Mysore
18
broken clouds

Social Media

ಭಾನುವಾರ, 25 ಜನವರಿ 2026
Light
Dark

ಈಗ ಗಣರಾಜ್ಯೋತ್ಸವದಲ್ಲೂ ದ್ವೇಷದ ಉರಿಗಾಳಿ

ಗಣರಾಜ್ಯೋತ್ಸವ ಅಂದರೆ ನನಗೆ ನೆನಪಾಗೋದು ಶಾಲಾ ದಿನಗಳು. ಗಣರಾಜ್ಯದ ಹಿಂದಿನ ಎರಡು ಮೂರು ದಿನಗಳು ಯಾವುದೇ ತರಗತಿ ನಡೆಯುತ್ತಿರ ಲಿಲ್ಲ. ಮೇಡಂ ಬಂದು ಹಾಡು, ನೃತ್ಯ, ನಾಟಕ ಅಂತ್ಹೇಳಿ ಯರ‍್ಯಾರು ಭಾಗವಹಿಸುತ್ತೀರ? ಎಂದು ಕೇಳಿ ಅಂದಿನಂದಲೇ ತಯಾರಿ ಶುರುವಾಗುತ್ತಿತ್ತು.

ವಿವಿಧ ತರಗತಿ ವಿದ್ಯಾರ್ಥಿಗಳೆಲ್ಲ ಹೆಸರು ಕೊಡುತ್ತಿದ್ದರು. ಹೆಚ್ಚಿಗೆ ದೇಶಭಕ್ತಿ ಗೀತೆಗಳಿಗೆ ನೃತ್ಯ ಇರುತ್ತಿತ್ತು. ನಾನು ರಾಷ್ಟ್ರನಾಯಕರ ಬಗ್ಗೆ ಕಿರು ಪರಿಚಯ ಮಾಡುತ್ತಿದ್ದೆ. ಗಣರಾಜ್ಯದ ಹಿಂದಿನ ದಿನ ಶಾಲಾ ಆವರಣದ ಸ್ವಚ್ಛತೆ ಮಾಡಿ ನೀರೆರಚಿ ಧೂಳು ಏಳದ ಹಾಗೆ ಮಾಡಿ ಧ್ವಜ ಕಂಬದ ಸುತ್ತ ಹುಡುಗಿಯರು ರಂಗೋಲಿ ಬಿಟ್ಟಿದ್ದರೆ, ಹುಡುಗರು ಗುಡ್ಡಮಠಕ್ಕೆ ಹೋಗಿ ಚೆಂಡುಹೂ, ರೋಜ್ಯದ ಹೂ, ದಾಸವಾಳ, ನೆಲಗುಲಾಬಿ ತಂದು ಅಲಂಕರಿಸುತ್ತಿದ್ದೆವು. ನಾನು ಭಾರತದ ಭೂಪಟ ಬಿಡಿಸಿ ಉಪ್ಪಿಗೆ ಕೇಸರಿ, ಹಸಿರು ಬಣ್ಣ ಮಿಶ್ರ ಮಾಡಿ ಮಿಂಚಿಸುತ್ತಿದ್ದೆ. ಈಗ ರಾಷ್ಟ್ರೀಯ ಹಬ್ಬಗಳಿಗೂ ಧರ್ಮ, ಜಾತಿ ದ್ವೇಷದ ಬಿಸಿ ತಗುಲಿ ಸವೆಯುತ್ತಿವೆ. ಯಾವಾಗ ಬೇಕಾದರೂ ಹೊತ್ತಿ ಉರಿಯಬಹುದಾಗಿದೆ. ಗಣರಾಜ್ಯೋತ್ಸವದಲ್ಲಿ ‘ಆ ಫೋಟೋ ಇಟ್ಟಿಲ್ಲ’ ಅಂತ ಒಬ್ಬರು. ‘ಇಡಲ್ಲ’ ಅಂತ ಇನ್ನೊಬ್ಬರು. ಆ ಮಗೂಗೆ ಆ ವೇಷ ಹಾಕಿಸಿದ್ದು ಸರಿಯಿಲ್ಲ ಅಂತಲೂ ಜಗಳ ಮಾಡುವರು. ಸಹಿಷ್ಣುತೆ ಯಾರಲ್ಲೂ ಇಲ್ಲ. ಬಣ್ಣಗಳ ಬಗ್ಗೆಯೂ ದ್ವೇಷವಿದೆ. ಆ ಬಣ್ಣ ಬೇಡ ಅಂತ ಒಬ್ಬರಾದರೆ ಇನ್ನೊಬ್ಬರಿಗೆ ಮತ್ತೊಂದು ಬಣ್ಣ ಬೇಕಾಗಿದೆ. ಬಟ್ಟೆ, ಕ್ಯಾಪು, ಉಡುಪಿಗೂ ವಿರೋಧವಿದೆ. ಧ್ವಜವನ್ನು ಹಾರಿಸಿದವರ‍್ಯಾರು ಎಂಬುದಕ್ಕೂ ಕಾರಣ ನೀಡಬೇಕಾಗಿದೆ.

ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಡುವ ನುಡಿಗಳೇ ಇಂದಿನ ದಿನಗಳಲ್ಲಿ ಕೇಳಿಸುತ್ತಿವೆ. ಎಲ್ಲಾ ಗಡಿಗಳನ್ನು ಮೀರಿ ಭಾರತದ ಸಮಸ್ತ ಜನತೆಯು ಕೂಡಿ ಆಚರಿಸಬೇಕಿದ್ದ ಗಣ ರಾಜ್ಯವು ಇಂದು ಜಾತಿ, ಮತಗಳ ಅಂತರದ ಜನಗಳ ಮಧ್ಯೆ ಬಡವಾಗುತ್ತಿದೆ. ಸೊಗಸು ಕುಂದುತ್ತಿದೆ. ಒಂದೇ ತೋಟದ ಹೂಗಳೆಂಬ ಏಕತೆ ನಶಿಸುತ್ತ ‘ನಾನೇ ಬೇರೆ-ನೀನೇ ಬೇರೆ’ ಎಂಬಂತಿರುವುದು ಶೋಚನೀಯ. ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಜಾತಿ- ಧರ್ಮದ ಅಮಲು ಏರಿ ರಾಷ್ಟ್ರೀಯತೆ, ದೇಶಪ್ರೇಮ ಇವುಗಳನ್ನು ಬುಡಮೇಲು ಮಾಡಲು ಕಾಯುತ್ತ ಸಮಾಜದಲ್ಲಿ ಖುಷಿಯ ವಾತಾವರಣ ಕೆಡಿಸುತ್ತಿವೆ.

ಅಜಯ್ ಕುಮಾರ್ ಎಂ ಗುಂಬಳ್ಳಿ, ಯುವಕಥೆಗಾರ, ಯಳಂದೂರು ತಾಲ್ಲೂಕು

Tags:
error: Content is protected !!