ಅಕ್ಷತಾ
ಅನ್ನಕ್ಕೆ ದಾರಿಯಾಗಿರುವ ಆಟೋ ಚಾಲನೆಯನ್ನು ಇಷ್ಟಪಡುವಷ್ಟೇ ಕವಿತೆಗಳನ್ನೂ ಇಷ್ಟಪಡುವ ರಂಗಸ್ವಾಮಿಯವರು ಈ ತನಕ ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಬರೆದು ರಾಗ ಸಂಯೋಜಿಸಿದ್ದಾರೆ.
ಆದಿನ ಆನ್‌ಲೈನಲ್ಲಿ ಆಟೋ ಬುಕ್ ಮಾಡಿ ಗಂಗೋತ್ರಿಯ ಮುಖ್ಯ ದ್ವಾರದೆದುರು ಹೋಗೋ ಬರೋ ವಾಹನಗಳನ್ನು ನೋಡ್ತಾ ಕಾಯುತ್ತಾ ನಿಂತಿದ್ದೆ. ಎರಡ್ಮೂರು ನಿಮಿಷ ಕಳೆಯಿತು. ‘ಎಷ್ಟೇ ಒಳ್ಳೆಯವರಾಗಿದ್ರೂ ನಾವು, ದುಡ್ಡಿರೋರನ್ನೇ ನೋಡೋದು ನೀವು’ ಎಂದು ಹಿಂಬರೆಹ ಬರೆದಿದ್ದ ಆಟೋ ಎದುರಿನಿಂದ ಹಾದು ಹೋಗಿ ಒಂದಿನ್ನೂರು ಮೀಟರ್ ದೂರದಲ್ಲಿ ನಿಂತಿತು. ‘ಒಳ್ಳೆ ಸಾಲು’ ನನ್ನಷ್ಟಕ್ಕೇ ಹೇಳಿಕೊಂಡೆ. ಮೊಬೈಲ್ ರಿಂಗಣಿಸಿದಾಗ ಅತ್ತ ಕಡೆಯಿಂದ ‘ಆಟೋ ಬುಕ್ ಮಾಡಿದ್ರಲ್ಲ, ಬಂದ್ಬಿಟ್ಟಿದ್ದೀನಿ’ ಎಂದು ಆಟೋ ನಂಬರ್ ಹೇಳಿದಾಗ ಲೊಕೇಷನ್ ಹೇಳಿದೆ. ‘ಇಲ್ಲೇ ಸ್ವಲ್ಪ ಮುಂದೆ ಇದೀನಿ ಮೇಡಂ’ ಎಂದು ಇಳಿದು ಕೈ ಬೀಸಿದ ಚಾಲಕನನ್ನೂ ಆಟೋವನ್ನೂ ನೋಡಿದೆ. ‘ಅರರೇ! ಮನಸೆಳೆದ ಸಾಲಿನ ಆಟೋ’ ಎಂದುಕೊಂಡೆ. ಆಟೋ ಮತ್ತೆ ತಿರುಗಿ ಬಂತು. ಒ.ಟಿ.ಪಿ. ಹೇಳಿ ಹಿಂದಿದ್ದ ಸಾಲನ್ನು ಮತ್ತೊಮ್ಮೆ ಓದಿ ಆಟೋ ಹತ್ತಿದೆ.
ಐವತ್ತರ ಆಸುಪಾಸಿನ ಚಾಲಕ. ಡ್ರೈವಿಂಗ್ ಸೀಟಿನೆದುರು ಸಾಲಾಗಿ ದೇವರ ಫೋಟೋಗಳನ್ನು ಜೋಡಿಸಿಟ್ಟಿದ್ದರು. ಹಿಂದಿದ್ದ ಸಾಲಿನ ಬಗ್ಗೆ ಕೇಳಬೇಕಿತ್ತು. ಆದರೆ ಕನ್ನಡಿಯಲ್ಲಿ ಕಂಡಿದ್ದು, ಬಹಳ ಗಂಭೀರವಾದ ಮುಖಭಾವ. ಕೇಳಬೇಕೋ ಬೇಡವೋ ಎಂಬ ಸಂದಿಗ್ಧದಲ್ಲೇ ‘ಏನು ನಿಮ್ಹೆಸ್ರು?’ ಮಾತು ಆರಂಭಿಸಿದೆ.
