Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಪೆನ್ಸಿಲ್‌ ಮೋಡಿಗಾರ ಮೂರ್ತಿ ಮುಡಿಗುಂಡ

  • ಕಿರಣ್‌ ಗಿರ್ಗಿ

ಬಾಲ್ಯದಿಂದಲೂ ಅಕ್ಷರಗಳ ವಿನ್ಯಾಸಗಳಿಗೆ ಮನಸೋತು ಕೈಗೆ ಸಿಕ್ಕ ದಿನಪತ್ರಿಕೆ, ಪುಸ್ತಕಗಳ ಹಾಳೆಯಲ್ಲಿ ಕಂಡ ಲಿಪಿಗಳ ಶೈಲಿಯನ್ನು ಬರೆಯಲಾರಂಭಿಸಿದ ಹುಡುಗನೊಬ್ಬ ಇದೀಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ಕುಂಚ ಕಲಾವಿದನಾಗಿ ಗುರುತಿಸಿಕೊಂಡಿದ್ದಾನೆ. ಹೌದು, ಪೆನ್ಸಿಲ್ ಸ್ಕೆಚ್ ಮೂಲಕ ಮೋಡಿ ಮಾಡುವ ದೇಸಿ ವ್ಯಕ್ತಿತ್ವದ ನೈಜ ಪ್ರತಿಭೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಮುಡಿಗುಂಡದ ಮೂರ್ತಿರವರು. ಇವರ ತಂದೆ ಜವರಯ್ಯ ಚಿತ್ರ ಬಿಡಿಸುತ್ತಿರಲಿಲ್ಲ; ಆದರೆ, ಗಾರೆ ಕೆಲಸವನ್ನು ವೃತ್ತಿಯಾಗಿಸಿಕೊಂಡಿದ್ದರು. ಗೃಹ ನಿರ್ಮಾಣವೂ ಪ್ರಮುಖವಾದ ಕುಸುರಿ ಕಲೆಯೇ ತಾನೇ? ತಾಯಿ ನಂಜಮ್ಮ ಊರಿನ ಮದುವೆ, ಹಬ್ಬದ ಸಂಭ್ರಮಗಳಲ್ಲಿ ಸೋಬಾನೆ ಪದವನ್ನು ಈಗಲೂ ಹಾಡುತ್ತಾರೆ. ಪೋಷಕರ ಬಳುವಳಿ ಪಡೆದು ಅರಳಿದ ಗಾಯಕ, ಚಿತ್ರ ಕಲಾವಿದ ಮುಡಿಗುಂಡ ಮೂರ್ತಿಯವರು ಗೆರೆ ಮೂಡಿಸುವ ಲೋಕವನ್ನು ತಮ್ಮ ಮೂವರು ಮಕ್ಕಳಿಗೂ ಸ್ವಾಭಾವಿಕವಾಗಿ ಪರಿಚಯಿಸಿದ್ದಾರೆ.

ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ಜೆ. ಮೂರ್ತಿ ಅವರಿಂದ ಸಿ.ಬಿ.ಝಡ್. ವಿಷಯಗಳಲ್ಲಿನ ಚಿತ್ರಗಳು ಪ್ರಾಕ್ಟಿಕಲ್ ರೆಕಾರ್ಡ್ ಗಳಲ್ಲಿ ಅರಳುತ್ತ ಜೀವ ತಳೆಯುತ್ತಿದ್ದವು. ಬಿ. ಎಸ್ಸಿ. ಪದವಿ ಪಡೆದ ನಂತರವೂ ಕಲೆಯನ್ನು ಹೊರತುಪಡಿಸಿ ಜೀವನೋಪಾಯಕ್ಕೆ ಬೇರಾವ ಉದ್ಯೋಗವನ್ನೂ ಹುಡುಕಲು ಇವರ ಮನಸ್ಸು ಹಾತೊರೆಯಲಿಲ್ಲ. ಪ್ರತೀ ಕುಂಚ ಕಲಾವಿದರ ಬದುಕೂ ಬಹುಶಃ ಸೈನ್ ಬೋರ್ಡ್ ನಿಂದಲೇ ಪ್ರಾರಂಭವಾಗುವಂತೇ ಮುಡಿಗುಂಡ ಮೂರ್ತಿರವರ ಕಲಾಜಗತ್ತು ಸಹ ಗೋಡೆಗಳಲ್ಲಿ ಅಂಗಡಿಗಳ ಹೆಸರು ಬರೆಯುವುದರಿಂದಲೇ ಶುರುವಾಯಿತು ಎನ್ನಬಹುದು. ಕೊಳ್ಳೇಗಾಲದ ಜೈರಾಜ್ ಅವರನ್ನು ಆದಿಗುರುವಾಗಿ ಸ್ವೀಕರಿಸಿ, ನಾಮಫಲಕಗಳನ್ನು ರಚಿಸತೊಡಗಿದರು. ಚಾಮರಾಜನಗರವಲ್ಲದೇ ನಾಡಿನ ವಿವಿಧೆಡೆ ಸರ್ಕಾರದ ಯೋಜನೆಯಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪೇಂಟಿಂಗ್‌ಗಳನ್ನು ರಚಿಸುತ್ತಾ ಜನಮನ್ನಣೆಗಳಿಸಿದರು. ಜೆ. ಮೂರ್ತಿ ಮುಡಿಗುಂಡ ಅವರು ತಮ್ಮ ಕನಸುಗಳನ್ನು ಹುಟ್ಟೂರಿನಲ್ಲಿ ಸಾಕಾರಗೊಳಿಸಿಕೊಳ್ಳಲು ‘ಜೋಗಿ ರಂಗಜೋಳಿಗೆ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು 2008ರಲ್ಲಿ ಆರಂಭಿಸಿ ಈ ಸಂಸ್ಥೆಯ ಮೂಲಕ ಇದುವರೆಗೆ ನಿರಂತರವಾಗಿ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಾ ಚಿತ್ರಕಲೆ, ನಾಟಕ, ಸಂಗೀತ, ಜನಪದ ನೃತ್ಯ, ಹಳ್ಳಿ ಆಟಗಳನ್ನು ಕಲಿಸುತ್ತಾ ಬಂದಿದ್ದಾರೆ. ‘ಕುಂಚ ಕಾವ್ಯ ಗಾಯನ’ ಕಾರ್ಯಕ್ರಮಗಳನ್ನು ವಿಶ್ವವಿಖ್ಯಾತ ಮೈಸೂರು ದಸರಾ, ಚಾಮರಾಜನಗರ ಜಿಲ್ಲಾ ದಸರಾ ವೇದಿಕೆಗಳಲ್ಲಿ ಪ್ರತೀ ವರ್ಷವೂ ಪ್ರಸ್ತುತಪಡಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದಾರೆ; ಸಮರ್ಥವಾಗಿ ನಿರೂಪಿಸಿದ್ದಾರೆ. ಎದೆಯೊಳಗೆ ಅದಮ್ಯ ಚೇತನವನ್ನಿರಿಸಿಕೊಂಡು ಮೌನಿಯಾಗಿ ಚಿತ್ರಕಲೆ, ನಿರೂಪಣೆ, ಸಂಘಟನೆ, ಗಾಯನ, ಪರಿಸರ ಸಂರಕ್ಷಣೆ, ಕ್ರೀಡಾ ಚಟುವಟಿಕೆಗಳು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಜ್ಜೆಗಳನ್ನಿಡುತ್ತಿರುವ ಜೆ. ಮೂರ್ತಿ ಮುಡಿಗುಂಡ ಅವರು ‘ಜೋಗಿ ರಂಗಜೋಳಿಗೆ ಚಿತ್ರಕಲೆ ಮತ್ತು ಸಂಗೀತ ಶಾಲೆ’ ಯನ್ನು ಸದ್ಯದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ. ಬದುಕಿನ ಪರಮ ಗುರಿಯಾಗಿ ಕೊಳ್ಳೇಗಾಲದಲ್ಲಿ ‘ಜೋಗಿ ರಂಗಜೋಳಿಗೆ ಮಾನವ ಚಟುವಟಿಕೆ ಕೇಂದ್ರ’ ಎಂಬ ಸಾಂಸ್ಕೃತಿಕ ಮತ್ತು ಸಾಮರಸ್ಯ ಸಂಸ್ಥೆಯ ಸ್ಥಾಪನೆಯೂ ಇವರ ಬಹುದೊಡ್ಡ ಕನಸಾಗಿದೆ.

kirangirgi@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