ಕಾದಂಬರಿಕಾರ್ತಿ ಅನ್ನಪೂರ್ಣರವರ ಮನೆಯ ಬಳಿ ಯಾವ ಸೂತಕದ ಛಾಯೆಯೂ ಇಲ್ಲ ಸರ್, ಎಲ್ಲಾ ಸಹಜವಾಗೆ ಇದೆ, ಈ ಸಾವಿನ ಬಗ್ಗೆ ಯಾರನ್ನೆ ಕೇಳಿದರೂ, ಇದರ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದೇ ಹೇಳುತ್ತಿದ್ದಾರೆ. ಕಾದು ಕಾದು ಸಾಕಾಗಿ ನಾವು ಕೊಂಡೊಯ್ದಿದ್ದ ಹೂವಿನ ಹಾರವನ್ನು ಮನೆ ಮುಂದಿನ ಮರಕ್ಕೆ ನೇತಾಕಿದ್ದೇವೆ, ಶ್ರದ್ಧಾಂಜಲಿ ಫ್ಲೆಕ್ಸ್ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದರು. ಅಯ್ಯೊ ಶಿವನೆ ಎಂದು ಅವರ ಮನೆ ಕಾಂಪೌಂಡ್‌ಗೆ ಸಿಗಿಸಿ ಬನ್ನಿ ಎಂದು ನಾನೇ ಸಲಹೆಕೊಟ್ಟೆ.

‘ಇಷ್ಟೆಲ್ಲ ಆಗಿದಿಯಾ ನಮಗೆ ಗೊತ್ತೇ ಇಲ್ವಲ್ಲ ಸರ್’ ಎಂದು ಸ್ವಲ್ಪ ಸೀರಿಯಸ್ ಆದವಳಂತೆ ಕವಯಿತ್ರಿ ಗಮನ ಕೊಟ್ಟಳು. ಇತ್ತ ನನ್ನನ್ನೂ ಸೇರಿ ಊರಿಗೇ ಹೋಗಿ ಅಂತಿಮ ದರ್ಶನ ಪಡೆಯಬೇಕೆಂದಿದ್ದವರ ಸಂಖ್ಯೆ ಸಂಜೆಯಾದಂತೆಲ್ಲ ಹೆಚ್ಚಾಗತೊಡಗಿತು. ಯಾಕೆಂದರೆ ಬೆಳಗಿನಿಂದ ಯಾರೊಬ್ಬರಿಗೂ ಅನ್ನಪೂರ್ಣರವರ ಗಂಡನ ಪಾರ್ಥಿವ ಶರೀರದ ದರುಶನ ಭಾಗ್ಯ ಸಿಕ್ಕಿರಲಿಲ್ಲ. ನಾವೊಂದಷ್ಟು ಜನ ಗೆಳೆಯರು ನನ್ನ ಕಾರಿನಲ್ಲೆ ಅವರ ಹಳ್ಳಿಯ ದಾರಿ ಹಿಡಿದೆವು. ಊರಿಗಾದರೂ ಬಾಡಿ ಬಂದಿರುವುದರ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕೆನಿಸಿ, ನಮ್ಮ ಮಿತ್ರನೊಬ್ಬ ಅನ್ನಪೂರ್ಣರವರ ಸಂಬಂಧಿಕರ ಹುಡುಗನಿಗೆ ಕರೆಮಾಡಿ ಕೇಳಿದ. ಸರ್ ಅನ್ನಪೂರ್ಣ ಆಂಟಿ ಬೆಳಿಗ್ಗೆನೇ ಫೋನ್ ಮಾಡಿ ನಿಮ್ಮ ಅಂಕಲ್ ತೀರೋಗಿದ್ದಾರೆ,

ಸಂಜೆ ಮಣ್ಣು ಮಾಡಬೇಕು .ನಿನಗೇ ಗೊತ್ತಿರುವಂತೆ ನಿಮ್ಮ ಅಂಕಲ್ ಮನೆಕಡೆಯವರ ಸಂಪರ್ಕ ನನಗೆ ಯಾರೂ ಇಲ್ಲ, ಹೋಗಿ ಬರುವುದೆಲ್ಲ ನಿಂತು ಹೋಗಿದೆ. ಆದ್ದರಿಂದ ನೀನೇ ಖುದ್ದು ಊರಿಗೆ ಹೋಗಿ, ಬಂಧು ಬಳಗಕ್ಕೆ ವಿಷಯ ತಿಳಿಸಿ ಹೊಲದಲ್ಲಿ ಗುಂಡಿ ತೋಡಿಸುವುದು, ತಮಟೆ – ವಾದ್ಯ ಮುಂತಾದವಕ್ಕೆ ಏರ್ಪಾಡು ಮಾಡಿಕೊಳ್ಳಲು ಹೇಳು ಎಂದು ಐದು ಸಾವಿರ ರೂ. ಕೊಟ್ಟುಕಳುಹಿಸಿದರು. ಅದರಂತೆ ನಾನು ಹೋಗಿ ಅಂಕಲ್‌ರವರ ಸಂಬಂಽಕರೆಲ್ಲರಿಗೂ ವಿಷಯ ಮುಟ್ಟಿಸಿ ಅಂತಿಮ ಸಂಸ್ಕಾರಕ್ಕೆ ಏರ್ಪಾಡು ಮಾಡಿಕೊಳ್ಳಲು ಹೇಳಿದೆ. ಅಂಕಲ್ ಸಾವಿನ ಸುದ್ದಿ ಕೇಳಿದವರು, ಕೂಲಿಪಾಲಿಗೆ ಹೊರಟಿದ್ದವರೆಲ್ಲ, ಆದಿನದ ಮಟ್ಟಿಗೆ ತಡೆದು ಗುಂಡಿ ತೋಡಲು , ಅದು ಇದು ಮಾಡಲು ಉಳಿದುಕೊಂಡರು.

ಊರ ಮಧ್ಯದಲ್ಲಿ ಶ್ರದ್ಧಾಂಜಲಿ ಫೋಟೊವನ್ನು ಕಟ್ಟಿದ್ದಾರೆ, ಗುಂಡಿಯೂ ರೆಡಿಯಾಗಿದೆ, ವಾಲಗದವರೂ ಬಂದಿದ್ದಾರೆ, ಮೃತ ದೇಹ ಎಲ್ಲಿದೆ ಎಂದು ಕೇಳೋಣೆಂದರೆ ಆಂಟಿ ಫೋನ್ ಎತ್ತುತ್ತಿಲ್ಲ. ಊರವರೆಲ್ಲ ಎಲ್ಲಿ ನಮ್ಮಣ್ಣನ ಮೃತ ದೇಹ ತರ‍್ಸು ಎಂದು ನನ್ನ ಹಿಡ್ಕಂಡಿದಾರೆ ಸರ್, ಏನ್ಮಾಡೋದು ಎಂದ. ಯಾವುದಕ್ಕೂ ನೀವು ಮೇಡಮ್‌ಗೆ ಫೋನ್ ಮಾಡಿಕೊಂಡೇ ಬನ್ನಿ ಸರ್ ಎಂದೂ ಸೇರಿಸಿದ. ಕತೆ ಈಗ ಕಳೆಗಟ್ಟಿತೇನೊ ಎಂಬಂತೆ ‘ಅನ್ನಪೂರ್ಣರವರು ಯಾಕೆ ಫೋನ್ ರಿಸೀವ್ ಮಾಡುತ್ತಲಿರಲಿಲ್ಲ ಸರ್, ಏನಾಗಿತು ಎಂದು ಕವಯಿತ್ರಿ ಇನ್ನೂ ಕಿವಿಯಾನಿಸಿದಳು.