‘ರಂಗಸ್ವಾಮಿ ಮೇಡಂ….ಆಟೋ ರಂಗಸ್ವಾಮಿ ಅಂತಾನೂ ಕರೀತಾರೆ’ ಎಂದ. ‘ಆಟೋ ಹಿಂದೆ ಬರೆದಿರೋ ಸಾಲಿನ ಪ್ರೇರಣೆಯೇನು?’ ಕೇಳಿದೆ. ‘ಮೇಡಂ, ಬರೆಯೋದು ನಂಗಿಷ್ಟ. ಒಂದ್ಸಲ ಸಂಬಂಽಕರೊಬ್ಬರ ಮನೆಯಲ್ಲಿ ಫಂಕ್ಷನ್ ಇತ್ತು. ಮುಂಜಾನೆಯಿಂದ ಅಲ್ಲಿದ್ದು ದುಡಿದಿದ್ದರೂ ಸಂಜೆ ವೇಳೆ ಸೂಟುಬೂಟು ಹಾಕಿಕೊಂಡು ಬಂದವರಿಗೆ ಚಾಪೆ ಹಾಸಿದಾಗ ತುಂಬಾ ನೋವಾಯ್ತು. ಕಾಸಿನ ಮುಂದೆ ಯಾವ ಸಂಬಂಧಗಳೂ ಲೆಕ್ಕಕ್ಕಿಲ್ರೀ. ಆವಾಗ ಹೊಳೆದ ಸಾಲು ಇದು. ನೀವೂನೂ ವಿಷಯ ಮತ್ತು ಒಂದರ್ಧ ಗಂಟೆ ಕೊಡಿ, ಈಗ್ಲೇ ಒಂದು ಕವಿತೆ ಬರ್ದು ಕೊಡ್ತೀನಿ’ ಎನ್ನುತ್ತಾ ಆಟೋ ರಂಗಸ್ವಾಮಿಯವರು ಅಲ್ಲಲ್ಲ ಕವಿತೆಗಳ ಸರದಾರ ತನ್ನ ಬದುಕಿನ ಪುಟಗಳನ್ನು ರಿಕ್ಷಾ ಪ್ರಯಾಣದೊಡನೆ ಓದಲಾರಂಭಿಸಿದರು.
ರಂಗಸ್ವಾಮಿಯವರು ಮೈಸೂರಿನ ಗೋಕುಲಂ ನಿವಾಸಿ. ಹತ್ತನೇ ತರಗತಿ ತನಕ ವಿದ್ಯಾಭ್ಯಾಸ. ನಂತರ ಬಡತನದ ಕಾರಣದಿಂದ ಗಾರೆ ಕೆಲಸ ಮಾಡಲಾ ರಂಭಿಸಿದರು. ಹೊಟ್ಟೆ ಹಸಿವಿನೊಡನೆ ಓದಿನ ಹಸಿವೂ ಇದ್ದ ಕಾರಣ ಶಾಲಾ ಶಿಕ್ಷಣ ದೂರದ ಬೆಟ್ಟವಾದರೂ ದಿನಪತ್ರಿಕೆ, ಮಾಸಪತ್ರಿಕೆಗಳ ಓದಿನ ಕಸುವು ಸಾಹಿತ್ಯ ಪ್ರೀತಿಗೆ ಮುನ್ನುಡಿಯಾಯಿತು. ಪತ್ರಿಕೆಗಳಲ್ಲಿ ಬರುತ್ತಿದ್ದ ಕವಿತೆಗಳನ್ನು ಓದುತ್ತಿದ್ದವರನ್ನು ಬಹಳವಾಗಿ ಸೆಳೆದಿದ್ದು ವಿಡಂಬನತ್ಮಾಕ ಕವಿತೆಗಳು. ನಯವಾದ ಹಾಸ್ಯದೊಡನೆ ಜಾಗೃತಿ ಮೂಡಿಸುವಂತಹ ಜಾಣ್ಮೆಯಿರುವುದು ರಂಗಸ್ವಾಮಿಯವರ ಬರೆಹದಲ್ಲಿರುವ ವಿಶೇಷತೆ. ಮೊದಮೊದಲು ಕವಿತೆಗಳನ್ನು ಬರೆದು ಬಚ್ಚಿಡುತ್ತಿದ್ದ ರಂಗಸ್ವಾಮಿಯವರಿಗೆ, ತನ್ನ ಕವಿತೆಗಳೂ ಪಕ್ವವಾಗಿವೆ ಎಂದು ತಿಳಿದದ್ದು ಅವರ ಏರಿಯಾದ ಗಣೇಶೋತ್ಸವದ ಸಂದರ್ಭದಲ್ಲಿ ಏರ್ಪಡಿಸಿದ ಕವಿತೆ ವಾಚನ ಸ್ಪರ್ಧೆಯಿಂದ! ಅಂದು ಸಿಕ್ಕಿದ ಸಮಾಧಾನಕರ ಬಹುಮಾನ ಕೊಟ್ಟಷ್ಟು ಧೈರ್ಯ, ಆತ್ಮವಿಶ್ವಾಸ ನಂತರ ಸಿಕ್ಕ ಪ್ರಥಮ ಸ್ಥಾನಗಳೂ ಕೊಟ್ಟಿಲ್ಲ ಎನ್ನುವ ರಂಗಸ್ವಾಮಿಯವರು ದುಡಿಮೆಯ ನೆಮ್ಮದಿ ಕಾಣುವುದು ಆಟೋದಲ್ಲಿ.
ಬಡತನದಲ್ಲೇ ಹುಟ್ಟಿ ಬೆಳೆದ ರಂಗಸ್ವಾಮಿಯವರು ಕವಿ ಮಾತ್ರವಲ್ಲ, ನಹಾಡುಗಾರರೂ ಹೌದು. ತಮ್ಮ ಕವಿತೆಗೆ ತಾವೇ ರಾಗ ಸಂಯೋಜಿಸಿ ಹಾಡುವ ಕಲೆಯನ್ನು ಸಿದ್ಧಿಸಿಕೊಂಡ ಇವರು ಸಾಲದ ಕಟು ವಿರೋಽ. ‘ಎಷ್ಟೇ ಬಡವರಾದರೂ ಸಾಲದತ್ತ ಮುಖ ಮಾಡಬಾರದು, ಇದು ಬೇರೆಯವರನ್ನು ನೋಡಿ ಅನ್ನಿಸಿದ್ದಲ್ಲ. ನನ್ನ ಸ್ವಂತ ಅನುಭವ. ಒಮ್ಮೆ ಸಾಲಗಾರರಾದರೆ ಜೀವನಪೂರ್ತಿ ತೀರಿಸುವುದರಲ್ಲೇ ಕಳೆದುಹೋಗುತ್ತೇವೆ’ ಎನ್ನುವ ರಂಗಗಸ್ವಾಮಿಯವರು ತಾನು ಹೋದಲ್ಲೆಲ್ಲ ಸಾಧ್ಯವಾದಷ್ಟು ಸಾಲದ ಕರಾಳ ಮುಖದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗೆ ಸಾಲದ ಅನಾಹುತವನ್ನು ಕುರಿತು ಬರೆದ ಕವಿತೆಯೊಂದರ ಸಾಲುಗಳು ಹೀಗಿವೆ. ‘ಬಡ್ಡಿ ಕಟ್ಟಿ ಕಟ್ಟಿ ನೀನು ಬಡವನಾದೆಲ್ಲೋ ಬಡ್ಡಿ ಹಣವ ತಿಂದು ಅವ್ರು ಬೆಳೆದುಬಿಟ್ರಲ್ಲೋ’ ಹೀಗೆ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಪದಪ್ರಯೋಗವಿರುವ ರಂಗಸ್ವಾಮಿಯವರ ಕವಿತೆಗಳಲ್ಲಿ ಉತ್ಪ್ರೇಕ್ಷೆಯಿಲ್ಲ. ತನಗನ್ನಿಸಿದ್ದನ್ನು ನೇರವಾಗಿ ಹೇಳದೆ ಹಾಡಿನ ಮೂಲಕ ವ್ಯಕ್ತಪಡಿಸುವವರ ಕವಿತೆಗಳುಬದುಕಿನ ಪ್ರೀತಿ ಹುಟ್ಟಿಸುವಂತಹ ಜಾಗೃತಿ ಕವಿತೆಗಳಾಗಿದ್ದು ತಾನು ಬರೆಯುವುದು ಮತ್ತೊಬ್ಬ ನನ್ನು ನೋಯಿಸುವುದಕ್ಕಲ್ಲ.
