ನಾನು ಕೆಲಸ ಮಾಡುವ ಪಿರಿಯಾಪಟ್ಟಣದ ಶಾಲೆ ಮೈಸೂರು ಜಿಲ್ಲೆಯಲ್ಲೇ ವಿಶೇಷವಾದ ಶಾಲೆ. ಮೈಸೂರು ಜಿಲ್ಲೆಗೆ ಸೇರಿದ್ದರೂ ಕೊಡಗು ಜಿಲ್ಲೆಗೆ ಸಮೀಪ ಇದೆ. ವಾತಾವರಣ ಕೊಡಗಿನದೇ. ಹತ್ತಿರದಲ್ಲೇ ಜೇನುಕುರುಬರ ಹಾಡಿಗಳು, ಆನೆ ಕ್ಯಾಂಪ್, ಟಿಬೆಟಿಯನ್ ಕಾಲೋನಿ, ಒಂದೊಂದು ದಿಕ್ಕಿನಲ್ಲಿ ಸ್ವಲ್ಪವೇ ದೂರ ಹೋದರೂ ಬೇರೆಯದೇ ಸಂಸೃತಿ ಅನುಭವಕ್ಕೆ ಬರುತ್ತದೆ. ನಮ್ಮ ಶಾಲೆಗೆ ಕನ್ನಡ, ಉರ್ದು, ಮಲಯಾಳಂ, ಕೊಡವ, ತೆಲುಗು,ಜೇನುಕುರುಬರ ಭಾಷೆ ಮಾತನಾಡುವ ಮಕ್ಕಳು ಬರುತ್ತಾರೆ. ಒಟ್ಟಿಗೇ ಕಲಿಯುತ್ತಾರೆ. ಶಾಲಾ ಕಾರ್ಯಕ್ರಮಗಳು ಬಂದರಂತೂ ಜೇನುಕುರುಬರ
ಹಾಳೆ ಅಂಬುಲೆ ಉಯ್ಯಾಲೆ ಆಡಿ…….. ಎನ್ನುವ ನೃತ್ಯ ಮತ್ತು ಕೊಡವರ “ವಾಲಗ ನೃತ್ಯ ಇರಲೇ ಬೇಕು. ಮಸಣಿಕಮ್ಮ, ಕನ್ನಂಬಾಡಮ್ಮ ಜಾತ್ರೆ, ಕುಂಡೆ ಹಬ್ಬ, ರಂಝಾನ್ ಸಮಯದಲ್ಲಿ ಬರುವ ಅಂಗಡಿಗಳು..ಇವೆಲ್ಲವನ್ನೂ ಜಾತಿ ಧರ್ಮದ ಹಂಗಿಲ್ಲದೇ ಆಚರಿಸುತ್ತಾರೆ. ನಿಜವಾದ ಅರ್ಥದ ಬಹುತ್ವ ಇಲ್ಲಿದೆ. ಇವೆಲ್ಲವೂ ಸಾಧ್ಯವಾಗಿರುವುದು ಸಂವಿಧಾನ ಮತ್ತು ಅದನ್ನು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡ ದಿನದಿಂದ.
ಅನೇಕ ಭಿನ್ನಾಭಿಪ್ರಾಯಗಳನ್ನು, ಬೇರೆ ಬೇರೆ ನಂಬಿಕೆ, ಸಂಪ್ರದಾಯಗಳನ್ನು ಇಟ್ಟುಕೊಂಡೂ ಸಹ ಒಂದಾಗಲು ಸಾಧ್ಯವಿರುವುದೇ ಇದರ ಶಕ್ತಿ. ಸಂವಿಧಾನವನ್ನು ಬದಲಾಯಿಸಲು ಬಂದಿ ದ್ದೇವೆ ಎಂದಾಗ, ದೇಶದ ರಾಜಧಾನಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟ ಪರಿಣಾಮ ಕರ್ನಾ ಟಕದ ಪ್ರತಿ ಶಾಲೆಯ ಮಕ್ಕಳ ಬಾಯಲ್ಲಿ ಇಂದು ಸಂವಿಧಾನದ ಪ್ರಸ್ತಾವನೆ ಕೇಳಿಬರುತ್ತಿದೆ. ಅದರ ಪ್ರತಿಯೊಂದು ಅಕ್ಷರವೂ ನಮ್ಮ ದಿನ ದಿನದ ಬದುಕಿಗೆ ಬಂದಾಗಲೇ, ಆಚರಣೆಗೆ ಬಂದಾಗಲೇ ನಿಜ ಅರ್ಥದಲ್ಲಿ ಗಣರಾಜ್ಯ ದಿನ.
ಚಿತ್ರಾ ವೆಂಕಟರಾಜು, ರಂಗನಟಿ ಮತ್ತು ಶಿಕ್ಷಕಿ, ಚಾಮರಾಜನಗರ





