Mysore
24
broken clouds

Social Media

ಸೋಮವಾರ, 21 ಏಪ್ರಿಲ 2025
Light
Dark

ಮರೆಯಾದ ಮಿಂಚಿನ ಪ್ರತಿಭೆ ಪ್ರೀತೀಶ್ ನಂದಿ

ಸುರೇಶ ಕಂಜರ್ಪಣೆ

ಪ್ರೀತೀಶ್ ನಂದಿಯನ್ನು ಅರ್ಥ ಮಾಡಿಕೊಳ್ಳಲು ೭೦- ೯೦ರ ದಶಕದ ಸ್ಛೋಟಕ ಅಶಾಂತತೆಯನ್ನು ಮರಳಿ ಅನುಭವಿಸಬೇಕು!

ಒಂದು ತಲೆಮಾರಿನ ಊಹಾತೀತ ಪ್ರತಿಭೆ ಎಂದು ನಾವೆಲ್ಲಾ ಬೆರಗು, ಅಸೂಯೆ ಯಿಂದ ನೋಡಿದ್ದ ಪ್ರೀತೀಶ್ ನಂದಿ ನಿಧನರಾಗಿದ್ದಾರೆ. ೭೩ರ ವಯಸ್ಸು “ಸಾಯುವ ವಯಸ್ಸಲ್ಲ” ಎಂದು ಹೇಳುವುದು ಸುಲಭ. ಅವರ ವಯೋಮಾನದ ಓರಗೆಯವರು ಈಗಲೂ ನಮ್ಮ “ಗಮನ ಸೆಳೆವ” ಪ್ರಸ್ತುತತೆ ಹೊಂದಿದ್ದಾರೆ.

ಪ್ರೀತೀಶ್ ನಂದಿಯನ್ನು ಅರ್ಥ ಮಾಡಿಕೊಳ್ಳಲು ೭೦- ೯೦ರ ದಶಕದ ಸ್ಛೋಟಕಅಶಾಂತತೆಯನ್ನು ಮರಳಿ ಅನುಭವಿಸಬೇಕು! ದೇಶ ಕಂಡ ಅದ್ಭುತ ಸಾಪ್ತಾಹಿಕ The Illustrated Weekly of India. ಘನಗಂಭೀರ ಪದಬಂಧ, ಆರಾಮ ಕುರ್ಚಿಯ ವಾರಪತ್ರಿಕೆಯನ್ನು ಖುಶ್ವಂತ್ ಸಿಂಗ್ ಎಂಬ ಒಬ್ಬ ರಸಿಕ ಅಷ್ಟೇ ತೀಕ್ಷ್ಣಒಳನೋಟದ ಪಂಡಿತ ಹೊಸ ತಲೆಮಾರಿನ ಓದಿನ ಖಾಯಸ್ಸಿಗೆ ಟ್ಯೂನ್ ಮಾಡಿದ್ದರು. ಅವರು ಬಿಟ್ಟ ಮೇಲೆ ಅವರ ಅರ್ಧ ಪ್ರಾಯದ ಪ್ರೀತೀಶ್ ನಂದಿ ಎಂಬ ಸ್ಛೋಟಕ ಪ್ರತಿಭೆ ಅದರ ಸಂಪಾದಕತ್ವ ವಹಿಸಿಕೊಂಡು ಅದನ್ನೊಂದು ವರ್ತಮಾನದ ಚರ್ಚೆಯ ಸಂಗಾತಿಯನ್ನಾಗಿ ನವೀಕರಿಸಿದರು.