ತನ್ನ ಆತ್ಮತೃಪ್ತಿಗಾಗಿ ಎನ್ನುವ ಮೃದು ಮನಸ್ಸು ಅವರದ್ದು. ರಂಗಸ್ವಾಮಿಯವರದ್ದು ಕುಳಿ ತಲ್ಲೇ ಮಾಡುವ ಕಾಯಕವಲ್ಲ. ದಿನನಿತ್ಯ ಸಂಚಾರಿಯಾಗಿರು ವವರು ಕವಿತೆ ಹುಟ್ಟಿದ ಕ್ಷಣ ಕೈಗೆ ಸಿಕ್ಕ ಕಾಗದದಲ್ಲಿ ಅಕ್ಷರ ರೂಪಕ್ಕಿಳಿಸುತ್ತಾರೆ. ‘ನನ್ನ ಅಕ್ಷರ ನೀಟಾಗಿಲ್ಲ, ಬರೆದು ತಂದು ಅವಳಿಗೆ ಕೊಡುತ್ತೇನೆ. ಅವಳದನ್ನು ದುಂಡು ದುಂಡಾದ ಅಕ್ಷರದಲ್ಲಿ ಬರೆಯುತ್ತಾಳೆ. ಚೆನ್ನಾಗಿದ್ದರೂ ಇಲ್ಲದಿದ್ದರೂ ನೇರವಾಗಿ ಹೇಳುವ ನನ್ನಾಕೆಯೇ ನನ್ನ ಕವಿತೆಗಳ ವಿಮರ್ಶಕಿ. ಅವಳು ಒಪ್ಕೊಂಡ್ರೆ ಮುಗೀತು’ ಎಂದು ಹೇಳಿಕೊಳ್ಳುತ್ತಾರೆ. ಕವಿತೆಗಳನ್ನು ಅಚ್ಚುಕಟ್ಟಾಗಿ ಪುಸ್ತಕದಲ್ಲಿ ಬರೆದಿಡುವ ಆಸಕ್ತಿ ಮಡದಿಯದ್ದು. ತನ್ನ ಬರೆಹದ ಸ್ಛೂರ್ತಿಯೇ ಮಡದಿಯೆನ್ನುವ ರಂಗಸ್ವಾಮಿಯವರ ಅಷ್ಟೂ ಕವಿತೆಗಳು ದಾಖಲಾಗಿರು ವುದು ಮುದ್ದಿನ ಹೆಂಡತಿಯ ಡೈರಿ ಪುಸ್ತಕದಲ್ಲಿ. ‘ಎಂದಾದರೊಮ್ಮೆ ಜೊತೆಯಾಗಿ ಡೈರಿ ಹಿಡಿದುಕೊಂಡು ಕವಿತೆಗಳ ಮರುಓದಿಗೆ ಕುಳಿತುಕೊಳ್ಳುವ ನಮಗೆ ಕವಿತೆಯೇ ಎಲ್ಲಾನೂ’ ಎನ್ನುವ ರಂಗಸ್ವಾಮಿಯವರ ಮಾತು ಯೋಚಿಸುವಂತಹದ್ದು. ಬರೆಯುವವರ ಸಂಖ್ಯೆ ಅಧಿಕವಾಗಿ ಓದುವವರ ಸಂಖ್ಯೆ ವಿರಳವಾಗಿರುವಂತಹ ಇಂದಿನ ದಿನಮಾನದಲ್ಲಿ ನಮ್ಮ ಬರೆಹದ ಮೊದಲ ಓದುಗರು ನಾವೇ ಆಗಬೇಕೆನ್ನುವ ಸರಳ ಸೂತ್ರ ಈ ದಂಪತಿಗಳದ್ದು.