ಅಸಲಿಗೆ ಅಂದು ರಾಮಸ್ವಾಮಿಯವರ ಜೀವ ಹೋಗಿರಲೇ ಇಲ್ಲವಂತೆ, ವೆಂಟಿಲೇಟರ್ ಸಹಾಯದಲ್ಲಿ ಉಸಿರಾಟ ಇದ್ದೇ ಇತ್ತಂತೆ, ಈ ಪುಣ್ಯಾತಗಿತ್ತಿ ಗಂಡನ ಜೀವ ಇಂದು ಹೋಗೆ ಬಿಡುತ್ತೆ ಎಂದು ಕನಸು ಕಂಡಿದ್ದಳೊ ಅಥವಾ ಹೋಗೇ ಬಿಡಬೇಕು ಎಂದು ಸ್ವಯಂ ಆಶಿಸಿದ್ದಳೋ ಅಂತೂ ಘೋಷಣೆ ಮಾಡಿಬಿಟ್ಟಿದ್ದಳು! ಒಮ್ಮೆ ರಾಮಸ್ವಾಮಿ ನಮ್ಮ ಕಚೇರಿಯಲ್ಲಿ ಮೂರ್ಛೆ ತಪ್ಪಿ ಬಿದ್ದಾಗಲೂ, ಇವಳಿಗೆ ಫೋನ್ ಮಾಡಿದರೆ ಇದು ಅವರ ಮಾಮೂಲಿ ಖಾಯಿಲೆ ಬಿಡಿ ಎಂದು ಫೋನ್ ಕಟ್ ಮಾಡಿದ್ದಳಂತೆ. ಅಂಥದ್ದರಲ್ಲಿ ಇವಳು ಗಂಡನ ಸೇವೆ ಮಾಡುತ್ತಾಳೆಯೇ? ಅದೆಲ್ಲ ಅವಳ ಕಾದಂಬರಿಯಲ್ಲಷ್ಟೆ ಓದಲು ನಿಮ್ಮಂತವರಿಗೆ ಚಂದ ಎಂದರು. ಅಯ್ಯೊ ಬದುಕಿರುವ ಗಂಡನನ್ನೆ ಸತ್ತ ಎನ್ನಲು ಮೇಡಮ್‌ಗೆ ಏನು ಬಂತು ಸರ್!

ಅವಳ ಯಾವುದೋ ಒಂದು ಕಾದಂಬರಿಯ ವಸ್ತು ಇದೇ ಆಗಿದೆಯಂತಲ್ಲ, ಆಹ್ವಾನಿತ ಸಾವು ಅದು ಇದು ಅಂತ ಏನೇನೊ ಬರೆದಿದಾಳಂತಲ್ಲ, ವಿಚಿತ್ರವೆಂದರೆ ಪಾತ್ರ ಬದಲಾಯಿಸಿ ಗಂಡನಿಗೆ ಆಹ್ವಾನಿಸಿದ್ದಾಳೆ ಅಷ್ಟೆ. ಅದಕ್ಕೆ ಹೇಳೋದು ಈ ಕವಿಗಳು ಯಾವಾಗಲೂ ಭ್ರಮೆನಲ್ಲಿ ಬದುಕೋದು ಬಿಟ್ಟು ವಾಸ್ತವದಲ್ಲಿ ಬದುಕಬೇಕು ಬರೀಬೇಕು ಅಂತ. ಅದರ ಜೊತೆಗೆ ಬಹುಶಃ ಎಲ್ಲರಿಗಿರುವಂತೆಯೇ ಇವರಿಗೂ ಇರುತ್ತೆ, ರಾಮಸ್ವಾಮಿಗೆ ವಯಸ್ಸಾಗಿತ್ತು, ಯಾವಾಗಲೂ ಕಾಯಿಲೆ, ಅದು ಇದು ಅಂತ ಆತ ಕಚೇರಿಗೆ ಬರುತ್ತಿದ್ದುದೇ ಕಡಿಮೆ. ನಿಮ್ಮ ಸಂಪ್ರದಾಯವಾದಿ ಕಾದಂಬರಿಕಾರ್ತಿಗೆ ಅಸಂಪ್ರದಾಯವಾಗಿ ಏನೋ ಬೇಕಾಗಿರುತ್ತೆ ಅಲ್ವ ಮೈ ಡಿಯರ್ ಮೌನ, ಈ ಗಂಡ ಸಾಕಾಗಿ ಇನ್ನೊಬ್ಬ…  ಎಂದು ಏನೋ ಸೇರಿಸುತ್ತಿರುವಾಗಲೇ, ಆ ಸೂಕ್ಷ್ಮವರಿತ ಕವಯಿತ್ರಿ… ಹೋಗ್ಲಿ ಬಿಡಿ ಸರ್, ಅವರ ಬದುಕು ಅವರ ಬವಣೆ ಎಂದು ಮಾತು ಬದಲಾಯಿಸಲು, ಆದಿನ ಸಂಜೆಯ ಹಳ್ಳಿಯವರ ಆಕ್ರೋಶದ ಫೋನ್ ರಿಸೀವ್ ಮಾಡಿದ ಲೇಖಕಿ ‘ಬಾಡಿ ಮನೆಗೆ ತಂದ ನಂತರ ಮತ್ತೆ ಉಸಿರಾಡತೊಡಗಿತು, ಮತ್ತೆ ತಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ, ಯಾರೂ ಕಾಯಬೇಡಿ’ ಎಂದು ಹೇಳಿ ಫೋನ್ ಇಟ್ಟರಂತೆ. ಇದರಿಂದ ಕುಪಿತಗೊಂಡ ಹಳ್ಳಿಯವರು ನಮ್ಮೂರ ಮಗನ ಸಾವಿಗೆ ಈ ಮುಂಡೆಯೇ ಕಾರಣ, ತೋಡಿರುವ ಗುಂಡಿಗೆ ಮೊದಲು ಅವಳನ್ನ ಯಳ್ಕಂಡು ಬಂದು ಮುಚ್ಚಣಾ ಅಂತ ಆಕ್ರೋಶ ವ್ಯಕ್ತಪಡಿಸಿದರಂತೆ. ಯಾರಾದರೂ ಗಂಡನನ್ನ ಬದುಕಿರುವಾಗಲೇ ಸಾಯಿಸುವುದುಂಟಾ? ಸಾವಿನ ಬಗೆಗೆ ಇಷ್ಟು ಹಗುರವಾಗಿ, ಕೇರ್‌ಲೆಸ್ ಆಗಿ ನಡೆದುಕೊಂಡ ಇನ್ನೊಬ್ಬ ಸ್ತ್ರೀಯನ್ನ ಇದುವರೆಗೂ ನಾನು ಕಂಡಿಲ್ಲ ಎಂದು ಈ ಥಾಟ್ ಚೇಂಜರ್ ಲೇಖಕ ಅದುವರೆಗೆ ಇದ್ದ ಹಾಸ್ಯದ ವರಸೆಯನ್ನು ಬದಲಾಯಿಸಿಕೊಂಡು ಆಕ್ರೋಶದ ದನಿಗೆ ಶಿಫ್ಟ್ ಆದಂತಿತ್ತು.

