ಅಜಯ್ ಕುಮಾರ್ ಎಂ ಗುಂಬಳ್ಳಿ
ಕೆರೆ ಕೆಲಸಕ್ಕೆ ಹೋಗಿದ್ದ ಪುಟ್ಟಮ್ಮಜ್ಜಿ ಬರುವಾಗ ಅವಳ ಮಡಿಲು ವಾಲಿಬಾಲ್ ಚೆಂಡಿನಾಕಾರದಲ್ಲಿ ಕಾಣುತ್ತಿದ್ದಕ್ಕೆ ಹಟ್ಟಿ ಮುಂದೆ ಕೂತಿದ್ದ ನಾನು “ಏನಜ್ಜಿ ಅದು” ಅಂದೆ. ನಗಾಡುತ್ತ ಪುಟ್ಟಮ್ಮಜ್ಜಿ “ಬೆರಕೆಸೊಪ್ಪು ಕನ ಬುಡು ನನ್ ಕಂದ. ಕಾಡಿನಿಂದ ಇನ್ಯಾನ್ ತರಕ್ಕಾದು ಈ ಮುದುಕಿ” ಅಂದಳು. ಅವಳ ಮಡಿಲಲ್ಲಿ ತರಹೇವಾರಿ ಸೊಪ್ಪುಗಳಿದ್ದವು. ಬಣ್ಣ ಮಾತ್ರ ಒಂದೆ ಆಗಿದ್ದರೂ ಎಲೆಗಳ ರಚನೆ, ಗಾತ್ರದಲ್ಲಿ ಭಿನ್ನತೆ ಇತ್ತು. ನಾನು ಒಂದನ್ನು ಎತ್ತಿಕೊಂಡು ವಾಸನೆ ಎಳೆದೆ. ಅದರಲ್ಲೂ ವಿಭಿನ್ನತೆ ಇತ್ತು. ನನಗೆ ಆಶ್ಚರ್ಯವಾಗಿ “ಇದನ್ನೆಲ್ಲ ತಿನ್ನಬಹುದ?
“ಅಂತ ಕೇಳಿದೆ. ‘ಅಯ್ ಇದು ಸರಿ ಕನ ಬುಡು, ಇದ್ನೆಲ್ಲ ತಿನ್ನದೆ ಇನ್ಯಾನ್ ಮಾಡಿರು” ಅಂತ ಪುಟ್ಟಮ್ಮಜ್ಜಿ ನಗೆಯಾಡುತ್ತ, ‘ಕೊಮ್ಮ ಸೊಪ್ಪು, ಜವನ ಸೊಪ್ಪು, ಕರಿಕಡ್ಡಿ ಸೊಪ್ಪು, ಚಗ್ತಾ ಸೊಪ್ಪು, ಕಾಡುನುಗ್ಗೆ ಸೊಪ್ಪು, ನಗ್ಗುಲ್ ಸೊಪ್ಪು, ಹಕ್ಕಿಕಲ್ ಸೊಪ್ಪು, ಬೂರನಿಗೆ ಸೊಪ್ಪು’ ಅಂತ ಅಷ್ಟನ್ನು ಎತ್ತಿ ಎತ್ತಿ ತೋರಿಸಿದಳು. ನನಗೆ ಬೆರಗಾಯಿತು. ಅವಳು ಹೇಳಿದ್ದು ನನಗೆ ಅರ್ಥವಾದರೂ ಮತ್ತೆ ಆ ಸೊಪ್ಪುಗಳ ಹೆಸರು ಹೇಳುವುದು ನನಗೆ ಖಂಡಿತ ಸಾಧ್ಯವಿರಲಿಲ್ಲ. ಈಗಷ್ಟೆ ಕೇಳಿದ ಹೆಸರುಗಳು ಗಣಿತದ ಲೆಕ್ಕಗಳಂತೆ ತೋರಿದವು. ಕೊನೆಗೆ ನಾನು “ಇಷ್ಟೊಂದು ಸೊಪ್ಪುಗಳು ನಿಂಗೆ ಹೇಗೆ ಗೊತ್ತಾಗುತ್ತೆ” ಅಂತ ಕೇಳಿದೆ. ಅದಕ್ಕೆ ಪುಟ್ಟಮ್ಮಜ್ಜಿ “ಆಗ ನಾವು ಸೊಪ್ಪು ಸೊದೆನೇ ತಿಂದು ಬದುಕಿರದು. ನಮ್ಗ ಗೊತ್ತಾಗ್ದಾ’‘ ಅನ್ನುತ್ತ ಹೊರಟೇ ಹೋದಳು. ಅನೇಕ ಸಂತೆಗಳಲ್ಲಿ ‘ದಂಟಿನ ಸೊಪ್ಪು, ಮೆಂತೆ ಸೊಪ್ಪು, ಪಾಲಾಕ್ ಸೊಪ್ಪು, ಸಬ್ಸೀಗೆ ಸೊಪ್ಪು’ ಇವುಗಳನ್ನು ನೋಡಿದ್ದ ನನಗೆ ಈ ಸೊಪ್ಪುಗಳ ಹೆಸರುಗಳು ತೀರಾ ಅಪರಿಚಿತವಾದವು. ಅವುಗಳಲ್ಲಿ ಒಂದೆರಡು-ಮೂರು ತರದ ಸೊಪ್ಪುಗಳನ್ನು ಮಾತ್ರ ಅವ್ವ ಉಪ್ಪಿನ ಸಾಂಬಾರು ಮಾಡಿ ಪರಿಚಯಿಸಿದ್ದಳು. ಅದು ಬಿಟ್ಟರೆ ಇನ್ನೆಲ್ಲವೂ ಈಗ ಕೇಳುತ್ತಿರುವ ಹೆಸರುಗಳೇ. ಕೆಲವು ಸೊಪ್ಪುಗಳನ್ನು ಬರಿ ಉಪ್ಪು ಹಾಕಿ ಬೇಯಿಸಿ ತಿನ್ನಬೇಕಾಗಿತ್ತು. ಕೆಲವಕ್ಕೆ ಹೆಸರುಕಾಳು, ಅಲಸಂದೆ ಹಾಕಿದರೆ ಒಳ್ಳೆಯ ರುಚಿ. ಅವ್ವ ಹಾಗೆ “ಜವನ ಸೊಪ್ಪು ಹೆಂಗಸರ ಬಿಳಿಮುಟ್ಟಿನ ಸಮಸ್ಯೆಗೆ ಒಳ್ಳೆಯದು. ಹೊನಗೊನೆ ಸೊಪ್ಪು ಕಣ್ಣಸಿರನ್ನು ನಿವಾರಿಸುತ್ತದೆ. ಒಳಜ್ವರಕ್ಕೆ ಕೈದರ್ಕ ಸೊಪ್ಪು ಔಷಧವಾಗಿದೆ.
ಸೊಪ್ಪಿನ ಉಪ್ಪಿನ ಸಾಂಬಾರಿಗೆ ಒಣ ಮೆಣಸಿನಕಾಯಿಯ ಖಾರವನ್ನು ಹಾಕಿ ಕುಡಿದ್ರೆ ನೆಗಡಿ ಬಿದ್ದು ಓಟ ಕೀಳುತ್ತದೆ. ಬೆಲ್ಗುನ್ಕ ಸೊಪ್ಪು ಕೆಮ್ಮನ್ನು ಓಡಿಸುತ್ತದೆ” ಎನ್ನುತ್ತ ಸೊಪ್ಪು ಸೊದೆ ಮನುಷ್ಯನ ದೇಹಕ್ಕೆ ಒಳ್ಳೆಯದು. ಎಲ್ಲ ಬಗೆಯ ಸಮಸ್ಯೆಗಳಿಗೂ ಒಂದಲ್ಲ ಒಂದು ಸೊಪ್ಪು ಔಷಧಿಯೇ. ಅವ್ವ ಮಾತು ಮುಂದುವರಿಸಿ ಹಿಟ್ಟಿನಕುಡಿ ಸೊಪ್ಪು, ಅಡಿಪುಟ್ಟಿನ ಸೊಪ್ಪು, ಅನ್ನ ಸೊಪ್ಪು, ಗುರ್ಜ ಸೊಪ್ಪು, ಕೀರ ಸೊಪ್ಪು, ಒಂದು ಎಲಗಿನ ಸೊಪ್ಪು, ಬಗರವಂಟ ಸೊಪ್ಪು, ನೀರ‍್ಗೊನಿ ಸೊಪ್ಪು, ಕತ್ರಿ ಸೊಪ್ಪು, ಪಂಟ ಸೊಪ್ಪು, ಮಳ್ಳಿ ಸೊಪ್ಪು ಎಂದು ಇನ್ನಷ್ಟು ಸೊಪ್ಪುಗಳ ಹೆಸರು ಹೇಳಿ “ನೂರೊಂದು ಜಾತಿ ಸೊಪ್ಪುಗಳಿವೆ, ನಮಗೆ ಗೊತ್ತಿರೋದು ಇಷ್ಟೆ” ಎಂದಳು.