ಅನ್ನಕ್ಕೆ ದಾರಿಯಾಗಿರುವ ಆಟೋ ಚಾಲನಾ ವೃತ್ತಿಯನ್ನು ಇಷ್ಟ ಪಡುವಷ್ಟೇ ಕವಿತೆಗಳನ್ನೂ ಇಷ್ಟಪಡುವ ರಂಗಸ್ವಾಮಿಯವರು ಈ ತನಕ ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಬರೆದು ರಾಗ ಸಂಯೋಜಿಸಿದ್ದಾರೆ.ಸಾಗುವ ದಾರಿ, ಹತ್ತಿಳಿಯುವ ಪ್ರಯಾಣಿಕರು ಹೀಗೆ ಎಲ್ಲವನ್ನೂ ಕವಿತೆ ವಸ್ತುವಾಗಿಸುವವರು, ತನ್ನ ಹೀರೋ ಆಗಿರುವ ರಿಕ್ಷಾವನ್ನೂ ಬಿಡದೆ ತಮ್ಮ ವೃತ್ತಿಯ ನೋವು ನಲಿವಿನ ಪಾಡನ್ನು ಹಾಡಾಗಿಸಿದ್ದಾರೆ. ‘ಎಷ್ಟು ಕಷ್ಟಾನೋ ಯಪ್ಪಾ ಆಟೋಡ್ರೈವರ್ ಕೆಲ್ಸ ಬಾಡಿಗೆ ಇಲ್ಲ ಅಂದ್ರೆ ಒಣಗಬೇಕು ಪೂರ್ತಿ ದಿವ್ಸ’ ಎಂದು ತಮ್ಮದೇ ಆದ ಜಾನಪದ ಶೈಲಿಯಲ್ಲಿ ಹಾಡುವ ರಂಗಸ್ವಾಮಿಯವರಲ್ಲಿ ‘ನಿಮ್ಮನ್ನು ಸಿನಿಮಾದವ್ರು ಯಾರೂ ಸಂಪರ್ಕಿಸಲಿಲ್ವೇ?’ ಕೇಳಿದೆ. ‘ಇಲ್ಲಾರೀ ಮೇಡಂ, ಈಗೀಗ ಬರ್ತಿರೋ ಸಿನಿಮಾ ಹಾಡುಗಳು ಅರ್ಥಾನೇ ಆಗಲ್ಲ. ಏನು ಸಂದೇಶ ಇದೆ ಅಂಥ ಎಷ್ಟು ಸರ್ತಿ ಕೇಳಿದ್ರೂ ಗೊತ್ತಾಗಲ್ಲರೀ. ನಾನೇನಿದ್ರೂ ನಂಗಾಗಿ, ನನ್ನ ಮನೆಯವ್ರಿಗಾಗಿ ಬರೀತೀನಿ. ಮಾಧ್ಯಮ ಅಂಥ ಬಂದ್ರೆ ನಾನು ಮೊದಲು ಪರಿಚಯವಾಗಿದ್ದು ಮೈಸೂರು ಆಕಾಶವಾಣಿಯ ‘ಹಾಡು ಪಾಡು’ ಕಾರ್ಯಕ್ರಮದ ಮೂಲಕ ಎನ್ನುವಾಗ ಅವರ ಕಣ್ಣುಗಳಲ್ಲಿ ಧನ್ಯತಾ ಭಾವ ಕಂಡುಬಂತು.
‘ಬರೆದ ಕವಿತೆಗಳನ್ನೆಲ್ಲ ಒಟ್ಟು ಸೇರಿಸಿ ಪುಸ್ತಕ ಮಾಡುವ ಯೋಚನೆ ಮಾಡಿಲ್ವೇ?’ ಎಂದು ಕೇಳಿದರೆ ‘ಅಮ್ಮ, ನಾನು ನನ್ನ ಹೆಂಡತಿ, ಪಿಯುಸಿ ಓದುತ್ತಿರುವ ಮಗಳು, ಒಬ್ಬ ಮಗ ಇಷ್ಟೇ ನನ್ನ ಸಂಸಾರ. ನನ್ನ ಮಗ ಹೈಪರ್ಆಕ್ಟಿವ್ ಎಂಬ ಸಣ್ಣ ನೋವು ಬಿಟ್ಟರೆ ಮೊದಲಿನಷ್ಟು ಬಡತನವಿಲ್ಲದ ಮಧ್ಯಮ ವರ್ಗದ ಕುಟುಂಬ ನನ್ನದು. ಪುಸ್ತಕ ಪ್ರಕಟಿಸುವಷ್ಟು ಕಾಸು ನನ್ನಲ್ಲಿಲ್ಲ. ಓದ್ಬೇಕು, ಬರೀಬೇಕು… ಮನಸ್ಸಿನಲ್ಲಿರೋ ಮಾತುಗಳನ್ನು ಕವಿತೆ ರೂಪದಲ್ಲಿಹೇಳ್ಬೇಕು ಅನ್ನೋದಷ್ಟೇ ಆಸೆ’ ಎನ್ನುತ್ತಾರೆ ರಂಗಸ್ವಾಮಿಯವರು. ‘ಗಮನ ಸೆಳೆದ ಆಟೋ ಹಿಂದಿದ್ದ ಸಾಲು ಪ್ರಯಾಣಕ್ಕೆ ಸಿಕ್ಕಿದ ಅದೇ ಆಟೋ ಕವಿತೆಗಳ ಸರದಾರರಾದ ನಿಮ್ಮನ್ನು ಪರಿಚಯಿಸಿತು’ ಹೇಳಿದೆ. ಕೂಡಲೇ ಬ್ರೇಕ್ ಹಾಕಿ ಆಟೋ ನಿಲ್ಲಿಸಿದರು. ‘ನೋಡ್ರೀ ಮೇಡಂ, ಈ ಮೊಬೈಲ್ ಬಂದ್ಮೇಲೆ ಯಾರಿಗೂ ನೆಲ ಕಾಣ್ಸಲ್ಲ. ನಮ್ಮ ಗ್ರಾಚಾರಕ್ಕೆ ಹೊಡೆದು ಬಿಟ್ರೆ ಆಮೇಲೆ ಕೇಳೋದೇ ಬೇಡ’ ಎಂದು ತಕ್ಷಣಕ್ಕೆ ಹೊಳೆದ ಸಾಲನ್ನು ಹಾಡಲಾರಂಭಿಸಿದರು.
‘ಕೈಯಲ್ಲೊಂದು ಮೊಬೈಲು ಹಿಡ್ದೇ ಇರ್ತಾರೆ ಗಂಟೆಗಟ್ಲೆ ಗಂಟೆಗಟ್ಲೆ ಕೊರೀತಾ ಇರ್ತಾರೆ’ ಆ ಕ್ಷಣಕ್ಕೆ ಹುಟ್ಟಿದ ರಂಗಸ್ವಾಮಿಯವರ ಆಶು ಕವಿತೆ ಅರ್ಥಪೂರ್ಣ ಎನ್ನಿಸಿತು. ಅಂದಿನ ಪ್ರಯಾಣಕ್ಕೆ ಜೊತೆಯಾದ ಹಾಡಿನ ಕವಿ ಆಟೋ ರಂಗಸ್ವಾಮಿಯವರಿಗೆ ಧನ್ಯವಾದ ಹೇಳಿ ಹೊರಟೆ. ಜೀವನ ಪ್ರತಿನಿತ್ಯ ವಿಭಿನ್ನ ಅಭಿರುಚಿಯ ಜನರನ್ನು ಭೇಟಿ ಮಾಡಿಸುತ್ತದೆ. ಅಂತಹ ಅಭಿರುಚಿ ಹೊಂದಿದವರಲ್ಲಿ ರಂಗಸ್ವಾಮಿಯವರೂ ಒಬ್ಬರು. ಕವಿತೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ದೀರ್ಘಕಾಲದ ಅಧ್ಯಯನ ನಡೆಸುವವರು, ಕವಿತೆಗಳಲ್ಲಿ ಪಂಥಗಳನ್ನು ಹುಡುಕುವವರು, ಕವಿತೆಗಳನ್ನೇ ಕವಿಯ ವ್ಯಕ್ತಿತ್ವವನ್ನಾಗಿ ಬಿಂಬಿಸುವವರು ಒಂದು ಕಡೆಯಾದರೆ ‘ನನ್ನ ಹಾಡು ನನ್ನದು’ ಎಂಬಂತೆ ತನಗಾಗಿ, ತನ್ನವರಿಗಾಗಿ ಕವಿತೆ ಬರೆದು ರಾಗ ಸಂಯೋಜಿಸಿ ಹಾಡುವವರು ರಂಗಸ್ವಾಮಿಯವರು.