ಹೀಗೆ ಒಮ್ಮೊಮ್ಮೆ ಹಾಸ್ಯ ಧಾಟಿಯಲ್ಲಿ, ಇನ್ನೊಮ್ಮೆ ಆಕ್ರೋಶಭರಿತರಾಗಿ ಸಹ ಲೇಖಕಿಯ ಬದುಕು ಬರಹವನ್ನು ಇನ್ನಿಲ್ಲದಂತೆ ಕಿರಿಯ ಕವಯಿತ್ರಿಯ ಮುಂದೆ ಹರಡಿಕೊಂಡಿರುವಾಗಲೇ ಮನೆಯ ಒಳಗಿಂದ ಅಮ್ಮನ ಕೂಗು ಕೇಳಿಸಿದಂತಾಗಿ ‘ಸರ್, ಅಮ್ಮ ಕರೆಯುತ್ತಿದ್ದಾರೆ, ಮತ್ತೆ ಮಾತಾಡೋಣ’ ಎಂದು ಫೋನ್ ಕಟ್ ಮಾಡಲು ಅವಸರಿಸಿದಾಗ, ಇನ್ನೂ ಹೇಳಬೇಕಾದ ಏನೋ ಉಳಿದಿದೆ ಎಂಬ ತವಕದ ದನಿ ಜಾಲಿಮರರ ಕಡೆಯಿಂದ. ಆದರೂ ಕಾಲ್ ಕಟ್ಟಾಯಿತು.

ಸೂಕ್ಷ್ಮ ಮನಸ್ಸಿನ ಯುವ ಕವಯಿತ್ರಿ ತನ್ನ ಬಿಡುವಿನ ವೇಳೆಯಲ್ಲಿ ಫೇಸ್‌ಬುಕ್‌ನಲ್ಲಿ ಕಾದಂಬರಿಕಾರ್ತಿ ಅನ್ನಪೂರ್ಣರವರ ಪ್ರೊಫೈಲ್‌ಗೆ ಹೋಗಿ ಇತ್ತೀಚಿನ ಅವರ ಪೋಸ್ಟ್‌ಗಳ ಮೇಲೆಲ್ಲ ಕಣ್ಣಾಡಿಸುತ್ತ, ಬದುಕಿರುವ ತನ್ನ ಗಂಡನನ್ನೇ ಸತ್ತರೆಂದು ಯಾಕೆ ಘೋಷಿಸಿದರು, ಘೋಷಿಸಿದ ನಂತರವೂ ಅವರು ಬದುಕಿಯೇ ಇದ್ದಾಗ, ಬಂಧು ಬಳಗ ಸ್ನೇಹಿತರು ನೆಂಟರಿಷ್ಟರು ಸಾರ್ವಜನಿಕರ ದೂಷಣೆಗಳನ್ನು ಹೇಗೆ ಹೆದರಿಸಿದರು? ಸಾರ್ವಜನಿಕ ಸಭೆಗಳಲ್ಲಿ ಅಷ್ಟೆಲ್ಲ ಪ್ರಗತಿಪರವಾಗಿ ಮಾತಾಡುವ ಲೇಖಕ ಒಂದು ಹೆಣ್ಣಿಗೆ ಬಂದೊದಗಿದ ಪರಿಸ್ಥಿತಿಯನ್ನು ಯಾಕಿಷ್ಟು ವ್ಯಂಗ್ಯವಾಗಿ, ನಗೆಗಡಲಿನಲ್ಲಿ ತೇಲುತ್ತ ಎಂಜಾಯ್ ಮಾಡುತ್ತ ಬಣ್ಣಿಸಿದರು. ಕಳೆದ ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ರೇಸ್‌ನಲ್ಲಿ ಅನ್ನಪೂರ್ಣರವರ ಕಾದಂಬರಿಯೊಂದು ಜಾಲಿಮರರವರ ವಿಮರ್ಶಾ ಕೃತಿಗೆ ತೀವ್ರ ಪೈಪೋಟಿ ಒಡ್ಡಿತಂತಲ್ಲ. ಅದೇನಾದರೂ ಜಾಲಿಮರರವರು ಹೀಗೆ ಕಾರಿಕೊಳ್ಳುವುದಕ್ಕೆ ಕಾರಣವಾಯಿತಾ? ಅಥವಾ ನಮ್ಮಂಥ ಕಿರಿಯರು ಆಕೆ ಸಂಪ್ರದಾಯನಿಷ್ಠ ಕವಯಿತ್ರಿ ಎಂದು ತಿಳಿದಿದ್ದರೂ ಗಂಡನ ಸಾವಿನ ಸಂದರ್ಭದಲ್ಲಿ ಸಹಜ ಮನುಷ್ಯತ್ವದಿಂದ ಅವರೊಟ್ಟಿಗೆ ಇರುವ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡದ್ದು ಕಣ್ಣುಕುಕ್ಕುವಂತೆ ಮಾಡಿತಾ? ಅವಳ ಆಳದ ಅರಿವಿನ ಸಂಕಟ ಏನಿರಬಹುದು ಎಂದು ಚಿಂತೆಗೀಡಾದಳು.

ಹೀಗೆ ಪ್ರೊಫೈಲ್ ಗಮನಿಸುತ್ತಿರುವಾಗಲೇ ಕಿರಿಯ ವಯಸ್ಸಿನ ಜಾಲತಾಣಿಗನೊಬ್ಬ ಅನ್ನಪೂರ್ಣರವರ ಆರಂಭಿಕ ಬರಹಗಳಲ್ಲಿ ಒಂದಾದ ‘ರಾಮಸ್ವಾಮಿ ಮತ್ತು ಅನ್ನಪೂರ್ಣರವರ ಪ್ರೇಮ’ ಚಿಗುರಿದ ಮತ್ತು ವಿವಾಹವೇರ್ಪಟ್ಟ ಭಾಗವನ್ನು ಯಥಾವತ್ ಹಂಚಿಕೊಂಡಿದ್ದುದು ಸೆಳೆಯಿತು.

ಬೇರೆ ಬೇರೆ ಜಾತಿಯವರಾದ ರಾಮು ಮತ್ತು ನಾನು ಕಾಲೇಜು ಕ್ಯಾಂಪಸ್‌ನಲ್ಲಿ ಒಂದಾಗಿದ್ದೆವು. ಕಡು ಬಡತನದಿಂದ ಸ್ನಾತಕೋತ್ತರ ಓದಲು ಬಂದಿದ್ದ ನನ್ನಲ್ಲಿ ಒಂದೇ ಜೊತೆ ಬಟ್ಟೆ ಇದ್ದರೂ ಅದರ ಪ್ರತಿ ಕಂಡಿಯಲ್ಲೂ ನೂರಾರು ಕವಿತೆಗಳು ಹುಟ್ಟುತ್ತಿದ್ದವು. ನನ್ನ ಕವಿತೆಯನ್ನು ಮೆಚ್ಚುತ್ತಿದ್ದರು ಬಿಟ್ಟರೆ, ಪಾದಕ್ಕೆ ಚಪ್ಪಲಿ ಇರದಿರುವುದನ್ನು ಯಾರೂ ಗಮನಿಸುತ್ತಿರಲಿಲ್ಲ. ಅದು ಯಾರಿಗೂ ಮುಖ್ಯವೂ ಆಗಿರಲಿಲ್ಲ. ಆಗಲೇ ಬುಲೆಟ್‌ನಲ್ಲಿ ಕಾಲೇಜಿಗೆ ಬರುತ್ತಿದ್ದ ಕಾವ್ಯ ಪ್ರಿಯ ರಾಮುಗೆ ಕವಿತೆಗಳಂತೆ ನಾನೂ ಇಷ್ಟವಾಗಿದ್ದೆ. ಆತ ನನ್ನ ಕವಿತೆಗಳನ್ನು ವೇದಿಕೆಗಳಲ್ಲಿ ಹಾಡುತ್ತಿದ್ದ. ಸಂಶೋಧನೆಗೆ ದಾಖಲಾದ ಆರಂಭದಲ್ಲೆ ಆತನೇ ಮುಂದೆ ನಿಂತು ನನ್ನ ಮೊದಲ ಕವನ ಸಂಕಲನ ಅಚ್ಚಾಕಿಸುವ ತೀರ್ಮಾನಕ್ಕೆ ಬಂದಿದ್ದ. ನಮ್ಮಿಬ್ಬರ ಸಂಬಂಧಕ್ಕೆ ನಾವು ಎಂದೂ ಪ್ರೀತಿ ಎಂದಾಗಲಿ, ಸ್ನೇಹವೆಂದಾಗಲಿ ಹೆಸರು ಕೊಟ್ಟುಕೊಂಡಿರಲಿಲ್ಲ. ಯಾರೋ ಕಿಡಿಗೇಡಿಗಳು ನಮ್ಮಿಬ್ಬರನ್ನು ಪೊಲೀಸ್ ಸ್ಟೇಷನ್ ಮೆಟ್ಟಿಲು ಏರುವಂತೆ ಮಾಡಿದರು. ಅಲ್ಲಿ ಊರಿಂದ ಬಂದ ನಮ್ಮ ಅಪ್ಪ ಅಮ್ಮ ಎಲ್ಲರೆದುರಿಗೆ ನಾನು ಅಪರಾಧಿಯಾಗಿ ತಲೆತಗ್ಗಿಸಿ ನಿಲ್ಲುವಂತಾಗಿತ್ತು. ನನ್ನಿಂದ ರಾಮು ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ಶ್ರೀಮಂತ ಹಿನ್ನೆಲೆಯ ರಾಮು ಮನೆಯವರಿಗಿಂತ ಬಡತನವನ್ನೆ ಮೈಹೊದ್ದಿದ್ದ ನಮ್ಮ ಕುಟುಂಬಕ್ಕೆ ಜಾತಿ ಶ್ರೇಷ್ಠತೆಯ ಅಮಲನ್ನು ತುಂಬಲಾಗಿತ್ತು.

ರಾಮು ನನ್ನನ್ನು ಅಪಹರಿಸಿದ್ದಾನೆ ಎಂದು ದೂರು ನೀಡಲಾಗಿತ್ತು. ನಾನು ಪೊಲೀಸರ ಎದುರಿಗೆ ರಾಮು, ನಾನು ಪರಸ್ಪರ ಪ್ರೀತಿಸಿದ್ದೇವೆ, ಮದುವೆಯಾಗುತ್ತೇವೆ ಎಂದು ರಾಮುನ ಒಪ್ಪಿಗೆಯೂ ಇಲ್ಲದೆ ಹೇಳಿಕೆ ನೀಡಿ, ರಾಮುನ ಮುಖ ನೋಡಿದೆ, ಎಂದೂ ಕಂಡಿರದ ಹರ್ಷದ ಹೊಳಪು ಅವನಲ್ಲಿ ಕಂಡಿತು. ನಾವಿಬ್ಬರೂ ಎಂದೋ ಒಂದಾಗಿದ್ದೆವು, ಸಾರ್ವಜನಿಕವಾಗಿ ಮತ್ತೆ ಬಹಿರಂಗಗೊಂಡೆವು.

ಹೀಗಿದ್ದ ಬರಹ ಹೊಸ ತಲೆಮಾರಿನ ಕವಯಿತ್ರಿಯೊಳಗೆ ಸಂಚಲನವನ್ನೇ ಮೂಡಿಸಿತು. ಆ ಕಾಲದಲ್ಲೇ ಜಾತಿ ಮೀರಿ ಪ್ರೇಮ ವಿವಾಹವಾಗಿರುವ ಅನ್ನಪೂರ್ಣರವರು ಯಾವ ಕ್ರಾಂತಿಗೆ ಕಡಿಮೆಯಾದ ಬದುಕನ್ನು ಬದುಕಿದ್ದಾರೆ? ಹೀಗಿದ್ದರೂ ಅವರು ಸ್ವತಃ ಮಹಿಳೆಯರೇ ಒಪ್ಪದಿರುವಂತಹ ಆ ವಿವಾದಾಸ್ಪದ ಕಾದಂಬರಿಯನ್ನು ಯಾಕೆ ಬರೆದರು? ಆರಂಭದ ಈ ಬರಹ ಇದುವರೆಗೂ ನಮ್ಮಂಥವರ ಕಣ್ಣಿಗೆ ಬಿದ್ದಿರಲಿಲ್ಲ ಹೀಗಿದ್ದರೂ ಅವರು ಜಡವಾದಿ ಲೇಖಕಿ ಅನಿಸಿದ್ದು ಹೇಗೆ- ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ತಲೆಯಲ್ಲಿ ಓಡತೊಡಗಿದವು.

ಅನ್ನಪೂರ್ಣರವರ ಫೇಸ್‌ಬುಕ್‌ನಲ್ಲಿನ ಕೊನೆಯ ಪೋಸ್ಟ್‌ನಂತಿದ್ದ ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’ ಎಂಬ ಸಾಲುಗಳ ಅರ್ಥ ಹುಡುಕುತ್ತಿರುವಾಗಲೆ, ಮತ್ತೆ ಪ್ರೊ.ಜಾಲಿಮರರವರ ಮೆಸೇಜ್ ಒಂದು ಕವಯಿತ್ರಿಯ ಜ್ಞಿಚಿಟ್ಡ ಗೆ ಬಂದಿತ್ತು. ಅದನ್ನು ತೆಗೆದಾಗ ‘ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು’ ಎಂದು ಬರೆದಿತ್ತು.

” ಹೀಗಿದ್ದ ಬರಹ ಹೊಸ ತಲೆಮಾರಿನ ಕವಯಿತ್ರಿಯೊಳಗೆ ಸಂಚಲನವನ್ನೇ ಮೂಡಿಸಿತು. ಆ ಕಾಲದಲ್ಲೆ ಜಾತಿ ಮೀರಿ ಪ್ರೇಮವಿವಾಹವಾಗಿರುವ ಅನ್ನಪೂರ್ಣರವರು ಯಾವ ಕ್ರಾಂತಿಗೆ ಕಡಿಮೆಯಾದ ಬದುಕನ್ನು ಬದುಕಿದ್ದಾರೆ ಅನಿಸಿತು”

Tags:
error: Content is protected !!