ರಾಜಕೀಯ, ಕ್ರೀಡೆ, ಸೃಜನಶೀಲ ಕತೆ, ಕಾವ್ಯ, ಚಿತ್ರಕಲೆ, ಪರಿಸರ, ಎಲ್ಲಾ ವಿಷಯ ಗಳಲ್ಲೂ ಅಸದೃಶ ಲೇಖನಗಳನ್ನು ಪ್ರಕಟಿಸಿ ಭಾರತದ ಮ್ಯಾಗಜೀನ್ ಪತ್ರಿಕೋದ್ಯಮಕ್ಕೇ ಹೊಸ ಭಾಷ್ಯ ಬರೆದರು. ಅವರು ನಿರ್ಗಮಿ ಸಿದ ಮೇಲೆ ಈ ಪತ್ರಿಕೆ ಕೊನೆ ಉಸಿರೆಳೆಯಿತು. ಇರಲಿ.

ಪ್ರೀತೀಶ್ ನಂದಿ ಹೊಸ ಕಾಲದ ಸಾಧ್ಯತೆಗಳನ್ನು ಕರಾರುವಾಕ್ಕಾಗಿ ಊಹಿಸಿ ಟಿವಿ ಕಾರ್ಯಕ್ರಮಗಳ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಅದರ ಮುಂದುವರಿಕೆಯಾಗಿ ಸಿನೆಮಾ ನಿರ್ಮಾಣಕ್ಕೂ ಇಳಿದರು.

ಜಾಗತೀಕರಣದ ಅಲೆಯ ಸೀಮಾತೀತ ಸಾಧ್ಯತೆಗಳ ಎಳೆಯನ್ನು ಇವರು ಹಿಡಿದ ಬಗೆ ಹೇಗಿತ್ತೆಂದರೆ ದೇಶದ ಮೊದಲ ಸೈಬರ್ ಕೆಫೆಯನ್ನು ಸ್ಥಾಪಿಸಿದ್ದು ಪ್ರೀತೀಶ್ ನಂದಿ!

ದೂರದರ್ಶನದಲ್ಲಿ ಆರ್ಥಿಕ ವಿಷಯಗಳಿಂದ ಹಿಡಿದು ಪ್ರಾಣಿ ಸಂರಕ್ಷಣೆವರೆಗೆ ಮೊದಲ ಕಾರ್ಯಕ್ರಮ ನೀಡಿದ್ದು ನಂದಿ.

ಇದರೊಂದಿಗೆ ಪ್ರಾಣಿ ದಯಾಸಂಘವನ್ನು ದೇಶದಲ್ಲಿ ಆರಂಭಿಸಿದ್ದು ಪ್ರೀತೀಶ್. ಇದೇ ಸಂಘಟನೆಯ ಪ್ಲಾಟ್ ಫಾರ್ಮ್ ಮೂಲಕ ಮನೆಕಾ ಗಾಂಧಿಯನ್ನು ಮನೆ ಮಾತಾಗಿಸಿದ್ದೂ ಪ್ರೀತೀಶ್ ನಂದಿಯೇ.

ಈಗ ಮತ್ತೆ ಹಿಂದಕ್ಕೆ ಹೋಗೋಣ. ೧೯೫೧ರಲ್ಲಿ ಹುಟ್ಟಿದ ಪ್ರೀತೀಶ್, ೧೯೬೭ – ೬೮ರ ವೇಳೆಗೆ ಇಂಗ್ಲಿಷ್‌ನಲ್ಲಿ ಚೇತೋಹಾರಿ ಕಾವ್ಯ ಬರೆದು ಸಾರಸ್ವತ ಲೋಕದ ಗಮನ ಸೆಳೆದಿದ್ದರು. ೭೦ರ ದಶಕದಲ್ಲಿ ಕ್ರೀಡಾ ಪಟುಗಳಷ್ಟೇ ಪದ್ಮ ಪ್ರಶಸ್ತಿ ಪಡೆಯಬಹುದಾದ ಕಾಲಘಟ್ಟದಲ್ಲಿ ೨೬ನೇ ವಯಸ್ಸಿಗೆ ಕವಿಯಾಗಿ ಪದ್ಮಶ್ರೀ ಪ್ರಶಸ್ತಿ ಪ್ರೀತೀಶ್ ಪಡೆದಿದ್ದರು.

ಬೆಂಗಾಲಿಗೆ ಹಲವಾರು ಕೃತಿಗಳನ್ನು ಅನುವಾದಿಸಿದ್ದರು. ಬಾಂಗ್ಲಾ ಹೋರಾಟದ ಎಳೆ ಹಿಡಿದು ಅದರ ಬಗ್ಗೆ ಬರೆದ ಪ್ರೀತೀಶ್ ನಂದಿಗೆ ಬಾಂಗ್ಲಾ ಸರ್ಕಾರ ವಿಶೇಷ ಪ್ರಶಸ್ತಿಯನ್ನೂ ನೀಡಿತ್ತು. ಸೃಜನಶೀಲ ಪ್ರತಿಭಾ ಖನಿಯಾಗಿದ್ದ ಪ್ರೀತೀಶ್ ಟೈಮ್ಸ್ ಸಂಸ್ಥೆಯ ನಿರ್ದೇಶಕರೂ ಆದರು.

ಕಾವ್ಯ, ಸಮಕಾಲೀನ ರಾಜಕೀಯ, ಪರಿಸರ, ಕೃಷಿ ಇತ್ಯಾದಿ ಬಗ್ಗೆ ಬಂಡಾಯ ದೋಪಾದಿ ಲೇಖನಗಳ ಪ್ರವಾಹ ಹರಿಸಿದ್ದ ಪ್ರೀತೀಶ್ ಕಾರ್ಪೊರೇಟ್ ಜ್ಞಾನ- ರಂಜ ನೆಯ ಹರಿಕಾರರಾಗಿ , ಶಿವಸೇನೆಯ ಕೃಪೆ ಯಿಂದ ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಕವಿಯಾಗಿ ೨೫ ವಯಸ್ಸಿನ ಒಳಗೇ ಹೊಸ ದನಿಯ ಗುರುತಾಗಿದ್ದ ಪ್ರೀತೀಶ್ ಕಾರ್ಪೊರೇಟ್ ವ್ಯವಹಾರದ ಅನಿವಾರ್ಯ ರೇಸ್‌ನಲ್ಲಿ ಕಳೆದು ಹೋಗಿದ್ದರು. ನಂದಿ ಗಮನಾರ್ಹ ಪೈಂಟರ್ ಕೂಡ ಆಗಿದ್ದರು.

ಕಾಲದ ಹೊಸ ಸಾಧ್ಯತೆಗಳನ್ನು ಪಳಗಿಸಿ ನವ ನವೀನವಾಗಿ ಇರಬಲ್ಲೆ ಎಂಬ ಹಮ್ಮು ಪ್ರೀತೀಶ್‌ಗೆ ಇತ್ತೋ ಗೊತ್ತಿಲ್ಲ. ಕಾರ್ಪೊ ರೇಟ್ ಶೈಲಿಯ ಮೀಡಿಯಾ ಮೂಲಕ ಮತ್ತೆ ಜನಪರವಾದದ್ದನ್ನು ನಿರ್ವಹಿಸಬಹುದು ಎಂಬ ವಾದವೂ ನಂದಿಯಲ್ಲಿತ್ತು.

ಆದರೆ ಈ ಕಾರ್ಪೊರೇಟ್ ಹೆಬ್ಬಾವು ತನ್ನನ್ನೂ ತನ್ನ ಸೃಜನಶೀಲತೆಯನ್ನೂ ನುಂಗಿ ನೊಣೆದದ್ದು ನಂದಿಗೂ ಗೊತ್ತಾಗಲಿಲ್ಲ. ದಿನ ದಿನ ಮ್ಯಾನೇಜ್ ಮಾಡಬೇಕಾದ ಗಾಣದಲ್ಲಿ ಸುತ್ತುತ್ತಾ ನಂದಿ ಸವೆದರು. ಈ ಹಾದಿಯಲ್ಲಿ ಅವರೊಳಗಿದ್ದ ಕವಿ, ವರ್ತಮಾನದ ಪ್ರಚೋದಕ ಚಿಂತಕ ಆವಿಯಾಗಿ ಹೋದರು

Tags: